ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ-ಅಗಲ| ಕೋವಿಡ್‌ ಸಾವು: ಸರ್ಕಾರದ ತಪ್ಪು ಲೆಕ್ಕ

Last Updated 23 ಜೂನ್ 2022, 19:31 IST
ಅಕ್ಷರ ಗಾತ್ರ

ಭಾರತದಲ್ಲಿ 2020ರಲ್ಲಿ 100.51 ಲಕ್ಷ ಮಂದಿ ಮೃತಪಟ್ಟಿದ್ದಾರೆ; ಅದರಲ್ಲಿ 8.30 ಲಕ್ಷ ಮಂದಿ ಕೋವಿಡ್‌ನಿಂದ ಮೃತಪಟ್ಟವರು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂದಾಜಿಸಿದೆ. ಈ ಅಂದಾಜನ್ನು ಭಾರತವು ತಳ್ಳಿ ಹಾಕಿದೆ. ಕೋವಿಡ್‌ ನಿರ್ವಹಣೆಯಲ್ಲಿ ಅತ್ಯುತ್ತಮ ಕೆಲಸ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಡಬ್ಲ್ಯುಎಚ್‌ಒ ಅಂದಾಜನ್ನು ತಳ್ಳಿ ಹಾಕುವುದಕ್ಕಾಗಿ ಲೋಪಗಳಿಂದ ಕೂಡಿದ ದತ್ತಾಂಶವನ್ನು ಬಳಸಿ ಕೊಂಡಿದೆ.

‘ಭಾರತದಲ್ಲಿ ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯು ಅತ್ಯುತ್ತಮವಾಗಿದೆ. ಇದಕ್ಕೆ ದಶಕಗಳಷ್ಟು ಹಳೆಯದಾದ ಕಾಯ್ದೆಯ ಚೌಕಟ್ಟು (ಜನನಗಳು ಮತ್ತು ಮರಣಗಳ ನೋಂದಣಿ ಕಾಯ್ದೆ 1969) ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮೇ 5ರಂದು ಹೇಳಿದೆ.

2020ರಲ್ಲಿನ ಸಾವುಗಳ ಪೈಕಿ ಶೇ 99.9ರಷ್ಟು ದಾಖಲಾಗಿವೆ. ಮೃತರ ಒಟ್ಟು ಸಂಖ್ಯೆ 81.20 ಲಕ್ಷ. ಕೋವಿಡ್‌ ಸಾಂಕ್ರಾಮಿಕಕ್ಕೂ ಮುಂಚಿನ ವರ್ಷವಾದ 2019ಕ್ಕಿಂತಲೂ 2020 ರಲ್ಲಿ ಸಾವಿನ ಸಂಖ್ಯೆ ಕಡಿಮೆ ಆಗಿದೆ. ಕೋವಿಡ್‌ನಿಂದಾಗಿ 8.30 ಲಕ್ಷ ಹೆಚ್ಚು ಸಾವು ಸಂಭವಿಸಲು ಸಾಧ್ಯವೇ ಇಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಡಬ್ಲ್ಯುಎಚ್‌ಒ ಅಂದಾಜನ್ನು ಅಲ್ಲಗಳೆಯಲಾಗಿದೆ.

ಈ ವರ್ಷ ಆರೋಗ್ಯ ಸಚಿವಾಲಯವೇ ಬಿಡುಗಡೆ ಮಾಡಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌) ವರದಿ ಪ್ರಕಾರ ಸಚಿವಾಲಯವು ಈ ಮುಂಚೆ ಮುಂದಿಟ್ಟಿದ್ದ ಅಂಕಿ ಅಂಶಗಳು ಸುಳ್ಳು.

ಐದನೇ ಎನ್‌ಎಫ್‌ಎಚ್‌ಎಸ್‌ ವರದಿಯ ಪ್ರಕಾರ, 2016ರಿಂದ 2020ರ ಅವಧಿಯಲ್ಲಿ ಸಾವಿನ ನೋಂದಣಿಯ ಸರಾಸರಿ ಪ್ರಮಾಣವು ಶೇ 70.80ರಷ್ಟು ಮಾತ್ರ. ಇದರ ಪ್ರಕಾರ ಮತ್ತು ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ (ಸಿಆರ್‌ಎಸ್‌) ಆಗಿರುವ ಸಾವಿನ ಒಟ್ಟು ದಾಖಲೆಗಳನ್ನು ಒಟ್ಟಿಗೆ ಇರಿಸಿ ಲೆಕ್ಕ ಹಾಕಿದರೆ, 2020ರಲ್ಲಿನ ಸಾವಿನ ಸಂಖ್ಯೆಯನ್ನು 114.07 ಲಕ್ಷ ಎಂದು ಅಂದಾಜಿಸಬಹುದು.

ಇದರ ಪ್ರಕಾರ, ಡಬ್ಲ್ಯುಎಚ್‌ಒ ಅಂದಾಜು ಮತ್ತು ಎನ್‌ಎಫ್‌ಎಚ್‌ಎಸ್‌ ಅಂದಾಜು ಹತ್ತಿರ ಹತ್ತಿರ ಬರುತ್ತವೆ. ಡಬ್ಲ್ಯುಎಚ್‌ಒ ಅಂದಾಜನ್ನು ಅಲ್ಲಗಳೆಯಲು ಸರ್ಕಾರ ಬಳಸಿದ ದತ್ತಾಂಶದಲ್ಲಿ ಲೋಪವಿದೆ ಎಂಬುದು ಅರಿವಾಗುತ್ತದೆ.

ಶೇ 99.9ರ ಪ್ರಮಾಣ ದೊರೆತದ್ದೆಲ್ಲಿ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿಪಾದನೆಯನ್ನು ಕೇಂದ್ರ ಸರ್ಕಾರವು, ‘2020ರಲ್ಲಿ ದೇಶದಲ್ಲಾದ ಒಟ್ಟು ಸಾವುಗಳಲ್ಲಿ ಶೇ 99.9ರಷ್ಟು ನೋಂದಣಿಯಾಗಿವೆ’ ಎಂಬ ದತ್ತಾಂಶವನ್ನು ಮುಂದಿಟ್ಟು ತಳ್ಳಿ ಹಾಕಿತ್ತು. ಸರ್ಕಾರಿ ಸಂಸ್ಥೆಗಳು ಪ್ರತಿ ವರ್ಷ ನಡೆಸುವ ಎರಡು ಲೆಕ್ಕಾಚಾರಗಳನ್ನು ಅಧರಿಸಿ, ಶೇ 99.9ರಷ್ಟು ಸಾವು ನೋಂದಣಿಯಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಸರ್ಕಾರವು ಪ್ರತಿ ವರ್ಷ ನಡೆಸುವ ‘ಮಾದರಿ ನೋಂದಣಿ ಸಮೀಕ್ಷೆ’ (ಎಸ್‌ಆರ್‌ಎಸ್‌) ಮತ್ತು ‘ನಾಗರಿಕ ನೋಂದಣಿ ವ್ಯವಸ್ಥೆ’ (ಸಿಆರ್‌ಎಸ್‌) ವರದಿಗಳನ್ನು ಆಧಾರವಾಗಿ ಇರಿಸಿಕೊಂಡು ಸರ್ಕಾರವು ನೋಂದಣಿ ಪ್ರಮಾಣವನ್ನು ಲೆಕ್ಕಹಾಕಿದೆ. ಇದರಲ್ಲಿ ಸಿಆರ್‌ಎಸ್‌ ಲೆಕ್ಕಾಚಾರವು ಹೆಚ್ಚು ನಿಖರ. ಏಕೆಂದರೆ, ಪ್ರತಿ ವರ್ಷ ನೋಂದಣಿಯಾದ ಜನನ ಮತ್ತು ಮರಣಗಳ ಕರಾರುವಾಕ್ಕಾದ ಸಂಖ್ಯೆಯನ್ನು ಇದು ಒಳಗೊಂಡಿರುತ್ತದೆ. ಆದರೆ, ಎಸ್‌ಆರ್‌ಎಸ್‌ ವರದಿಯಲ್ಲಿನ ಸಾವಿನ ಅಂದಾಜು ನಿಖರತೆಯಿಂದ ಬಹಳ ದೂರ. ಅಂದರೆ ವಾಸ್ತವದಲ್ಲಿನ ಸಾವುಗಳಿಗೂ, ಎಸ್‌ಆರ್‌ಎಸ್‌ ವರದಿಯಲ್ಲಿ ಮಾಡಲಾಗುವ ಸಾವಿನ ಅಂದಾಜಿನ ನಡುವಣ ವ್ಯತ್ಯಾಸ ದೊಡ್ಡದು.

ಎಸ್‌ಆರ್‌ಎಸ್‌ ಸಮೀಕ್ಷೆ ನಡೆಸುವಾಗ ಅಧಿಕಾರಿಗಳು ಆಯ್ದ ಕೆಲವೇ ಮನೆಗಳಿಗೆ ಭೇಟಿ ನೀಡಿ, ಒಂದು ವರ್ಷದ ಅವಧಿಯಲ್ಲಿ ಎಷ್ಟು ಜನರು ಮರಣ ಹೊಂದಿದ್ದಾರೆ ಎಂದು ಕೇಳುತ್ತಾರೆ. ಆ ಮನೆಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಲೆಕ್ಕ ಹಾಕುತ್ತಾರೆ. ಸಾಮಾನ್ಯವಾಗಿ 1,000 ಮನೆಗಳಲ್ಲಿ ಇಂತಹ ಸಮೀಕ್ಷೆ ನಡೆಸುವುದು ರೂಢಿ. ಒಂದು ಸಾವಿರ ಮನೆಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಸಾವಿರದ ಅನುಪಾತದಲ್ಲಿ ಲೆಕ್ಕಹಾಕಲಾಗುತ್ತದೆ. ಅಂದರೆ ಒಂದು ಸಾವಿರ ಮನೆಯಲ್ಲಿ 100 ಮಂದಿ ಮೃತಪಟ್ಟಿದ್ದರೆ, ಈ ಮರಣ ದರವನ್ನು ಇಡೀ ದೇಶದ ಜನಸಂಖ್ಯೆಗೆ ಅನ್ವಯಿಸಿ ಲೆಕ್ಕ ಹಾಕಲಾಗುತ್ತದೆ. ಹೀಗೆ ಎಸ್‌ಆರ್‌ಎಸ್‌ ಮೂಲಕ ಮಾಡುವ ಲೆಕ್ಕಾಚಾರವು ಒಂದು ಅಂದಾಜು ಮಾತ್ರ ಎಂಬುದನ್ನು ನೆನಪಿಡಬೇಕು.

ಎಸ್‌ಆರ್‌ಎಸ್‌ನಲ್ಲಿ ಅಂದಾಜಿಸಲಾದ ಸಾವಿಗಿಂತ ಹೆಚ್ಚು ಸಾವು ನೋಂದಣಿಯಾದರೆ, ಶೇ 100ರಷ್ಟು ಸಾವು ನೋಂದಣಿಯಾಗಿದೆ ಎಂದು ಸರ್ಕಾರವು ಪರಿಗಣಿಸುತ್ತದೆ.ಉದಾಹರಣೆಗೆ 2018ರಲ್ಲಿ ಆಂಧ್ರಪ್ರದೇಶದಲ್ಲಿ 3.53 ಲಕ್ಷ ಸಾವು ಸಂಭವಿಸಬಹುದು ಎಂದು ಎಸ್‌ಆರ್‌ಎಸ್‌ನಲ್ಲಿ ಅಂದಾಜಿಸಲಾಗಿತ್ತು. ಆದರೆ, ಆ ವರ್ಷ ಅಲ್ಲಿ ನೋಂದಣಿಯಾದ ಮರಣ ಸಂಖ್ಯೆ 3.76 ಲಕ್ಷ. 2018ರಲ್ಲಿ ಆಂಧ್ರಪ್ರದೇಶದಲ್ಲಿ ಶೇ 100ರಷ್ಟು ಸಾವು ನೋಂದಣಿಯಾಗಿವೆ ಎಂದು ಸರ್ಕಾರವು ಹೇಳಿದೆ. 2020ರಲ್ಲಿ ಈ ರೀತಿ ಎಲ್ಲಾ ರಾಜ್ಯಗಳಲ್ಲಿ ಮರಣ ನೋಂದಣಿ ಶೇ 100ರಷ್ಟಾಗಿದೆ ಎಂದು ಸರ್ಕಾರವು ಪರಿಗಣಿಸಿದೆ. ಹೀಗಾಗಿಯೇ 2020ರಲ್ಲಿ ಶೇ 99.9ರಷ್ಟು ಸಾವು ನೋಂದಣಿಯಾಗಿವೆ ಎಂದು ಸರ್ಕಾರವು ಹೇಳಿದೆ.

2020ರಲ್ಲಿ ಸರ್ಕಾರವು ಹೀಗೆ ಅಂದಾಜಿಸಿದಒಟ್ಟು ಸಾವಿನ ಸಂಖ್ಯೆ 81.2 ಲಕ್ಷ. 2020ರಲ್ಲಿ ಸಿಆರ್‌ಎಸ್‌ನಲ್ಲಿ ನೋಂದಣಿಯಾದ ಮರಣಗಳ ಸಂಖ್ಯೆ 81.15 ಲಕ್ಷ. ಹೀಗಾಗಿ ದೇಶದಲ್ಲಿ ಸಂಭವಿಸಿದ ಸಾವಿನಲ್ಲಿ ಶೇ 99.9ರಷ್ಟು ನೋಂದಣಿಯಾಗಿವೆ ಎಂದು ಸರ್ಕಾರವು ಲೆಕ್ಕಾಚಾರ ನೀಡಿದೆ.

ತಪ್ಪಾಗಿದ್ದೆಲ್ಲಿ?

ಸರ್ಕಾರದ ಈ ಲೆಕ್ಕಾಚಾರದ ವಿಧಾನದಲ್ಲೇ ಬಹಳ ಸಮಸ್ಯೆಗಳಿವೆ. ಏಕೆಂದರೆ 2020ರಲ್ಲಿ ಹೀಗೆ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ಸರ್ಕಾರವು ಹಾಕಿದ ಲೆಕ್ಕಾಚಾರವು, 20 ರಾಜ್ಯಗಳಲ್ಲಿ ತಪ್ಪಾಗಿದೆ. ಕೆಲವು ರಾಜ್ಯಗಳಲ್ಲಿ ಸರ್ಕಾರದ ಅಂದಾಜಿಗಿಂತ ಹಲವುಪಟ್ಟು ಹೆಚ್ಚು ಮರಣ ನೋಂದಣಿಯಾಗಿವೆ. ಚಂಡೀಗಡದಲ್ಲಿ ಸರ್ಕಾರದ ಅಂದಾಜಿಗಿಂತ ಶೇ 394.8ರಷ್ಟು ಹೆಚ್ಚು ಮರಣ ನೋಂದಣಿಯಾಗಿವೆ. ದೆಹಲಿಯಲ್ಲಿ ಸರ್ಕಾರದ ಅಂದಾಜಿಗಿಂತ ಶೇ 196.42ರಷ್ಟು ಹೆಚ್ಚು ಮರಣ ನೋಂದಣಿಯಾಗಿವೆ. ‘ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾದರಿಯ ಗಾತ್ರ ತೀರಾ ಕಡಿಮೆ ಇರುತ್ತದೆ. ಹೀಗಾಗಿ ಅಲ್ಲಿನ ಅಂದಾಜನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ’ ಎಂದು ಎಸ್‌ಆರ್‌ಎಸ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ದೊಡ್ಡ ರಾಜ್ಯಗಳಿಗೆ ಸಂಬಂಧಿಸಿದಂತೆ ಎಸ್‌ಆರ್‌ಎಸ್‌ ಮಾಡಿದ ಅಂದಾಜೂ ತಪ್ಪಾಗಿದೆ. 2020ರಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಸಾವಿಗೆ ಸಂಬಂಧಿಸಿದಂತೆ ಎಸ್‌ಆರ್‌ಎಸ್‌ ಮಾಡಿದ್ದ ಅಂದಾಜಿಗಿಂತ ಶೇ 148.14ರಷ್ಟು ಹೆಚ್ಚು ಮರಣ ನೋಂದಣಿಯಾಗಿವೆ. ಆಂಧ್ರಪ್ರದೇಶದಲ್ಲಿ ಎಸ್‌ಆರ್‌ಎಸ್‌ ಅಂದಾಜಿಗಿಂತ ಶೇ 137.56ರಷ್ಟು ಹೆಚ್ಚು ಮರಣ ನೋಂದಣಿಯಾಗಿವೆ.

ಎಸ್‌ಆರ್‌ಎಸ್‌ ಮತ್ತು ಸಿಆರ್‌ಎಸ್‌ ಎರಡನ್ನೂ ಮಹಾನೋಂದಣಾಧಿಕಾರಿ ಕಚೇರಿಯು ನಿರ್ವಹಿಸುತ್ತದೆ. ಎರಡೂ ವರದಿಗಳಲ್ಲಿನ ಸಾವಿನ ಸಂಖ್ಯೆಯಲ್ಲಿರುವ ವ್ಯತ್ಯಾಸದ ಬಗ್ಗೆ ಈ ಕಚೇರಿಯ ಅಧಿಕಾರಿಗಳನ್ನು ಮಾತನಾಡಿಸಲಾಯಿತು. ಈ ಬಗ್ಗೆ ಅಲ್ಲಿನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಎಸ್‌ಆರ್‌ಎಸ್‌ ವರದಿ ಸಿದ್ಧಪಡಿಸುವಾಗ ಒಂದು ರಾಜ್ಯದಲ್ಲಿರುವ, ಅಲ್ಲಿನದೇ ಕುಟುಂಬದ ಮಾಹಿತಿಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಆ ರಾಜ್ಯದ ವ್ಯಕ್ತಿ ಬೇರೊಂದು ರಾಜ್ಯದಲ್ಲಿ ಮೃತಪಟ್ಟಿದ್ದರೆ, ಅದು ವ್ಯಕ್ತಿ ಮೃತಪ‍ಟ್ಟ ರಾಜ್ಯದಲ್ಲೇ ನೋಂದಣಿಯಾಗುತ್ತದೆ. ಇದರಿಂದ ಆ ರಾಜ್ಯದಲ್ಲಿನ ಸಾವಿನ ನೋಂದಣಿ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ’ ಎಂದು ಅವರು ವಿವರಿಸಿದರು.

ಅವರ ಸ್ಪಷ್ಟನೆ ಪ್ರಕಾರ ಹೇಳುವುದಾದರೆ, ದೆಹಲಿ ಮತ್ತು ಚಂಡೀಗಡದಂತಹ ಸಣ್ಣ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಈ ವಿವರಣೆ ಅನ್ವಯವಾಗುತ್ತದೆ. ಆದರೆ ದೇಶದ 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಇಂತಹ ವ್ಯತ್ಯಾಸವಾಗಿದೆ. ಹೀಗಾಗಿ ಈ ವಿವರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಮಹಾನೋಂದಣಾಧಿಕಾರಿ ಕಚೇರಿಗೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಲಾಗಿದೆ. ಆದರೆ ಈ ವರದಿ ಪ್ರಕಟಿಸುವ ವೇಳೆಯಲ್ಲಿ ಆ ಕಚೇರಿಯಿಂದ ಉತ್ತರ ಬಂದಿರಲಿಲ್ಲ.

ವ್ಯತ್ಯಾಸ ಏರಿಕೆ

ಮರಣ ನೋಂದಣಿ ಪ್ರಮಾಣವನ್ನು ಪರಿಗಣಿಸುವಾಗ, ಎಸ್‌ಆರ್‌ಎಸ್‌ ಅಂದಾಜನ್ನೇ ಒಟ್ಟು ಸಾವು ಎಂದು ಸರ್ಕಾರ ಪರಿಗಣಿಸುತ್ತದೆ. ನೋಂದಣಿಯಾದ ಒಟ್ಟು ಮರಣ ಸಂಖ್ಯೆಯನ್ನೂ ಪರಿಗಣಿಸುವುದಿಲ್ಲ. ಬದಲಿಗೆ ಶೇ 100ರಷ್ಟು ಎಂದು ಪರಿಗಣಿಸಲಾದ ನೋಂದಣಿ ಪ್ರಮಾಣವನ್ನೇ ಲೆಕ್ಕ ಹಾಕುತ್ತದೆ. ಹೀಗಾಗಿ ನಿಜವಾಗಿಯೂ ಸಂಭವಿಸಿದ ಸಾವಿನ ಸಂಖ್ಯೆ ದೊರೆಯುವುದಿಲ್ಲ. ಗಣಿತಜ್ಞ ಮುರುಡ್ ಬನಾಜಿ ಮತ್ತು ಹಾರ್ವಾರ್ಡ್‌ ವಿಶ್ವವಿದ್ಯಾಲಯದ ಗಣಿತಜ್ಞರಾದ ಆಶಿಶ್ ಗುಪ್ತಾ ಅವರು ನೈಜ ಸಾವಿನ ಲೆಕ್ಕಾಚಾರ ವಿಧಾನವನ್ನು ರೂಪಿಸಿದ್ದಾರೆ.

ಮರಣ ನೋಂದಣಿ ಪ್ರಮಾಣ ಶೇ 100ರಷ್ಟು ಎಂದು ಸರ್ಕಾರ ಘೋಷಿಸಿದ ರಾಜ್ಯಗಳಲ್ಲಿ, ನೋಂದಣಿಯಾದ ಒಟ್ಟು ಸಾವುಗಳನ್ನು ಲೆಕ್ಕ ಮಾಡಲಾಗುತ್ತದೆ. ಆ ಮೂಲಕ ಆ ವರ್ಷದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಗೆ, ಹತ್ತಿರವಿರುವ ಮತ್ತೊಂದು ಅಂದಾಜನ್ನು ಮಾಡಲಾಗುತ್ತದೆ. 2020ರ ಎಸ್‌ಆರ್‌ಎಸ್‌ ಮತ್ತು ಸಿಆರ್‌ಎಸ್‌ ದತ್ತಾಂಶಗಳಿಗೆ ಈ ವಿಧಾನವನ್ನು ಅನ್ವಯಿಸಿದಾಗ, ಆ ವರ್ಷದ ಸಾವಿನ ಅಂದಾಜು 91.82 ಲಕ್ಷ ಎಂಬ ತೀರ್ಮಾನಕ್ಕೆ ಬರಲಾಗಿದೆ. ಅದರೆ ಎಸ್‌ಆರ್‌ಎಸ್‌ ಅಂದಾಜಿಗಿಂತ 10 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಪರಿಷ್ಕೃತ ಅಂದಾಜು ಮಾಡಲಾಗಿದೆ. ನೋಂದಣಿ ಆಗದೇ ಇರುವ ಶೇ 11.6 ರಷ್ಟು ಸಾವನ್ನು ಸೇರಿಸಿದರೆ, ಒಟ್ಟು ಸಾವಿನ ಸಂಖ್ಯೆ 114.07 ಲಕ್ಷದಷ್ಟಾಗುತ್ತದೆ. ಇದನ್ನು 10 ವರ್ಷಗಳ ದತ್ತಾಂಶಕ್ಕೆ ಅನ್ವಯಿಸಿ ಮರು ಅಂದಾಜಿಸಲಾಗಿದೆ.

ಎಸ್‌ಆರ್‌ಎಸ್‌ನಲ್ಲಿನ ಸಾವಿನ ಅಂದಾಜನ್ನು ಮರು ಅಂದಾಜಿಸಿದಾಗ ಬರುವ ಸಂಖ್ಯೆ ಮತ್ತು ಸಿಆರ್‌ಎಸ್‌ನಲ್ಲಿನ ಮರಣ ನೋಂದಣಿ ಸಂಖ್ಯೆಯ ನಡುವೆ ವ್ಯತ್ಯಾಸ ಇದ್ದೇ ಇರುತ್ತದೆ. ಆದರೆ 2014ರಿಂದ ಈಚೆಗೆ ಈ ವ್ಯತ್ಯಾಸ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಎಸ್‌ಆರ್‌ಎಸ್‌ನಲ್ಲಿ ಸಾವಿನ ಅಂದಾಜು ಲೆಕ್ಕಾಚಾರ ವಿಧಾನವನ್ನು ಪ್ರತಿ 10 ವರ್ಷಕ್ಕೊಮ್ಮೆ ಬದಲಿಸಲಾಗುತ್ತದೆ. ಈ ಹಿಂದೆ 2014ರಲ್ಲಿ ಈ ವಿಧಾನವನ್ನು ಪರಿಷ್ಕರಿಸಲಾಗಿತ್ತು. ಆನಂತರವೇ ಎಸ್‌ಆರ್‌ಎಸ್‌ ಸಾವಿನ ಅಂದಾಜು ಮತ್ತು ಸಿಆರ್‌ಎಸ್‌ ಮರಣ ನೋಂದಣಿ ನಡುವಣ ವ್ಯತ್ಯಾಸ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಎನ್‌ಎಫ್‌ಎಚ್‌ಎಸ್‌ ಹೆಚ್ಚು ನಿಖರ

ಎಸ್‌ಆರ್‌ಎಸ್‌ ವಿಧಾನಕ್ಕಿಂತ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌) ವರದಿಯಲ್ಲಿನ ಸಾವು ಮತ್ತು ಮರಣ ಪ್ರಮಾಣದ ಅಂದಾಜು ದತ್ತಾಂಶಗಳ ನಿಖರತೆ ಹೆಚ್ಚು. ಏಕೆಂದರೆ 2020ರ ಸಾಲಿನ ವರ್ಷದಲ್ಲಿ ಈ ವರದಿಯಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾವಿನ ಅಂದಾಜು ಮತ್ತು ಮರಣ ನೋಂದಣಿ ಪ್ರಮಾಣದ ದತ್ತಾಂಶ ನೀಡಲಾಗಿದೆ. ಇದರಲ್ಲಿ 31 ರಾಜ್ಯಗಳಿಗೆ ಸಂಬಂಧಿಸಿದ ಅಂದಾಜು, ಸಿಆರ್‌ಎಸ್‌ನಲ್ಲಿ ದಾಖಲಾದ ಮರಣ ನೋಂದಣಿಗಿಂತ ಕಡಿಮೆ ಇದೆ.

ಎನ್‌ಎಫ್‌ಎಚ್‌ಎಸ್‌ ಸಮೀಕ್ಷೆಯಲ್ಲಿ ಕುಟುಂಬದ ಮಾಹಿತಿ ಕಲೆಹಾಕುವಾಗ, ಸಂಭವಿಸಿದ ಸಾವುಗಳು ಮತ್ತು ಅವುಗಳನ್ನು ನೋಂದಣಿ ಮಾಡಲಾಗಿದೆಯೇ ಎಂಬ ವಿವರವನ್ನು ಸಂಗ್ರಹಿಸಲಾಗುತ್ತದೆ. ಈ ವರದಿಯಲ್ಲಿ ಮಾಡುವ ಅಂದಾಜಿನ ನಿಖರತೆ ಹೆಚ್ಚು. ಹೀಗಾಗಿ 2020ರ ಎನ್‌ಎಫ್‌ಎಚ್‌ಸ್ ವರದಿಯಲ್ಲಿನ ದತ್ತಾಂಶಗಳೇ, ದೇಶದಲ್ಲಿ ಸಂಭವಿಸಿದ ಸಾವಿನಲ್ಲಿ ಶೇ 99.9ರಷ್ಟು ನೋಂದಣಿಯಾಗಿವೆ ಎಂಬ ಸರ್ಕಾರದ ವಾದವನ್ನು ಅಲ್ಲಗಳೆಯುತ್ತವೆ.

* ವರದಿಗಾರರು ರಿಪೋರ್ಟರ್ಸ್ ಕಲೆಕ್ಟಿವ್ ಸದಸ್ಯರು, ವರದಿಯ ಇಂಗ್ಲಿಷ್ ಆವೃತ್ತಿಯು ‘ದಿ ವೈರ್‌’ನಲ್ಲಿ ಪ್ರಕಟವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT