ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದತ್ತ ಸುಡುಗಾಡು ಸಿದ್ದರ ಕಲೆ

ಸೌಲಭ್ಯ ವಂಚಿತ ಅಲೆಮಾರಿ ಸಮುದಾಯ: ಯುವಕರು ಉದ್ಯೋಗದತ್ತ ಆಸಕ್ತಿ
ಎಸ್.ಎಂ. ಹಿರೇಮಠ
Published 24 ಮಾರ್ಚ್ 2024, 6:08 IST
Last Updated 24 ಮಾರ್ಚ್ 2024, 6:08 IST
ಅಕ್ಷರ ಗಾತ್ರ

ಬಾದಾಮಿ: ಐತಿಹಾಸಿಕ ಪ್ರವಾಸಿ ತಾಣದ ಮಾರುಕಟ್ಟೆಯಲ್ಲಿ ಬುಧವಾರ ಸುಡುಗಾಡಸಿದ್ದರೊಬ್ಬರು ತಮ್ಮ ಕೈಚಳದ ಪ್ರದರ್ಶನ ಮೂಲಕ ಜನರನ್ನು ಅಚ್ಚರಿಗೊಳಿಸಿದರು.

ನಾಲ್ಕೈದು ದಶಕಗಳ ಹಿಂದೆ ಸುಡುಗಾಡಸಿದ್ದರು ಮನೆ ಮನೆ ಸಂಚರಿಸುತ್ತಿದ್ದರು. ಇವರು ಮನೆ ಮುಂದೆ ನಿಂತರೆ ಸಾಕು ಮಕ್ಕಳು ಮನೆಮಂದಿ ಗುಂಪು ಗುಂಪಾಗಿ ಸೇರುತ್ತಿದ್ದರು. ತಮ್ಮ ಕಲೆಯನ್ನು ಪ್ರದರ್ಶಿಸಿ ಧಾನ್ಯವನ್ನು ಪಡೆಯುತ್ತಿದ್ದರು. ಇದೊಂದು ಅಲೆಮಾರಿ ಸಮುದಾಯವಾಗಿದೆ.

ಸುಡುಗಾಡಿನಲ್ಲಿಯೇ ವಾಸವಾಗಿ ಮಂತ್ರವಿದ್ಯೆಯನ್ನು ಕಲಿತು ತಮ್ಮ ವಿದ್ಯೆಯನ್ನು ಕೈಚಳಕದ ಮನರಂಜನೆ ಮೂಲಕ ಮನೆ ಮನೆಗೆ ಸಂಚರಿಸಿ ಪ್ರದರ್ಶಿಸುತ್ತಿದ್ದರು.

ಬಣ್ಣ ಬಣ್ಣದ ವೇಷವನ್ನು ಧರಿಸಿಕೊಂಡು, ತಲೆಗೆ ಪೇಟ ಮತ್ತು ಮುಖಕ್ಕೆ ವಿಭೂತಿ, ಕುಂಕುಮ ಹಚ್ಚಿಕೊಂಡು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಒಂದು ಕೈಯಲ್ಲಿ ಕೋಲು, ಶಂಖ ಮತ್ತೊಂದು ಕೈಯಲ್ಲಿ ಜಾಗಟೆಯನ್ನು ಹಿಡಿದುಕೊಂಡು ಸಂಚರಿಸುವರು.

ಬಾಯಿಯಲ್ಲಿ ಲಿಂಬೆಹಣ್ಣು, ಮತ್ತು ಕಲ್ಲುಗಳನ್ನು ನುಂಗುವುದು. ಮತ್ತೆ ಒಂದೊಂದಾಗಿ ತೆಗೆಯುವುದು. ಕೈಯಲ್ಲಿ ಚೇಳನ್ನು ಬರಿಸುವುದು. ಚೀಲದಲ್ಲಿ ಗೊಂಬೆಯ ಇಂಚರವನ್ನು ಹೊರಡಿಸಿ ಜನರನ್ನು ಅಚ್ಚರಿಗೊಳಿಸುವ ಕಲೆಯನ್ನು ಪ್ರದರ್ಶಿಸುವರು.

’ವಿಜ್ಞಾನ ಯುಗದಲ್ಲಿ ಕಂಪ್ಯೂಟರ್ ಮತ್ತು ಮೊಬೈಲ್ ಬಂದ ಮೇಲೆ ಪ್ರಾಚೀನ ಕಲೆಗಳೆಲ್ಲ ಮಾಯವಾಗುತ್ತಿದೆ. ನಾವೆಲ್ಲ ಚಿಕ್ಕವರಿದ್ದಾಗ ಸುಡುಗಾಡು ಸಿದ್ಧರು ಬಹಳಾ ಮಂದಿ ಬರುತ್ತಿದ್ದರು. ಇದೇ ಮನರಂಜನೆಯಾಗಿತ್ತು ’ ಎಂದು ಗುರುಸಿದ್ದಪ್ಪ ಚೌಧರಿ ಹೇಳಿದರು.

ಬಾಗಲಕೋಟೆ ತಾಲ್ಲೂಕಿನ ಶಿರೂರ ಗ್ರಾಮದ ಯಲಗುರೇಶಪ್ಪ ಸುಡುಗಾಡುಸಿದ್ಧನ ವೇಷವನ್ನು ಧರಿಸಿಕೊಂಡು ಐತಿಹಾಸಿಕ ಪಟ್ಟಣದ ಮಾರುಕಟ್ಟೆಯಲ್ಲಿ ಸಂಚರಿಸಿ ಶಂಖವನ್ನು ಊದುತ್ತ ಕೈಯಲ್ಲಿ ಜಾಗಟೆ ನುಡಿಸುತ್ತ ಸಾಗುತ್ತಿರುವುದು ಕಂಡು ಬಂದಿತು.

ಅವರನ್ನು ಪತ್ರಿಕೆ ಮಾತನಾಡಿಸಿದಾಗ ‘ ನಾನು, ನಮ್ಮಪ್ಪ ಮಹಾದೇವಪ್ಪ ಮತ್ತು ಅಜ್ಜ ದ್ಯಾವಪ್ಪನ ಕಾಲದಿಂದ ಮೂರು ತಲೆಮಾರಿನಿಂದ ಊರೂರು ಅಡ್ಡಾಡುತ್ತ ಕಲೆಯನ್ನು ಜನರಿಗೆ ಕೊಡತೀವಿ. ಆದರ ಈಗ ಕೈಯಾಗ ಮೊಬೈಲ್ ಬಂದಾವರಿ ನಮ್ಮ ಆಟ ಯಾರು ನೋಡಬೇಕ ಈಗ’ ಎಂದು ಯಲಗುರೇಶ ಅಳಲನ್ನು ವ್ಯಕ್ತಪಡಿಸಿದರು.

‘ನಮಗ ಸರ್ಕಾರದ ಯಾವ ಸವಲತ್ತು ಯಾವ ಸಿಕ್ಕಿಲ್ಲ. ಯಾರನ್ನು ಕೇಳಬೇಕು ನಮಗ ಗೊತ್ತಿಲ್ಲ. ಊರಾಗ ಜನತಾ ಮನಿ ಬಂದಿಲ್ಲ. ಹೊಲಾನೂ ಇಲ್ಲರಿ. ಹೊಟ್ಟಿ ಸಲುವಾಗಿ ಊರು ಊರು ತಿರಗಿಕೊಂತ ಭಿಕ್ಷಾಟನೆ ಕಾಯಕ ಮಾಡತೀವಿ ಇದರಾಗ ಜೀವನಾ ನಡದೈತಿ. ಒಬ್ಬ ಮಗ ದುಡಿಯಾಕ ಹೊಕ್ಕಾನ ಇನ್ನೊಬ್ಬ ಮಗ ಸಾಲಿ ಕಲಿತಾನ ನನ್ನ ತಲಿಲೇ ಸುಡುಗಾಡು ಸಿದ್ಧರ ಆಟ ಮೂಗೀತ್ರಿ ´ ಎಂದು ನೋವಿನಿಂದ ಹೇಳಿದರು.

ಪ್ರಾಚೀನ ಕಲೆಯ ಕಲಾವಿದರಿಗೆ ಪ್ರೋತ್ಸಾಹಿಸಿ ಶಾಶ್ವತ ಸೂರಿಲ್ಲದೇ ಅಲೆಮಾರಿ ಸಮುದಾಯ ಸರ್ಕಾರದ ಸೌಲಭ್ಯಗಳಿಗೆ ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT