ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಈರುಳ್ಳಿ ಬೆಳೆಗೆ ಕೊಳೆರೋಗ

ಬೆಲೆ ಇದ್ದರೂ, ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ರೈತರು
Published : 16 ಸೆಪ್ಟೆಂಬರ್ 2024, 3:17 IST
Last Updated : 16 ಸೆಪ್ಟೆಂಬರ್ 2024, 3:17 IST
ಫಾಲೋ ಮಾಡಿ
Comments

ಬಾಗಲಕೋಟೆ: ಜಿಲ್ಲೆಯಲ್ಲಿ ಈರುಳ್ಳಿ ಭರ್ಜರಿಯಾಗಿಯೇ ಬೆಳೆದು ನಿಂತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಕೊಳೆ, ತಿರುಗುಣಿ ರೋಗದಿಂದಾಗಿ ಬೆಳೆ ಕಳೆದುಕೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ₹5 ರಿಂದ ₹6 ಸಾವಿರದ ವರೆಗೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದರ ಹೆಚ್ಚಾಗುವ ಲಕ್ಷಣಗಳಿವೆ. ಆದರೆ ಆಗಾಗ ಸುರಿದ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಅಲ್ಲಲ್ಲಿ ರೋಗಗಳು ಕಾಣಿಸಿಕೊಂಡಿವೆ.

ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಕಪ್ಪು ಮಣ್ಣಿನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ತೇವಾಂಶ ಹೆಚ್ಚಾಗಿರುವುದರಿಂದ ಶೀಲಿಂಧ್ರಗಳಿಂದ ರೋಗ ಕಾಣಿಸಿಕೊಂಡಿವೆ. ತಿರುಗುಣಿ ರೋಗಕ್ಕೆ ಕೋಲೆಟೋಟ್ರೈಕಂ ಗ್ಲೀಯೋಸ್ಲೋರೈಡಿಸ್, ಫಿಜೇರಿಯಂ ಮತ್ತು ಸ್ಲಿರೋಷಿಯಂ ಎಂಬ ಶೀಲಿಂಧ್ರಗಳು ಕಾರಣವಾಗಿವೆ. ರೋಗವು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಗಾಳಿ ಹಾಗೂ ನೀರಿನ ಮೂಲಕ ವೇಗವಾಗಿ ಹರಡುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ರೋಗದ ಲಕ್ಷಣಗಳು:

ಈರುಳ್ಳಿ ಎಲೆ ಮೇಲೆ ಬಿಳಿ ಚುಕ್ಕೆಗಳು ಕಂಡು ಬರುತ್ತವೆ. ಸಂಪೂರ್ಣ ಎಲೆ ಮತ್ತು ಗಿಡ ಒಣಗುತ್ತದೆ. ಕೆಲವು ಸಾರಿ ಎಲೆಗಳ ಉದ್ದ ಹೆಚ್ಚಾಗುವುದು ಮತ್ತು ಸುರಳಿ ತಿರುಗುವುದನ್ನು ಕೂಡ ಕಾಣಬಹುದು. ಗಿಡಗಳ ಕಾಂಡದ ಉದ್ದ ಹೆಚ್ಚಾಗುವುದು ಮತ್ತು ಸ್ವಲ್ಪ ತಿರುಚುತ್ತದೆ. ರೋಗಕ್ಕೆ ತುತ್ತಾದ ಗಿಡದ ಗಡ್ಡೆಗಳು ಬಲಿಯುವುದಿಲ್ಲ. ಅಲ್ಲಿಯೇ ಕೊಳೆತು ಹೋಗುತ್ತವೆ.

‘ಜಮೀನಿನಲ್ಲಿ ನೀರು ಸರಾಗವಾಗಿ ಬಸಿದು ಹೋಗುವಂತೆ ಕ್ರಮಕೈಗೊಳ್ಳಬೇಕು. ಮಣ್ಣಿಗೆ ಕೊಟ್ಟಿಗೆ ಗೊಬ್ಬರದ ಜೊತೆ ಜೈವಿಕ ನಾಶಕ ಟ್ರೈಕೋಡರ್ಮಾವನ್ನು ಪ್ರತಿ ಎಕರೆಗೆ 10 ರಿಂದ 15 ಕೆಜಿ ಮಿಶ್ರಣ ಮಾಡಿ ಹಾಕಬೇಕು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ.

‘ಒಂದೂವರೆ ಎಕರೆ ಪ್ರದೇಶದಲ್ಲಿ 25 ಕೆ.ಜಿ.ಯಷ್ಟು ಈರುಳ್ಳಿ ಬೀಜ ಹಾಕಿದ್ದೇವೆ. ಬೀಜ, ರಸಗೊಬ್ಬರ ಇತ್ಯಾದಿಗಳಿಗಾಗಿ ಖರ್ಚು ಮಾಡಿದ್ದೇವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆದರೆ, ರೋಗದಿಂದ ಇಳುವರಿ ಕಡಿಮೆಯಾಗುವ ಭೀತಿ ಎದುರಾಗಿದೆ’ ಎಂದು ಜಿಲ್ಲೆಯ ಉದಗಟ್ಟಿ ರೈತ ಶರಣಬಸವ ಪಾಟೀಲ ಬೇಸರಿಸಿದರು.

ಗಡ್ಡೆ ಕೊಳೆಯುವ ಲಕ್ಷಣ ಕಂಡುಬಂದಲ್ಲಿ ಕಾಪರ್ ಆಕ್ಸಿಕ್ಲೋರೈಡ್ ಅನ್ನು ಪ್ರತಿ ಲೀಟರ್‌ನೊಂದಿಗೆ 2 ಗ್ರಾಂ ಜೊತೆಗೆ 0.5 ಗ್ರಾಂ ಸ್ಟ್ರೆಪ್ಟೋಮೈಸಿನ್ ಸಲ್ಫೈಟ್ ಬೆರೆಸಿ ಗಿಡಗಳ ಬುಡಕ್ಕೆ ಹಾಕಬೇಕು
ರವೀಂದ್ರ ಹಕಾಟೆ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT