ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಲ್ಲಿ ಸೀಟು ಸಿಕ್ಕಿದೆ, ಸಾಲ ಸಿಗುತ್ತಿಲ್ಲ: ಚಿನ್ನದ ಪದಕ ಪಡೆದ ಉಮ್ಮೇಸಾರಾ

Last Updated 26 ಮೇ 2022, 6:06 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸುಸ್ಥಿರ ಕೃಷಿ’ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ) ಅಧ್ಯಯನಕ್ಕೆ ಇಟಲಿಯ ಪಡುವಾ ವಿಶ್ವವಿದ್ಯಾಲಯದಲ್ಲಿ ಸೀಟ್ ಸಿಕ್ಕಿದೆ. ಅಲ್ಲಿ ಕಲಿಯಲು ₹15ರಿಂದ 20 ಲಕ್ಷ ಖರ್ಚಾಗುತ್ತಿದೆ. ಆಗುತ್ತದೆ. ಊರಲ್ಲಿರುವ ಕೃಷಿ ಭೂಮಿ ಅಡವಿಟ್ಟುಕೊಂಡು ಶಿಕ್ಷಣ ಸಾಲ ನೀಡಲು ಬ್ಯಾಂಕ್‌ನವರು ಒಪ್ಪುತ್ತಿಲ್ಲ..

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 11ನೇ ಘಟಿಕೋತ್ಸವದಲ್ಲಿ ಬಿಎಸ್ಸಿ ತೋಟಗಾರಿಕೆ ಪದವಿಯಲ್ಲಿ 16 ಚಿನ್ನದ ಪದಕಗಳ ಮುಡಿಗೇರಿಸಿಕೊಂಡ ಚಿಕ್ಕಮಗಳೂರು ತಾಲ್ಲೂಕು ಸಾತಿಹಳ್ಳಿ ಗ್ರಾಮದ ಉಮ್ಮೇಸಾರಾ ಅವರ ಅಳಲು..

‘ಪಡುವಾ (Padua) ವಿಶ್ವವಿದ್ಯಾಲ ಯಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಇದೆ. ಆನ್‌ಲೈನ್‌ ಮೂಲಕ ಪ್ರವೇಶ ಪರೀಕ್ಷೆ ಬರೆದುಸೀಟ್ ಪಡೆದಿ ರುವೆ. ಅಲ್ಲಿ ಕಲಿಯುವುದು ಬದುಕಿನ ಕನಸು. ಯಾರಾದರು ನೆರವು ನೀಡಿದಲ್ಲಿ ಅಲ್ಲಿ ಕಲಿಯಲು ಮುಂದಾಗುವೆ’ ಎಂದು ಉಮ್ಮೇಸಾರಾ ಹೇಳಿದರು.

‘ಸಾತಿಹಳ್ಳಿಯಲ್ಲಿ ಕುಟುಂಬಕ್ಕೆ ನಾಲ್ಕು ಎಕರೆ ಜಮೀನು ಇದೆ. ಕಾಫಿ, ಕಾಳು ಮೆಣಸು ಬೆಳೆಯುತ್ತೇವೆ. ಶಿರಸಿಯ ತೋಟಗಾರಿಕೆ ಕಾಲೇಜಿನಲ್ಲಿ ಮಗಳು ಬಿಎಸ್ಸಿ ಕಲಿತಿದ್ದು, ಅಲ್ಲಿ ಕಲಿಸಲು ಊರಿನ ಕೆನರಾ ಬ್ಯಾಂಕ್‌ನಲ್ಲಿ ₹1 ಲಕ್ಷ ಸಾಲ ಪಡೆದಿದ್ದೆವು’ ಎಂದು ಅಮ್ಮ ರಹೀಮಾ ಬಾನು ಹೇಳಿದರು.

‘ಮಗಳು ಇಷ್ಟೊಂದು ಸಾಧನೆ ಮಾಡುತ್ತಾಳೆ ಎಂದು ದೇವರಾಣೆಗೂ ಭರವಸೆ ಇರಲಿಲ್ಲ. ಇಂತಹ ಮಗಳನ್ನು ಓದಿಸದಿದ್ದರೆ ನಾನು ತಪ್ಪು ಮಾಡುತ್ತಿದ್ದೆ’ ಎಂದು ಅಪ್ಪ ಹಸ್ಮತ್ ಅಲಿ ಸಂತಸ ವ್ಯಕ್ತಪಡಿಸಿದರು.

‘10ನೇ ತರಗತಿಯಲ್ಲಿ ಕನ್ನಡ ಬಿಟ್ಟು ಉಳಿದ ಎಲ್ಲ ವಿಷಯಗಳಲ್ಲಿ ಫೇಲ್ ಆಗಿ ಶಾಲೆ ಬಿಟ್ಟಿದ್ದೆನು. ಹೀಗಾಗಿ ಮಕ್ಕಳನ್ನು ಓದಿಸಬೇಕೆಂಬ ಆಸೆ ಇತ್ತು. ನಮ್ಮ ಊರಿನಿಂದ ಶಿರಸಿ 300 ಕಿ.ಮೀ ದೂರ. ಅಲ್ಲಿಗೆ ಹುಡುಗಿಯನ್ನು ಕಳಿಸುತ್ತೀಯಾ ಎಂದು ಸಂಬಂಧಿಕರು ಪ್ರಶ್ನಿಸಿದ್ದರು. ಆದರೂ ಹೆದರದೆ ಕಳುಹಿಸಿಕೊಟ್ಟೆನು. ಅದೀಗ ಸಾರ್ಥಕವಾಯಿತು’ ಎಂದರು.

ಸಂಶೋಧನೆಯಲ್ಲಿ ತೊಡಗಿಕೊಳ್ಳುವೆ: ‘ದ್ವಿತೀಯ ಪಿಯುಸಿಯಲ್ಲಿ ಶೇ 94 ಅಂಕ ಪಡೆದರೂ ಮೆಡಿಕಲ್ ಸೀಟ್ ಸಿಕ್ಕಲಿಲ್ಲ. ಎಂಜಿನಿಯರಿಂಗ್ ಬಗ್ಗೆ ಆಸಕ್ತಿ ಇರಲಿಲ್ಲ. ಹೊಸ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಕೃಷಿ ಮತ್ತು ತೋಟಗಾರಿಕೆ ವಿಷಯದತ್ತ ಗಮನಹರಿಸಿದೆ’ ಎಂದು ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಮೇಘಾ ಅರುಣ್ ಹೇಳಿದರು.

ಮೇಘಾ ಹಾಸನದವರು. ಅಪ್ಪ ಅರುಣ್‌ಕುಮಾರ ಗೊರೂರು ಠಾಣೆಯಲ್ಲಿ ಎಎಸ್‌ಐ. ಅಮ್ಮ ವೈಶಾಲಿ ಗೃಹಿಣಿ. ಬೆಂಗಳೂರಿನ ತೋಟಗಾರಿಕೆ ಕಾಲೇಜಿನಲ್ಲಿ ಕಲಿತಿರುವ ಮೇಘಾ, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಶಿಷ್ಯವೇತನ ಪಡೆದು ಪಪ್ಪಾಯ ಗಿಡಕ್ಕೆ ವೈರಸ್ ಬಾಧೆಯ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರೆ.

ಅಪ್ಪನಿಗೆ ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನಲ್ಲಿ ಪೇರಲ, ಪಪ್ಪಾಯ ತೋಟ ಮಾಡುವುದು ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಂಡು ವಿಜ್ಞಾನಿಯಾಗುವುದು ಬದುಕಿನ ಗುರಿ ಎಂದು ಮೇಘಾ ಹೇಳಿದರು.

ಘಟಿಕೋತ್ಸವದ ನೇತೃತ್ವ ವಹಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಮಾಜಿ ಸಚಿವ ಎಚ್.ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಎಂಎಸ್ಸಿ ಪದವಿ ಪಡೆದ ಅಪ್ಘನ್ ಗೆಳೆಯರು..
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಫ್ಘಾನಿಸ್ತಾನದ ಕಾಬೂಲ್‌ನ ಫೆದರತ್ ಮೊಹಮ್ಮದ್ ನೂರಿ ಹಾಗೂ ಅಲ್ಲಿನ ಪಾರವಾನ್‌ನ ಮೊಹಮ್ಮದ್ ಯಾಸೀನ್ ಕ್ರಮವಾಗಿ ಹಣ್ಣು ಹಾಗೂ ತರಕಾರಿ ವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದರು.

‘ಮೂರು ವರ್ಷಗಳಿಂದ ಭಾರತದಲ್ಲೇ ವಾಸವಿದ್ದೇವೆ. ಈಗ ಬೆಂಗಳೂರಿನ ಜಿಕೆವಿಕೆಯಲ್ಲಿ ಪಿಎಚ್‌ಡಿಗೆ ನೋಂದಾಯಿಸಿದ್ದೇವೆ. ನಮ್ಮ ದೇಶದಲ್ಲಿ ತೋಟಗಾರಿಕೆಗೆ ಸೂಕ್ತ ವಾತಾವರಣ ಇದೆ. ಮುಂದೆ ಅಲ್ಲಿ ಒಳ್ಳೆಯ ದಿನಗಳು ಬರಬಹುದು. ಆಗ ನಮ್ಮ ಪದವಿಗೂ ಮನ್ನಣೆ ಸಿಗಲಿದೆ’ ಎಂದು ಫೆದರತ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT