ಭಾನುವಾರ, ಅಕ್ಟೋಬರ್ 2, 2022
19 °C
ಎಮ್ಮೆಗಳ ಸಂಖ್ಯೆ ಇಳಿಮುಖ; ಕೋಳಿಗಳ ಸಂಖ್ಯೆ ಮೂರು ಪಟ್ಟು ಅಧಿಕ

ಆಹಾರಧಾನ್ಯಗಳಿಂದ ವಾಣಿಜ್ಯ ಬೆಳೆಯತ್ತ ಹೊರಳಿದ ರೈತ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಹೊಸ ಜಿಲ್ಲೆ ರಚನೆಯಾದ 25 ವರ್ಷಗಳಲ್ಲಿ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭೂ ಹಿಡುವಳಿಯ ಪ್ರಮಾಣ, ಜಾನುವಾರುಗಳ ಸಂಖ್ಯೆ ಕುಸಿತವಾಗಿದೆ. ಯಂತ್ರಗಳ ಬಳಕೆ, ನೀರಾವರಿ ಪ್ರದೇಶದ ಹೆಚ್ಚಳದಿಂದ ಆಹಾರ ಧಾನ್ಯಗಳಿಂದ ವಾಣಿಜ್ಯ ಬೆಳೆಗಳತ್ತ ಜಿಲ್ಲೆಯ ರೈತರು ಮುಖ ಮಾಡಿದ್ದಾರೆ.

ಅವಿಭಜಿತ ವಿಜಯಪುರ ಜಿಲ್ಲೆಯು ಬಿಳಿಜೋಳ ಬೆಳೆಯುವುದಕ್ಕೆ ಹೆಸರುವಾಸಿಯಾಗಿತ್ತು. ರಾಜ್ಯದೆಲ್ಲೆಡೆ ಇಲ್ಲಿ ಬೆಳೆದ ಜೋಳಕ್ಕೆ ಬೇಡಿಕೆಯಿತ್ತು. ಜಿಲ್ಲೆ ವಿಭಜನೆಯ ಆರಂಭದ ವರ್ಷಗಳಲ್ಲೂ ಜಿಲ್ಲೆಯಲ್ಲಿ 1.64 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿಳಿಜೋಳ ಬೆಳೆಯುತ್ತಿದ್ದರು. ಈಗ ಅದರ ಪ್ರಮಾಣ ಅರ್ಧಕ್ಕೂ ಕಡಿಮೆಯಾಗಿದೆ.

ಹಬ್ಬ, ಮದುವೆ, ವಿವಿಧ ಸಮಾರಂಭಗಳಲ್ಲಿ ಸಿದ್ಧವಾಗುವ ಸಜ್ಜೆ ರೊಟ್ಟಿಗೂ ಅಧಿಕ ಬೇಡಿಕೆಯಿದೆ. ಸಜ್ಜೆ ಬೆಳೆಯುವ ಪ್ರದೇಶದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಮೆಕ್ಕೆ ಜೋಳ ಪ್ರದೇಶವು 43 ಸಾವಿರದಿಂದ 63 ಸಾವಿರಕ್ಕೆ ಹೆಚ್ಚಳವಾಗಿದೆ. ಒಟ್ಟು ಆಹಾರ ಧಾನ್ಯಗಳನ್ನು 3,26,588 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಈಗ 1,73,421 ಹೆಕ್ಟೇರ್‌ಗೆ ಇಳಿದಿದೆ. ಆ ಪ್ರದೇಶಗಳಲ್ಲಿ ಈಗ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಕಬ್ಬು 49 ದಿಂದ 82 ಸಾವಿರ ಹೆಕ್ಟೇರ್‌ಗೆ ಹೆಚ್ಚಾಗಿದೆ. ಪರಿಣಾಮ ಸಕ್ಕರೆ ಕಾರ್ಖಾನೆಗಳ ಸಂಖ್ಯೆಯು 14ಕ್ಕೆ ಹೆಚ್ಚಾಗಿದೆ. ಹಣ್ಣು ಹಾಗೂ ತರಕಾರಿ ಬೆಳೆಯುವ ಪ್ರದೇಶ ಹೆಚ್ಚಾಗಿದೆ.

ಕುಟುಂಬಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಭೂ ಹಿಡುವಳಿ ಪ್ರಮಾಣ ಕಡಿಮೆಯಾಗಿದೆ. ಅತಿ ಸಣ್ಣ ರೈತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಸಣ್ಣ ರೈತರ ಸಂಖ್ಯೆಯೂ ಹೆಚ್ಚಾಗಿದೆ. ತುಂಡು ಭೂಮಿಗಳಲ್ಲಿ ಕೃಷಿ ಮಾಡಲಾಗದೆ ಹಲವಾರು ಜನರು ಕೃಷಿಯನ್ನೇ ತ್ಯಜಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದ ಮೇಲೂ ರೈತರು ಸಂಕಷ್ಟಗಳಿಗೆ ಮುಕ್ತಿ ಸಿಕ್ಕಿಲ್ಲ. ಸ್ವಾವಲಂಬಿಯಾಗಿದ್ದ ರೈತರ ಬದುಕು ಪರಾವಲಂಬಿಯಾಗಿದೆ. ರಸಗೊಬ್ಬರಕ್ಕಾಗಿ ಪರದಾಡುವುದು ಇದ್ದೇ ಇದೆ.

ಆಧುನಿಕ ತಂತ್ರಜ್ಞಾನದ ನಡುವೆಯೂ ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಲು ರೈತರಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಹಲವಾರು ಜನರು ಕೃಷಿಯನ್ನು ತಮ್ಮ ತಲೆಮಾರಿಗೆ ಕೊನೆಗೊಳಿಸಿ, ಮಕ್ಕಳನ್ನು ಉದ್ಯೋಗಕ್ಕಾಗಿ ನಗರಗಳಿಗೆ ಕಳುಹಿಸುತ್ತಿದ್ದಾರೆ.

ಪಶುಗಳು ರೈತರ ಒಡನಾಡಿಗಳು. ಕೃಷಿಗೆ ಪೂರಕವಾಗಿ ವಿವಿಧ ಜಾನುವಾರುಗಳನ್ನು ಸಾಕುವ ಮೂಲಕ ರೈತರು ಆದಾಯ ಗಳಿಸುತ್ತಿದ್ದರು. ಇದರಿಂದಾಗಿ ಕೃಷಿ ಕೈಕೊಟ್ಟರೂ ಜಾನುವಾರುಗಳು ಕೈಹಿಡಿಯುತ್ತಿದ್ದವು.

ರೈತರ ಮನೆಯಲ್ಲಿ ಒಂದೆರಡು ಹಸು, ಎಮ್ಮೆ ಇದ್ದೇ ಇರುತ್ತಿದ್ದವು. ಜತೆಗೆ ಕುರಿ, ಆಡು, ಕೋಳಿಗಳನ್ನು ಸಾಕುತ್ತಿದ್ದರು. ಇದರಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಹೊಲಕ್ಕೆ ಉತ್ತಮ ಗೊಬ್ಬರ ದೊರೆಯುತ್ತಿತ್ತು. ಜತೆಗೆ ಮನೆಯವರೆಲ್ಲ ಹಾಲು, ಮೊಸರು ಉಂಡ ಮೇಲೆ ಅದರಿಂದ ನಾಲ್ಕಾರು ರೂಪಾಯಿಯೂ ಜೇಬು ಸೇರುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಜಾನುವಾರುಗಳು ರೈತರ ಮನೆಯಿಂದ ಕಾಣೆಯಾಗಿವೆ. ಪರಿಣಾರ ರಸಗೊಬ್ಬರಕ್ಕಾಗಿ ರೈತರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಕುರಿ, ಆಡುಗಳ ಸಂಖ್ಯೆ ಹೆಚ್ಚಿದೆ. ಗುಳೇದಗುಡ್ಡದಲ್ಲಿ ಕೋಳಿ ಫಾರ್ಮ್‌ಗಳು ತಲೆ ಎತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಕೋಳಿಗಳ ಸಂಖ್ಯೆಯೂ ಮೂರು ಪಟ್ಟು ಹೆಚ್ಚಿದೆ.

ಬಾಗಲಕೋಟೆ ಜಿಲ್ಲೆಯ ಕೃಷಿ ವಿವರ

ಕೃಷಿ ವಿವರ;1997–98;2022 (ವರ್ಷ)
ಅತಿ ಸಣ್ಣ ರೈತರು;25,669;74,047
ಸಣ್ಣ ರೈತರು;52,106;84,788
ಬೀಳುಭೂಮಿ;54,696;28,296 (ಹೆಕ್ಟೇರ್)
ಎಣ್ಣೆಕಾಳು;1,29,928;46,358 (ಹೆಕ್ಟೇರ್)
ಜೋಳ;1,64,903;76,673 (ಹೆಕ್ಟೇರ್)

ಬಾಗಲಕೋಟೆ ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ

ಜಾನುವಾರು;1997–98;2022 (ವರ್ಷ)

ಎಮ್ಮೆಗಳು;4,64,940;2,34,340

ಕುರಿಗಳು;3,39,366;6,22,856

ಆಡುಗಳು;2,45,042;3,83,926

ಕೋಳಿಗಳು;5,43,335;17,03,285

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು