ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ದೂರಸಂಪರ್ಕದ ದುಃಸ್ಥಿತಿ

Last Updated 11 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಭಾರತದ ದೂರ ಸಂಪರ್ಕ ಕ್ಷೇತ್ರವು ತೀವ್ರವಾದ ಬಿಕ್ಕಟ್ಟಿಗೆ ಸಿಲುಕಿದೆ.ವೊಡಾಫೋನ್‌–ಐಡಿಯಾ ಕಂಪನಿಯಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತರಾಗಿಲ್ಲ. ಹೊಂದಾಣಿಕೆ ಮಾಡಲಾದ ಒಟ್ಟು ವರಮಾನ (ಎಜಿಆರ್‌) ಪಾವತಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಇದಕ್ಕೆ ಒಂದು ಕಾರಣ. ತರಂಗಾಂತರ ಶುಲ್ಕ ಪಾವತಿ ಗಡುವಿನ ಮುಂದೂಡಿಕೆ ಆಗುತ್ತಿಲ್ಲ. ದೂರ ಸಂಪರ್ಕ ಸೇವೆಯ ವೆಚ್ಚಕ್ಕಿಂತ ಹೆಚ್ಚು ಶುಲ್ಕ ನಿಗದಿ ವ್ಯವಸ್ಥೆಯೂ ಇಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರವು ಬೆಂಬಲಕ್ಕೆ ಬಾರದಿದ್ದರೆ ವೊಡಾಫೋನ್‌–ಐಡಿಯಾ ಕಂಪನಿಯು ‘ಚೇತರಿಕೆ ಸಾಧ್ಯವೇ ಇಲ್ಲದ ಹಂತಕ್ಕೆ ಕುಸಿಯಲಿದೆ’ ಎಂದು ಆದಿತ್ಯಾ ಬಿರ್ಲಾ ಕಂಪನಿಯ ಅಧ್ಯಕ್ಷ ಕುಮಾರ ಮಂಗಳಂ ಬಿರ್ಲಾ ಇತ್ತೀಚೆಗೆ ಹೇಳಿದ್ದಾರೆ. ಇದು ದೂರಸಂಪರ್ಕ ಕ್ಷೇತ್ರದ ಈಗಿನ ಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಆದಿತ್ಯಾ ಬಿರ್ಲಾ ಕಂಪನಿಯು ವೊಡಾಫೋನ್‌–ಐಡಿಯಾ ಕಂಪನಿಯಲ್ಲಿ ಶೇ 27ರಷ್ಟು ಪಾಲು ಹೊಂದಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬಿಟ್ಟರೆ ದೇಶದಲ್ಲಿ ದೂರ ಸಂಪರ್ಕ ಸೇವೆ ಒದಗಿಸುತ್ತಿರುವ ಕಂಪನಿಗಳು ಮೂರು ಮಾತ್ರ. ಅದರೊಲ್ಲೊಂದು ವೊಡಾಫೋನ್‌–ಐಡಿಯಾ. ಇದು ಮೂರನೇ ಸ್ಥಾನದಲ್ಲಿದ್ದರೆ ಜಿಯೊ ಮತ್ತು ಏರ್‌ಟೆಲ್‌ ಒಂದು ಮತ್ತು ಎರಡನೇ ಸ್ಥಾನಗಳಲ್ಲಿವೆ.

ಬಿಎಸ್‌ಎನ್‌ಎಲ್‌ ನಷ್ಟದಲ್ಲಿದೆ ಮತ್ತು ಸೇವೆಯನ್ನು ವಿಸ್ತರಿಸುವ ಬದಲು ದಿನ ದಿನವೂ ಕುಗ್ಗಿಸುತ್ತಲೇ ಇದೆ. ಖಾಸಗಿ ಕ್ಷೇತ್ರದ ವೊಡಾ-ಐಡಿಯಾ ಕೂಡ ಮುಚ್ಚಿಬಿಟ್ಟರೆ, ಏರ್‌ಟೆಲ್‌ ಮತ್ತು ಜಿಯೊ ಎರಡೇ ಸ್ಪರ್ಧೆಯಲ್ಲಿ ಉಳಿಯುತ್ತವೆ. ಹೀಗಾಗಿಯೇ ವೋಡಾ–ಐಡಿಯಾಕ್ಕೆ ನೆರವು ನೀಡುವುದಕ್ಕೆ ಜಿಯೊ ಕೂಡ ಆಕ್ಷೇಪ ಎತ್ತಿದೆ.

ವೊಡಾಫೋನ್‌–ಐಡಿಯಾ ಮತ್ತು ಇಡೀ ದೂರಸಂಪರ್ಕ ಕ್ಷೇತ್ರಕ್ಕೆ ಸರ್ಕಾರದ ನೆರವು ದೊರೆಯದೇ ಹೋದರೆ, ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ಜಿಯೊ ಮತ್ತು ಏರ್‌ಟೆಲ್‌ ಮಾತ್ರ ಉಳಿಯಲಿವೆ. ಇದರಿಂದ ಗ್ರಾಹಕರ ಆಯ್ಕೆಯ ಸ್ವಾತಂತ್ರ್ಯ ಮೊಟಕಾಗಬಹುದು. ಈ ಕಂಪನಿಗಳು ಕೊಡುವ ಸೇವೆಯನ್ನು ಪಡೆದುಕೊಂಡು, ವಿಧಿಸುವ ಶುಲ್ಕವನ್ನು ಭರಿಸಲು ಗ್ರಾಹಕರು ಸಿದ್ಧರಾಗಬೇಕಾಗಬಹುದು.

ಕ್ಷೇತ್ರದ ನಷ್ಟದ ಹಾದಿ

ಭಾರತದ ದೂರಸಂಪರ್ಕ ಕ್ಷೇತ್ರ ದುಃಸ್ಥಿತಿಗೆ ಇಳಿಯಲು ಹಲವು ಕಾರಣಗಳನ್ನು ಗುರುತಿಸಬಹುದು. ಸರ್ಕಾರದ ಗೊಂದಲಕಾರಿ ನೀತಿ, ದರ ಸಮರ, ತರಂಗಾಂತರಕ್ಕೆ ದುಬಾರಿ ದರ, ಎಜಿಆರ್‌ ಪಾವತಿ ಮಾಡಬೇಕಾದ ಒತ್ತಡಗಳಿಂದಾಗಿ ಒಂದೊಂದೇ ಕಂಪನಿಗಳು ಬಾಗಿಲು ಮುಚ್ಚುವ ಅಥವಾ ವಿಲೀನವಾಗುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ತಜ್ಞರು.

ಪರವಾನಿಗೆ ಹಾಗೂ ಮೂಲಸೌಕರ್ಯ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಕಂಪನಿಗಳು ನೀಡಬೇಕಿದ್ದಹೊಂದಾಣಿಕೆ ಮಾಡಲಾದ ಒಟ್ಟು ವರಮಾನ (ಎಜಿಆರ್‌) ಶುಲ್ಕವು ಇದೀಗ ವೊಡಾಫೋನ್‌ ಐಡಿಯಾದಂತಹ ದೊಡ್ಡ ಸಂಸ್ಥೆಯನ್ನು ಮುಳುಗುವ ಹಂತಕ್ಕೆ ತಂದಿದೆ. ಎಲ್ಲ ದೂರಸಂಪರ್ಕ ಕಂಪನಿಗಳು ಸೇರಿ ಕೇಂದ್ರ ಸರ್ಕಾರಕ್ಕೆ ₹93,520 ಕೋಟಿ ಎಜಿಆರ್‌ ಬಾಕಿ ಮೊತ್ತ ಪಾವತಿಸಬೇಕಿದೆ. ಇದರಲ್ಲಿ ವೊಡಾಫೋನ್ ಪಾಲೇ ಅರ್ಧದಷ್ಟಿದೆ. ಎಜಿಆರ್‌ ಲೆಕ್ಕಾಚಾರದಲ್ಲಿ ತಪ್ಪುಗಳಿವೆ ಎಂದು ದೂರಸಂಪರ್ಕ ಕಂಪನಿಗಳು ಕೋರ್ಟ್ ಮೊರೆ ಹೋಗಿದ್ದರೂ, ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿರುವುದು ಇಕ್ಕಟ್ಟಿಗೆ ಸಿಲುಕಿಸಿದೆ. ಕೆಲವು ಷರತ್ತುಗಳನ್ನು ವಿಧಿಸಿ ಎಜಿಆರ್‌ ಪಾವತಿಗೆ 10 ವರ್ಷಗಳ ಕಾಲಾವಕಾಶ ನೀಡಿ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಕೋರ್ಟ್ ಆದೇಶಿಸಿತ್ತು.

ತರಂಗಾಂತರದ ದುಬಾರಿ ದರದಿಂದಾಗಿ ದೂರಸಂಪರ್ಕ ವಲಯ ನಷ್ಟದ ಹಾದಿಯಲ್ಲಿದೆ ಎಂದು ಭಾರತಿ ಎಂಟರ್‌ಪ್ರೈಸಸ್‌ ಉಪಾಧ್ಯಕ್ಷ ರಾಕೇಶ್ ಭಾರತಿ ಮಿತ್ತಲ್ ಆರೋಪಿಸಿದ್ದಾರೆ.ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್‌ಗಾಗಿ ದೇಶದಲ್ಲಿ ಆಪ್ಟಿಕಲ್ ಫೈಬರ್ ಅಳವಡಿಸುವ ವೆಚ್ಚದ ಶೇ 75ರಷ್ಟನ್ನು ಸ್ಥಳೀಯ ಅಧಿಕಾರಿಗಳು ಶುಲ್ಕವಾಗಿ ನಿಗದಿಪಡಿಸುತ್ತಾರೆ ಎಂದಿದ್ದಾರೆ. ಪ್ರಸ್ತುತ ದರವು ವಿಶ್ವದ ಇತರೆಡೆಗೆ ಹೋಲಿಸಿದರೆ, 7 ಪಟ್ಟು ಹೆಚ್ಚು ಎಂಬುದು ಅವರ ಮಾತು.

ದೂರಸಂಪರ್ಕ ಕ್ಷೇತ್ರಕ್ಕೆ ರಿಯಲನ್ಸ್ ಜಿಯೊ ಪದಾರ್ಪಣೆ ಮಾಡಿದ ಬಳಿಕ ಶುರುವಾದ ದರ ಸಮರವು ಅದಾಗಲೇ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಗಳ ಅಸ್ತಿತ್ವವನ್ನೇ ಅಲುಗಾಡಿಸಿತು. ಬಳಕೆದಾರರಿಗೆ ಕಡಿಮೆ ದರದ ಸೇವೆ ನೀಡಿದ್ದರಿಂದ ಅವರು ಜಿಯೊ ಕಡೆ ಆಕರ್ಷಿತರಾದರು. ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವ ಅನಿವಾರ್ಯಕ್ಕೆ ಬಿದ್ದ ಏರ್‌ಟೆಲ್, ವೊಡಾಫೋನ್, ಐಡಿಯಾ, ಬಿಎಸ್‌ಎನ್‌ಎಲ್ ಮೊದಲಾದ ಕಂಪನಿಗಳೂ ದರ ಇಳಿಸಿದವು. ಆದರೆ ಆದಾಯಕ್ಕೆ ಭಾರಿ ಹೊಡೆತ ಬಿದ್ದಿತು.ಕಂಪನಿಗಳ ಸರಾಸರಿ ಆದಾಯ ಖೋತಾ ಆಯಿತು. 2012-2013ರಲ್ಲಿ ಶೇ 5.49ರಿಂದ 2015-2016ರಲ್ಲಿ ಶೇ 2.51ಕ್ಕೆ ಕಂಪನಿಗಳ ಆದಾಯ ಕುಸಿಯಿತು. ಮತ್ತೆ 2018-2019ರಲ್ಲಿ ಶೇ -2.82ಕ್ಕೆ ಇಳಿಕೆಯಾಯಿತು ಎಂದು ಅಂಕಿ–ಅಂಶಗಳು ಹೇಳುತ್ತವೆ.

ಟೆಲಿಕಾಂ ನೀತಿಯಲ್ಲಿನ ಗೊಂದಲಕಾರಿ ಅಂಶಗಳು ಹಾಗೂ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕ್ರಮಗಳನ್ನು ಗಮನಿಸಿದರೆ, ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡೇ ಸಂಸ್ಥೆಗಳು ಉಳಿದುಕೊಳ್ಳುವ ಹಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಬಳಕೆದಾರರಿಲ್ಲದೇ ಸೊರಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಜೀರ್ಣೋದ್ಧಾರಕ್ಕೆ ಸರ್ಕಾರ ತೋರಿರುವ ನಿರ್ಲಕ್ಷ್ಯ ಹಾಗೂ 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಎಜಿಆರ್‌ ಪಾವತಿಸಬೇಕಾದ ಒತ್ತಡದಲ್ಲಿರುವ ವೊಡಾಫೋನ್–ಐಡಿಯಾ ಕಂಪನಿಗಳು ಮುಚ್ಚಿದರೆ, ಜಿಯೊ ಮತ್ತು ಏರ್‌ಟೆಲ್ ಮಾತ್ರ ಮಾರುಕಟ್ಟೆಯನ್ನು ಆಳಲಿವೆ ಎನ್ನತ್ತಾರೆ ತಜ್ಞರು.

ಬೇಡಿಕೆಗೆ ಸ್ಪಂದಿಸದ ಟ್ರಾಯ್

‘ಕರೆ ಮತ್ತು ಡೇಟಾಗೆ ಕನಿಷ್ಠ ದರ ನಿಗದಿ ಮಾಡಿ’ ಎಂಬುದು ದೂರಸಂಪರ್ಕ ಕಂಪನಿಗಳು ಸರ್ಕಾರದ ಮುಂದೆ ಪದೇ ಪದೇ ಇಡುತ್ತಿರುವ ಬೇಡಿಕೆಯಾಗಿದೆ.ರಿಲಯನ್ಸ್ ಜಿಯೊ ಮಾರುಕಟ್ಟೆಗೆ ಬಂದ ನಂತರ ಅತ್ಯಂತ ಕಡಿಮೆ ದರದಲ್ಲಿ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಸೇವೆಯನ್ನು ನೀಡಿತು. ಜಿಯೊ ಸ್ಪರ್ಧೆಯನ್ನು ಎದುರಿಸುವ ಸಲುವಾಗಿ ಉಳಿದ ದೂರಸಂಪರ್ಕ ಕಂಪನಿಗಳೂ ದರವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿದವು. ಇದರಿಂದ ಡೇಟಾ ಬಳಕೆ ಗಣನೀಯವಾಗಿ ಹೆಚ್ಚಿದರೂ ದೂರಸಂಪರ್ಕ ಕಂಪನಿಗಳು ಭಾರಿ ನಷ್ಟ ಅನುಭವಿಸಿದವು.

ಈ ಬೆಳವಣಿಗೆಯ ನಂತರ ಹಲವು ಕಂಪನಿಗಳು ಸೇವೆಯನ್ನು ಸ್ಥಗಿತಗೊಳಿಸಿದವು. ಹಲವು ಕಂಪನಿಗಳು ಮುಚ್ಚಿದವು.ಈಗ ದೇಶದಲ್ಲಿ ಮೊಬೈಲ್ ಸೂರಸಂಪರ್ಕ ಸೇವೆ ನೀಡುತ್ತಿರುವ ಖಾಸಗಿ ಕಂಪನಿಗಳ ಸಂಖ್ಯೆ ಮೂರು ಮಾತ್ರ. ಉಳಿದ ಕಂಪನಿಗಳೆಲ್ಲವೂ ಬಾಗಿಲು ಹಾಕಿವೆ.

ಈ ಮೂರೂ ಕಂಪನಿಗಳಲ್ಲಿ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್) ಎರಡು ಬಾರಿ ಪತ್ರ ಬರೆದು ಕರೆ ಮತ್ತು ಡೇಟಾಗೆ ಕನಿಷ್ಠ ದರ ನಿಗದಿ ಮಾಡಿ ಎಂದು ಕೋರಿವೆ. 2019ರಿಂದಲೂ ಸಲ್ಲಿಸುತ್ತಿರುವ ಈ ಬೇಡಿಕೆಗೆ ಟ್ರಾಯ್ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಸ್ತಾವವನ್ನು ಟ್ರಾಯ್ ಒಪ್ಪಿಕೊಂಡೂ ಇಲ್ಲ, ತಿರಸ್ಕರಿಸಿಯೂ ಇಲ್ಲ.ಜಿಯೊ ಸಹ ಪ್ರತಿ ಜಿಬಿ ಡೇಟಾಗೆ₹ 35 ಕನಿಷ್ಠ ದರ ನಿಗದಿ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಿತ್ತು. ಆ ಬೇಡಿಕೆಗೂ ಟ್ರಾಯ್ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಆದರೆ ಜಿಯೊ ಮತ್ತೆ ಅಂತಹ ಬೇಡಿಕೆ ಸಲ್ಲಿಸಿಲ್ಲ.

2018ರ ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿಯ ಅನ್ವಯ ಮೊಬೈಲ್ ದೂರಸಂಪರ್ಕ ಕಂಪನಿಗಳ ಮೇಲೆ ವಿಧಿಸಲಾಗುವ ಹಲವು ತೆರಿಗೆಗಳ ದರ ಕಡಿತವಾಗುತ್ತದೆ. ಈ ನೀತಿಯ ಪ್ರಕಾರ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳ ದರವೂ ಕಡಿತವಾಗಬೇಕು. 2022ರ ಆರಂಭದ ವೇಳೆಗೆ ಈ ಎಲ್ಲಾ ನಿಯಮಗಳು ಜಾರಿಗೆ ಬರಬೇಕಿತ್ತು. ಆದರೆ ಅನುಷ್ಠಾನ ವಿಳಂಬವಾಗಿರುವ ಕಾರಣ, ತೆರಿಗೆ ದರ ಕಡಿತದ ಲಾಭ ದೂರಸಂಪರ್ಕ ಕಂಪನಿಗಳಿಗೆ ದೊರೆತಿಲ್ಲ.

ನೆರವಾಗದ ಸರ್ಕಾರದ ಕ್ರಮ

2012ರ ಪೂರ್ವಾನ್ವಯ ತೆರಿಗೆ ನೀತಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಲು ಮುಂದಾಗಿದೆ. ಇದರಿಂದ ವೊಡಾಫೋನ್-ಐಡಿಯಾಗೆ ನೆರವಾಗಲಿದೆ ಎಂದು ಸರ್ಕಾರವು ಹೇಳುತ್ತಿದೆ. ಆದರೆ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿದೆ.

2007ರಲ್ಲಿ ವೊಡಾಫೋನ್‌ ಕಂಪನಿಯು ಭಾರತದ ದೂರಸಂಪರ್ಕ ಕಂಪನಿಯೊಂದರಿಂದ ಹಲವು ಸ್ವತ್ತುಗಳನ್ನು ಖರೀದಿಸಿತ್ತು. ಈ ಸ್ವತ್ತುಗಳನ್ನು ಬೇರೊಂದು ಕಂಪನಿಯಿಂದ ಪರೋಕ್ಷವಾಗಿ ಖರೀದಿಸಿದ್ದರೂ, ₹ 22,100 ಕೋಟಿ ಆಸ್ತಿ ಖರೀದಿ ತೆರಿಗೆ ಪಾವತಿಸಬೇಕು ಎಂದು ಸರ್ಕಾರವು ಒತ್ತಾಯಿಸಿತ್ತು. ಸರ್ಕಾರದ ಒತ್ತಾಯದ ವಿರುದ್ಧ ವೊಡಾಫೋನ್‌ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆಸ್ತಿ ತೆರಿಗೆ ಕಟ್ಟಬೇಕಿಲ್ಲ ಎಂಬ ಕಂಪನಿಯ ವಾದವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿತ್ತು. ಆದರೆ 2012ರಲ್ಲಿ ಪೂರ್ವಾನ್ವಯ ತೆರಿಗೆ ಕಾಯ್ದೆ ಜಾರಿಗೆ ತಂದ ಸರ್ಕಾರವು, ವೊಡಾಫೋನ್ ಕಂಪನಿ ತೆರಿಗೆ ನೀಡಬೇಕು ಎಂದು ಒತ್ತಾಯಿಸಿತ್ತು.

ಸರ್ಕಾರದ ಈ ಕ್ರಮದ ವಿರುದ್ಧ ಹೇಗ್ ಮಧ್ಯಸ್ಥಿಕೆ ಮಂಡಳಿಯಲ್ಲಿ ವೊಡಾಫೋನ್‌ ಕಂಪನಿ ದಾವೆ ಹೂಡಿತ್ತು. ಹೇಗ್ ಮಧ್ಯಸ್ಥಿಕೆ ಮಂಡಳಿ ಸಹ ವೊಡಾಫೋನ್‌ನ ವಾದವನ್ನು ಮಾನ್ಯ ಮಾಡಿತು. ಸಿಂಗಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮಂಡಳಿ ಸಹ ವೊಡಾಫೋನ್‌ ಕಂಪನಿಯ ಪರವಾಗಿ ತೀರ್ಪು ನೀಡಿತ್ತು. ಆದರೆ ಸರ್ಕಾರವು ತೆರಿಗೆ ಪಾವತಿಸಲೇಬೇಕು ಎಂದು ಒತ್ತಾಯಿಸುತ್ತಲೇ ಇತ್ತು. ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವೊಡಾಫೋನ್ ಮತ್ತು ಭಾರತ ಸರ್ಕಾರದ ಮಧ್ಯೆ ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿ ಇದೆ.

ಈಗ ಪೂರ್ವಾನ್ವಯ ತೆರಿಗೆ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಗೆ ಸರ್ಕಾರವು ಸಂಸತ್ತಿನ ಅನುಮೋದನೆ ಪಡೆದುಕೊಂಡಿದೆ. ತಿದ್ದುಪಡಿ ಮಸೂದೆ ಪ್ರಕಾರ ಈಗಾಗಲೇ ಪಾವತಿ ಮಾಡಿರುವ ಆಸ್ತಿ ತೆರಿಗೆಯನ್ನು ಸರ್ಕಾರವು, ಕಂಪನಿಗಳಿಗೆ ವಾಪಸ್ ಮಾಡಬೇಕು. ವೊಡಾಫೋನ್ ಇನ್ನೂ ತೆರಿಗೆ ಪಾವತಿ ಮಾಡಿಲ್ಲವಾದ್ದರಿಂದ, ಅದಕ್ಕೆ ಸರ್ಕಾರದ ಕಡೆಯಿಂದ ಯಾವುದೇ ಹಣ ವಾಪಸ್ ದೊರೆಯುವುದಿಲ್ಲ. ಆದರೆ ಸರ್ಕಾರದ ವಿರುದ್ಧ ಕಂಪನಿಯು ವಿವಿಧ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಹೂಡಿರುವ ದಾವೆಗಳನ್ನು ವಾಪಸ್ ಪಡೆದುಕೊಳ್ಳುತ್ತದೆ. ಇದರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT