ಮಂಗಳವಾರ, ಜೂನ್ 22, 2021
28 °C
ಬಾಗಲಕೋಟೆ: ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಗೆ ಚಾಲನೆ

ಬಾಗಲಕೋಟೆ: ಕಿಲಾರಿ, ಹಳ್ಳಿಕಾರ ಹೋರಿಗಳ ಸೊಬಗು

ಅಭಿಷೇಕ ಎನ್.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮೋಟಗಿ ಬಸವೇಶ್ವರ ಜಾತ್ರೆ ನಿಮಿತ್ತ ಸಮೀಪದ ಕೇಸನೂರ ಮಾರುಕಟ್ಟೆ ಪ್ರಾಂಗಣದ ಸುತ್ತಲೂ ಮಂಗಳವಾರ ಜಾನುವಾರು ಜಾತ್ರೆಗೆ ಚಾಲನೆ ದೊರೆತಿದೆ. ಫೆಬ್ರುವರಿ 15ರವರೆಗೆ ಜಾತ್ರೆ ನಡೆಯಲಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಜಾಗದಲ್ಲಿ ನೆರೆದಿರುವ ದನಗಳ ಪರಿಷೆಗೆ ದೂರದ ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದವರು ಹಾಗೂ ವಿಜಯಪುರ, ಗದಗ, ಬೆಳಗಾವಿ, ರಾಯಚೂರ, ಬಳ್ಳಾರಿ ಜಿಲ್ಲೆಗಳ ರೈತರು ಜಾನುವಾರುಗಳನ್ನು ಜಾತ್ರೆಗೆ ತಂದಿದ್ದಾರೆ.

ಕಿಲಾರಿ, ಹಳ್ಳಿಕಾರ, ಜವಾರಿ ಹೋರಿ ಹಾಗೂ ಆಕಳುಗಳಿಗೆ ಈ ಜಾತ್ರೆ ಪ್ರಸಿದ್ಧಿ ಪಡೆದಿದೆ. ಮೊದಲ ದಿನ ಅಷ್ಟೊಂದು ದಟ್ಟನೆ ಕಂಡುಬರಲಿಲ್ಲ. ಭಾರತ ಹುಣ್ಣಿಮೆ ಮರುದಿನ ದಿನ ಕರಿ ಇರುವುದರಿಂದ ರೈತರು ಜಾತ್ರೆ ಪ್ರಾರಂಭದ ದಿನ ತಮ್ಮೂರಿನಿಂದ ಹೊರಡುತ್ತಾರೆ. ಹೀಗಾಗಿ ಎರಡನೇ ದಿನ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ರೈತ ಪ್ರವೀಣಗೌಡ ಬಿರಾದಾರ ತಿಳಿಸಿದರು.

ಗೆಜ್ಜಿಪಟ್ಟಾ, ಮೂಗದಾನ ಮಾರಾಟ: ಜಾತ್ರೆಯಲ್ಲಿ ಕೇವಲ ರಾಸುಗಳ ಮಾರಾಟ, ಖರೀದಿಯಷ್ಟೇ ಅಲ್ಲದೇ ಜಾನುವಾರುಗೆ ಉಪಯೋಗಿಸುವ ಗೆಜ್ಜಿಪಟ್ಟಾ, ಮೂಗದಾನ, ಹಿಡಿಹಗ್ಗ, ಮಗಡಾ, ಜತಿಗಿ ಹಾಗೂ ಸವಣಿ ಅಂಗಡಿಗಳು ಜಾತ್ರೆಗೆ ಲಗ್ಗೆ ಇಟ್ಟಿವೆ.

ಐದು ದಿನಗಳಲ್ಲಿ ಲಕ್ಷಾಂತರ ರೂಪಾಯಿ ಮೊತ್ತದ ವಹಿವಾಟು ನಡೆಯುತ್ತದೆ. ಆದರೆ, ಈ ವರ್ಷ ನದಿ ದಂಡೆಯ ಪೀಕು ಪ್ರವಾಹಕ್ಕೆ ಸಿಲುಕಿ ಹಾಳಾಗಿರುವುದರಿಂದ ಮಹಾರಾಷ್ಟ್ರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರ ಮೊಗದಲ್ಲಿ ಜಾತ್ರೆಯ ಸಂಭ್ರಮ ಕಳೆಗುಂದಿದೆ. ಕಳೆದ ವರ್ಷದಷ್ಟು ವ್ಯಾಪಾರವಾದರೂ ಆಗತ್ತೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ ಎಂದು ಜಾನುವಾರುಗಳ ಶೃಂಗಾರ ಸಾಮಗ್ರಿ ಅಂಗಡಿಯ ಮಾಲೀಕ ಅಮೀರ ನಾಲಬಂದ ಹೇಳುತ್ತಾರೆ.

ನೆರಳಿನ ವ್ಯವಸ್ಥೆ ಮಾಡಿ: ಜಾತ್ರೆಯ ಹೊಣೆ ಹೊತ್ತಿರುವ ಎಪಿಎಂಸಿ ಅಧಿಕಾರಿಗಳು, ಜಾನುವಾರು ಹಾಗೂ ರೈತರಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆ. ಇನ್ನಷ್ಟು ನೆರಳಿನ ವ್ಯವಸ್ಥೆ ಮಾಡಬೇಕು ಎಂಬುದು ರೈತರ ಆಗ್ರಹ. ಕೆಲವು ದೊಡ್ಡ ರೈತರು ತಮ್ಮ ಎತ್ತುಗಳಿಗೆ ಸ್ವಂತ ಖರ್ಚಿನಲ್ಲಿ ನೆರಳಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಉತ್ತಮ ಎತ್ತುಗಳಿಗೆ ಬಂಗಾರದ ಪದಕ!
ಜಾತ್ರೆಯಲ್ಲಿ ಪಾಲ್ಗೊಳ್ಳುವ ಉತ್ತಮ ಎತ್ತುಗಳ ಜೋಡಿಗೆ ಈ ವರ್ಷ ಬಾಗಲಕೋಟೆಯ ರೈತ ಹನಮಂತಪ್ಪ ಯಮನಾಳ ಐದು ಗ್ರಾಂ ಬಂಗಾರದ ಪದಕ ಹಾಗೂ ಜೋಡು ಜೂಲಾ ಬಹುಮಾನ ನೀಡುತ್ತಿದ್ದಾರೆ. ಜೊತೆಗೆ ಉತ್ತಮ ಹಾಲಲ್ಲು, ಎರಡು ಹಲ್ಲು, ನಾಲ್ಕು ಹಲ್ಲು ಹಾಗೂ ಆರು ಹಲ್ಲಿನ ಹೋರಿ, ಜೋಡು ಎತ್ತುಗಳಿಗೆ, ಕಿಲಾರಿ ಆಕಳಿಗೆ ಪ್ರಥಮ ಬಹುಮಾನ 20 ತೊಲ ಬೆಳ್ಳಿಯ ಪದಕ, ದ್ವಿತೀಯ ಸ್ಥಾನಕ್ಕೆ 15 ತೊಲ ಹಾಗೂ ತೃತೀಯ ಸ್ಥಾನಕ್ಕೆ 10 ತೊಲ ಬೆಳ್ಳಿ ಪದಕ ನೀಡಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು