ಬುಧವಾರ, ಜನವರಿ 22, 2020
20 °C
ಮುಧೋಳ ಆಸ್ಪತ್ರೆಯಲ್ಲಿ ಚಿಕಿತ್ಸೆ: ಎಲ್ಲರೂ ಅಪಾಯದಿಂದ ಪಾರು

ಮುಧೋಳ| ಬಿಸಿಯೂಟ ಸೇವಿಸಿ 66 ಬಾಲಕಿಯರು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಧೋಳ: ತಾಲ್ಲೂಕಿನ ಬೆಳಗಲಿ ಪಟ್ಟಣದ ಕನ್ನಡ ಹೆಣ್ಣುಮಕ್ಕಳ ಮಾದರಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಬಿಸಿಯೂಟ ಸೇವಿಸಿದ 66 ಬಾಲಕಿಯರು ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಮೂರು ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡಿದ್ದಾರೆ.

ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಆ್ಯಂಬುಲೆನ್ಸ್ ಮೂಲಕ ಎಲ್ಲರನ್ನು ಮುಧೋಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಅಪಾಯದಿಂದ ಪಾರಾಗಿದ್ದಾರೆ. ಸಂಜೆ ವೇಳೆಗೆ ಎಲ್ಲ ಮಕ್ಕಳನ್ನೂ ಮನೆಗೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 299 ವಿದ್ಯಾರ್ಥಿಗಳಿದ್ದಾರೆ. ಮೊದಲು 5ನೇ ತರಗತಿವರೆಗಿನ ಮಕ್ಕಳಿಗೆ ಊಟ ನೀಡಲಾಗಿದೆ ಇವರು ಊಟ ಮಾಡಿದ ತಕ್ಷಣ ಅಸ್ವಸ್ಥರಾದ ಕಾರಣ ಉಳಿದ ಮಕ್ಕಳಿಗೆ ಊಟ ನೀಡಲಾಗಿಲ್ಲ. ಇದರಿಂದ ಹೆಚ್ಚಿನ ಮಕ್ಕಳಿಗೆ ತೊಂದರೆಯಾಗಿಲ್ಲ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಹಾಂತೇಶ ನರಸನಗೌಡ್ರ ಹೇಳಿದರು.

ಅಸ್ವಸ್ಥ ಮಕ್ಕಳನ್ನು ಮುಧೋಳ ಆಸ್ಪತ್ರೆಗೆ ದಾಖಲು ಮಾಡುತ್ತಿದ್ದಂತೆಯೇ ಸುದ್ದಿ ತಿಳಿದ ಪಾಲಕರು ಹಾಗೂ ಸಂಬಂಧಿಗಳು ಆಸ್ಪತ್ರೆಗೆ ಧಾವಿಸಿದರು. ಅವರನ್ನು ನಿಯಂತ್ರಿಸುವುದರಲ್ಲಿ ಪೊಲೀಸರು ಹೈರಾಣಾದರು.

ಮುಖ್ಯ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಶಿಫಾರಸು: ಶಾಲೆಯ ಮುಖ್ಯ ಶಿಕ್ಷಕಿ ಎಸ್. ಎಲ್. ಕಠಾರೆ ಅವರನ್ನು ಅಮಾನತು ಮಾಡಲು ಡಿಡಿಪಿಐ ಅವರಿಗೆ ವರದಿ ಸಲ್ಲಿಸಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲ ದೇವಲಗಾಂವಿ ತಿಳಿಸಿದ್ದಾರೆ.

ಬಿಸಿ ಊಟದ ಸಿಬ್ಬಂದಿಯನ್ನು ಕೆಲಸದಿಂದ ತಗೆದುಹಾಕಲಾಗಿದೆ. ಹೊಸ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ದಾಸರ ತಿಳಿಸಿದ್ದಾರೆ.

’ಮಕ್ಕಳಿಗೆ ನೀಡಿದ ಊಟವನ್ನು ಪರೀಕ್ಷೆ ಮಾಡಲು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಯ ನಂತರವಷ್ಟೇರ ಕಾರಣ ಗೊತ್ತಾಗಲಿದೆ‘ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು