ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲೂ ಅಕ್ವೇರಿಯಂ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ

ಕಬ್ಬನ್‌ಪಾರ್ಕ್‌ನಲ್ಲಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ
Last Updated 4 ಜುಲೈ 2022, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕಬ್ಬನ್‌ಪಾರ್ಕ್‌ನಲ್ಲಿ ಮೀನುಗಾರಿಕೆ ಇಲಾಖೆಯು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಕ್ವೇರಿಯಂ ನಿರ್ಮಿಸುತ್ತಿದ್ದು, ಆ ಮಾದರಿಯಲ್ಲಿ ಲಾಲ್‌ಬಾಗ್‌ನಲ್ಲೂ ಅಕ್ವೇರಿಯಂ ನಿರ್ಮಾಣ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.

ನಗರದ ಕಬ್ಬನ್‌ ಪಾರ್ಕ್‌ನಲ್ಲಿ ಸರ್ಕಾರಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಸೃಷ್ಟಿಕರ್ತನ ಅದ್ಭುತ ಸೃಷ್ಟಿ ಮೀನು. ಈ ಜಲಚರಕ್ಕೆ ತನ್ನದೇ ಸೌಂದರ್ಯ ಹಾಗೂ ಶುದ್ಧತೆ ಇದೆ. ನಾವೇ ಈ ಜಲಚರಕ್ಕೆ ಉಪದ್ರವ ನೀಡುತ್ತಿದ್ದೇವೆಯೇ ಹೊರತು ಅವುಗಳು ನಮಗೆ ಹಾನಿ ಪಡಿಸುತ್ತಿಲ್ಲ. ಮನುಷ್ಯರ ಸ್ವಾರ್ಥದಿಂದ ವರ್ಷದಿಂದ ವರ್ಷಕ್ಕೆ ಪರಿಸರ ಹಾನಿ ಪ್ರಮಾಣ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.

‘ಮೀನುಗಾರಿಕೆ ಕೃಷಿಯ ಒಂದು ಭಾಗವಾಗಿದೆ. ಸಮಗ್ರ ಕೃಷಿಯಿಂದ ರೈತರಿಗೆ ಲಾಭವಿದೆ. ಒಳನಾಡು ಮೀನುಗಾರಿಕೆಗೆ ಆದ್ಯತೆ ಸಿಗಬೇಕು. ಉತ್ಪಾದನೆ, ಸಂಸ್ಕರಣೆ ಹಾಗೂ ರಫ್ತು ಪ್ರಮಾಣ ಹೆಚ್ಚಿಸಬೇಕು. 330 ಕಿ.ಮೀ. ಕರಾವಳಿ ವ್ಯಾಪ್ತಿ ಇದ್ದು, ಬಂದರು ಅಭಿವೃದ್ಧಿ ಪಡಿಸಲಾಗುತ್ತಿದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಮೀನು ಸಂಸ್ಕರಣೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.

ಮೀನುಗಾರಿಕೆಗೆ ಉತ್ತೇಜನ ನೀಡಿದಷ್ಟೂ ಸ್ವಯಂ ಉದ್ಯೋಗ, ಕೃಷಿಯ ಜೊತೆಗೆ ಮೀನುಗಾರಿಕೆಯಿಂದ ಆದಾಯ ಹೆಚ್ಚಳವಾಗಲಿದೆ. ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿಯಾಗಲಿದೆ ಎಂದರು.

ಕೈಗಾರಿಕೆ ನೀತಿ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಉದ್ಯೋಗ ನೀತಿ ಜಾರಿಗೆ ತರಲಾಗುವುದು ಎಂದರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌.ಅಂಗಾರ ಮಾತನಾಡಿ, ‘ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜಿಸಲು 5 ಕಡೆ ಆಧುನಿಕ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಮೀನುಗಾರಿಕೆ ಕ್ಷೇತ್ರದಲ್ಲಿ ನಿರೀಕ್ಷೆಗೆ ಮೀರಿ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುತ್ತಿದೆ. ಹಳೇ ತಳಿಗಳನ್ನು ಉಳಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಜನರಲ್ಲಿ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇದೆ. ಮೀನಿನಲ್ಲಿ ಹೇರಳವಾದ ಪೌಷ್ಟಿಕಾಂಶ ಇದೆ. ಮೀನಿನ ಖಾದ್ಯ ಬಳಕೆಯಿಂದ ಪೌಷ್ಟಿಕಾಂಶ ಹೆಚ್ಚಲಿದೆ ಎಂದು ತಿಳಿಸಿದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ‘ಸಮುದ್ರದ ಸೌಂದರ್ಯದ ಬಗ್ಗೆ ಮೀನುಗಾರರಿಗೆ ಮಾತ್ರ ತಿಳಿದಿದೆ. ಮೀನುಗಾರರಿಗೆ ವೃತ್ತಿಯು ಸುಲಭವಲ್ಲ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಮೀನುಗಾರಿಕೆ ಮಾಡಬೇಕು. ಅವರಿಗೆ ಶಕ್ತಿ ತುಂಬಿ ನ್ಯಾಯ ಕಲ್ಪಿಸಬೇಕಿದೆ’ ಎಂದು ಕೋರಿದರು.

ಮೇಲ್ಮನೆ ಸದಸ್ಯ ಡಾ.ಕೆ.ಗೋವಿಂದ ರಾಜ್‌, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್‌, ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT