ಭಾನುವಾರ, ಜುಲೈ 3, 2022
27 °C

ಚುನಾವಣೆ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ರಾಜ್ಯಗಳು

ಹಮೀದ್ ಕೆ./ಉದಯ ಯು. Updated:

ಅಕ್ಷರ ಗಾತ್ರ : | |

Prajavani

2014ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯ. ನರೇಂದ್ರ ಮೋದಿ ಅವರು ಕೋಲ್ಕತ್ತದಲ್ಲಿ ಮಾತನಾಡುತ್ತಾ, ರಾಷ್ಟ್ರಪತಿ ಭವನದಲ್ಲಿ ದಾದಾ (ಪ್ರಣವ್ ಮುಖರ್ಜಿ), ದೆಹಲಿಯಲ್ಲಿ ಭಾಯಿ (ಮೋದಿ) ಮತ್ತು ಪಶ್ಚಿಮ ಬಂಗಾಳದಲ್ಲಿ ದೀದಿ (ಮಮತಾ ಬ್ಯಾನರ್ಜಿ) ಇರುವುದು ಪಶ್ಚಿಮ ಬಂಗಾಳಕ್ಕೆ ಅತ್ಯುತ್ತಮ ಎಂದಿದ್ದರು. ಆದರೆ, ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಈ ಆಹ್ವಾನವನ್ನು ತಿರಸ್ಕರಿಸಿದ್ದರು. ಈಗ, ಪರಿಸ್ಥಿತಿಯಲ್ಲಿ ಆಗಿರುವ ಪಲ್ಲಟವನ್ನು ಆಗ ಯಾರೂ ಊಹಿಸಲು ಸಾಧ್ಯವಿರಲಿಲ್ಲ. 2019 ಲೋಕಸಭಾ ಚುನಾವಣೆಯ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೆಲೆ ಕಂಡುಕೊಂಡಿತ್ತು ಮತ್ತು 42 ಸ್ಥಾನಗಳ ಪೈಕಿ 18 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಆಗಲೇ ಮಮತಾ ಅವರಿಗೆ ತಮ್ಮ ಭದ್ರಕೋಟೆಯಲ್ಲಿ ಬಿರುಕು ಮೂಡಿದ್ದರ ಅರಿವಾಗಿತ್ತು. 

ಪಕ್ಷಾಂತರದ ಏಟು

ಮಮತಾ ಸಚಿವ ಸಂಪುಟದ ಮೂವರು ಸಚಿವರು ಪಕ್ಷ ಬದಲಾಯಿಸಿದ್ದಾರೆ. ಲಕ್ಷ್ಮಿ ರತನ್‌ ಶುಕ್ಲಾ ಅವರು ಜನವರಿಯಲ್ಲಿ ಪಕ್ಷ ತೊರೆದರೆ, ಸುವೇಂದು ಅಧಿಕಾರಿ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದರು. ಅರಣ್ಯ ಸಚಿವರಾಗಿದ್ದ ರಜಿಬ್‌ ಬ್ಯಾನರ್ಜಿ ಈ ಪಟ್ಟಿಗೆ ಶುಕ್ರವಾರದ ಸೇರ್ಪಡೆ. ಸುವೇಂದು ಅವರ ಪಕ್ಷಾಂತರ ಮಮತಾ ಅವರಿಗೆ ಬಹುದೊಡ್ಡ ಹೊಡೆತ. ಮೂರು ದಶಕಕ್ಕೂ ಹೆಚ್ಚು ಕಾಲ ಸತತವಾಗಿ ಅಧಿಕಾರದಲ್ಲಿದ್ದ ಎಡರಂಗವನ್ನು 2011ರಲ್ಲಿ ಅಧಿಕಾರದಿಂದ ಕೆಳಕ್ಕೆ ಇಳಿಸುವಲ್ಲಿ ನಂದಿಗ್ರಾಮದ ಭೂಸ್ವಾಧೀನ ವಿರೋಧಿ ಹೋರಾಟದ್ದು ಪ್ರಮುಖ ಪಾತ್ರ. ಈ ಚಳವಳಿಯ ಸಂದರ್ಭದಲ್ಲಿ ಮಮತಾ ಅವರ ದಂಡನಾಯಕನಂತೆ ಇದ್ದವರು ಸುವೇಂದು. ಮೇದಿನಿಪುರ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಅವರು ಅತ್ಯಂತ ಪ್ರಭಾವಿ ನಾಯಕ. ಟಿಎಂಸಿಯ 40ಕ್ಕೂ ಹೆಚ್ಚು ಮುಂಚೂಣಿ ಮುಖಂಡರು ಬಿಜೆಪಿ ಸೇರಿದ್ದಾರೆ. ಹೀಗಾಗಿಯೇ, ಬಿಜೆಪಿಯನ್ನು ಟಿಎಂಸಿಯ ಬಿ ತಂಡ ಎಂದು ಲೇವಡಿಯನ್ನೂ ಮಾಡಲಾಗುತ್ತಿದೆ. ಬಂದ ಬಂದವರನ್ನೆಲ್ಲ ಸೇರಿಸಿಕೊಂಡರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಬಹುದು ಎಂಬ ಕಳವಳ ಬಿಜೆಪಿಯಲ್ಲಿ ಈಗ ಕಾಣಿಸಿಕೊಂಡಿದೆ. 

ಧ್ರುವೀಕರಣದತ್ತ...

ಅತಿ ಹೆಚ್ಚು ಮುಸ್ಲಿಮರು ಇರುವ ಎರಡನೇ ರಾಜ್ಯ ಪಶ್ಚಿಮ ಬಂಗಾಳ. 2011ರ ಜನಗಣತಿ ಪ್ರಕಾರ ಇಲ್ಲಿರುವ ಮುಸ್ಲಿಮರ ಪ್ರಮಾಣ ಶೇ 27. ಈಗ ಅದು ಶೇ 30ಕ್ಕೆ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿಯೇ, ಈ ಬಾರಿಯ ವಿಧಾನಸಭಾ ಚುನಾವಣೆ ಧಾರ್ಮಿಕವಾಗಿ ಧ್ರುವೀಕರಣಗೊಳ್ಳುವ ಸಾಧ್ಯತೆ ಹೆಚ್ಚು. ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಬಿಹಾರ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದಿದೆ. ಇದು, ಪಶ್ಚಿಮ ಬಂಗಾಳದಲ್ಲಿಯೂ ಭಿನ್ನ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಮುಸ್ಲಿಮರು, ಮುಸ್ಲಿಂ ಕೇಂದ್ರಿತ ಪಕ್ಷಕ್ಕೆ ಮತ ಹಾಕಬಹುದು ಎಂಬ ನಿರೀಕ್ಷೆಯು ಟಿಎಂಸಿಯ ಗೆಲುವಿನ ಸಾಧ್ಯತೆಯನ್ನು ಇನ್ನಷ್ಟು ಕಿರಿದಾಗಿಸುತ್ತದೆ. ಆದರೆ, ಧ್ರುವೀಕರಣಗೊಂಡರೆ ಮುಸ್ಲಿಮರು ಟಿಎಂಸಿಯನ್ನು ಬೆಂಬಲಿಸಬಹುದು ಎಂಬ ಅಂದಾಜೂ ಇದೆ. 

ಈ ಮಧ್ಯೆ, ಎಡರಂಗ ಮತ್ತು ಕಾಂಗ್ರೆಸ್‌ ಪಕ್ಷವು ಬಿಜೆಪಿಯ ವಿರುದ್ಧ ತಮ್ಮನ್ನು ಬೆಂಬಲಿಸಬೇಕು ಎಂಬ ಕೋರಿಕೆಯನ್ನು ಮಮತಾ ಮುಂದಿಟ್ಟಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ–ಕಾಂಗ್ರೆಸ್‌–ಎಡರಂಗ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ ಗೆಲ್ಲುವ ಸ್ಥಾನಗಳ ಸಂಖ್ಯೆ ಈಗಿನ 18ರಿಂದ 7ಕ್ಕೆ ಇಳಿಯುತ್ತಿತ್ತು ಎಂಬುದು ಲೆಕ್ಕಾಚಾರ. ಆದರೆ, ಈ ಪಕ್ಷಗಳು ಒಟ್ಟಾದರೆ ಧ್ರುವೀಕರಣ ಇನ್ನಷ್ಟು ತೀವ್ರವಾಗುತ್ತದೆ. ಟಿಎಂಸಿ ವಿರೋಧಿ ಮತಗಳೆಲ್ಲವೂ ಬಿಜೆಪಿಗೆ ದಕ್ಕಬಹುದು ಎಂಬುದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ವಿಶ್ಲೇಷಣೆ. 

ಲೋಕಸಭೆಯ ಲೆಕ್ಕ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಗೆದ್ದಿದೆ. ಅದರ ಆಧಾರದಲ್ಲಿ ನೋಡಿದರೆ, ವಿಧಾನಸಭೆಯಲ್ಲಿ  ಆ ಪಕ್ಷಕ್ಕೆ 122 ಕ್ಷೇತ್ರಗಳು ಸಿಗಬಹುದು. ಟಿಎಂಸಿಯ ಕೈಯಲ್ಲಿ ಇರುವ 22 ಲೋಕಸಭಾ ಕ್ಷೇತ್ರಗಳು 163 ವಿಧಾನಸಭಾ ಕ್ಷೇತ್ರಗಳಾಗಿ ಪರಿವರ್ತನೆ ಆಗಬಹುದು. ಹೀಗಾದರೂ ಮಮತಾ ಅವರಿಗೆ ಸರಳ ಬಹುಮತ ದೊರೆಯುತ್ತದೆ. ಆದರೆ, ಲೋಕಸಭಾ ಚುನಾವಣೆಯ ಬಳಿಕವೂ ಮಮತಾ ಅವರ ಬಲ ಕುಗ್ಗಿದೆ. ಅದರ ಪರಿಣಾಮ ಏನು ಎಂಬುದನ್ನು ಚುನಾವಣೆಯ ಫಲಿತಾಂಶವೇ ಹೇಳಬೇಕು.

---------------------------

ಕದಡಿದ ದ್ರಾವಿಡ ರಾಜಕಾರಣ ಚುನಾವಣೆ ಹೊಸ್ತಿಲಲ್ಲಿ...

‘ದ್ರಾವಿಡ ರಾಜಕಾರಣ’ ಗಟ್ಟಿಯಾಗಿ ನೆಲೆಯೂರಿರುವ ರಾಜ್ಯಗಳಲ್ಲಿ ತಮಿಳುನಾಡು ಅತ್ಯಂತ ಪ್ರಮುಖವಾದದ್ದು. ದಕ್ಷಿಣ ಭಾರತದ ಬೇರೆ ಯಾವ ರಾಜ್ಯವೂ ರಾಷ್ಟ್ರೀಯ ಪಕ್ಷಗಳನ್ನು ಸಾರಾಸಗಟಾಗಿ ಹೊಸ್ತಿಲಿನಿಂದ ಆಚೆ ಇಟ್ಟಿರುವ ಉದಾಹರಣೆ ಇಲ್ಲ. ದಕ್ಷಿಣದ ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿದ್ದರೂ, ರಾಷ್ಟ್ರೀಯ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ ಅಥವಾ ನಿರ್ಣಾಯಕ ಸ್ಥಾನದಲ್ಲಿವೆ. ತಮಿಳುನಾಡಿನಲ್ಲಿ ಸ್ಥಿತಿ ಹಾಗಿಲ್ಲ.

2016ರಲ್ಲಿ ಜೆ. ಜಯಲಲಿತಾ ಮತ್ತು 2018ರಲ್ಲಿ ಕರುಣಾನಿಧಿ ಅವರ ನಿಧನಾನಂತರ ತಮಿಳುನಾಡಿನ ರಾಜಕಾರಣ ಹಾದಿ ಬದಲಿಸಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಸ್ಥಳೀಯ ಪಕ್ಷಗಳ ಆಂತರಿಕ ಕಲಹದಿಂದ ಕದಡಿರುವ ತಮಿಳುನಾಡಿನ ರಾಜಕೀಯದ ಕೆರೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮೀನುಹಿಡಿಯುವ ಪ್ರಯತ್ನವನ್ನು ಮಾಡುತ್ತಿವೆ. ಆದ್ದರಿಂದ ಈಚಿನ ಕೆಲವು ಬೆಳವಣಿಗೆಗಳು ಇಲ್ಲಿ ಉಲ್ಲೇಖಕ್ಕೆ ಅರ್ಹವೆನಿಸುತ್ತವೆ.

ಶಶಿಕಲಾ ಬಿಡುಗಡೆ: ತಮಿಳುನಾಡಿನ ರಾಜಕೀಯದಲ್ಲಿ ಜಯಲಲಿತಾ ಅವರಷ್ಟೇ ಬಲಿಷ್ಠವಾಗಿದ್ದ ಮಹಿಳೆ ಎಂದರೆ ಅವರ ಅನುಯಾಯಿಯಾಗಿದ್ದ ಶಶಿಕಲಾ ನಟರಾಜನ್‌. ಆದಾಯಕ್ಕೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದ ಕಾರಣಕ್ಕೆ ಜಯಲಲಿತಾ ಅವರಿಗೆ 2014ರಲ್ಲಿ ಜೈಲುಶಿಕ್ಷೆಯಾಗಿತ್ತು. ಆ ಸಂದರ್ಭದಲ್ಲಿ ಮತ್ತು ಜಯಲಲಿತಾ ನಿಧನದ ನಂತರ ಪಕ್ಷವನ್ನು ಸಂಭಾಳಿಸಿದ್ದು ಶಶಿಕಲಾ. ಆದರೆ, ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ ಆರೋಪ ಸಾಬೀತಾಗಿ, 2017ರಲ್ಲಿ ಶಶಿಕಲಾ ಅವರೂ ಜೈಲು ಸೇರಬೇಕಾಯಿತು.

ಇದಾದ ನಂತರ ಎಐಎಡಿಎಂಕೆ ಒಳಗೇ ಅಧಿಕಾರಕ್ಕಾಗಿ ಕಿತ್ತಾಟ, ಶೀತಲ ಸಮರ ಎಲ್ಲವೂ ನಡೆದಿವೆ. ಈಗ ಶಶಿಕಲಾ ಅವರ ಬಿಡುಗಡೆ ಸಮೀಪಿಸಿದೆ. ಇದೇ ತಿಂಗಳಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಶಶಿಕಲಾ ಅವರ ಪ್ರವೇಶವು ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬದಲಾವಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಟಾಲಿನ್‌– ಅಳಗಿರಿ ಬಿರುಕು: ಕರುಣಾನಿಧಿ ಅವರ ಪುತ್ರರಾದ ಸ್ಟಾಲಿನ್‌ ಹಾಗೂ ಅಳಗಿರಿ ಮಧ್ಯೆ ಉಂಟಾಗಿರುವ ಬಿರುಕು ಯಾವ ಪರಿಣಾಮ ಉಂಟುಮಾಡುತ್ತದೆ ಎಂಬುದು ಕುತೂಹಲದ ಇನ್ನೊಂದು ವಿಚಾರವಾಗಿದೆ.

ಪಕ್ಷದಿಂದ ಹೊರಬಂದಿರುವ ಅಳಗಿರಿ ಅವರು ಬೇರೆ ಪಕ್ಷ ಕಟ್ಟಲಾರರು ಎಂದು ಅವರ ಸಮೀಪವರ್ತಿಗಳು ಹೇಳುತ್ತಾರೆ. ಆದರೆ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಅವರು ಬೇರೆ ಯಾವುದಾದರೂ ಪಕ್ಷದ ಜತೆಗೆ ಕೈಜೋಡಿಸಬೇಕಾಗಬಹುದು. ಕಾಂಗ್ರೆಸ್‌ ಪಕ್ಷವು ಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಅಲ್ಲಿ ಅವರಿಗೆ ಸ್ಥಾನ ಲಭಿಸಲಾರದು. ಎಐಎಡಿಎಂಕೆ ಕರುಣಾನಿಧಿ ಅವರ ಬದ್ಧ ವೈರಿಯಾಗಿದ್ದರಿಂದ ಅಲ್ಲಿಗೆ ಅವರು ಹೋಗಲಾರರು. ರಜನಿಕಾಂತ್‌ ಅವರು ಪಕ್ಷ ಕಟ್ಟುವ ನಿರ್ಧಾರವನ್ನೇ ಕೈಬಿಟ್ಟಿರುವುದರಿಂದ ಆ ಬಾಗಿಲೂ ಮುಚ್ಚಿದೆ. ಉಳಿದಿರುವುದು ಬಿಜೆಪಿ. ಆದರೆ ಆ ಪಕ್ಷ ಎಐಎಡಿಎಂಕೆ ಜತೆಗೆ ಮೈತ್ರಿಯಲ್ಲಿದೆ. ಹೀಗಿರುವುದರಿಂದ ಅಳಗಿರಿಯವರಿಗೆ ಉಳಿದಿರುವ ದಾರಿ ಯಾವುದು ಎಂಬುದು ಕುತೂಹಲದ ವಿಚಾರವಾಗಿದೆ.

ಬಿಜೆಪಿ ಮೌನ: ತಮಿಳುನಾಡಿನಲ್ಲಿ ಬಿಜೆಪಿಯದ್ದು ಶೂನ್ಯ ಸಾಧನೆಯಾಗಿದ್ದರೂ ಈಚಿನ ಬೆಳವಣಿಗೆಗಳು ಬೇರೇನೋ ರಾಜಕೀಯ ಆಟ ನಡೆಯುತ್ತಿದೆ ಎಂಬುದನ್ನು ಸೂಚಿಸಿವೆ.

ತಮಿಳುನಾಡಿಗೆ ಇತ್ತೀಚೆಗೆ ಭೇಟಿನೀಡಿದ್ದ ಅಮಿತ್‌ ಶಾ ಅವರಿಗೆ ಅಲ್ಲಿ ಭವ್ಯ ಸ್ವಾಗತ ಲಭಿಸಿತ್ತು. ಅಷ್ಟೇ ಅಲ್ಲ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಮೋದಿ ಹಾಗೂ ಶಾ ಅವರನ್ನು ಹಾಡಿ ಹೊಗಳಿದ್ದಲ್ಲದೆ, ಬಿಜೆಪಿ–ಎಐಎಡಿಎಂಕೆ ಮೈತ್ರಿ ಮುಂದುವರಿಯಲಿದೆ ಎಂದು ವೇದಿಕೆಯಲ್ಲಿ ಘೋಷಿಸಿದ್ದರು. ಆದರೆ ಅಮಿತ್‌ ಶಾ ಈ ವಿಚಾರದಲ್ಲಿ ಮೌನವಾಗಿದ್ದರು. ಪಳನಿಸ್ವಾಮಿ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಎಡಿಎಂಕೆ ಘೋಷಿಸಿದೆ. ಇದಕ್ಕೂ ಬಿಜೆಪಿಯು ಮೌನವಾಗಿದೆ.

‘ಯಾರು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ’ ಎಂದು ಇತ್ತೀಚೆಗೆ ತಮಿಳುನಾಡಿಗೆ ಭೇಟಿನೀಡಿದ್ದ ಸಚಿವ ಪ್ರಕಾಶ್ ಜಾವಡೇಕರ್‌ ಹೇಳಿದ್ದಾರೆ.

ಹಿಂದೆ ಸರಿದ ರಜನಿ: ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಹೇಳಿದ್ದ ನಟ ರಜನಿಕಾಂತ್‌ ಅವರು ಕೆಲವೇ ದಿನಗಳಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಗುಣಮುಖರಾಗಿ ಹೊರಬರುತ್ತಿದ್ದಂತೆಯೇ, ‘ರಾಜಕೀಯಕ್ಕೆ ನಾನು ಬರುವುದಿಲ್ಲ’ ಎಂದು ಘೋಷಿಸಿದರು. ಆ ಮೂಲಕ ರಾಜಕೀಯ ಪ್ರವೇಶಕ್ಕೂ ಮುನ್ನವೇ ನಿವೃತ್ತಿಯನ್ನೂ ಘೋಷಿಸಿದರು. ‘ರಜನಿಕಾಂತ್‌ ಮೂಲಕ ತಮಿಳುನಾಡನ್ನು ಪ್ರವೇಶಿಸಲು ಬಿಜೆಪಿ ಪ್ರಯತ್ನ ಮಾಡಿತ್ತು. ಈಗ ಸಮೀಕರಣ ಬದಲಾಗಿದೆ’ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಇನ್ನೊಬ್ಬ ಜನಪ್ರಿಯ ನಟ ಕಮಲ್‌ಹಾಸನ್‌ ಅವರು ಮಕ್ಕಳ್‌ ನೀದಿ ಮಯ್ಯಂ ಮೂಲಕ ಚುನಾವಣಾ ಕಣದಲ್ಲಿದ್ದರೂ ಈವರೆಗೆ ಗಮನಾರ್ಹವಾದಂಥ ಸಾಧನೆ ಮಾಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಲವರಿಗೆ ಅವರು ಮುಳುವಾದರೂ ಅಚ್ಚರಿ ಇಲ್ಲ.

----------------------

ಪುದುಚೇರಿ

ರಾಜಕೀಯ ವಿಚಾರದಲ್ಲಿ ತಮಿಳುನಾಡನ್ನೇ ಹೋಲುವ ಪುದುಚೇರಿಯಲ್ಲಿ ಕಾಂಗ್ರೆಸ್‌–ಡಿಎಂಕೆ ಮೈತ್ರಿಕೂಟ ಈಗ ಆಡಳಿತದಲ್ಲಿದೆ. ಆದರೆ ಈಚೆಗೆ ಈ ಮೈತ್ರಿಯಲ್ಲಿ ಬಿರುಕು ಕಂಡುಬಂದಿದೆ. ಕಾಂಗ್ರೆಸ್‌ ಇಲ್ಲಿ ಬಲಿಷ್ಠ ಪಕ್ಷವಾಗಿದ್ದರೂ ಮೈತ್ರಿಯಲ್ಲಿನ ಬಿರುಕು ಯಾವ ಪರಿಣಾಮ ಉಂಟುಮಾಡಬಲ್ಲದು ಎಂಬುದನ್ನು ಈಗಲೇ ಊಹಿಸುವುದು ಕಷ್ಟ.

ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಕಾರ್ಯವೈಖರಿಯಿಂದ ಬೇಸತ್ತಿರುವ ಡಿಎಂಕೆ, ಎಲ್ಲಾ 30 ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಇತ್ತೀಚೆಗೆ ಹೇಳಿದೆ. ಲೆ.ಗವರ್ನರ್‌ ಕಿರಣ್‌ ಬೇಡಿ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ಆರಂಭಿಸಿದ್ದ ಪ್ರತಿಭಟನೆಯಲ್ಲೂ ಡಿಎಂಕೆ ಪಾಲ್ಗೊಂಡಿರಲಿಲ್ಲ.

2016ರ ಚುನಾವಣೆಯಲ್ಲಿ 10 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಿಎಂಕೆ, ಮೂರು ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಈ ಬಾರಿ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಡಿಎಂಕೆ ಮಾಡುವ ಸಾಧ್ಯತೆ ಇದೆ. ಇದು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ಶಕ್ತಿ ಕುಂದಿಸುವ ಅಪಾಯವೂ ಇದೆ.

-----------

ಅಸ್ಸಾಂ ಉಳಿಸಿಕೊಳ್ಳುವುದೇ ಎನ್‌ಡಿಎ

ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿರುವ ಬಿಜೆಪಿಗೆ ಅಸ್ಸಾಂ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದೆ.

ಕಳೆದ ವರ್ಷ ಭಾರಿ ವಿರೋಧಕ್ಕೆ ಕಾರಣವಾಗಿ, ಜಗತ್ತಿನ ಗಮನವನ್ನು ಸೆಳೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ, ಸಿಎಎ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಅಸ್ಸಾಂ ರಾಜ್ಯದೊಂದಿಗೆ ತಳಕು ಹಾಕಿಕೊಂಡಿವೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಆರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದೇ ಅಸ್ಸಾಂನಲ್ಲಿ. ಆದರೆ ಆ ನಂತರ ಅಲ್ಲಿ ಅದು ತಣ್ಣಗಾಗಿ ದೆಹಲಿಯಲ್ಲಿ ತೀವ್ರಗೊಂಡಿತು.

ಇಲ್ಲಿ ಅಧಿಕಾರ ಉಳಿಸಿಕೊಳ್ಳಬಲ್ಲೆ ಎಂಬ ವಿಶ್ವಾಸ ಬಿಜೆಪಿಗೆ ಇದ್ದರೂ, ಜನರು ಎಂಥ ಪ್ರತಿಕ್ರಿಯೆ ನೀಡುತ್ತಾರೆ ಎಂಬುದರ ಸ್ಪಷ್ಟ ಚಿತ್ರಣ ಚುನಾವಣೆ ಸಮೀಪಿಸುವ ವೇಳೆಗೆ ಲಭಿಸಬಹುದು.

ಇನ್ನೊಂದೆಡೆ ಕಾಂಗ್ರೆಸ್‌ ಮುಂಚಿತವಾಗಿಯೇ ಎಚ್ಚೆತ್ತುಕೊಂಡು, ಎಡಪಕ್ಷಗಳು ಹಾಗೂ ರಾಜ್ಯಸಭಾ ಸದಸ್ಯ ಅಜಿತ್‌ ಕುಮಾರ್‌ ಭುಯಾನ್‌ ನೇತೃತ್ವದಲ್ಲಿ ಇತ್ತೀಚೆಗೆ ರಚನೆಯಾಗಿರುವ ಅಂಚಲಿಕ್‌ ಗಣ ಮೋರ್ಚಾದ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.

‘ರಾಜ್ಯದಲ್ಲಿ ಎನ್‌ಡಿಎಯ ಸ್ಥಾನಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಬಹುದು. ಆದರೆ ಅಧಿಕಾರವನ್ನು ಎನ್‌ಡಿಎ ಮೈತ್ರಿಕೂಟವೇ ಹಿಡಿಯಲಿದೆ’ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳಿರುವುದು ಕುತೂಹಲ ಹೆಚ್ಚುವಂತೆ ಮಾಡಿದೆ.‌

----------------

ಕೇರಳ: ಎಡರಂಗಕ್ಕೆ ಮತ್ತೆ ಅಧಿಕಾರದ ವಿಶ್ವಾಸ

ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸತತವಾಗಿ ಪರ್ಯಾಯವಾಗಿ ಆಳ್ವಿಕೆ ನಡೆಸುತ್ತಾ ಬಂದಿವೆ. ಈ ಬಾರಿ ಅದು ಮರುಕಳಿಸುವುದಿಲ್ಲ ಎಂಬ ವಿಶ್ವಾಸವನ್ನು ಎಡರಂಗ ಹೊಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಡರಂಗಕ್ಕೆ ಭಾರಿ ಗೆಲುವು ಸಿಕ್ಕಿರುವುದು ಇಂತಹ ವಿಶ್ವಾಸಕ್ಕೆ ಕಾರಣ. 

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಷ್ಟು ಜನಪ್ರಿಯತೆ ಇರುವ ಬೇರೊಬ್ಬ ನಾಯಕ ಈಗ ಕೇರಳದಲ್ಲಿ ಇಲ್ಲ. 2016ರ ಮೇಯಲ್ಲಿ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಅವರು ಹಲವು ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದಾರೆ. 2018ರಲ್ಲಿ ನಿಫಾ ಸೋಂಕು ಮತ್ತು ಭಾರಿ ಪ್ರವಾಹ ಕೇರಳವನ್ನು ತಲ್ಲಣಗೊಳಿಸಿತ್ತು. ನಂತರ ಕೋವಿಡ್‌ ಬಂತು. ಈ ಎಲ್ಲವನ್ನೂ ವಿಜಯನ್‌ ಅವರು ಅತ್ಯಂತ ದಕ್ಷವಾಗಿ ನಿಭಾಯಿಸಿದರು ಎಂಬ ಭಾವನೆ ಅಲ್ಲಿನ ಜನರಲ್ಲಿ ಇದೆ. ಹಾಗಿದ್ದರೂ 2019ರ ಲೋಕಸಭಾ ಚುನಾವಣೆಯಲ್ಲಿ ಎಡರಂಗಕ್ಕೆ ಒಂದು ಕ್ಷೇತ್ರದಲ್ಲಿ ಗೆಲುವು ಸಿಕ್ಕಿತ್ತು. ಸ್ಥಳೀಯಾಡಳಿತ ಚುನಾವಣೆಯ ಗೆಲುವು ವಿಜಯನ್‌ ಅವರ ಆಳ್ವಿಕೆಗೆ ಸಿಕ್ಕ ಮನ್ನಣೆ ಎಂದು ವಿಶ್ಲೇಷಿಸಲಾಗುತ್ತಿದೆ. 

ವಿಜಯನ್‌ ಅವರು ಕುಶಾಗ್ರ ರಾಜಕೀಯ ತಂತ್ರಜ್ಞ ಎಂಬುದನ್ನು ಪುಷ್ಟೀಕರಿಸುವ ಹಲವು ಅಂಶಗಳು ಇವೆ. ಕ್ರೈಸ್ತರ ಪಕ್ಷ ಎಂದೇ ಕರೆಸಿಕೊಳ್ಳುವ ಕೇರಳ ಕಾಂಗ್ರೆಸ್‌ (ಎಂ) ಬಹಳ ಹಿಂದಿನಿಂದಲೂ ಯುಡಿಎಫ್‌ನ ಅಂಗವಾಗಿತ್ತು. ಆದರೆ, ಸಿಪಿಎಂನ ವಿರೋಧವನ್ನು ಲೆಕ್ಕಿಸದೆ ಇತ್ತೀಚೆಗೆ ಆ ಪಕ್ಷವನ್ನು ಎಲ್‌ಡಿಎಫ್‌ಗೆ ಸೇರಿಸಿಕೊಳ್ಳುವಲ್ಲಿ ವಿಜಯನ್‌ ಯಶಸ್ವಿಯಾಗಿದ್ದಾರೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಸಿಕ್ಕ ಗೆಲುವಿನಲ್ಲಿ ಈ ನಡೆಯ ಪಾತ್ರ ದೊಡ್ಡದು. 2011 ಮತ್ತು 2016ರ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಸೋಲಾಗಿತ್ತು ಎಂಬುದು ಗಮನಾರ್ಹ ಅಂಶ.

ವಿಜಯನ್‌ ಅವರ ಸರ್ಕಾರ ಹಗರಣಗಳಿಂದ ಹೊರತಾಗಿಲ್ಲ. ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ಮುಖ್ಯಮಂತ್ರಿ ಕಚೇರಿಯ ಕೆಲವು ಅಧಿಕಾರಿಗಳ ಹೆಸರು ಕೇಳಿ ಬಂದಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಅವರ ಮಗ ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಹಾಗಾಗಿ, ಬಾಲಕೃಷ್ಣನ್‌ ಅವರು ಕಾರ್ಯದರ್ಶಿ ಹುದ್ದೆಯಿಂದ ರಜೆಯ ಮೇಲೆ ತೆರಳಿದ್ದಾರೆ. 

20 ಲೋಕಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಗೆದ್ದ ಯುಡಿಎಫ್‌ನ ಈಗಿನ ಸ್ಥಿತಿ ಆಶಾದಾಯಕವಾಗಿ ಇಲ್ಲ. 86 ಮುನ್ಸಿಪಾಲಿಟಿಗಳ ಪೈಕಿ 45ರಲ್ಲಿ ಯುಡಿಎಫ್‌ ಗೆದ್ದಿದೆ. ಆದರೆ, ಇತರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಯುಡಿಎಫ್ ಸದಸ್ಯರ‌ ಸಂಖ್ಯೆ ಬಹಳ ಕಡಿಮೆ ಇದೆ. ಜಮಾತ್‌ ಎ ಇಸ್ಲಾಂನ ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾವನ್ನು ಯುಡಿಎಫ್‌ಗೆ ಸೇರಿಸಿಕೊಳ್ಳಲಾಗಿದೆ. ವೆಲ್‌ಫೇರ್‌ ಪಾರ್ಟಿಯ ಸೇರ್ಪಡೆಯಿಂದಾಗಿ ಸಾಂಪ್ರದಾಯಿಕ ಕ್ರೈಸ್ತ ಮತಗಳು ಕೂಡ ಪಕ್ಷಕ್ಕೆ ದಕ್ಕದೆ ಹೋಗಬಹುದು. ಜತೆಗೆ, ಎಂದಿನಂತೆ ಕಾಂಗ್ರೆಸ್‌ ಪಕ್ಷದಲ್ಲಿನ ಒಳಜಗಳ ಹಲವೆಡೆ ಗೆಲುವಿನ ಸಾಧ್ಯತೆಯನ್ನು ಕಮರಿಸಬಹುದು.

ಶಬರಿಮಲೆ ವಿವಾದವನ್ನು ತನ್ನ ಪರವಾಗಿ ಪರಿವರ್ತಿಸಲು ಬಿಜೆಪಿ ಯತ್ನಿಸುತ್ತಿದೆ. ಸ್ವಲ್ಪ ಮಟ್ಟಿಗೆ ಅದರಲ್ಲಿ ಯಶಸ್ಸೂ ಸಿಕ್ಕಿದೆ. ಆದರೆ, ವಿಧಾನಸಭೆಯಲ್ಲಿ ಭಾರಿ ಬಲ ಹೆಚ್ಚಿಸಿಕೊಳ್ಳುವುದು ಕಷ್ಟ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು