ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸಂಪತ್ತು ಇಲ್ಲದವರಿಗೆ ಸವಲತ್ತೂ ಇಲ್ಲ

Last Updated 24 ಆಗಸ್ಟ್ 2022, 19:46 IST
ಅಕ್ಷರ ಗಾತ್ರ

ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಇದೆ. ಸಂಪತ್ತಿನ ಅಸಮಾನ ಹಂಚಿಕೆಯು, ಸವಲತ್ತುಗಳ ಹಂಚಿಕೆಯಲ್ಲಿನ ಅಸಮಾನತೆಗೂ ಕಾರಣವಾಗಿದೆ. ಕಡುಬಡವರು ಗೌರವಯುತವಾಗಿ ಜೀವನ ನಡೆಸಲು ಅಗತ್ಯವಾದ ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ. ಅಂತಹ ಮೂಲ ಸೌಕರ್ಯಗಳನ್ನು ಸರ್ಕಾರವು ಒದಗಿಸಿದರೂ, ಅದು ಕಡುಬಡವರ ಕೈಗೆ ಎಟುಕುವುದಿಲ್ಲ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ. ಸಂಪತ್ತು ಮತ್ತು ಸವಲತ್ತಿನ ಅಸಮಾನ ಹಂಚಿಕೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಿನ್ನವಾಗಿದೆ. ಧರ್ಮದಿಂದ ಧರ್ಮಕ್ಕೂ ಈ ವಿಚಾರದಲ್ಲಿ ಭಾರಿ ವ್ಯತ್ಯಾಸವಿದೆ ಎಂಬುದನ್ನು ಈ ವರದಿಯ ದತ್ತಾಂಶಗಳು ತೋರಿಸಿವೆ

ಸಂಪತ್ತು ಜನರ ಜೀವನ ಮಟ್ಟವನ್ನು ನಿರ್ಧರಿಸುತ್ತದೆ. ಹೆಚ್ಚು ಸಂಪತ್ತು ಹೊಂದಿರುವವರು ಎಲ್ಲಾ ಸ್ವರೂಪದ ಸವಲತ್ತುಗಳನ್ನು ಪಡೆಯುತ್ತಾರೆ. ಸಂಪತ್ತು ಇಲ್ಲದವರಿಗೆ ಸವಲತ್ತೂ ಇರುವುದಿಲ್ಲ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿಯ ದತ್ತಾಂಶಗಳು (ಎನ್‌ಎಫ್‌ಎಚ್‌ಎಸ್‌–5). ಬಡವರಿಗೆ ಸರ್ಕಾರವು ಸವಲತ್ತುಗಳನ್ನು ನೀಡಿದರೂ, ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರನ್ನು ಸಂಪತ್ತು ಮತ್ತು ಸವಲತ್ತುಗಳ ಆಧಾರದಲ್ಲಿ ಐದು ವರ್ಗಗಳನ್ನಾಗಿ ವರ್ಗೀಕರಿಸಲಾಗಿದೆ. ಸಂಪತ್ತಿನ ಜತೆಗೆ ಸುಸಜ್ಜಿತ ಸೂರು, ಶುದ್ಧ ಕುಡಿಯುವ ನೀರು, ಎಲ್‌ಪಿಜಿ ಸೌಲಭ್ಯ, ಉತ್ತಮ ಆರೋಗ್ಯ ಸೇವೆಯ ಲಭ್ಯತೆ, ಟಿ.ವಿ, ಮೊಬೈಲ್‌–ಇಂಟರ್ನೆಟ್‌, ಓಡಾಡಲು ವಾಹನಗಳು ಇದ್ದವರು ಸಾಧಾರಣ/ಹೆಚ್ಚು/ಅತಿಹೆಚ್ಚು ಸಂಪತ್ತು ಮತ್ತು ಸವಲತ್ತು ಹೊಂದಿರುವ ವರ್ಗದಲ್ಲಿದ್ದಾರೆ. ಈ ಸವಲತ್ತುಗಳು ಐಷಾರಾಮದ ಸ್ವರೂಪ ಪಡೆದಂತೆಲ್ಲಾ ಅವರು ಈ ವರ್ಗೀಕರಣದಲ್ಲಿ ಮೇಲಿನ ಹಂತಕ್ಕೆ ಹೋಗುತ್ತಾರೆ. ಸಂಪತ್ತಿನ ಜತೆಗೆ ಈ ಸವಲತ್ತುಗಳಿಂದ ವಂಚಿತರಾದವರು ಈ ವರ್ಗದ ಕೆಳಹಂತದ ವರ್ಗಗಳಲ್ಲಿ ಬರುತ್ತಾರೆ. ಸಂಪತ್ತು ಇಲ್ಲದವರು ಅಂದರೆ ಬಡವರು ಕನಿಷ್ಠ ಮೂಲಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ನಿರಂತರ ವಿದ್ಯುತ್, ಎಲ್‌ಪಿಜಿ ಸಂಪರ್ಕದಿಂದ ವಂಚಿತರಾಗಿದ್ದಾರೆ. ಉದಾಹರಣೆಗೆ, ಬಡವರಿಗೆ ಸರ್ಕಾರವು ಎಲ್‌ಪಿಜಿ ಸಂಪರ್ಕವನ್ನು ಒದಗಿಸಿದರೂ ತದನಂತರದಲ್ಲಿ ಭರ್ತಿ ಸಿಲಿಂಡರ್‌ ಖರೀದಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗೆ ಕಡು ಬಡತನದ ಮಟ್ಟ ಹೆಚ್ಚಿದಷ್ಟೂ, ಮೂಲಸೌಕರ್ಯಗಳ ಲಭ್ಯತೆ ಕಡಿಮೆಯಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಸರ್ಕಾರವು ಸವಲತ್ತುಗಳನ್ನು ನೀಡಿದರೂ, ಬಡವರಿಗೆ ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಕರ್ನಾಟಕದ ಒಂದು ಕಾರ್ಯಕ್ರಮ ಸಾಕ್ಷಿಯಾಗಿದೆ. ರಾಜ್ಯದ ಹುಲಿ ಅಭಯಾರಣ್ಯಗಳ ಸಮೀಪದ ಗ್ರಾಮಗಳ ಜನರು ಉರುವಲಿಗಾಗಿ ಕಾಡಿಗೆ ಹೋಗುತ್ತಿದ್ದರು. ಅದನ್ನು ತಪ್ಪಿಸುವ ಉದ್ದೇಶದಿಂದ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಒದಗಿಸಲಾಗಿತ್ತು. ಸಿಲಿಂಡರ್ ಬೆಲೆ ವಿಪರೀತ ಏರಿಕೆಯಾದ ಕಾರಣ ಎಲ್‌ಪಿಜಿ ಬಳಕೆ ಬಹುತೇಕ ಸ್ಥಗಿತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಜೈನರು, ಸಿಖ್ಖರಲ್ಲಿ ಅತಿಶ್ರೀಮಂತರು ಹೆಚ್ಚು

l ಕೆಲವು ಧರ್ಮದ ಜನರಲ್ಲಿ ಅತಿಶ್ರೀಮಂತರ ಪ್ರಮಾಣ ಹೆಚ್ಚು ಇದೆ. ಅಂತಹ ಧರ್ಮಗಳಲ್ಲಿ ಕಡುಬಡವರ ಪ್ರಮಾಣ ತೀರಾ ಕಡಿಮೆ ಇದೆ

* ಜೈನ ಧರ್ಮದ ಶೇ 80ಕ್ಕಿಂತಲೂ ಹೆಚ್ಚು ಜನರು ಅತಿ ಶ್ರೀಮಂತರ ವರ್ಗದಲ್ಲಿ ಬರುತ್ತಾರೆ. ಈ ಧರ್ಮದಲ್ಲಿ ಕಡುಬಡವರ ಪ್ರಮಾಣ ಶೇ 1.6ರಷ್ಟು ಮಾತ್ರ

* ಸಿಖ್‌ ಧರ್ಮದಲ್ಲೂ ಸಂಪತ್ತು ಮತ್ತು ಸವಲತ್ತು ಇದೇ ಸ್ವರೂಪದಲ್ಲಿ ಹಂಚಿಕೆಯಾಗಿದೆ. ಈ ಧರ್ಮದಲ್ಲಿ ಅತಿ ಶ್ರೀಮಂತರ ಪ್ರಮಾಣ
ಶೇ 59ರಷ್ಟು ಇದ್ದರೆ, ಕಡುಬಡವರ ಪ್ರಮಾಣ ಶೇ 1.6ರಷ್ಟು ಮಾತ್ರ

* ಸಂಪತ್ತು ಮತ್ತು ಸವಲತ್ತುಗಳ ಹಂಚಿಕೆ ಹಿಂದೂ ಹಾಗೂ ಮುಸ್ಲಿಮರಲ್ಲಿ ಒಂದೇ ಸ್ವರೂಪದಲ್ಲಿ ಇದೆ.

ಸಂಪತ್ತು ಮತ್ತು ಸವಲತ್ತಿನ ಹಂಚಿಕೆಯನ್ನು ತೋರಿಸುವಗ್ರಾಫಿಕ್‌
ಸಂಪತ್ತು ಮತ್ತು ಸವಲತ್ತಿನ ಹಂಚಿಕೆಯನ್ನು ತೋರಿಸುವಗ್ರಾಫಿಕ್‌

ಪರಿಶಿಷ್ಟ ಪಂಗಡಗಳಲ್ಲಿ ಕಡುಬಡವರು ಹೆಚ್ಚು

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರಲ್ಲಿ ಕಡುಬಡವರು ಹೆಚ್ಚು. ಆದರೆ ಪರಿಶಿಷ್ಟ ಪಂಗಡಗಳಲ್ಲಿ ಕಡುಬಡವರ ಪ್ರಮಾಣ ಅತಿಹೆಚ್ಚು ಎನ್ನುತ್ತವೆ ಈ ದತ್ತಾಂಶಗಳು. ಪರಿಶಿಷ್ಟ ಪಂಗಡಗಳ ಜನರಲ್ಲಿ ಶೇ 46.4ರಷ್ಟು ಕಡು ಬಡವರಿದ್ದಾರೆ. ಈ ಜನರು ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತ ರಾಗಿದ್ದಾರೆ. ಪರಿಶಿಷ್ಟ ಪಂಗಡಗಳಲ್ಲಿ ಶ್ರೀಮಂತರು ಮತ್ತು ಅತಿ ಶ್ರೀಮಂತರ ಪ್ರಮಾಣ ತೀರಾ ಕಡಿಮೆ ಇದೆ. ಪರಿಶಿಷ್ಟ ಪಂಗಡಗಳ ಜನರಿಗೆ ಹೋಲಿಸಿದರೆ, ಪರಿಶಿಷ್ಟ ಜಾತಿಗಳ ಜನರಲ್ಲಿ ಸಂಪತ್ತು ಮತ್ತು ಸವಲತ್ತಿನ ಹಂಚಿಕೆಯ ಸ್ವರೂಪ ಭಿನ್ನವಾಗಿದೆ.

ನಗರಗಳಲ್ಲಿ ಸಿರಿವಂತರು, ಹಳ್ಳಿಗಳಲ್ಲಿ ಬಡವರು ಹೆಚ್ಚು

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಸಂಪತ್ತು ಮತ್ತು ಸವಲತ್ತಿನಹಂಚಿಕೆಯನ್ನು ತೋರಿಸುವ ಗ್ರಾಫಿಕ್‌
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಸಂಪತ್ತು ಮತ್ತು ಸವಲತ್ತಿನ
ಹಂಚಿಕೆಯನ್ನು ತೋರಿಸುವ ಗ್ರಾಫಿಕ್‌

ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ನಡುವೆ ಸಂಪತ್ತು ಹಾಗೂ ಸೌಲಭ್ಯಗಳ ವಿಚಾರದಲ್ಲಿ ಅಂತರ ಇರುವುದು ಕಂಡುಬಂದಿದೆ.ನಗರ ಪ್ರದೇಶದ ಮೊದಲ ಎರಡು ವರ್ಗಗಳಲ್ಲಿ (ಶೇ 46 ಮತ್ತು ಶೇ 29) ಎಲ್ಲ ರೀತಿಯ ಸವಲತ್ತುಗಳು ಹಾಗೂ ಸಂಪತ್ತು ಕೇಂದ್ರೀಕೃತವಾಗಿವೆ. ಗ್ರಾಮೀಣ ಭಾಗದಲ್ಲಿ ಇದಕ್ಕೆ ವ್ಯತಿರಿಕ್ತವಾದ ಚಿತ್ರಣವಿದೆ. ಸಂಪತ್ತು ಮತ್ತು ಸೌಲಭ್ಯಗಳು ಕಡಿಮೆ ಪ್ರಮಾಣದಲ್ಲಿ ಇರುವ ಕೊನೆಯ ಎರಡು ವರ್ಗಗಳಲ್ಲೇ ಅರ್ಧದಷ್ಟು (ಶೇ 54) ಜನಸಂಖ್ಯೆ ಕೇಂದ್ರೀಕೃತ ವಾಗಿದೆ. ಇದರರ್ಥ, ಗ್ರಾಮೀಣ ಪ್ರದೇಶ ಗಳಲ್ಲಿ ಹೆಚ್ಚಿನ ಸಂಪತ್ತೂ ಇಲ್ಲ ಹಾಗೆಯೇ ಸೌಲಭ್ಯಗಳೂ ಇಲ್ಲ. ಅತಿಹೆಚ್ಚು ಸಂಪತ್ತು ಮತ್ತು ಸವಲತ್ತು ಹೊಂದಿರುವ ಜನರ ಪ್ರಮಾಣ ಹೆಚ್ಚು ಇರುವ ಪ್ರದೇಶಗಳಲ್ಲಿ ಚಂಡೀಗಡ(ಶೇ 79), ದೆಹಲಿ (ಶೇ 68) ಮತ್ತು ಪಂಜಾಬ್ (ಶೇ 61) ಮೊದಲ ಸಾಲಿನಲ್ಲಿವೆ. ಈ ವಿಚಾರದಲ್ಲಿ ಜಾರ್ಖಂಡ್‌, ಬಿಹಾರ ಮತ್ತು ಅಸ್ಸಾಂ ಕೊನೆಯ ಸಾಲಿನಲ್ಲಿವೆ.

ಅರ್ಧದಷ್ಟು ಕುಟುಂಬಗಳಿಗಷ್ಟೇ ಜಮೀನು ಒಡೆತನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇಶದಲ್ಲಿ ಕೃಷಿಯನ್ನು ನಂಬಿಕೊಂಡಿರುವ ಕೋಟ್ಯಂತರ ಕುಟುಂಬಗಳಿವೆ. ಆದರೆ ಕೃಷಿ ಜಮೀನುಗಳ ಒಡೆತನದ ವಿಚಾರದಲ್ಲಿ ಸಾಕಷ್ಟು ಅಂತರವಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಹ, ಗ್ರಾಮೀಣ ಪ್ರದೇಶದ ಶೇ 47.8ರಷ್ಟು ಕುಟುಂಬಗಳಿಗೆ ಇಂದಿಗೂ ಕೃಷಿ ಜಮೀನಿನ ಒಡೆತನ ಇಲ್ಲ. ಸರಿಸುಮಾರು ಅರ್ಧದಷ್ಟು ಕುಟುಂಬಗಳು ಇತರರ ಜಮೀನುಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ ವರದಿ ಅಭಿಪ್ರಾಯಪಟ್ಟಿದೆ.

ಕೃಷಿ ಜಮೀನುಗಳ ನೀರಾವರಿಯ ಸ್ವರೂಪದ ಆಧಾರದಲ್ಲಿ, ಅವುಗಳನ್ನು ವರ್ಗೀಕರಣ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ನೀರಾವರಿಯನ್ನೇ ಅವಲಂಬಿಸಿರುವ ಕುಟುಂಬಗಳ ಪ್ರಮಾಣ ಶೇ 1.3ರಷ್ಟು ಮಾತ್ರ. ಇಷ್ಟು ಅತ್ಯಲ್ಪ ಪ್ರಮಾಣದ ಕುಟುಂಬಗಳು ಮಾತ್ರ ವರ್ಷಪೂರ್ತಿ ನೀರಾವರಿಯನ್ನು ಬಳಸಿಕೊಂಡು ಕೃಷಿ ಮಾಡುತ್ತಿವೆ.

ಕೊಳವೆ ಬಾವಿ, ಕಾಲುವೆ ಮೊದಲಾದ ಯಾವುದೇ ಸ್ವರೂಪದ ನೀರಾವರಿ ಸೌಲಭ್ಯ ಇಲ್ಲದ ಕೃಷಿ ಜಮೀನುಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ ಶೇ 11.9ರಷ್ಟಿದೆ. ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ನೀರಾವರಿ ಸೌಲಭ್ಯಕ್ಕೆ ಒಳಪಡಿಸಿರುವ ಹಾಗೂ ಇನ್ನೊಂದಿಷ್ಟು ಜಮೀನು ನೀರಾವರಿ ಒದಗಿಸಲು ಸಾಧ್ಯವಾಗದ ಕುಟುಂಬಗಳ ಪ್ರಮಾಣ ಶೇ 39ರಷ್ಟಿದೆ. ಈ ಕುಟುಂಬಗಳ ಬಳಿ ನೀರಾವರಿ ಹಾಗೂ ನೀರಾವರಿಯೇತರ – ಎರಡೂ ಸ್ವರೂಪದ ಕೃಷಿ ಜಮೀನುಗಳಿವೆ.

ವಾಸಕ್ಕೆ ಸೂರು ಹೊಂದಿರುವ ಕುಟುಂಬಗಳು ಎಷ್ಟಿವೆ ಎಂಬುದರ ಮೇಲೂ ಈ ವರದಿ ಬೆಳಕು ಚೆಲ್ಲಿದೆ. ದೇಶದ ಗ್ರಾಮೀಣ ಪ್ರದೇಶದ ಶೇ 76ರಷ್ಟು ಕುಟುಂಬಗಳು ಸ್ವಂತ ಸೂರು ಹೊಂದಿವೆ. ಆದರೆ, ಶೇ 24ರಷ್ಟು ಕುಟುಂಬಗಳು ಇನ್ನೂ ಸ್ವಂತ ಸೂರು ಹೊಂದಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆಧಾರ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ–5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT