ಶನಿವಾರ, ಮೇ 30, 2020
27 °C
ನಿಜಾಮುದ್ದೀನ್‌ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿ

ವಿಜಯಾಪುರದಿಂದ ತಬ್ಲೀಗಿ ಜಮಾತ್‌ಗೆ ತೆರಳಿ 17 ಜನರ ಪತ್ತೆ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ದೆಹಲಿಯ ನಿಜಾಮುದ್ದೀನ್‌ ಪ್ರದೇಶದ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ವಿಜಯಪುರ, ಬಸವನಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕು ಸೇರಿದಂತೆ ಜಿಲ್ಲೆಯ 17 ಜನರನ್ನು ಗುರುವಾರ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕೊರೊನಾ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಬ್ಲೀಗ್‌ ಜಮಾತ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 10 ಜನರನ್ನು ಬುಧವಾರ ಪತ್ತೆ ಮಾಡಲಾಗಿತ್ತು. ಇದುವರೆಗೆ ಒಟ್ಟು 27 ಜನರನ್ನು ಪತ್ತೆ ಹಚ್ಚಲಾಗಿದೆ. ಆರೋಗ್ಯ ಮತ್ತು ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಪತ್ತೆ ಕಾರ್ಯ ಮುಂದುವರಿದಿದ್ದು, ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾಗಿರುವವರು ಮಾರ್ಚ್‌ 4 ಮತ್ತು 5ರಂದು ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ಮಾರ್ಚ್‌ 8ರಂದು ಜಿಲ್ಲೆಗೆ ಮರಳಿದ್ದಾರೆ. ಈಗಾಗಲೇ ಅವರ ಕ್ವಾರಂಟೈನ್‌ ಅವಧಿ ಮುಗಿದಿದೆ. ಯಾರಲ್ಲೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಸಹ ಏಪ್ರಿಲ್‌ 14ರ ವರೆಗೆ ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇಟ್ಟು, ವೈದ್ಯಕೀಯ ತಪಾಸಣೆ ನಡೆಸಲಾಗುವುದು ಎಂದು ಹೇಳಿದರು.

ಮಾಸ್ಕ್‌ ವಿತರಣೆ: ಜಿಲ್ಲೆಯಲ್ಲಿ ಕೊರೊನಾ ಜಾಗೃತಿ ಕಾರ್ಯದಲ್ಲಿ ನಿರತವಾಗಿರುವವರಿಗೆ ವಿತರಿಸಲು ಜಿಲ್ಲಾಡಳಿತವು 40 ಸಾವಿರ ಮಾಸ್ಕ್‌ ಖರೀದಿಸಿದೆ ಎಂದು ತಿಳಿಸಿದರು.

ಹಾಲು ವಿತರಣೆ: ರಾಜ್ಯ ಸರ್ಕಾರದ ನಿರ್ದೇಶನದಂತೆ ನಾಳೆಯಿಂದಲೇ(ಏ.3) ಜಿಲ್ಲೆಯ ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯಪುರ ನಗರದಲ್ಲಿ 45 ಘೋಷಿತ ಹಾಗೂ 19 ಅಘೋಷಿತ ಕೊಳೆಗೇರಿಗಳಿದ್ದು, ಸುಮಾರು 60 ಸಾವಿರ ಜನರಿದ್ದಾರೆ. ಉಳಿದಂತೆ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 25 ಕೊಳೆಗೇರಿಗಳಿವೆ. ಪ್ರತಿ ಕುಟುಂಬಕ್ಕೆ ತಲಾ ಒಂದು ಲೀಟರ್‌ ಹಾಲನ್ನು ಮನೆ, ಮನೆಗೆ ತೆರಳಿ  ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪಿಂಚಣಿ ವಿತರಣೆಗೆ ಕ್ರಮ: ಜಿಲ್ಲೆಯಾದ್ಯಂತ 250 ಬ್ಯಾಂಕ್‌ ಮಿತ್ರರು ಇದ್ದು, ಸಾಮಾಜಿಕ ಪಿಂಚಣಿ ಯೋಜನೆ ಹಾಗೂ ಪ್ರಧಾನಮಂತ್ರಿ ಜನಧನ್‌ ಯೋಜನೆ, ಪಿಎಂ ಕಿಶಾನ್‌ ಯೋಜನೆ, ಪ್ರಧಾನಮಂತ್ರಿ ಗರೀಬ್‌ ಯೋಜನೆ ಫಲಾನುಭವಿಗಳಿಗೆ ಮನೆ, ಮನೆಗೆ ತೆರಳಿ ಹಣವನ್ನು ನೀಡಲಿದ್ದಾರೆ. ಹೀಗಾಗಿ ಯಾವೊಬ್ಬ ಫಲಾನುಭವಿ ಎಟಿಎಂ, ಬ್ಯಾಂಕಿಗೆ ಮುಗಿಬೀಳುವ ಅಗತ್ಯವಿಲ್ಲ ಎಂದು ಹೇಳಿದರು.

ಪಡಿತರ ವಿತರಣೆಗೆ ಕ್ರಮ: ಜಿಲ್ಲೆಯ ಪಡಿತರ ಫಲಾನುಭವಿಗಳಿಗೆ ವಿತರಿಸಲು 1,83,713 ಕ್ವಿಂಟಲ್‌ ಅಕ್ಕಿ, 18,680 ಕ್ವಿಂಟಲ್‌ ಗೋಧಿ ಬಂದಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಜಿಲ್ಲಾಡಳಿತ ತಲುಪಿಸಲಿದೆ. ಈ ಸಂಬಂಧ ಯಾವುದೇ ದೂರು ಇದ್ದರೆ ಆಯಾ ತಹಶೀಲ್ದಾರ್‌ಗೆ ಅಥವಾ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಗಮನಕ್ಕೆ ತಂದರೆ ತಕ್ಷಣವೇ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿರುವ ಅಲೆಮಾರಿ ಕುಟುಂಬಗಳಿಗೂ ಪಡಿತರ ವಿತರಣೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು