ಸೋಮವಾರ, ಅಕ್ಟೋಬರ್ 25, 2021
25 °C

ಆಳ–ಅಗಲ| ಕಾಂಗ್ರೆಸ್‌ನಲ್ಲಿ ಪರಿವರ್ತನೆಯ ತುಡಿತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2014ರ ಲೋಕಸಭಾ ಚುನಾವಣೆಯಲ್ಲಿನ ಆಘಾತಕರ ಸೋಲಿನ ಬಳಿಕ ಕಾಂಗ್ರೆಸ್‌ ಪಕ್ಷವು ಕುಸಿಯುತ್ತಲೇ ಸಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷದ ಸಾಧನೆಯೇನೂ ಭರವಸೆ ಮೂಡಿಸಲಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷದ ಪುನಶ್ಚೇತನದ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚಿನವರೆಗೆ ನಡೆದ ಪ್ರಯತ್ನಗಳಿಂದ ದೊಡ್ಡ ಯಶಸ್ಸೇನೂ ದೊರೆತಿಲ್ಲ. ಆದರೆ, ತೀರಾ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ಆ ಪಕ್ಷವು ಭಿನ್ನ ಹಾದಿಯೊಂದನ್ನು ಹುಡುಕಿಕೊಳ್ಳುವ ಯತ್ನದಲ್ಲಿದೆ ಎಂಬ ಸುಳಿವು ಕೊಡುತ್ತಿದೆ.

ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಮತ್ತು ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ನೋಡಿಕೊಳ್ಳಲಿದ್ದಾರೆ ಎಂಬುದು ಈಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಾದ ಸುದ್ದಿ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕಿಶೋರ್‌ ಭೇಟಿಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷವು ಕಿಶೋರ್‌ ಸಲಹೆಯಂತೆ ಕೆಲವು ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗುತ್ತಿದೆ.

 ಹಿಂದೂ ಬಹುಸಂಖ್ಯಾತವಾದದ ಸುತ್ತಲೇ ಸುತ್ತುತ್ತಿರುವ ಭಾರತದ ಈಗಿನ ರಾಜಕಾರಣದಲ್ಲಿ ಮತ್ತೆ ಚಲಾವಣೆಗೆ ಬರಲು ಗಟ್ಟಿಯಾದ ಅಡಿಪಾಯವನ್ನು ಕಾಂಗ್ರೆಸ್‌ ಕಟ್ಟಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿಯೇ ಯುವ ಜನರನ್ನು ಆಕರ್ಷಿಸುವ ಯತ್ನವನ್ನು ಪಕ್ಷವು ಮಾಡುತ್ತಿದೆ. ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ, ಜೆಎನ್‌ಯು ವಿದ್ಯಾರ್ಥಿ ನಾಯಕರಾಗಿದ್ದ ಕನ್ಹಯ್ಯಾ ಕುಮಾರ್‌ ಅಂಥವರ ಸೇರ್ಪಡೆ ಇದರ ಭಾಗ ಎನ್ನಲಾಗುತ್ತಿದೆ. ಹಾಗೆಯೇ, ಜಾತಿ ಸಮೀಕರಣವನ್ನು ಹೆಚ್ಚು ಪರಿಣಾಮಕಾರಿ ಆಗಿಸುವ ಯತ್ನವೂ ನಡೆದಿದೆ. ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ನೇಮಕವು ‍ಪರಿಶಿಷ್ಟ ಜಾತಿ– ಪಂಗಡಗಳ ಮತವನ್ನು ಮರಳಿ ಗಳಿಸುವ ಯತ್ನವೂ ಹೌದು. ಇದು ಪಂಜಾಬ್‌ನಲ್ಲಿ ಮಾತ್ರವಲ್ಲ, ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿಯೂ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. 

 ಯುವತ್ವದ ಸ್ಪರ್ಶ

ಮೋದಿ ನೇತೃತ್ವದಲ್ಲಿ 2014ರ ಲೋಕಸಭಾ ಚುನಾವಣೆ ಎದುರಿಸಿದ ಬಿಜೆಪಿಗೆ ಯುವ ಮತದಾರರ ಬೆಂಬಲ ದೊಡ್ಡ ಮಟ್ಟದಲ್ಲಿ ಸಿಕ್ಕಿತ್ತು. 2019ರ ಚುನಾವಣೆಯಲ್ಲಿಯೂ ಯುವ ಮತದಾರರು ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿದ್ದರು. ಯುವ ಮತದಾರರನ್ನು ಸೆಳೆಯುವ ತಂತ್ರವನ್ನು ಅನುಸರಿಸಲು ಕಾಂಗ್ರೆಸ್‌ ಈಗ ಮುಂದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇದಕ್ಕಾಗಿ ಕಾಂಗ್ರೆಸ್ ಭಾರಿ ದೊಡ್ಡಮಟ್ಟದ ಕಾರ್ಯತಂತ್ರ ಹಾಕಿಕೊಂಡಿದೆ. 2020ರ ಆರಂಭದಲ್ಲಿ ಕೋವಿಡ್‌ ತಲೆದೋರಿದಾಗ ಕಾಂಗ್ರೆಸ್‌ನ ಯುವನಾಯಕರು ಮತ್ತು ಯುವ ಕಾರ್ಯಕರ್ತರು ಜನರ ನೆರವಿಗೆ ಮುಂದಾಗಿದ್ದರು. ಕೋವಿಡ್‌ ಲಾಕ್‌ಡೌನ್‌ನ ನಂತರ ನಡೆದ ಕಾರ್ಮಿಕರ ಮರುವಲಸೆ ವೇಳೆ, ಹೆದ್ದಾರಿಗಳ ಉದ್ದಕ್ಕೂ ಕಾರ್ಮಿಕರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಊಟದ ವ್ಯವಸ್ಥೆ ಮಾಡಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಕೋವಿಡ್‌ನ ಎರಡನೇ ಅಲೆ ವೇಳೆ ಆಮ್ಲಜನಕ ಮತ್ತು ಔಷಧದ ಕೊರತೆ ಎದುರಿಸಿದವರಿಗೆ ಅವುಗಳನ್ನು ಒದಗಿಸಿಕೊಡುವ ಕೆಲಸವನ್ನು ಕಾಂಗ್ರೆಸ್‌ ಕಾರ್ಯಕರ್ತರು ಮಾಡಿದ್ದರು. ಈ ಕಾರ್ಯದಲ್ಲಿ ಕಾಂಗ್ರೆಸ್‌ನ ಯುವ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ರಾಜಕೀಯ ಪಕ್ಷಗಳನ್ನು ರೈತ ಸಂಘಟನೆಗಳು ದೂರವಿಟ್ಟಿವೆ. ಆದರೆ ದೆಹಲಿಯ ಸಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಲ್ಲಿ ಬೀಡುಬಿಟ್ಟಿರುವ ರೈತರಿಗೆ ಊಟ, ಟೆಂಟ್‌ ಮತ್ತು ನೀರಿನ ವ್ಯವಸ್ಥೆಯನ್ನು ಮಾಡುವ ಕೆಲಸವನ್ನು ಕಾಂಗ್ರೆಸ್‌ನ ಯುವ ಕಾರ್ಯಕರ್ತರು ಮಾಡುತ್ತಿದ್ದಾರೆ. ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣದಲ್ಲಿ ನಡೆದ ರೈತರ ಮಹಾಪಂಚಾಯಿತಿಗಳನ್ನು ಆಯೋಜಿಸುವಲ್ಲಿಯೂ ಕಾಂಗ್ರೆಸ್‌ನ ಯುವ ಕಾರ್ಯಕರ್ತರು ರೈತರಿಗೆ ನೆರವಾಗಿದ್ದಾರೆ. ಈ ಮೂಲಕ ರೈತರ ವಿಶ್ವಾಸವನ್ನು ಗಳಿಸಲು ಮುಂದಾಗಿದ್ದಾರೆ.

ಇದರ ಬೆನ್ನಲ್ಲೇ, ಯುವನಾಯಕರಾದ ಕನ್ಹಯ್ಯಾ ಕುಮಾರ್ ಮತ್ತು ಜಿಗ್ನೇಶ್ ಮೆವಾನಿ ಅವರನ್ನು ಕಾಂಗ್ರೆಸ್‌ ಈಗ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ರಾಜಸ್ಥಾನದಲ್ಲಿಯೂ ‘ಯುವ ನಾಯಕ’ರಾದ ಸಚಿನ್ ಪೈಲಟ್ ಮತ್ತು ಅವರ ಬಣದ ಯುವ ನಾಯಕರಿಗೆ ಕಾಂಗ್ರೆಸ್‌ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ 23 ನಾಯಕರನ್ನು ಪಕ್ಷವು ಈಗ ಪ್ರಮುಖ ಬೆಳವಣಿಗೆಗಳಿಂದ ದೂರವಿಟ್ಟಿದೆ. ಆ ನಾಯಕರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ತೆರವು ಮಾಡಿದೆ. ಆ ಹುದ್ದೆಗಳಿಗೆ ಯುವಜನರನ್ನು ನೇಮಕ ಮಾಡಿದೆ. ಆ ಮೂಲಕ, ತಮ್ಮದು ಯುವಕರ ಪಕ್ಷ ಎಂದು ಬಿಂಬಿಸಲು ಕಾಂಗ್ರೆಸ್‌ ಮುಂದಾಗಿದೆ.

2020ರ ಕೋವಿಡ್‌ ಲಾಕ್‌ಡೌನ್‌ನ ನಂತರ ಈ ತಂತ್ರವನ್ನು ಕಾಂಗ್ರೆಸ್‌ ಕ್ರಮಬದ್ಧವಾಗಿ ಜಾರಿಗೆ ತರುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಕಾಂಗ್ರೆಸ್‌ನ ಯುವ ನಾಯಕರು ಮತ್ತು ಕಾರ್ಯಕರ್ತರು ಜನರ ನೆರವಿಗೆ ಧಾವಿಸಿದರು ಎಂಬ ಸಂಕಥನವನ್ನು ರೂಪಿಸಲಾಗಿದೆ. ಈಗ ಬೇರೆ ಬೇರೆ ಸಮುದಾಯಗಳ ಪ್ರಭಾವಿ ಯುವನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಗುಜರಾತ್‌ನ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿಯೇ ಪಕ್ಷಕ್ಕೆ ಯುವತ್ವದ ಸ್ಪರ್ಶ ನೀಡುವ ಮಹತ್ವದ ನಿರ್ಧಾರವನ್ನು ಕಾಂಗ್ರೆಸ್‌ ತೆಗೆದುಕೊಂಡಿದೆ.

ಎಚ್ಚರದ ಜಾತಿ ಲೆಕ್ಕಾಚಾರ

ಜಾತಿ ಸಮೀಕರಣದ ಬಗ್ಗೆ ಕಾಂಗ್ರೆಸ್‌ ಪಕ್ಷವು ಹೆಚ್ಚು ಎಚ್ಚರದಿಂದ ಇರುವಂತೆ ಕಾಣಿಸುತ್ತಿದೆ.

ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವ ಮೂಲಕ ಕಾಂಗ್ರೆಸ್ ತನ್ನ ಕಾರ್ಯತಂತ್ರದ ಮೊದಲ ಹೆಜ್ಜೆ ಇರಿಸಿದೆ. ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಸಂದೇಶ ರವಾನಿಸಿದೆ. ಕಾಂಗ್ರೆಸ್‌ನ ಈ ನಿರ್ಧಾರವು ಮಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿರುವ ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಲ್ಲಿ ಪಕ್ಷದ ಕೈ ಹಿಡಿಯಲಿದೆ ಎಂದು ವಿಶ್ಲೇಷಿಸಲಾಗಿದೆ.

ಗ್ಯಾನಿ ಜೈಲ್‌ಸಿಂಗ್ ಅವರ ಬಳಿಕ ಪಂಜಾಬ್‌ನಲ್ಲಿ ಜಾಟ್‌ ಸಮುದಾಯೇತರ ಮುಖ್ಯಮಂತ್ರಿಯಾಗಿ ಚರಣ್‌ಜಿತ್ ಸಿಂಗ್‌ ಚನ್ನಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಶೇ 32ರಷ್ಟು ಜನಸಂಖ್ಯೆ ಹೊಂದಿರುವ ದಲಿತರಿಗೆ ಅತ್ಯುನ್ನತ ಹುದ್ದೆ ಈವರೆಗೆ ಸಿಕ್ಕಿರಲಿಲ್ಲ. ಇದನ್ನು ಸಾಧ್ಯವಾಗಿಸುವ ಮೂಲಕ ಕಾಂಗ್ರೆಸ್, ಪಂಜಾಬ್ ಅಷ್ಟೇ ಅಲ್ಲದೆ, ದೇಶದಾದ್ಯಂತ ಇರುವ ದಲಿತ ಸಮುದಾಯದ ಮನವೊಲಿಸುವ ಯತ್ನಕ್ಕೆ ಮುಂದಾಗಿದೆ. ಜೊತೆಗೆ ಜಾಟ್ ಸಮುದಾಯ ಹಾಗೂ ಹಿಂದೂ ಖತ್ರಿ ಸಮುದಾಯಕ್ಕೆ ಸೇರಿದ ಇಬ್ಬರನ್ನು ಪಂಜಾಬ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳನ್ನಾಗಿ ಮಾಡಿ, ಈ ಎರಡೂ ಸಮುದಾಯಗಳನ್ನು ತಲುಪಲು ಯತ್ನಿಸಿದೆ.

ಜಾಟ್‌ ಸಮುದಾಯಕ್ಕೆ ಸೇರಿದ ನವಜೋತ್ ಸಿಂಗ್ ಸಿಧು ಅವರಿಗೆ ಪಕ್ಷದ ರಾಜ್ಯ ಘಟಕದ ಚುಕ್ಕಾಣಿ ನೀಡಿರುವುದೂ ಸಹ ವ್ಯವಸ್ಥಿತ ಕಾರ್ಯತಂತ್ರದ ಭಾಗ ಎನ್ನಲಾಗಿದೆ. ಜಾಟ್ ಸಮುದಾಯದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಕೆಳಗಿಳಿಸಿದ್ದರೂ, ಸಮುದಾಯಕ್ಕೆ ರಾಜ್ಯ ಘಟಕ ಅಧ್ಯಕ್ಷ ಸ್ಥಾನ ಮತ್ತು ಒಂದು ಉಪಮುಖ್ಯಮಂತ್ರಿ ಹುದ್ದೆ ನೀಡಿ ತನ್ನ ಯೋಜನೆ ಅನುಷ್ಠಾನಗೊಳಿಸಿದೆ.

ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಜೆಪಿ ಸೇರಿದಂತೆ ಬಹುತೇಕ ಪಕ್ಷಗಳು ಬ್ರಾಹ್ಮಣ ಸಮುದಾಯದ ಓಲೈಕೆಯಲ್ಲಿ ತೊಡಗಿವೆ. ‘ಜೈ ಭೀಮ್’ ಎನ್ನುತ್ತಿದ್ದ ಬಿಎಸ್‌ಪಿ ಸಹ ಇದಕ್ಕೆ ಹೊರತಾಗಿಲ್ಲ. ರಾಜ್ಯದ ಶೇ 21ರಷ್ಟಿರುವ ದಲಿತರು ಸಹ ಅಲ್ಲಿ ನಿರ್ಣಾಯಕ. ಪಂಜಾಬ್‌ನಲ್ಲಿ ದಲಿತ ಮುಖ್ಯಮಂತ್ರಿ ಆಯ್ಕೆಯ ಮೂಲಕ ಕಾಂಗ್ರೆಸ್, ಉತ್ತರ ಪ್ರದೇಶದಲ್ಲೂ ತನ್ನ ನೆಲೆ ಗಟ್ಟಿ ಮಾಡಿಕೊಳ್ಳುವ ಎಲ್ಲ ಲಕ್ಷಣಗಳಿವೆ. ಅತ್ತ ಉತ್ತರಾಖಂಡದಲ್ಲೂ ಇದು ಫಲ ನೀಡುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ರಾಜ್ಯದ ಜನಸಂಖ್ಯೆಯ ಶೇ 18ರಷ್ಟಿರುವ ದಲಿತ ಸಮುದಾಯದ ಮೇಲೆ ಪಂಜಾಬ್‌ ವಿದ್ಯಮಾನ ಪ್ರಭಾವ ಬೀರಲಿದೆ ಎನ್ನಲಾಗಿದೆ.

ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ತವರು ಗುಜರಾತ್‌ನಲ್ಲಿ ಬಿಜೆಪಿಗೆ ಏಟು ಕೊಡಲು ಕಾಂಗ್ರೆಸ್ ಅಲ್ಲಿಯೂ ಜಾತಿ ಸಮೀಕರಣದ ಮೊರೆ ಹೋಗಿದೆ. ಸದ್ಯದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು, ಪಾಟೀದಾರ್ ಸಮುದಾಯದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಈ ಹಿಂದೆಯೇ ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ, ಸಮುದಾಯದ ಓಲೈಕೆಗೆ ಮುಂದಾಗಿದೆ. ಹಾರ್ದಿಕ್‌ಗೆ ಜಾತಿ ಬಲವೊಂದೇ ಅಲ್ಲದೆ, ಯುವ ಸಮೂಹದ ಪ್ರಭಾವಿ ನಾಯಕ ಎಂಬ ವರ್ಚಸ್ಸು ಕೂಡ ಇರುವುದನ್ನು ಪಕ್ಷ ಮನಗಂಡು ಈ ನಿರ್ಧಾರ ತೆಗೆದುಕೊಂಡಿತ್ತು. ಇದರ ಸುಳಿವು ಅರಿತ ಬಿಜೆಪಿ, ರಾಜಕೀಯ ದೃಷ್ಟಿಯಿಂದ ಅತ್ಯಂತ ಪ್ರಭಾವಿ ಸಮುದಾಯ ಎನಿಸಿರುವ ಪಾಟೀದಾರರ ಮತ ಸೆಳೆಯಲು ತರಾತುರಿಯಲ್ಲಿ ಮುಖ್ಯಮಂತ್ರಿಯನ್ನೇ ಬದಲಾವಣೆ ಮಾಡಿತು.

2025ರಲ್ಲಿ ಬಿಹಾರ ವಿಧಾನಸಭೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಈಗಿನಿಂದಲೇ ಭೂಮಿಕೆ ಸಿದ್ಧಪಡಿಸುತ್ತಿದೆ. ಪ್ರಭಾವಿ ಯುವ ನಾಯಕ ಕನ್ಹಯ್ಯಾ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಅವರು ಬಿಹಾರದಲ್ಲಿ ನೆಲೆ ಕಳೆದುಕೊಂಡಿರುವ ಪಕ್ಷಕ್ಕೆ ಹೊಸ ಚೈತನ್ಯ ನೀಡುತ್ತಾರೆ ಎಂಬ ಲೆಕ್ಕಾಚಾರ ಹಾಕಿಕೊಂಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು