ಶನಿವಾರ, ಏಪ್ರಿಲ್ 1, 2023
28 °C
ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಗಳಲ್ಲೂ ಚೇತರಿಕೆ

ಬಾಗಲಕೋಟೆ: ಐತಿಹಾಸಿಕ ತಾಣಗಳಲ್ಲೀಗ ಪ್ರವಾಸಿಗರ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೋವಿಡ್‌ ಕಾರಣಕ್ಕಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ಪ್ರವಾಸೋದ್ಯಮ ಮತ್ತೆ ಚಿಗುರಿಕೊಂಡಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಇದರಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯೋಗಿಗಳಲ್ಲಿಯೂ ಉತ್ಸಾಹ ಮೂಡಿದೆ.

ವಿಶ್ವ ಪ್ರಸಿದ್ಧಿ ಪಡೆದಿರುವ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಸೇರಿದಂತೆ ವಿವಿಧ ತಾಣಗಳಿಗೆ ನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಮೂರು ವರ್ಷಗಳ ನಂತರ ಶಾಲಾ–ಕಾಲೇಜು ವಿದ್ಯಾರ್ಥಿಗಳ ಪ್ರವಾಸಕ್ಕೂ ಅನುಮತಿ ನೀಡಿರುವುದರಿಂದ ಮಕ್ಕಳ ಕಲರವವೂ ಹೆಚ್ಚಾಗಿದೆ.

ಅಕ್ಟೋಬರ್ ಹಾಗೂ ಡಿಸೆಂಬರ್‌ ತಿಂಗಳಲ್ಲಿ ನಿತ್ಯ ಸಾವಿರಾರು ಮಕ್ಕಳು ನೂರಾರು ವಾಹನಗಳಲ್ಲಿ ಕೂಡಲಸಂಗಮ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬನಶಂಕರಿಗೆ ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರಿಂದಾಗಿ ಸಂಬಂಧಿತ ವಹಿವಾಟೂ ಚುರುಕು ಪಡೆದುಕೊಂಡಿದೆ.

ಲಾಡ್ಜಿಂಗ್, ಹೋಟೆಲ್‌, ಪ್ರವಾಸಿ ವಾಹನ ಮುಂತಾದವು ಸೇರಿದಂತೆ ಹಲವು ಜನರಿಗೆ ಉದ್ಯೋಗವಕಾಶಗಳು ಹೆಚ್ಚಿವೆ. ಕೋವಿಡ್‌ನಿಂದಾಗಿ ಪ್ರವಾಸಿಗರಲ್ಲಿದೆ ನಿರುದ್ಯೋಗಿಗಳಾಗಿದ್ದವರಿಗೆ, ನಷ್ಟಕ್ಕೆ ಈಡಾಗಿದ್ದವರಿಗೆ ಈಗ ಅನುಕೂಲ ಆಗುತ್ತಿದೆ.

ಎರಡು ವರ್ಷಗಳಿಂದ ವಸತಿ ಗೃಹಗಳಲ್ಲಿ ಜನರೇ ಇರುತ್ತಿರಲಿಲ್ಲ. ಈಗ ಬಹಳಷ್ಟು ಕೊಠಡಿಗಳು ಮುಂಗಡವಾಗಿಯೇ ಬುಕಿಂಗ್‌ ಆಗುತ್ತಿವೆ. ‘ಬಾಡಿಗೆ ಇಲ್ಲದೆ ಕಾರನ್ನು ಮನೆಯ ಮುಂದೆ ನಿಲ್ಲಿಸಬೇಕಾಗಿತ್ತು. ಈಗ ಜನರು ಪ್ರವಾಸಕ್ಕೆ ಹೊರಡುತ್ತಿರುವುದರಿಂದ ಬಾಡಿಗೆ ಸಿಗುತ್ತಿದೆ. ಸಾಲದ ಕಂತು ಪಾವತಿ, ಕುಟುಂಬ ನಿರ್ಹವಣೆ ಸರಳವಾಗಿದೆ‘ ಎನ್ನುತ್ತಾರೆ ಕಾರು ಚಾಲಕ ಶಂಕರ ದೊಡ್ಡಮನಿ.

ಬಾದಾಮಿ, ಐಹೊಳೆಯಂತಹ ಐತಿಹಾಸಿಕ ಸ್ಥಳಗಳಲ್ಲದೆ ಮುಚಖಂಡಿ ಕೆರೆ, ಸೀಮಿಕೇರಿಯ ಲಡ್ಡುಮುತ್ಯಾ ಮಠ, ಚಿಕ್ಕಸಂಗಮಕ್ಕೂ ಸ್ಥಳೀಯ ಜನರು ಭೇಟಿ ನೀಡಿ, ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಹಿಂದಿನ ವರ್ಷ 9.50 ಲಕ್ಷ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಬಾರಿ ಅವರ ಸಂಖ್ಯೆ ಈಗಾಗಲೇ 12 ಲಕ್ಷ ದಾಟಿದೆ. ಕೂಡಲಸಂಗಮದಲ್ಲಿ ಸಂಗಮನಾಥನ ದರ್ಶನ ಹಾಗೂ ಬಸವಣ್ಣನ ಐಕ್ಯಸ್ಥಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. 5 ಲಕ್ಷ ಭಕ್ತರು, ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದಾರೆ.

800ಕ್ಕೂ ಹೆಚ್ಚು ಪ್ರವಾಸಿಗರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಬಾದಾಮಿ, ಪಟ್ಟದಕಲ್ಲು ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಿತ್ಯ ಸಾವಿರಾರು ಜನರು ಭೇಟಿ ನೀಡಿ, ಶಿಲ್ಪಕಲೆಯ ಕೆತ್ತೆನ, ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ರಾಜ್ಯ ಸರ್ಕಾರವು ಪ್ರವಾಸಿ ತಾಣಗಳಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ವಸತಿ, ಪ್ರವಾಸಿ ತಾಣಗಳಲ್ಲಿನ ಕಾಮಗಾರಿಗಳ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕಿದೆ.

ಸ್ಮಾರಕ ವೀಕ್ಷಿಸಲು ಮಕ್ಕಳ, ಪ್ರವಾಸಿಗರ ದಂಡು

ಬಾದಾಮಿ : ಚಾಲುಕ್ಯರ ಐತಿಹಾಸಿಕ ಪ್ರವಾಸಿ ತಾಣಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಮಹಾಕೂಟ ಸ್ಮಾರಕಗಳನ್ನು ವೀಕ್ಷಿಸಲು ಶಾಲಾ ಮಕ್ಕಳು, ಶಿಕ್ಷಕರು ಮತ್ತು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಿದ್ದಾರೆ.

ಕೋವಿಡ್‌ ಕಾರಣದಿಂದ ಪ್ರವಾಸಿ ತಾಣಗಳನ್ನು ವೀಕ್ಷಣೆ ನಿಷೇಧಿಸಿದಾಗ ಸ್ಮಾರಕಗಳು ಬಿಕೋ ಎನ್ನುತ್ತಿದ್ದವು. ಶಿಕ್ಷಣ ಇಲಾಖೆಯಿಂದ ಕರ್ನಾಟಕ ದರ್ಶನ ಪ್ರವಾಸ ಯೋಜನೆಯು ಸ್ಥಗಿತವಾಗಿತ್ತು. ಮಕ್ಕಳು ಸ್ಮಾರಕಗಳ ವೀಕ್ಷಣೆಯಿಂದ ವಂಚಿತರಾಗಿದ್ದರು. ಪ್ರಸಕ್ತ ಸಾಲಿನಿಂದ ಮತ್ತೆ ಆರಂಭಿಸಿರುವುದರಿಂದ ಮಕ್ಕಳು ಉತ್ಸುಕರಾಗಿದ್ದಾರೆ. ನಿತ್ಯ ಸ್ಮಾರಕ ವೀಕ್ಷಿಸಲು 10ಕ್ಕೂ ಅಧಿಕ ಬಸ್ಸುಗಳು ಬರುತ್ತವೆ ಎಂದರು.

ರಾಯಚೂರ ಜಿಲ್ಲೆ ಲಿಂಗಸೂರ ತಾಲ್ಲೂಕಿನ ಮಲಕಮದಿನ್ನಿ ಗ್ರಾಮದ ಮಕ್ಕಳು ಗುಹಾಂತರ ದೇವಾಲಯ, ಭೂತನಾಥ ದೇವಾಲಯ, ಮ್ಯೂಸಿಯಂ ಮತ್ತು ಅಗಸ್ತ್ಯತೀರ್ಥ ಹೊಂಡ ವೀಕ್ಷಿಸಿ ಸಂಭ್ರಮಿಸಿದರು.

‘ನಾಲ್ಕು ಗುಹಾಂತರ ದೇವಾಲಯಗಳನ್ನು ಒಂದೇ ಕಲ್ಲಿನಲ್ಲಿ ಶಿಲ್ಪಿಗಳು ಮೂರ್ತಿಗಳನ್ನು ಕೆತ್ತಿರುವುದು ಅತ್ಯದ್ಭುತವಾಗಿದೆ’ ಎಂದು ಶಿಕ್ಷಕ ರಮೇಶ ‘ಪ್ರಜಾವಾಣಿ’ಗೆ ಹೇಳಿದರು.

ಶಿಕ್ಷಣ ಇಲಾಖೆಯಿಂದ ಮಕ್ಕಳ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸಕ್ಕೆ ಮಕ್ಕಳು ಹೊರಡುತ್ತಿದ್ದಾರೆ ಎಂದುಬಿಇಒ ಆರೀಫ್ ಬಿರಾದಾರ ಹೇಳಿದರು.

‘ಸೋಮವಾರದಿಂದ ಗುರುವಾರದವರೆಗೆ ಅಂದಾಜು 1,500 ಪ್ರವಾಸಿಗರು, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಪ್ರವಾಸಿಗರ ಸಂಖ್ಯೆ ಸೇರಿ ನಿತ್ಯ ಎರಡು ಸಾವಿರಕ್ಕೂ ಅಧಿಕವಾಗಿರುತ್ತದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿ ಮೌನೇಶ ಕುರುವತ್ತಿ ತಿಳಿಸಿದರು. 

ಗರಿಗೆದರಿದ ಪ್ರವಾಸೋದ್ಯಮ

ಕೂಡಲಸಂಗಮ: ಎರಡು ವರ್ಷ ಕೋವಿಡ್, ಒಂದು ವರ್ಷ ಪ್ರವಾಹದಿಂದ ನಲುಗಿದ ಪ್ರವಾಸೋದ್ಯಮ ಸದ್ಯ ಶಾಲಾ ಮಕ್ಕಳ ಪ್ರವಾಸದೊಂದಿಗೆ ಪುನಃ ಗರಿಗೆದರಿದೆ. ಪ್ರವಾಸೋದ್ಯಮ ನಂಬಿ ಬದುಕುತ್ತಿದ್ದ ವ್ಯಾಪಾರಿಗಳು, ಛಾಯಾಚಿತ್ರಗಾರರು, ಬೀದಿ ವ್ಯಾಪಾರಿಗಳು, ಲಾಡ್ಜ್, ಹೋಟೆಲ್‌ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿದೆ.

2018ರ ಪ್ರವಾಹ, 2020, 2021ರ ಕೋವಿಡ್ ಶಾಲಾ ಮಕ್ಕಳ ಪ್ರವಾಸಕ್ಕೆ ಅನುಮತಿ ನೀಡಿರಲಿಲ್ಡಿ ಪ್ರಸಕ್ತ ವರ್ಷ ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ತೆರಳಲು ಶಿಕ್ಷಣ ಇಲಾಖೆ ಅನುಮತಿ ನೀಡಿದ ಪರಿಣಾಮ ಮೂರು ವರ್ಷದ ಬಳಿಕ ಕೂಡಲಸಂಗಮ ಶಾಲಾ ಮಕ್ಕಳಿಂದ ಕಂಗೊಳಿಸುತ್ತಿದೆ.

ಕೂಡಲಸಂಗಮದ ಬಸವ ಧರ್ಮ ಪೀಠ ಆವರಣದಲ್ಲಿ ಅಧಿಕ ಕೊಠಡಿಗಳು ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ನಿತ್ಯ ದಾಸೋಹ ಇರುವುದರಿಂದ ಅಧಿಕ ಪ್ರವಾಸಿಗರು ಇಲ್ಲಿಯೇ ವಾಸ್ತವ್ಯ ಮಾಡುವರು.

ಸಂಗಮೇಶ್ವರ ದೇವಾಲಯ ಮುಂಭಾಗದ ವ್ಯಾಪಾರ ಮಳಿಗೆ, ಬೀದಿ ಅಂಗಡಿಯ ವ್ಯಾಪಾರಿಗಳು, ಹಣ್ಣು ಮಾರುವವರು ಡಿಸೆಂಬರ್ ತಿಂಗಳ ಶಾಲಾ ಮಕ್ಕಳ ಪ್ರವಾಸ, ಜನವರಿ ತಿಂಗಳಲ್ಲಿ ನಡೆಯುವ ಶರಣ ಮೇಳ, ಮಕರ ಸಂಕ್ರಾಂತಿ ಪುಣ್ಯ ಸ್ನಾನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರನ್ನೇ ಅವಲಂಬಿಸಿದ್ದಾರೆ. ಜನವರಿ ತಿಂಗಳಲ್ಲಿ ನಡೆಯುವ ಬಾದಾಮಿಯ ಬನಶಂಕರಿ ದೇವಿ ಜಾತ್ರೆ, ಸವದತ್ತಿ ಯಲ್ಲಮ್ಮನ ಜಾತ್ರೆಗೆ ಆಗಮಿಸುವ ಬಹುತೇಕ ಪ್ರವಾಸಿಗರು ಕೂಡಲಸಂಗಮಕ್ಕೆ ಬಂದ ಹೋಗುವರು.

ಡಿಸೆಂಬರ್, ಜನವರಿ ಎರಡು ತಿಂಗಳ ಪ್ರವಾಸೋದ್ಯಮ ಕೂಡಲಸಂಗಮದ 300 ಕ್ಕೂ ಅಧಿಕ ಮಾರಾಟ ಮಳಿಗೆ, ಬೀದಿ ವ್ಯಾಪಾರಿಗಳ ವರ್ಷದ ಬದುಕಿಗೆ ಆಸರೆಯಾಗಿದೆ. ವಾರದಿಂದ ಕೂಡಲಸಂಗಮಕ್ಕೆ ನಿತ್ಯ 5 ರಿಂದ 8 ಸಾವಿರ ಪ್ರವಾಸಿಗರು ಬರುತ್ತಿದ್ದಾರೆ.

 

ಪ್ರವಾಸಕ್ಕೆ ಮುನ್ನ ಒಂದಷ್ಟು ಸಲಹೆ

* ಚಳಿಗಾಲ ಆಗಿರುವುದರಿಂದ ಪ್ರವಾಸಕ್ಕೆ ಹೊರಡುವವರು ಆರೋಗ್ಯದ ಬಗ್ಗೆಯೂ ಎಚ್ಚರದಿಂದ ಇರಬೇಕು. ಮಕ್ಕಳಿದ್ದರೆ, ಹೆಚ್ಚಿನ ಕಾಳಜಿ ವಹಿಸಿ.

* ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಗುಳಿಗೆಗಳಲ್ಲದೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಮಧುಮೇಹ, ಬಿ.ಪಿ. ಇನ್ನಿತರ ಸಮಸ್ಯೆಗಳ ಗುಳಿಗೆ ತೆಗೆದುಕೊಂಡಿರಬೇಕು. 

*ಚಳಿಯಿಂದ ರಕ್ಷಣೆಗಾಗಿ ಸ್ವೆಟರ್‌, ಹೊದಿಕೆಗಳನ್ನು ಇಟ್ಟುಕೊಳ್ಳಿರಿ. 

*ಹೊರಡಲಿರುವ ಪ್ರವಾಸಿ ಸ್ಥಳಗಳಲ್ಲಿ ವೀಕ್ಷಿಸಬೇಕಾದ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿರಿ

* ಶಾಲಾ ಮಕ್ಕಳನ್ನು ಕರೆದುಕೊಂಡು ಹೊರಟಿದ್ದರೆ, ಮಕ್ಕಳ ಗುಂಪು ರಚಿಸಿ, ಒಂದೊಂದು ಗುಂಪಿನ ಉಸ್ತುವಾರಿ ಒಬ್ಬ ಶಿಕ್ಷಕರಿಗೆ ವಹಿಸಿ

*ರಾತ್ರಿ ವಾಸ್ತವ್ಯಕ್ಕೆ ಹೋಟೆಲ್‌ಗಳನ್ನು ಮೊದಲೇ ಕಾಯ್ದಿರಿಸಿಕೊಳ್ಳಿ

*ಊಟ, ಕುಡಿಯುವ ನೀರಿನ ಸ್ವಚ್ಛತೆ ಬಗ್ಗೆ ಎಚ್ಚರವಿರಲಿ

* ಪ್ರವಾಸೋದ್ಯಮ ಇಲಾಖೆಯಿಂದಲೇ ನೇಮಕವಾದ ಮಾರ್ಗದರ್ಶಿಗಳಿಂದ ಮಾಹಿತಿ ಪಡೆಯಿರಿ

*ಪ್ರವಾಸವು ಮನರಂಜನೆಯ ಜೊತೆಗೆ ಜ್ಞಾನವನ್ನೂ ಪಡೆಯುವಂತಿರಲಿ.

*ಪ್ರವಾಸಕ್ಕೆ ತೆಗೆದುಕೊಂಡು ಹೋಗುವ ವಾಹನ ಸುಸ್ಥಿತಿಯಲ್ಲಿರಲಿ

ಪ್ರಜಾವಾಣಿ ತಂಡ: ಬಸವರಾಜ ಹವಾಲ್ದಾರ, ಎಸ್‌.ಎಂ. ಹಿರೇಮಠ, ಶ್ರೀಧರಗೌಡರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು