ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಚುನಾವಣೆಗಳಲ್ಲಿ ಬಿಜೆಪಿಗೆ ಫೇಸ್‌ಬುಕ್ ನೆರವು

Last Updated 28 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ, ಬಾಂಬ್ ಇಡಲು ತಮ್ಮ ದ್ವಿಚಕ್ರವಾಹನ ಒದಗಿಸಿದ್ದ ಆರೋಪ ಎದುರಿಸುತ್ತಿರುವ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸಿತ್ತು. ‘ಭಯೋತ್ಪಾದನೆ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ನ್ಯಾಯಾಲಯ ಖುಲಾಸೆ ಮಾಡಿದೆ’ ಎಂಬ ವಿವರ ಇದ್ದ ಸುದ್ದಿರೂಪದ ಜಾಹೀರಾತನ್ನು‘ನ್ಯೂಜ್‌’ ತನ್ನ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿತ್ತು. ಈ ಜಾಹೀರಾತನ್ನು ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು. ಆದರೆ ಈ ಪ್ರಕರಣದಲ್ಲಿ ಪ್ರಜ್ಞಾಸಿಂಗ್ ಠಾಕೂರ್ ಅವರು ಚಿಕಿತ್ಸೆಗಾಗಿ ಜಾಮೀನು ಪಡೆದು ಹೊರಗಿದ್ದಾರೆ. ಜಾಹೀರಾತನ್ನು ತಪ್ಪು ಮಾಹಿತಿಯೊಂದಿಗೆ ಪ್ರಕಟಿಸಲಾಗಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಆರಂಭವಾಗಲು ಇನ್ನು 10 ದಿನಗಳಷ್ಟೇ ಬಾಕಿ ಇರುವಾಗ, ರಾಹುಲ್ ಗಾಂಧಿ ಅವರು, ಉಗ್ರ ಮಸೂದ್‌ ಅಜರ್‌ನನ್ನು ಬಿಜೆಪಿಯೇ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಿತ್ತು. ಭಯೋತ್ಪಾದಕರ ವಿರುದ್ಧ ಬಿಜೆಪಿ ಮೃದು ಧೋರಣೆ ತೋರಿತ್ತು ಎಂದು ಆರೋಪಿಸಿದ್ದರು. ಅಜರ್‌ನನ್ನು ಸಂಬೋಧಿಸುವಾಗ ರಾಹುಲ್, ‘ಅಜರ್‌ಜೀ’ ಎಂದಿದ್ದರು. ನ್ಯೂಜ್‌, ಈ ಸುದ್ದಿಯನ್ನೂ ಸಹ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿತ್ತು. ‘ಉಗ್ರನನ್ನು ರಾಹುಲ್, ಅಜರ್‌ಜೀ ಎಂದು ಕರೆದಾಗ’ ಎಂಬ ತಲೆಬರಹದ ಈ ಸುದ್ದಿಯನ್ನು ನಾಲ್ಕು ದಿನಗಳಲ್ಲಿ 6.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು.

2019ರ ಚುನಾವಣೆಯ ಸಂದರ್ಭದಲ್ಲಿ ‘ನ್ಯೂಜ್‌’ ಸುದ್ದಿತಾಣವು, ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಹಲವು ಸುದ್ದಿಗಳಲ್ಲಿ ಈ ಎರಡೂ ಸುದ್ದಿಗಳು ಸೇರಿದ್ದವು. 2019ರಿಂದ 2020ರವರೆಗೆ ‘ನ್ಯೂಜ್‌’ ಇಂತಹ 700ಕ್ಕೂ ಹೆಚ್ಚು ಸುದ್ದಿಗಳನ್ನು ಪ್ರಕಟಿಸಿದೆ. ಅವುಗಳಲ್ಲಿ ಎಲ್ಲವೂ ಬಿಜೆಪಿ ಪರವಾಗಿ ಮತ್ತು ಕಾಂಗ್ರೆಸ್‌ ವಿರುದ್ಧವಾಗಿ ಇದ್ದವು.ಆದರೆ ವಾಸ್ತವದಲ್ಲಿ ಇವು ಸುದ್ದಿಗಳಾಗಿರಲಿಲ್ಲ. ಈ ಎರಡೂ ಸುದ್ದಿಗಳನ್ನು ಜಾಹೀರಾತು ಎಂದು ಪರಿಗಣಿಸಿ, ಅವುಗಳನ್ನು ಪ್ರಕಟಿಸಲು ‘ನ್ಯೂಜ್’ ಸಂಸ್ಥೆಯು ಫೇಸ್‌ಬುಕ್‌ಗೆ ಶುಲ್ಕ ಪಾವತಿಸಿತ್ತು. ಫೇಸ್‌ಬುಕ್‌ನ ಆ್ಯಡ್‌ ಲೈಬ್ರರಿಯ ದತ್ತಾಂಶಗಳಲ್ಲಿ ಈ ಮಾಹಿತಿ ಇದೆ. ಬಿಜೆಪಿಗೂ, ನ್ಯೂಜ್‌ಗೂ ಯಾವುದೇ ನೇರ ಸಂಬಂಧವಿಲ್ಲ. ನ್ಯೂಜ್‌ ಎಂಬುದು ನ್ಯೂ ಎಮರ್ಜಿಂಗ್ ವರ್ಲ್ಡ್‌ ಆಫ್ ಜರ್ನಲಿಸಂ ಲಿಮಿಟೆಡ್‌ನ (New Emerging World of Journalism Limited) ಸಂಕ್ಷಿಪ್ತ ರೂಪವಷ್ಟೆ. ನ್ಯೂಜ್‌ ಕಂಪನಿಯು,ಮುಕೇಶ್ ಅಂಬಾನಿ ಒಡೆತನದ ಜಿಯೊ ಪ್ಲಾಟ್‌ಫಾರ್ಮ್ಸ್‌ ಲಿಮಿಟೆಡ್‌ನ ಒಂದು ಅಂಗಸಂಸ್ಥೆ.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಪರವಾಗಿ ಸುದ್ದಿ ರೂಪದ ಜಾಹೀರಾತುಗಳು ಪ್ರಕಟವಾಗದಂತೆ ನೋಡಿಕೊಳ್ಳುವುದು ಫೇಸ್‌ಬುಕ್‌ನ ನಿಯಮಗಳಲ್ಲಿ ಇದೆ. ಆದರೆ ಬಿಜೆಪಿ ಪರವಾಗಿ ಪ್ರಕಟವಾಗುವ ಸುದ್ದಿ ರೂಪದ ಜಾಹೀರಾತುಗಳ ವಿಚಾರದಲ್ಲಿ ಫೇಸ್‌ಬುಕ್‌ ಕಣ್ಮುಚ್ಚಿದೆ. ಬೇರೆ ಪಕ್ಷಗಳ ಪರವಾಗಿ ಪ್ರಕಟವಾದ ಇಂತಹ ಸುದ್ದಿ ರೂಪದ ಜಾಹೀರಾತುಗಳ ವಿರುದ್ಧ ಮಾತ್ರ ಫೇಸ್‌ಬುಕ್ ಕ್ರಮ ತೆಗೆದುಕೊಂಡಿದೆ.

ಚುನಾವಣೆ ಸಂದರ್ಭಗಳಲ್ಲಿ ಅಭ್ಯರ್ಥಿಗಳುಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಿಸುವ ಜಾಹೀರಾತಿಗೆ ಮಾಡುವ ವೆಚ್ಚದ ಲೆಕ್ಕವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಜಾಹೀರಾತಿನ ವೆಚ್ಚವನ್ನೂ ಆಯೋಗ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿ ಅಥವಾ ಯಾವುದೇ ಪಕ್ಷದ ಪರವಾಗಿ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ನೀಡುವ ಜಾಹೀರಾತಿನ ವೆಚ್ಚವನ್ನು ಆಯೋಗ ಚುನಾವಣಾ ವೆಚ್ಚ ಎಂದು ಪರಿಗಣಿಸುವುದಿಲ್ಲ. ಅದರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಮತ್ತು ಆ ಪಕ್ಷದ ಅಭ್ಯರ್ಥಿಗಳ ಜತೆಗೆ ಯಾವುದೇ ನೇರ ಸಂಬಂಧವಿಲ್ಲದ ‘ನ್ಯೂಜ್‌’ ಸಂಸ್ಥೆ ನೀಡಿದ ಜಾಹೀರಾತುಗಳ ವಿರುದ್ಧ ಫೇಸ್‌ಬುಕ್‌ ಆಗಲೀ, ಚುನಾವಣಾ ಆಯೋಗವಾಗಲೀ ಕ್ರಮ ತೆಗೆದುಕೊಂಡಿಲ್ಲ.

2019 ಫೆಬ್ರುವರಿಯಿಂದ 2020ರ ನವೆಂಬರ್ ಅಂತ್ಯದವರೆಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹೀಗೆ ಪ್ರಕಟವಾದ 5.36 ಲಕ್ಷ ಜಾಹೀರಾತುಗಳನ್ನು ಪರಿಶೀಲಿಸಿದ್ದೇವೆ. ಈ ಅವಧಿಯಲ್ಲಿ ಲೋಕಸಭಾ ಚುನಾವಣೆ ಮತ್ತು ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯೂ ಸೇರಿ ಒಟ್ಟು 10 ಚುನಾವಣೆಗಳು ನಡೆದಿವೆ. ಆದರೆ ಫೇಸ್‌ಬುಕ್‌ನ ಜಾಹೀರಾತು ವ್ಯವಸ್ಥೆಯು, ಬಿಜೆಪಿ ಪರವಾಗಿ ಮತ್ತು ವಿರೋಧ ಪಕ್ಷಗಳ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ಮುಕ್ತವಲ್ಲದ ಮತ್ತು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಚುನಾವಣೆ ನಡೆಯಲು ಕಾರಣವಾಗಿದೆ.

ದೇಶದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿ ಒದಗಿಸುವ ಸ್ಟಾರ್ಟ್‌ಅಪ್‌ ಎಂದು ‘ನ್ಯೂಜ್‌’ ಸಂಸ್ಥೆ ತನ್ನನ್ನು ಪರಿಚಯಿಸಿಕೊಳ್ಳುತ್ತದೆ. ಆದರೆ ಚುನಾವಣೆ ಸಂದರ್ಭದಲ್ಲಿ ಜಾಹೀರಾತುಗಳಿಗೆ ಸುದ್ದಿಯ ವೇಷ ತೊಡಿಸಿ, ಅದು ಪ್ರಕಟಿಸುತ್ತದೆ. 2019ರ ಲೋಕಸಭಾ ಚುನಾವಣೆ ಮುಗಿಯುವುದಕ್ಕೂ ಮೊದಲ ಮೂರು ತಿಂಗಳಲ್ಲಿ ನ್ಯೂಜ್‌, ಇಂತಹ 176 ಜಾಹೀರಾತುಗಳನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. ಇವುಗಳಲ್ಲಿ ಬಹುತೇಕ ಜಾಹೀರಾತುಗಳು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವಂತಹದ್ದಾಗಿವೆ ಹಾಗೂ ಮುಸ್ಲಿಮರ ಮೇಲಿನ ದ್ವೇಷವನ್ನು ಪ್ರಚೋದಿಸುವ ಮತ್ತು ವಿರೋಧ ಪಕ್ಷಗಳನ್ನು ಹಳಿಯುವ ವಿವರಗಳನ್ನು ಹೊಂದಿವೆ.

ಸಾಮಾನ್ಯ ಬಳಕೆದಾರರು ಮಾಡುವ ಪೋಸ್ಟ್‌ಗಳು, ಅವರ ಗೆಳೆಯರ ಟೈಂಲೈನ್‌ನಲ್ಲಿ ಮಾತ್ರ ಗೋಚರವಾಗುತ್ತವೆ. ಆದರೆ ಜಾಹೀರಾತು ಎಂದು ಪರಿಗಣಿಸಲಾದ ಪೋಸ್ಟ್‌ಗಳನ್ನು, ಫೇಸ್‌ಬುಕ್‌ ಹೆಚ್ಚಿನ ಸಂಖ್ಯೆಯ ಬಳಕೆದಾರರ ಟೈಂಲೈನ್‌ನಲ್ಲಿ ಬಿತ್ತರವಾಗುವಂತೆ ಮಾಡುತ್ತದೆ. ಅದು ನಿರ್ದಿಷ್ಟ ಪ್ರದೇಶದಲ್ಲಿ, ನಿರ್ದಿಷ್ಟ ವರ್ಗದ, ನಿರ್ದಿಷ್ಟ ವಯಸ್ಸಿನ ಜನರನ್ನು ತಲುಪುವಂತೆ ಫೇಸ್‌ಬುಕ್‌ ನೋಡಿಕೊಳ್ಳುತ್ತದೆ. ಬಳಕೆದಾರರ ಈ ಎಲ್ಲಾ ದತ್ತಾಂಶಗಳನ್ನು ಫೇಸ್‌ಬುಕ್‌ ಹೊಂದಿರುತ್ತದೆ. ಇವುಗಳ ಆಧಾರದಲ್ಲಿ ಜಾಹೀರಾತುದಾರರು ತಮ್ಮ ಜಾಹೀರಾತುಗಳ ಗುರಿ ಯಾರಾಗಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು. 2019ರ ಲೋಕಸಭಾ ಚುನಾವಣೆಯಲ್ಲಿ ನ್ಯೂಜ್‌ ಇಂತಹದ್ದೇ ಜಾಹೀರಾತುಗಳನ್ನು ನೀಡಿದೆ. ಚುನಾವಣೆ ನಂತರವೂ ಬಿಜೆಪಿ ಪರವಾದ ಸುದ್ದಿ ರೂಪದ ಜಾಹೀರಾತುಗಳನ್ನು ನ್ಯೂಜ್‌ ಹಲವು ಬಾರಿ ಪ್ರಕಟಿಸಿದೆ.

ಕಾಂಗ್ರೆಸ್‌ ವಿರುದ್ಧ ಮಾತ್ರ ಕಠಿಣ ಕ್ರಮ

ಸುದ್ದಿ ರೂಪದಲ್ಲಿರುವ ಜಾಹೀರಾತುಗಳನ್ನು ಪ್ರಕಟಿಸುವುದಿಲ್ಲ ಎಂದು ಫೇಸ್‌ಬುಕ್ ನಿಯಮಗಳು ಹೇಳುತ್ತವೆ. ತನ್ನ ಪ್ಲಾಟ್‌ಫಾರಂಗಳಲ್ಲಿ ಪ್ರಕಟವಾಗುವ ರಾಜಕೀಯ ಜಾಹೀರಾತುಗಳನ್ನು ‘ರಾಜಕೀಯ ಜಾಹೀರಾತು’ ಎಂದೇ ಟ್ಯಾಗ್ ಮಾಡುತ್ತದೆ. ಸುದ್ದಿ ರೂಪದ ಜಾಹೀರಾತು ಪೋಸ್ಟ್‌ಗಳನ್ನು ತೆಗೆದುಹಾಕುತ್ತದೆ. ಆದರೆ, ಈ ಕ್ರಮವನ್ನು ಫೇಸ್‌ಬುಕ್‌ ಎಲ್ಲರ ವಿರುದ್ಧವೂ ತೆಗೆದುಕೊಂಡಿಲ್ಲ. 2019ರಿಂದ 2020ರವರೆಗೆ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ 600ಕ್ಕೂ ಹೆಚ್ಚು ಪೋಸ್ಟ್‌, ಪುಟ ಮತ್ತು ಖಾತೆಗಳನ್ನು ಫೇಸ್‌ಬುಕ್ ತೆಗದು ಹಾಕಿದೆ. ಆದರೆ ಫೇಸ್‌ಬುಕ್‌ ತೆಗೆದುಹಾಕಿದ, ಬಿಜೆಪಿ ಮತ್ತು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಪೋಸ್ಟ್‌, ಪುಟ ಮತ್ತು ಖಾತೆಗಳ ಸಂಖ್ಯೆ 20ನ್ನೂ ಮುಟ್ಟುವುದಿಲ್ಲ.

ಕಾನೂನಿನಲ್ಲಿದೆ ದೋಷ!

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ನೀಡುವ ಜಾಹೀರಾತಿನ ಖರ್ಚನ್ನು ಆ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿ ಪರವಾಗಿ ನೀಡಲಾಗುವ ಜಾಹೀರಾತು ಅಥವಾ ಸುದ್ದಿ ರೂಪದ ಜಾಹೀರಾತುಗಳಿಗೆ ಅಭ್ಯರ್ಥಿಯಲ್ಲದೇ ಬೇರೆಯವರು ಹಣ ನೀಡಿದರೆ, ಅದು ಕಾನೂನಿನ ಪ್ರಕಾರ ಅಪರಾಧ. ಚುನಾವಣಾ ಪ್ರಚಾರಕ್ಕೆ ಅನಧಿಕೃತ ಮೂಲಗಳಿಂದ ಹಣ ಹರಿದುಬರುವುದನ್ನು ನಿಗ್ರಹಿಸಲು ಈ ಕಾನೂನು ತರಲಾಗಿದೆ.

ಲೋಪದ ಅರಿವಿದ್ದರೂ,ಭಾರತೀಯ ಚುನಾವಣಾ ಆಯೋಗವು ಕಾನೂನಿನ ಈ ನಿರ್ಬಂಧವನ್ನು ‘ಫೇಸ್‌ಬುಕ್‌’ನಂತಹ ಡಿಜಿಟಲ್ ವೇದಿಕೆಗಳಿಗೆ ವಿಸ್ತರಿಸಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.ಸಾಮಾಜಿಕ ಜಾಲತಾಣಗಳಲ್ಲಿ, ಅಭ್ಯರ್ಥಿಗೆ ಸಂಬಂಧವಿಲ್ಲದ‌ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ನೀಡುವ ಜಾಹೀರಾತನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ. ಹೊರಗಿನ ವ್ಯಕ್ತಿ ಅಥವಾ ಸಂಸ್ಥೆಯು ಅಭ್ಯರ್ಥಿ ಪರವಾಗಿ ಪ್ರಕಟಿಸುವ ಕಂಟೆಂಟ್‌ಗಳನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು 2013ರಲ್ಲಿ ಚುನಾವಣಾ ಆಯೋಗ ತಿಳಿಸಿತ್ತು.

ಫೇಸ್‌ಬುಕ್‌ನ ಮಾತೃಸಂಸ್ಥೆ ‘ಮೆಟಾ’ ಸಹ ಈ ನಿಯಮವನ್ನು ಜಾರಿಗೊಳಿಸಿಲ್ಲ. ಹೀಗಾಗಿ, ಚುನಾವಣೆಯಲ್ಲಿ ಬಿಜೆಪಿ ಹಾಗೂ ಅದರ ಅಭ್ಯರ್ಥಿಗಳ ಪರವಾಗಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಲು ನ್ಯೂಜ್‌ನ ಹಾದಿ ಸುಲಭವಾಯಿತು.

‘ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸದಂತೆ ಭಾರತೀಯ ಚುನಾವಣಾ ಆಯೋಗದ ಜೊತೆ ಲಾಬಿ ನಡೆಸುವಂತೆ ‘ಇಂಟರ್ನೆಟ್‌ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾಗೆ (ಐಎಂಎಐ) ಫೇಸ್‌ಬುಕ್ ಮನವೊಲಿಕೆ ಮಾಡಲೆತ್ನಿಸಿತ್ತು’ ಎಂಬ ಅಂಶವು, ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಮತ್ತು ಭ್ರಷ್ಟಾಚಾರ ಬಯಲಿಗೆಳೆಯುವ ಕಾರ್ಯಕರ್ತೆ (ವಿಷಲ್‌ಬ್ಲೋವರ್) ಫ್ರಾನ್ಸಿಸ್ ಹೌಗೆನ್ ಅವರ ಸೋರಿಕೆಯಾದ ದಾಖಲೆಗಳಲ್ಲಿ ಉಲ್ಲೇಖವಿತ್ತು.

2019ರಲ್ಲಿ ಐಎಂಎಐ ಸಂಸ್ಥೆಯು ‘ವಾಲಂಟರಿ ಕೋಡ್ ಆಫ್ ಎಥಿಕ್ಸ್’ ಅನ್ನು ಪ್ರಸ್ತಾಪಿಸಿತ್ತು. ಆದರೆ ಸುದ್ದಿರೂಪದ ಜಾಹೀರಾತುಗಳನ್ನು ನಿಯಂತ್ರಿಸುವ ಯಾವ ಶಿಫಾರಸುಗಳೂ ಇದರಲ್ಲಿ ಇರಲಿಲ್ಲ. ಈ ಲೋಪಗಳನ್ನು ಲೋಕಸಭಾ ಹಾಗೂ ವಿವಿಧ ವಿಧಾನಸಭಾ ಚುನಾವಣೆಗಳಲ್ಲಿ ಚೆನ್ನಾಗಿ ಬಳಸಿಕೊಳ್ಳಲಾಯಿತು.

ಮೆಟಾ, ನ್ಯೂಜ್‌ ಪ್ರತಿಕ್ರಿಯೆ

ನ್ಯೂಜ್‌ನ ರಾಜಕೀಯ ಜಾಹೀರಾತು ಕುರಿತಂತೆ ಪ್ರತಿಕ್ರಿಯಿಸಿರುವ ಮೆಟಾ, ‘ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ಸ್ಥಾನಮಾನಗಳನ್ನು ಪರಿಗಣಿಸದೇ, ಏಕರೂಪವಾಗಿ ನಾವು ನಮ್ಮ ನೀತಿಗಳನ್ನು ಜಾರಿಗೊಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿದೆ. ಜಾಗತಿಕವಾಗಿ ಜಾರಿಯಲ್ಲಿರುವ ‘ಸಂಘಟಿತ ಅನಧಿಕೃತ ನಡವಳಿಕೆ’ ವಿರುದ್ಧದ ನಮ್ಮ ಕ್ರಮಗಳು 2019ರ ಏಪ್ರಿಲ್ ಬಳಿಕವೂ ಮುಂದುವರಿದಿವೆ ಎಂದು ತಿಳಿಸಿದೆ. ಚುನಾವಣಾ ಆಯೋಗದೊಂದಿಗೆ ಲಾಬಿ ಮಾಡಲಾಗಿದೆ ಎಂಬ ಬಗ್ಗೆ ಮೆಟಾ ಪ್ರತಿಕ್ರಿಯಿಸಿಲ್ಲ. ರಿಪೋರ್ಟರ್ಸ್ ಕಲೆಕ್ಟವ್‌ ಎತ್ತಿದ ಪ್ರಶ್ನೆಗಳಿಗೆ ಚುನಾವಣಾ ಆಯೋಗ ‌ಪ್ರತಿಕ್ರಿಯಿಸಿಲ್ಲ. ಹಾಗೆಯೇ ನ್ಯೂಜ್‌ ಜಾಹೀರಾತಿನ ಬಗ್ಗೆ ಜಿಯೊ ಹಾಗೂ ಆರ್‌ಐಎಲ್ಎಚ್ಎಲ್ ಸಹ ಪ್ರತಿಕ್ರಿಯೆ ನೀಡಿಲ್ಲ.

ನ್ಯೂಜ್ ಕಾರ್ಯನಿರ್ವಾಹಕ ಮುಖ್ಯಸ್ಥ ಶಲಭ್ ಉಪಾಧ್ಯಾಯ, ‘ಪಾರದರ್ಶಕ ಹಾಗೂ ಸ್ವತಂತ್ರ ಪತ್ರಿಕೋದ್ಯಮಕ್ಕೆ ನ್ಯೂಜ್ ಬದ್ಧವಾಗಿದೆ ಎಂದಿದ್ದಾರೆ. ಜಾಹೀರಾತಿಗೆ ಸಂಬಂಧಿಸಿದಂತೆ ಮೆಟಾದ ಮಾರ್ಗಸೂಚಿಗಳು ಜಾಹೀರಾತು ನಿಯಮಗಳನ್ನು ತಪ್ಪದೆ ಪಾಲಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಆಧಾರ: ರಿಪೋರ್ಟರ್ಸ್ ಕಲೆಕ್ಟಿವ್ ವರದಿ. ಈ ವರದಿಯ ಇಂಗ್ಲಿಷ್ ಆವೃತ್ತಿ ಆಲ್‌ಜಜೀರಾ ಸುದ್ದಿತಾಣದಲ್ಲಿ ಪ್ರಕಟವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT