ಭಾನುವಾರ, ಡಿಸೆಂಬರ್ 8, 2019
24 °C

ಕಾಮಗಾರಿ ಕಿರಿಕಿರಿ, ಅಪಘಾತ ಸಂಖ್ಯೆ ಹೆಚ್ಚಳ

ಎಸ್. ರುದ್ರೇಶ್ವರ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳು ನಾಗರಿಕರನ್ನು ಬೆಚ್ಚಿ ಬೀಳಿಸುತ್ತಿದ್ದರೆ, ಇಲ್ಲಿನ ಪಿಡ್ಬ್ಲೂಡಿ ವೃತ್ತದಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ವಾಹನ ಸವಾರರನ್ನು ಮೃತ್ಯು ಕೂಪಕ್ಕೆ ಆಹ್ವಾನಿಸುತ್ತಿದೆ. 

ಕನಿಷ್ಠ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಹೆದ್ದಾರಿ ಬದಿಯಲ್ಲಿನ ತಿರುವಿನಲ್ಲಿಯೇ ಕಾಮಗಾರಿ ನಡೆಯುತ್ತಿರುವುದು ವಾಹನ ಸವಾರರು ಅಪಘಾತಕ್ಕೆ ಸಿಲುಕುವಂತಾಗಿದೆ.

ಬೆಂಗಳೂರಿನಿಂದ -ಮೈಸೂರು ಕಡೆಗೆ ಸಂಚರಿಸುವ ವಾಹನಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ವೇಗವಾಗಿ ಬಂದು ಬಲಕ್ಕೆ ತಿರುವು ಪಡೆದುಕೊಳ್ಳುತ್ತವೆ. ಈ ತಿರುವಿನಲ್ಲೇ ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದಾಗಿ ಸಣ್ಣ ಪ್ರಮಾಣದ ಅಪಘಾತಗಳು ಸಂಭವಿಸುತ್ತಿವೆ.

ವೇಗವಾಗಿರುವ ವಾಹನಗಳು ಕಾಮಗಾರಿಯಿಂದಾಗಿ ತಿರುವಿನಲ್ಲಿ ಬ್ರೇಕ್ ಹಾಕಿದರೆ, ಹಿಂಬದಿಯಲ್ಲಿನ ವಾಹನಗಳು ಡಿಕ್ಕಿ ಹೊಡೆಯುತ್ತಿವೆ. ಇನ್ನು 6 ಅಡಿಗಳಷ್ಟು ಆಳವಾಗಿ ಕೊರೆದಿರುವ ಚರಂಡಿ ಗುಂಡಿಗಳ ಸುತ್ತಲೂ ಯಾವುದೇ ಸೂಚನಾ ಫಲಕವಾಗಲಿ, ತಡೆಗೋಡೆಯನ್ನು ನಿರ್ಮಿಸಿಲ್ಲ. ಹೀಗಾಗಿ ರಾತ್ರಿ ವೇಳೆಯಲ್ಲಿ ಬರುವ ವಾಹನಗಳು ಒಂದು ವೇಳೆ ನಿಯಂತ್ರಣ ಕಳೆದುಕೊಂಡರೆ, ನೇರವಾಗಿ ಗುಂಡಿ ಸೇರಬೇಕಾಗುತ್ತದೆ.

ನಗರಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ರಸ್ತೆ ಕಾಮಗಾರಿಗಳ ಭರಾಟೆ ಹೆಚ್ಚಾಗಿದೆ. ಇದರಿಂದ ಏಕಕಾಲದದಲ್ಲಿ ವಿವಿದೆಡೆ ಕಾಮಗಾರಿಗಳು ನಡೆಯುತ್ತಿರುವುದು ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ. ಒಂದೆಡೆ ಹೆದ್ದಾರಿ ಬದಿಯಲ್ಲಿನ ಕಾಮಗಾರಿಗಳು ಸಂಚಾರ ದಟ್ಟಣೆಯನ್ನು ಇನ್ನಷ್ಟು ಹೆಚ್ಚಿಸಿದರೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಗುಂಡಿಗಳು ಅಪಘಾತ ಪ್ರಮಾಣವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇವೆ.

ಬೆಂಗಳೂರು-–ಮೈಸೂರು ಹೆದ್ದಾರಿಯಲ್ಲಿ ಕಳೆದೊಂದು ವಾರದಿಂದ ಒಟ್ಟು 8 ಅಪಘಾತಗಳು ಸಂಭವಿಸಿದ್ದು, ಆರಕ್ಕೂ ಹೆಚ್ಚು ಜನ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮಾಗಡಿ ಹೆದ್ದಾರಿಯಲ್ಲಿ ಮೂರು ಅಪಘಾತಗಳಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ.

ಇದೇ ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಸಹ ಪಲ್ಟಿಯಾಗಿತ್ತು. ಇದಲ್ಲದೇ, ಕನಕಪುರ ರಸ್ತೆಯಲ್ಲಿ 4 ಅಪಘಾತಗಳಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಹೀಗೆ ಹೆದ್ದಾರಿಯಲ್ಲಿನ ಅವಾಂತರಗಳಿಂದಾಗಿ ಅಪಘಾತ ಪ್ರಮಾಣ ಏರುತ್ತಲೇ ಇದ್ದರೂ, ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ.

ಈ ಗುಂಡಿ ಪಕ್ಕದಲ್ಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗಳಿವೆ. ಶಾಲಾಕಾಲೇಜು ಬಿಡುವ ಸಮಯದಲ್ಲಿ ವಿದ್ಯಾರ್ಥಿಗಳ ತಳ್ಳಾಟ- ನೂಕಾಟದಲ್ಲಿ ಅನೇಕ ವಿದ್ಯಾರ್ಥಿಗಳು ಗುಂಡಿಯಲ್ಲಿ ಬಿದ್ದು, ಗಾಯ ಮಾಡಿಕೊಂಡಿರುವ ಪ್ರಕರಣಗಳು ಸಾಕಷ್ಟಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇನ್ನಾದರೂ, ಸಂಬಂಧಿಸಿದ ಇಲಾಖೆಗಳು ಇತ್ತ ಗಮನ ಹರಿಸಬೇಕು. ಕಾಮಗಾರಿಗಳ ಬಳಿ ತಡೆಗೋಡೆ, ಸೂಚನಾ ಫಲಕಗಳನ್ನು ಅಳವಡಿಸಬೇಕು. ರಾತ್ರಿ ವೇಳೆ ಕಾಮಗಾರಿಗಳನ್ನು ನಡೆಸಬೇಕು. ಗುಂಡಿಬಿದ್ದಿರುವ ರಸ್ತೆಗಳನ್ನು ದುರಸ್ತಿ ಪಡಿಸಿ, ತಿರುವುಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಜಿಲ್ಲಾ ಪೊಲೀಸ್ ಭವನದ ಪಕ್ಕದ ರಸ್ತೆಯ ಅಡ್ಡಲಾಗಿ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿಯ ಬಗ್ಗೆ ಯಾವುದೇ ಸೂಚನಾ ಫಲಕಗಳು ಇಲ್ಲ. ತಡೆಗೋಡೆ ಇಲ್ಲವೇ ಕನಿಷ್ಠ ಚರಂಡಿ ಸುತ್ತಲೂ ಪಟ್ಟಿಯನ್ನು ಹಾಕಿಲ್ಲ. ಇದರಿಂದ ಪಕ್ಕದಲ್ಲಿನ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೆ ಇವೆ ಎಂದು ಸ್ಥಳೀಯ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ನಗರ ವ್ಯಾಪ್ತಿಯಲ್ಲಿ ಎಲ್ಲಾ ರಸ್ತೆಗಳು ಗುಂಡಿಗಳಿಂದಲೇ ಕೂಡಿವೆ. ಕಳೆದ ಒಂದು ವಾರದಿಂದಲೂ ಗುಂಡಿ ಬಗೆದು ಹಾಗೇ ಬಿಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಜನ ದಟ್ಟಣೆ ಇರುವ ಪ್ರದೇಶದಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸ್ಥಳೀಯ ಸುರೇಶ್‌ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)