ಸೋಮವಾರ, ಜನವರಿ 17, 2022
18 °C

ಆಳ–ಅಗಲ | ಟೆಕ್‌ ಕಂಪನಿಗಳ ಸಾರಥ್ಯ; ಭಾರತೀಯ ಸಿಇಒಗಳ ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಾಗ್ ಅಗರ್‌ವಾಲ್

‘ಇದೊಂದು ಸಾಂಕ್ರಾಮಿಕದ ಮೂಲ ಭಾರತ ಎಂದು ಹೇಳಲು ನಮಗೆ ಸಂತಸ ಮತ್ತು ಹೆಮ್ಮೆ ಇದೆ. ಇದು ಭಾರತೀಯ ಸಿಇಒ (ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ) ವೈರಸ್‌. ಇದರ ವಿರುದ್ಧ ಲಸಿಕೆಯೇ ಇಲ್ಲ’– ಭಾರತದಲ್ಲಿ ಹುಟ್ಟಿ ಬೆಳೆದ ಪರಾಗ್‌ ಅಗರ್‌ವಾಲ್‌ ಅವರು ಟ್ವಿಟರ್‌ ಕಂಪನಿಯ ಹೊಸ ಸಿಇಒ ಆಗಿ ನೇಮಕ ಆಗಿದ್ದಕ್ಕೆ ಉದ್ಯಮಿ, ಮಹೀಂದ್ರಾ ಸಮೂಹದ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಟ್ವೀಟ್‌ ಮೂಲಕ ನೀಡಿದ ಪ್ರತಿಕ್ರಿಯೆ ಇದು. 

ಟ್ವಿಟರ್‌ ಸಹ ಸಂಸ್ಥಾಪಕ ಮತ್ತು ಸಿಇಒ ಜಾಕ್‌ ಡೋರ್ಸಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪರಾಗ್‌ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಕ್ಕೆ ಸಂಭ್ರಮದಿಂದ ಪ್ರತಿಕ್ರಿಯೆ ಕೊಟ್ಟ ಮೊದಲ ವ್ಯಕ್ತಿ ಸ್ಟ್ರೈಪ್‌ ಕಂಪನಿಯ ಸಿಇಒ ಪ್ಯಾಟ್ರಿಕ್‌ ಕಾಲಿಸನ್‌. ‘ಗೂಗಲ್‌, ಮೈಕ್ರೊಸಾಫ್ಟ್‌, ಅಡೋಬಿ, ಐಬಿಎಂ, ಪಾಲೊ ಅಲ್ಟೊ ನೆಟ್‌ವರ್ಕ್ಸ್‌ ಮತ್ತು ಈಗ ಟ್ವಿಟರ್‌, ಭಾರತದಲ್ಲಿ ಹುಟ್ಟಿ ಬೆಳೆದ ಸಿಇಒಗಳ ನೇತೃತ್ವದಲ್ಲಿ ನಡೆಯುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರಿಗೆ ಸಿಕ್ಕ ಅದ್ಭುತ ಯಶಸ್ಸು ಬೆರಗು ಮೂಡಿಸುತ್ತಿದೆ. ಹಾಗೆಯೇ ಅಮೆರಿಕವು ವಲಸಿಗರಿಗೆ ನೀಡುವ ಅವಕಾಶಗಳನ್ನೂ ಇದು ನೆನಪಿಸುತ್ತದೆ’ ಎಂಬುದು ಕಾಲಿಸನ್‌ ಅವರ ಟ್ವೀಟ್‌. ‘ಭಾರತದ ಪ್ರತಿಭೆಯಿಂದ ಅಮೆರಿಕಕ್ಕೆ ಭಾರಿ ದೊಡ್ಡ ಪ್ರಯೋಜನ ಸಿಕ್ಕಿದೆ’ ಎಂದು ಭಾರತೀಯರ ಪ್ರತಿಭೆಯನ್ನು ಟೆಸ್ಲಾ ಕಂಪನಿಯ ಸಿಇಒ ಇಲಾನ್‌ ಮಸ್ಕ್‌ ಕೊಂಡಾಡಿದ್ದಾರೆ.

ಜಗತ್ತಿನ ಅತ್ಯಂತ ಮಹತ್ವದ ತಂತ್ರಜ್ಞಾನ ಕಂಪನಿಗಳಲ್ಲಿ ಭಾರತೀಯ ಪಾರಮ್ಯಕ್ಕೆ ಈ ಪ್ರತಿಕ್ರಿಯೆಗಳೇ ಕನ್ನಡಿ ಹಿಡಿಯುತ್ತವೆ. 

ಗೂಗಲ್‌, ಮೈಕ್ರೊಸಾಫ್ಟ್‌, ಐಬಿಎಂ, ಅಡೋಬಿಯಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಭಾವಿ ಕಂಪನಿಗಳು ಮತ್ತು ಪ್ರಮುಖ ಎಂದು ಪರಿಗಣಿಸಲಾಗುವ 15ಕ್ಕೂ ಹೆಚ್ಚು ಕಂಪನಿಗಳ ಸಾರಥ್ಯ ಸ್ಥಾನದಲ್ಲಿಯೂ ಭಾರತ ಮೂಲದವರೇ ಇದ್ದಾರೆ. ಇವರಲ್ಲಿ ಹೆಚ್ಚಿನವರು ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಐಐಟಿ) ಕಲಿತವರು.  

ಇಂದ್ರಾ ನೂಯಿ ಅವರು 2006ರಲ್ಲಿ ಪೆಪ್ಸಿಕೊ ಕಂಪನಿಯ ಸಿಇಒ ಆಗುವುದರೊಂದಿಗೆ ಜಾಗತಿಕ ಕಂಪನಿಗಳ ಮುಖ್ಯಸ್ಥ ಸ್ಥಾನದ ಬಾಗಿಲು ಭಾರತೀಯರಿಗೆ ತೆರೆದುಕೊಂಡಂತಾಯಿತು. ಆ ದಿನಗಳಲ್ಲಿ ಅಮೆರಿಕದ ಕಂಪನಿಗಳಲ್ಲಿ ಸಿಇಒ ಸ್ಥಾನದಲ್ಲಿದ್ದ ಕೆಲವೇ ಮಹಿಳೆಯರ ಪೈಕಿ ಇಂದ್ರಾ ಅವರೂ ಒಬ್ಬರು. ಜಗತ್ತಿನ ಪ್ರಭಾವಿ  ವ್ಯಕ್ತಿಗಳ ಪಟ್ಟಿಯಲ್ಲಿಯೂ ಅವರು ಸತತವಾಗಿ ಇದ್ದರು. 2019ರಲ್ಲಿ ಪೆಪ್ಸಿಕೊ ಕಂಪನಿಯಿಂದ ನಿವೃತ್ತರಾದರು. 

ಪರಾಗ್ ಅಗರ್‌ವಾಲ್‌ (ಟ್ವಿಟರ್‌):

ಪರಾಗ್ ಅಗರ್‌ವಾಲ್‌ ಅವರ ವಾರ್ಷಿಕ ವೇತನ ಪ್ಯಾಕೇಜ್‌–₹7.50 ಕೋಟಿ (10ಲಕ್ಷ ಡಾಲರ್‌) + ವಿಶೇಷ ಭತ್ಯೆಗಳು

ಟ್ವಿಟರ್‌ನ ನೂತನ ಸಿಇಒ ಆಗಿ ನೇಮಕವಾಗಿರುವ ಪರಾಗ್ ಅಗರ್‌ವಾಲ್‌ (37) ಅವರು ಮೂಲತಃ ಮುಂಬೈನವರು. ಬಾಂಬೆ ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ಪರಾಗ್ ಅವರು, ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಟ್ವಿಟರ್‌ ಸೇರುವ ಮುನ್ನ ಪರಾಗ್ ಅವರು, 2006ರಿಂದ 2010ರ ನಡುವೆ ಮೈಕ್ರೊಸಾಫ್ಟ್‌ ರಿಸರ್ಚ್ ಮತ್ತು ಯಾಹೂ ರಿಸರ್ಚ್‌ನಲ್ಲಿ ರಿಸರ್ಚ್‌ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ಟ್ವಿಟರ್‌ನಲ್ಲಿ ರೆವೆನ್ಯೂ ಅಂಡ್ ಕನ್ಸ್ಯೂಮರ್ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಆರಂಭಿಸಿದರು. ಆನಂತರ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಆಗಿ ಬಡ್ತಿ ಪಡೆದರು. ‘ಸಿಟಿಒ ಆಗಿ ಪರಾಗ್ ಅವರು ಸಲ್ಲಿಸಿರುವ ಸೇವೆಯನ್ನು ಮತ್ತು ಕಂಪನಿಗೆ ಅವರು ಕೊಟ್ಟಿರುವ ಕೊಡುಗೆಯನ್ನು ಪರಿಗಣಿಸಿಯೇ ಈ ಹುದ್ದೆ ನೀಡಲಾಗಿದೆ. ಈಗ ಪರಾಗ್‌ ಅವರ ನಾಯಕತ್ವದ ಸಮಯ’ ಎಂದು ಟ್ವಿಟರ್‌ನ ನಿರ್ಗಮಿತ ಸಿಇಒ ಜಾಕ್‌ ಡೋರ್ಸಿ ಹೇಳಿದ್ದಾರೆ.

ನಿಖೇಶ್‌ ಅರೋರಾ (ಪಾಲೊ ಆಲ್ಟೊ ನೆಟ್‌ವರ್ಕ್ಸ್)

ಗೂಗಲ್ ಹಾಗೂ ಸಾಫ್ಟ್‌ಬ್ಯಾಂಕ್‌ನ ಅಧ್ಯಕ್ಷರಾಗಿ 2016ರವರೆಗೂ ಕೆಲಸ ಮಾಡಿದ್ದ ನಿಖೇಶ್‌ ಅರೋರಾ (53) ಅವರು 2018ರ ಜೂನ್ 1ರಿಂದ ‘ಪಾಲೊ ಆಲ್ಟೊ ನೆಟ್‌ವರ್ಕ್ಸ್‌’ನ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಅರೋರಾ ಅವರು ಸಾಫ್ಟ್‌ಬ್ಯಾಂಕ್‌ ಮುಖ್ಯಸ್ಥರಾಗಿದ್ದಾಗ, ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆದ ಸಿಇಒ ಎಂಬ ದಾಖಲೆ ಬರೆದಿದ್ದರು. ವಾಯುಪಡೆ ಅಧಿಕಾರಿಯ ಮಗನಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹುಟ್ಟಿದ ಇವರು, 1989ರಲ್ಲಿ ವಾರಾಣಸಿ ಐಐಟಿಯಿಂದ (ಬಿಎಚ್‌ಯು) ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಬೋಸ್ಟನ್‌ ಕಾಲೇಜ್‌ನಿಂದ ಪದವಿ ಹಾಗೂ ನಾರ್ತ್‌ಈಸ್ಟ್ ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದಿದ್ದಾರೆ.

ಸತ್ಯ ನಾದೆಲ್ಲಾ (ಮೈಕ್ರೊಸಾಫ್ಟ್‌)

ಕಂಪ್ಯೂಟರ್‌ ಕಾರ್ಯನಿರ್ವಹಣಾ ವ್ಯವಸ್ಥೆ ತಯಾರಕ ಸಂಸ್ಥೆ, ಮೈಕ್ರೊಸಾಫ್ಟ್‌ನ ಸಿಇಒ ಆಗಿರುವ ಸತ್ಯ ನಾದೆಲ್ಲಾ ಅವರು ಭಾರತೀಯ. ಹೈದರಾಬಾದ್‌ನಲ್ಲಿ 1967ರ ಆಗಸ್ಟ್‌ 19ರಂದು ಜನಿಸಿದ ನಾದೆಲ್ಲಾ ಅವರು ಎಂಜಿನಿಯರಿಂಗ್ ಪದವಿ ಪಡೆದದ್ದು ಕರ್ನಾಟಕದಲ್ಲಿ. ರಾಜ್ಯದ ಮಣಿಪಾಲ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸತ್ಯ ನಾದೆಲ್ಲಾ ಅವರು ತಮ್ಮ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು 1988ರಲ್ಲಿ ಪೂರ್ಣಗೊಳಿಸಿದರು. ನಂತರ ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಸ್ನಾತಕೋತ್ತರ  ಪದವಿ ಪಡೆದರು. 1990ರಲ್ಲಿ ಸನ್ ಮೈಕ್ರೊಸಿಸ್ಟಂ ಎಂಬ ಕಂಪನಿಯಲ್ಲಿ ಉದ್ಯೋಗ ಆರಂಭಿಸಿದ ನಾದೆಲ್ಲಾ ಅವರು, 1992ರಲ್ಲಿ ಮೈಕ್ರೊಸಾಫ್ಟ್‌ ಕಂಪನಿಯಲ್ಲಿ ಎಂಜಿನಿಯರ್ ಹುದ್ದೆಗೆ ಸೇರಿದ್ದರು. ಅಂದಿನಿಂದ ಅದೇ ಕಂಪನಿಯಲ್ಲಿ ಉಳಿದ ಅವರು, 2014ರಲ್ಲಿ ಕಂಪನಿಯ ಸಿಇಒ ಹುದ್ದೆಗೆ ಬಡ್ತಿ ಪಡೆದರು.

ಸುಂದರ್ ಪಿಚೈ (ಆಲ್ಫಾಬೆಟ್‌ ಮತ್ತು ಗೂಗಲ್)

ಸುಂದರ್ ಪಿಚೈ ಎಂದೇ ಖ್ಯಾತರಾಗಿರುವ ಪಿಚೈ ಸುಂದರರಾಜನ್ ಅವರು ತಮಿಳುನಾಡಿನ ಚೆನ್ನೈನವರು. ತಮ್ಮ ಶಾಲಾ ದಿನಗಳನ್ನು ಅಲ್ಲಿಯೇ ಕಳೆದ ಪಿಚೈ, ಖರಗ್‌ಪುರ ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಂಡ್ ಮೆಟೀರಿಯಲ್ ಸೈನ್ಸ್‌ ವಿಷಯದಲ್ಲಿ ಎಂಎಸ್‌ ಪದವಿ ಪಡೆದಿದ್ದಾರೆ. ಎಂಬಿಎ ಪದವಿಯನ್ನೂ ಹೊಂದಿರುವ ಅವರು, ಹಲವು ಕಂಪನಿಗಳನ್ನು ಮುನ್ನಡೆಸಿದ್ದಾರೆ. 2015ರಲ್ಲಿ ಗೂಗಲ್‌ ಇಂಕ್‌ನ ಸಿಇಒ ಆಗಿ ನೇಮಕವಾದರು. ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ ಇಂಕ್‌ನ ಸಿಇಒ ಆಗಿ 2019ರಲ್ಲಿ ಅಧಿಕಾರ ಸ್ವೀಕರಿಸಿದರು. ಈಗ ಎರಡೂ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.

ಜಯಶ್ರೀ ಉಲ್ಲಾಳ್ (ಅರಿಸ್ಟಾ ನೆಟ್‌ವರ್ಕ್ಸ್)

ಅಮೆರಿಕದ ಕೋಟ್ಯಾಧೀಶೆ ಉದ್ಯಮಿ ಜಯಶ್ರೀ ಉಲ್ಲಾಳ್ (60) ಅವರು ಕ್ಲೌಡ್ ನೆಟ್‌ವರ್ಕ್‌ ಕಂಪನಿ ‘ಅರಿಸ್ಟಾ’ದ ಸಿಇಒ ಆಗಿದ್ದಾರೆ. ಲಂಡನ್‌ನಲ್ಲಿ ಹುಟ್ಟಿದ ಇವರು ದೆಹಲಿಯಲ್ಲಿ ಆರಂಭಿಕ ಶಿಕ್ಷಣ ಪಡೆದರು. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಎಎಂಡಿಯಲ್ಲಿ ಎಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ಇವರು, ಅಲ್ಲಿ ಮಹತ್ವದ ಹುದ್ದೆ ನಿಭಾಯಿಸಿದರು. ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಕಂಪನಿಯಲ್ಲೂ ಕೆಲಸ ಮಾಡಿದರು. 2008ರಲ್ಲಿ ಅರಿಸ್ಟಾ ಸಂಸ್ಥೆಯ ಸಿಇಒ ಹಾಗೂ ಮುಖ್ಯಸ್ಥರಾಗಿ ನೇಮಕಗೊಂಡರು. 2018ರ ವಿಶ್ವದ ಅತ್ಯುತ್ತಮ ಸಿಇಒ ಪ್ರಶಸ್ತಿ ಪಡೆದ ಅವರು, 2019ರ ಫಾರ್ಚೂನ್ ಅಗ್ರ 20 ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದರು. 

ರಘು ರಘುರಾಂ (ವಿಎಂವೇರ್‌)

ಭಾರತದವರಾದ ರಘು ರಘುರಾಂ ಅವರ ಪೂರ್ಣ ಹೆಸರು ರಂಗರಾಜನ್ ರಘು ರಘುರಾಂ. ಬಾಂಬೆ ಐಐಟಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರ್‌ನಲ್ಲಿ ಪದವಿ ಪಡೆದಿರುವ ರಘು ಅವರು ತಮ್ಮ ಉದ್ಯೋಗವನ್ನು ನೆಟ್‌ಸ್ಕೇಪ್‌ ಕಂಪನಿಯಲ್ಲಿ ಆರಂಭಿಸಿದ್ದರು. 2003ರಲ್ಲಿ ಆಗಷ್ಟೇ ಸ್ಟಾರ್ಟ್‌ಅಪ್ ಆಗಿದ್ದ ವಿಎಂವೇರ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದರು. ವಿಶ್ವದ ಅತ್ಯಂತ ದೊಡ್ಡ ಕ್ಲೌಡ್‌ ಕಂಪ್ಯೂಟಿಂಗ್ ಸೇವಾ ಕಂಪನಿಗಳಲ್ಲಿ ವಿಎಂವೇರ್ ಸಹ ಒಂದು ಎನಿಸಿಕೊಳ್ಳುವಲ್ಲಿ ರಘು ಅವರ ಕೊಡುಗೆ ಅಪಾರವಿದೆ ಎಂದು ಕಂಪನಿ ಹೇಳಿಕೊಂಡಿದೆ. 2021ರ ಜೂನ್‌ನಲ್ಲಿ ಅವರು ಕಂಪನಿಯ ಸಿಇಒ ಮತ್ತು ನಿರ್ದೇಶಕನ ಹುದ್ದೆಗೆ ಬಡ್ತಿ ಪಡೆದರು.

ಅರವಿಂದ್ ಕೃಷ್ಣ (ಐಬಿಎಂ)

ಐಐಟಿ ಕಾನ್ಪುರದ ಪದವೀಧರ ಅರವಿಂದ್ ಕೃಷ್ಣ (59) ಅವರಿಗೆ ಅಮೆರಿಕದ ಪ್ರಸಿದ್ಧ ಐಟಿ ಕಂಪನಿ ‘ಐಬಿಎಂ’ ಜೊತೆ ಎರಡು ದಶಕಗಳ ಒಡನಾಟವಿದೆ. 1990ರಲ್ಲಿ ಇವರು ಸಂಸ್ಥೆಯನ್ನು ಸೇರಿದ್ದರು. ಇಲಿನಾಯ್‌ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ ಪಡೆದಿದ್ದಾರೆ. 2020ರ ಏಪ್ರಿಲ್‌ನಲ್ಲಿ ಐಬಿಎಂ ಸಿಇಒ ಆಗಿ ನೇಮಕವಾದ ಅವರು, 2021ರ ಜನವರಿಯಿಂದ ಕಂಪನಿಯ ಮುಖ್ಯಸ್ಥರ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಇವರಿಗೂ ಮುನ್ನ ಸಿಇಒ ಹುದ್ದೆಯಲ್ಲಿದ್ದ ವರ್ಜಿನಿಯಾ ರೊಮೆಟ್ಟಿ ಅವರು, ಮುಂದಿನ ತಲೆಮಾರಿನ ಐಬಿಎಂ ನಿರ್ವಹಿಸಲು ಕೃಷ್ಣ ಸಮರ್ಥರು ಎಂದು ಶ್ಲಾಘಿಸಿದ್ದರು. 

ಅಜಯ್‌ಪಾಲ್‌ ಬಂಗಾ (ಮಾಸ್ಟರ್‌ಕಾರ್ಡ್)

1990ರಲ್ಲಿ ‘ಮಾಸ್ಟರ್‌ಕಾರ್ಡ್‌’ನ ಪ್ರವರ್ತಕರಾಗಿದ್ದ ಅಜಯ್‌ಪಾಲ್‌ ಸಿಂಗ್ ಬಂಗಾ (62) ಅವರು 2020ರ ಡಿಸೆಂಬರ್‌ವರೆಗೂ ಸಂಸ್ಥೆಯ ಸಿಇಒ ಆಗಿದ್ದರು. ಈಗ ಅವರು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಅಮೆರಿಕ–ಭಾರತ ಉದ್ಯಮ ಮಂಡಳಿ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಪಂಜಾಬ್‌ನ ಜಲಂಧರ್ ಮೂಲದ ಕುಟುಂಬಕ್ಕೆ ಸೇರಿದ ಬಂಗಾ ಅವರು, ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಇಲ್ಲಿ ಅವರ ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದ್‌ನ ಬೇಗಂಪೇಟೆ ಪಬ್ಲಿಕ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ ಬಂಗಾ, ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್‌ ಕಾಲೇಜ್‌ನಿಂದ ಪದವಿ ಪಡೆದರು. ನಂತರ ಅಹಮದಾಬಾದ್‌ನ ಐಐಎಂನಿಂದ ಎಂಬಿಎ ಪದವಿಯನ್ನೂ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು