ಗುರುವಾರ , ಜನವರಿ 23, 2020
22 °C
ಹಿರಿಯರ ಕನಸು ಭಗ್ನಗೊಳಿಸಿದ 54 ವರ್ಷಗಳ ವಯೋಮಿತಿ

ಬಾಗಲಕೋಟೆ: ಹೈಕಮಾಂಡ್‌ಗೆ ಆರು ಮಂದಿ ಆಕಾಂಕ್ಷಿಗಳ ಪಟ್ಟಿ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆರು ಮಂದಿ ಆಕಾಂಕ್ಷಿಗಳ ಹೆಸರು ಅಂತಿಮಗೊಂಡಿದೆ. ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆ ಪಟ್ಟಿ ಸಿದ್ಧಗೊಳಿಸಿದ್ದು, ಚೆಂಡು ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಡಿಸೆಂಬರ್ 20ರಂದು ನೂತನ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ. 

ಬಾದಾಮಿ ನಗರ ಘಟಕದ ಹಿಂದಿನ ಅಧ್ಯಕ್ಷ ಜಾಲಿಹಾಳದ ಶಾಂತಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ,  ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮಮದಾಪುರ, ಬಾಗಲಕೋಟೆ ನಗರ ಘಟಕದ ಹಿಂದಿನ ಅಧ್ಯಕ್ಷ ರಾಜು ನಾಯ್ಕರ ಹಾಗೂ ಈ ಹಿಂದೆ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಗಲಗಲಿಯ ಮೋಹನ ಜಾಧವ ಹಾಗೂ ವಕೀಲರೂ ಆದ ಹಿಂದಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕೋಲಕಾರ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಸಂಘಟನಾ ಚಾತುರ್ಯ, ಸಾರ್ವಜನಿಕರೊಂದಿಗೆ ಸಂಪರ್ಕ, ಕಾರ್ಯಕರ್ತರೊಂದಿಗಿನ ಒಡನಾಟ, ಪಕ್ಷ ಹಾಗೂ ಸಂಘದ ನಡುವೆ ಸಮನ್ವಯತೆಯನ್ನು ಸಮರ್ಥವಾಗಿ ನಿಭಾಯಿಸುವವರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲು ಕೋರ್‌ ಕಮಿಟಿ ಸಭೆ ನಿರ್ಧರಿಸಿತು. ಪಕ್ಷದ ಪರವಾಗಿ ಸಭೆಗೆ ವೀಕ್ಷಕರಾಗಿ ಬಂದಿದ್ದ ದಾವಣಗೆರೆಯ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್.ಶಿವಯೋಗಿಸ್ವಾಮಿ ಆಕಾಂಕ್ಷಿಗಳ ಪಟ್ಟಿಯನ್ನು ಕೊಂಡೊಯ್ದರು.

ಅಡ್ಡಿಯಾದ ವಯೋಮಿತಿ: ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿತ್ತು. ಆದರೆ 54 ವರ್ಷದೊಳಗಿನವರಿಗೆ ಮಾತ್ರ ಅವಕಾಶ ಎಂಬ ನಿಯಮ ಹಲವು ಹಿರಿಯರನ್ನು ನಿರಾಶೆಗೊಳಿಸಿತು. ಜೊತೆಗೆ ಆಕಾಂಕ್ಷಿಗಳ ವಿದ್ಯಾರ್ಹತೆಯನ್ನೂ ಗಣನೆಗೆ ತೆಗೆದುಕೊಳ್ಳಲಾಯಿತು ಎಂದು ತಿಳಿದುಬಂದಿದೆ.

ಪಕ್ಷದ ಹಿರಿಯ ಮುಖಂಡರಾದ ಯಲ್ಲಪ್ಪ ಬೆಂಡಿಗೇರಿ, ಮುಧೋಳ ಗ್ರಾಮೀಣ ಘಟಕದ ಹಿಂದಿನ ಅಧ್ಯಕ್ಷ ಬಿ.ಎಚ್. ಪಂಚಗಾವಿ, ಮಾಜಿ ಶಾಸಕರಾದ ರಾಜಶೇಖರ ಶೀಲವಂತರ, ಶ್ರೀಕಾಂತ ಕುಲಕರ್ಣಿ, ಎಂ.ಕೆ.ಪಟ್ಟಣಶೆಟ್ಟಿ, ನಾರಾಯಣ ಸಾ ಭಾಂಡಗೆ ಹಾಗೂ ಪಿ.ಎಚ್.ಪೂಜಾರ ಹಾಗೂ ಮುಖಂಡ ರಾಜು ರೇವಣಕರ ಅವರ ಹೆಸರು ಕೇಳಿಬಂದಿತ್ತು. ಪಿ.ಎಚ್.ಪೂಜಾರ ಹಾಗೂ ರಾಜು ರೇವಣಕರ ನಾವು ಆಕಾಂಕ್ಷಿಗಳಲ್ಲ ಎಂದು ಸಭೆಗೆ ಮುನ್ನವೇ ಸ್ಪಷ್ಟಪಡಿಸಿದರು.

ಶಾಂತಗೌಡ ಪಾಟೀಲ, ಹಣಮಂತ ನಿರಾಣಿ ಹಾಗೂ ಮಹಾಂತೇಶ ಮಮದಾಪುರ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೆ, ರಾಜು ನಾಯ್ಕರ ವಾಲ್ಮೀಕಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು. ಮೋಹನ ಜಾಧವ, ಮಹಾಂತೇಶ ಕೋಲಕಾರ ಹಿಂದುಳಿದ ವರ್ಗಕ್ಕೆ ಸೇರಿದ್ದು, ಆಕಾಂಕ್ಷಿಗಳ ಪಟ್ಟಿಯಲ್ಲಿ ಬಾದಾಮಿ, ಮುಧೋಳ, ಬೀಳಗಿ ಹಾಗೂ ಬಾಗಲಕೋಟೆ ತಾಲ್ಲೂಕುಗಳಿಗೆ ಪ್ರಾತಿನಿಧ್ಯ ನೀಡಿದಂತಾಗಿದೆ.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಹಾಲಿ ಅಧ್ಯಕ್ಷರೂ ಆದ ಸಿದ್ದು ಸವದಿ, ಮಾಜಿ ಶಾಸಕರಾದ ಜಿ.ಎಸ್.ನ್ಯಾಮಗೌಡ, ಪಕ್ಷದ ಬೆಳಗಾವಿ ವಿಭಾಗದ ಸಹಪ್ರಭಾರಿ ಬಸವರಾಜ ಯಂಕಂಚಿ ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬೀಳಗಿ ಶಾಸಕ ಮುರುಗೇಶ ನಿರಾಣಿ ಸಭೆಗೆ ಬಂದಿರಲಿಲ್ಲ.

**
ಈ ಹಿಂದೆ ಪಕ್ಷದೊಳಗೆ ಬೇರೆ ಬೇರೆ ಜವಾಬ್ದಾರಿ ನಿಭಾಯಿಸಿದವರು ಹಾಗೂ 54 ವರ್ಷದೊಳಗಿನ ವಯೋಮಿತಿಯನ್ನು ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲು ಪರಿಗಣಿಸಲಾಗಿದೆ.
-ಸಿದ್ದು ಸವದಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು