ಗುರುವಾರ , ಏಪ್ರಿಲ್ 15, 2021
19 °C

ಬಾಗಲಕೋಟೆ ಡಿಸಿಸಿ ಬ್ಯಾಂಕ್: ₹5.10 ಕೋಟಿ ನಿವ್ವಳ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಲ್ಲಿನ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಈ ವರ್ಷ ₹5.10 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಜಯಕುಮಾರ ಸರನಾಯಕ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20 ನೇ ಸಾಲಿನಲ್ಲಿ 2.50,343 ರೈತರಿಗೆ ₹1133.40 ಕೋಟಿ ಬೆಳೆಸಾಲ ಹಾಗೂ 884 ರೈತರಿಗೆ ₹57.41 ಕೋಟಿ ಮಾಧ್ಯಮಿಕ ಕೃಷಿ ಸಾಲ ವಿತರಿಸಲಾಗಿದೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ರೈತರ ನೆರವಿಗೆ ನಿಂತ ಸರ್ಕಾರ, ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿತ್ತು. ಆದರೆ ಇದು ಸಾಲ ಬಾಕಿ ಉಳಿಸಿಕೊಂಡವರಿಗೆ ಮಾತ್ರ ಅನುಕೂಲವಾಗಿತ್ತು. ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿದ ರೈತರಿಗೂ ಯೋಜನೆಯ ನೆರವು ಸಿಗಲಿ ಎಂಬ ಕಾರಣಕ್ಕೆ ಬಡ್ಡಿ ಮೊತ್ತ ವಾಪಸ್ ನೀಡಲಾಗಿದ್ದು, ಬ್ಯಾಂಕ್ ಅದಕ್ಕಾಗಿ ₹2.5 ಕೋಟಿ ಭರಿಸಿದೆ ಎಂದರು.

ಕೋವಿಡ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬ್ಯಾಂಕಿನಿಂದ ₹50 ಲಕ್ಷ  ಹಾಗೂ ನೌಕರರ ಒಂದು ದಿನದ ವೇತನ ₹10 ಲಕ್ಷ ನೀಡಿರುವುದಾಗಿ ಸರನಾಯಕ ತಿಳಿಸಿದರು.

ಅನುತ್ಪಾದಕ ಆಸ್ತಿ (ಎನ್ ಪಿಎ) ಪ್ರಮಾಣ ಹೆಚ್ಚಳ..

ಬ್ಯಾಂಕಿನ ಅನುತ್ಪಾದಕ ಆಸ್ತಿಯ (ಎನ್ ಪಿಎ) ಪ್ರಮಾಣ ಈ ವರ್ಷ ಶೇ 1.01ರಷ್ಟು ಹೆಚ್ಚಳಗೊಂಡಿದೆ. 2019ರ ಮಾರ್ಚ್ 31ಕ್ಕೆ ಶೇ 2.74ರಷ್ಟಿದ್ದ ಎನ್ ಪಿಎ ಪ್ರಮಾಣ ಈ ವರ್ಷ ಶೇ 4.16ಕ್ಕೆ ಹೆಚ್ಚಳಗೊಂಡಿದೆ.

ಬಾದಾಮಿ ಶುಗರ್ಸ್ ಹಾಗೂ ಮನಾಲಿ ಶುಗರ್ಸ್ ಸಂಸ್ಥೆಯವರು ತಲಾ ₹20 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಬಾದಾಮಿ ಶುಗರ್ಸ್ ಸಂಸ್ಥೆಯನ್ನು ಬೇರೆಯವರಿಗೆ ಪರಭಾರೆ ಮಾಡಲಾಗಿದೆ. ಅವರು ₹4 ಕೋಟಿ ಪಾವತಿಸಿದ್ದಾರೆ. ಉಳಿದ ಹಣ ಕಟ್ಟಿಸಿಕೊಳ್ಳಲು ಕಾನೂನು ಹೋರಾಟ ನಡೆಸಿದ್ದೇವೆ ಎಂದರು. ಮುಧೋಳದ ರನ್ನ ಶುಗರ್ಸ್ ಸಂಸ್ಥೆಯವರು 2019ರ ಡಿಸೆಂಬರ್ ವರೆಗೆ ಸರಿಯಾಗಿ ಸಾಲ ಮರುಪಾವತಿ ಮಾಡಿದ್ದಾರೆ. ನಂತರದ ವಹಿವಾಟಿನ ಬಗ್ಗೆ ಪರಿಶೀಲಿಸಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬೆಳೆ ಸಾಲಕ್ಕಿಂತ ಔದ್ಯೋಗಿಕ ಸಾಲ ನೀಡಿಕೆ ಪ್ರಮಾಣ ಹೆಚ್ಚು!

ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಬೆಳೆಸಾಲ ₹1133.40 ಕೋಟಿ ಪಾವತಿಸಿದ್ದರೆ, ವಿವಿಧ ಔದ್ಯೋಗಿಕ ಘಟಕಗಳಿಗೆ ಅವಧಿ ಸಾಲ ಹಾಗೂ ದುಡಿಯುವ ಬಂಡವಾಳ ಸಾಲವೆಂದು ₹1140.43 ಕೋಟಿ ಸಾಲ ವಿತರಿಸಲಾಗಿದೆ. ಇದು ಬ್ಯಾಂಕ್ ಸ್ಥಾಪನೆಯ ಆಶಯಗಳಿಗೆ ವಿರುದ್ಧವಾದ ನಡೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಜಯಕುಮಾರ ಸರನಾಯಕ, ಬ್ಯಾಂಕಿನ ಸುಸ್ಥಿರ ಆರ್ಥಿಕ ನಿರ್ವಹಣೆ ಹಾಗೂ ಉಳಿವಿಗೆ ಔದ್ಯೋಗಿಕ ಘಟಕಗಳಿಗೆ ಸಾಲ ನೀಡಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.

ಬೆಳೆ ಸಾಲ ಕೊಟ್ಟರೆ ವೆಚ್ಚಗಳನ್ನೆಲ್ಲಾ ಕಳೆದು 100 ರೂಪಾಯಿಗೆ 6 ಪೈಸೆ ಮಾತ್ರ ಉಳಿಯುತ್ತದೆ. ಮಾಧ್ಯಮಿಕ ಕೃಷಿ ಸಾಲದಿಂದ ಆದಾಯದ ಪ್ರಮಾಣ ಋಣಾತ್ಮಕವಾಗಿರುತ್ತದೆ. ಹೀಗಾಗಿ ಔದ್ಯೋಗಿಕ ಸಾಲ ನೀಡಿದರೆ ಮಾತ್ರ ಬ್ಯಾಂಕಿನ ಅಸ್ತಿತ್ವದ ಉಳಿಯಲು ಸಾಧ್ಯ ಎಂದರು.

ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕಿನ ನಿಯಮಾವಳಿಗಳಲ್ಲಿ ಅವಕಾಶವಿದೆ. ಆದರೆ ಹೊರ ಜಿಲ್ಲೆಗಳ ಕೃಷಿಕರಿಗೆ ಸಾಲ ನೀಡಲು ಅವಕಾಶವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು