ಬಾಗಲಕೋಟೆ: ನವನಗರದಲ್ಲಿ ಯುವಕರ ಮಧ್ಯ ಉಂಟಾದ ಗಲಾಟೆಯಲ್ಲಿ ಅದೇ ಮಾರ್ಗದಲ್ಲಿ ಹೊರಟಿದ್ದ ಮೌಲ್ವಿ ಒಬ್ಬರ ಮೇಲೆ ಯುವಕರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಭಾನುವಾರ ರಾತ್ರಿ ನವನಗರದ ಸೆಕ್ಟರ್ ನಂಬರ್ 4 ರಲ್ಲಿ ಯುವಕರ ನಡುವೆ ಗಲಾಟೆ ನಡೆದಿದೆ. ಸ್ಕೂಟಿಯಲ್ಲಿ ಹೊರಟಿದ್ದ ಮೌಲ್ವಿ ಮೇಲೆ ಹಲ್ಲೆ ಮಾಡಿದ್ದು, ಕಾರಣ ತಿಳಿದು ಬಂದಿಲ್ಲ.
ಮೌಲ್ವಿ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಯುವಕರು ನವನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ತಪ್ಪಿಸ್ಥರ ಬಂಧನಕ್ಕೆ ಒತ್ತಾಯಿಸಿದರು.
ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕಾರ್ತಿಕ್ ಹಾಗೂ ಪ್ರದೀಪ ಎಂಬ ಯುವಕರನ್ನು ಬಂಧಿಸಿದ್ದಾರೆ.
ಹೆಚ್ಚುವರಿ ಎಸ್ಪಿಗಳಾದ ಮಹಾಂತೇಶ್ವರ ಜಿದ್ದಿ, ಪ್ರಸನ್ನ ದೇಸಾಯಿ ನವನಗರ ಠಾಣೆ ಬಳಿ ಸೇರಿದ್ದ ಜನರಿಗೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಜನರು ತೆರಳಿದರು.
ಮುಂಜಾಗ್ರತಾ ಕ್ರಮವಾಗಿ ನವನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.