ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರದಾಳ| ಸಸಾಲಟ್ಟಿ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ

ಉದ್ಘಾಟನೆಯಾಗಿ ಮೂರು ವರ್ಷ: ಆರೋಗ್ಯ ಸೇವೆ ಆರಂಭಿಸಲು ಮೀನಮೇಷ
Last Updated 28 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ತೇರದಾಳ: ಸರ್ಕಾರ ಸಮೀಪದ ಸಸಾಲಟ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಿ ಮೂರು ವರ್ಷ ಕಳೆದರೂ ಯಾವುದೇ ಸೌಲಭ್ಯವಿಲ್ಲದೆ ಆರೋಗ್ಯ ಕೇಂದ್ರವೇ ಅನಾರೋಗ್ಯಕ್ಕೆ ಒಳಗಾಗಿದೆ.

ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಮೂರು ಕೊಠಡಿಗಳನ್ನು ನವೀಕರಿಸಿ 2020ರ ಮಾರ್ಚ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳೀಯ ಶಾಸಕರು ಉದ್ಘಾಟನೆ ನೆರವೇರಿಸಿದ್ದರು. ಆದರೆ ಇಲ್ಲಿಯವರೆಗೆ ಒಬ್ಬ ವೈದ್ಯರು ಇಲ್ಲಿ ಕರ್ತವ್ಯಕ್ಕೆ ಹಾಜರಾಗಲಿಲ್ಲ. ರಾಜ್ಯದ ಬೇರೆಡೆ ಮಂಜೂರಾಗಿದ್ದ ಆಸ್ಪತ್ರೆಯನ್ನು ಇಲ್ಲಿ ಆರಂಭಿಸಲಾಯಿತು. ಈ ಕೇಂದ್ರಕ್ಕೆ ಬೇಕಾದ ಕನಿಷ್ಠ ಸೌಲಭ್ಯಗಳು ದೊರೆಯದೆ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಗಗನ ಕುಸುಮವಾಗಿದೆ.

ವೈದ್ಯರಿಲ್ಲ, ಪರಿಕರಗಳಿಲ್ಲ, ಮಾತ್ರೆಗಳಿಲ್ಲ, ಸಿಬ್ಬಂದಿಯಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. ಉದ್ಘಾಟನೆ ನೆರವೇರಿಸಿದ ಶಾಸಕರ ಅವಧಿ ಮುಗಿಯುತ್ತ ಬಂದರೂ ಅವತ್ಯ ಸಿಬ್ಬಂದಿ ಕೊಡಲಾಗಲಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.

ಗ್ರಾಮದಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರು ಕೂಡ ಸಸಾಲಟ್ಟಿಯು ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರವಾಗಿರುವ ಗೋಲಬಾವಿ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಉಪಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ(ಸಿಎಚ್ಒ) ಆಗಿರುವವರೆ ಇಲ್ಲಿ ವೈದ್ಯರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೇರೆ ಸಿಬ್ಬಂದಿ ಇಲ್ಲ. ಇದ್ದೊಬ್ಬ ಡಿ ದರ್ಜೆ ನೌಕರ ಕಳೆದ ಜನವರಿಯಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಸ್ಥಾನ ಖಾಲಿಯಿದೆ. ಒಂದು ತಿಂಗಳ ಕಾಲ ಸಿಎಚ್ಒ ಮುಷ್ಕರದಲ್ಲಿ ಭಾಗಿಯಾದ್ದರಿಂದ ಆಸ್ಪತ್ರೆ ಮುಚ್ಚಿಯೇ ಇತ್ತು. ಆಗ ಬಡ ರೋಗಿಗಳು ಅನಿವಾರ್ಯವಾಗಿ ಖಾಸಗೀ ಆಸ್ಪತ್ರೆಗಳ ಮೊರೆ ಹೋಗಬೇಕಾಯಿತು.

`ಸ್ಥಳೀಯ ಗ್ರಾಮ ಪಂಚಾಯ್ತಿಯವರು ಎರಡು ಎಕರೆ ಜಾಗ ಹಾಗೂ ₹1ಲಕ್ಷ ಮೊತ್ತವನ್ನು ಠೇವಣಿ ಮಾಡಿದ ನಂತರವೇ ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಿಫ್ಟ್ ಮಾಡಲಾಗಿದೆ. ಬಳಿಕ ಈ ಜಾಗ ಅತಿಕ್ರಮಣವಾಗಿದೆ ಎಂದು ಮರಳಿ ಪಡೆದಿದೆ. ಇದರಿಂದ ಕಟ್ಟಡ ಕಟ್ಟಲು ಜಾಗವಿಲ್ಲದೆ ಶಾಲೆಯ ಕಟ್ಟಡದಲ್ಲಿ ಮುಂದುವರೆದಿದೆ. ಇಲ್ಲಿ ಅವಶ್ಯವಿರುವ ಔಷಧ ಹಾಗೂ ಸಿಬ್ಬಂದಿಯನ್ನು ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದಲೇ ಪಡೆದು ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಜಾಗ ನೀಡಲು ಸಾಕಷ್ಟು ಬಾರಿ ಗ್ರಾಮ ಪಂಚಾಯ್ತಿಗೆ ಪತ್ರ ಬರೆಯಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. ಇಲ್ಲೊಂದು ಪೂರ್ಣ ಪ್ರಮಾಣದ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾದರೆ ನಮಗೆ ಇರುವ ಬಹುದೊಡ್ಡ ಭಾರ ಕಡಿಮೆಯಾಗುತ್ತದೆ. ಎರಡು ಎಕರೆ ಜಾಗ ನೀಡದಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿ ರದ್ದುಗೊಳ್ಳಬಹುದು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಜಿ.ಎಸ್.ಗಲಗಲಿ ಹೇಳಿದರು.

‘ನಮ್ಮ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಠೇವಣಿ ನೀಡಿರುವ ಹಾಗೂ ಜಾಗ ನೀಡಿ ವಾಪಸ್ಸು ಪಡೆದಿರುವ ಕುರಿತು ಮಾಹಿತಿ ಇಲ್ಲ. ಇದಲ್ಲದೆ ಗ್ರಾಮದಲ್ಲಿ ಎರಡು ಎಕರೆಯಷ್ಟು ಸರ್ಕಾರಿ ಜಾಗ ಇಲ್ಲ ಹಾಗೂ ಅಷ್ಟು ಜಾಗ ನೀಡಲು ರೈತರು ಕೂಡ ಮುಂದೆ ಬರುವುದಿಲ್ಲವಾದ್ದರಿಂದ ಕಟ್ಟಡ ನಿರ್ಮಾಣ ಕಷ್ಟಸಾಧ್ಯ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವ ಶಿವಲಿಂಗ ನಿರ್ವಾಣಿ.

ಎರಡು ಎಕರೆಯಷ್ಟು ಜಾಗ ಇಲ್ಲದ್ದರಿಂದ ಈ ಆಸ್ಪತ್ರೆ ಇಲ್ಲಿಂದ ಬೇರೆಡೆಗೆ ಶಿಫ್ಟ್ ಆಗಬಹುದು. ಇಲ್ಲವೆ ಮಂಜೂರಾತಿ ರದ್ದಾಗುವ ಹಂತ ತಲುಪಿದೆ. ಉದ್ಘಾಟನೆಗೆ ಇದ್ದ ಉತ್ಸಾಹ ಅದನ್ನು ಉಳಿಸಿಕೊಳ್ಳಲು ಇಲ್ಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT