ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗಪುರ | ಪವಾಡ ಪುರುಷ ಮಹಾಲಿಂಗೇಶ್ವರ ಜಾತ್ರೆ: ಅಷ್ಟ ದಿಕ್ಕಿಗೂ ಲಿಂಗಮುದ್ರೆ 

Published 29 ಸೆಪ್ಟೆಂಬರ್ 2023, 8:47 IST
Last Updated 29 ಸೆಪ್ಟೆಂಬರ್ 2023, 8:47 IST
ಅಕ್ಷರ ಗಾತ್ರ

ವರದಿ – ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ಪವಾಡ ಪುರುಷ ಮಹಾಲಿಂಗೇಶ್ವರರ ಸ್ಮರಣೆಗೆ ನರಗಟ್ಟಿ (ಮಹಾಲಿಂಗಪುರ) ಕ್ಷೇತ್ರ ಮಹಾಲಿಂಗಮಯವಾಗಿ ಮೆರೆಯಲು ಮೋದಪುರ (ಮುಧೋಳ)ದ ಮಾಲೋಜಿ ಘೋರ್ಪಡೆ ರಾಜ ಪಟ್ಟಣದ ಎಂಟೂ ದಿಕ್ಕಿಗೆ ಸ್ಥಾಪಿಸಿದ್ದ ಲಿಂಗಮುದ್ರೆಗಳು ಇಂದಿಗೂ ಶೋಭಾಯಮಾನವಾಗಿ ಕಂಗೊಳಿಸುತ್ತಿವೆ.

ಮಹಾಲಿಂಗೇಶ್ವರರ ದಿವ್ಯ ಸನ್ನಿಧಾನದಲ್ಲಿ ಅವರ ಆದೇಶದ ಮೇರೆಗೆ ಎಂಟು ದಿಕ್ಕುಗಳಲ್ಲಿ ಸ್ಥಾಪಿತವಾಗಿರುವ ಈ ಲಿಂಗಮುದ್ರೆಗಳಿಗೆ ಆಯಾ ಭಾಗದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಲಿಂಗಮುದ್ರೆಗಳು ಪಟ್ಟಣದ ಸುತ್ತಮುತ್ತಲಿನ ಪ್ರದೇಶದಲ್ಲಿದ್ದರೂ ಇವುಗಳ ಇರುವಿಕೆಯ ಕುರುಹು ಮಾತ್ರ ನಗರದ ಜನರಿಗೆ ತಿಳಿಯದಿರುವುದು ಸೋಜಿಗದ ಸಂಗತಿಯಾಗಿದೆ.

ಉದ್ದೇಶ: ಪಾರ್ವತಿ ಪರಮೇಶ್ವರರಿಗೆ ಅರ್ಪಿಸಲು ಪೂರ್ವ ದಿಕ್ಕಿಗೆ, ಮಹಾಲಿಂಗ ಮುನಿಗಳಿಗೆ ರಾಜನು ತಾನಿತ್ತ ಭಾಷೆಗಳ ಉತ್ತರಗಳು ನಿಜವೆಂದು ಸಾರಲು ಉತ್ತರ ದಿಕ್ಕಿಗೆ, ಮಹಾಲಿಂಗರಿಗೆ ಭಕ್ತಿಯಿಂದ ಕಂಚಿನ ಪಟದಲ್ಲಿ ಬರೆಸಿಕೊಟ್ಟ (ದತ್ತಿ) ದಾನಪತ್ರವು ಸತ್ಯವಾದರೆ ಈ ಲಿಂಗಮುದ್ರೆಯು ಸತ್ಯ ಎನ್ನುವುದಕ್ಕೆ ಪಶ್ಚಿಮ ದಿಕ್ಕಿಗೆ, ರಾಜನು ತಾನು ಭಕ್ತಿಯಿಂದ ದಕ್ಷಿಣೆಯಾಗಿತ್ತ ಭೂಮಿಯ ಕೀರ್ತಿಯು ಶಾಶ್ವತವಾಗಿ ಉಳಿಯಲು ದಕ್ಷಿಣ ದಿಕ್ಕಿಗೆ ಲಿಂಗಮುದ್ರೆಗಳನ್ನು ಸ್ಥಾಪಿಸಲಾಗಿದೆ. ಅಷ್ಟ ಲಿಂಗಗಳ ಪ್ರತಿಷ್ಠಾಪನೆಯ ಅಂಗವಾಗಿ ಅಂದು ನರಗಟ್ಟಿಯ ಎಲ್ಲ ದೇವಾಲಗಳಲ್ಲಿ ಸಂಭ್ರಮದ ಪೂಜೆ ಪುನಸ್ಕಾರಗಳು ನಡೆದರೆ ಅರಸನು ಧಾನ್ಯ, ಫಲಪುಷ್ಪಾದಿಗಳನ್ನು ಶಿವಲಿಂಗ ಜಂಗಮ ದಾಸೋಹಕ್ಕೆ ಭಕ್ತಿಯಿಂದ ನೀಡಿದನೆಂದು ಇತಿಹಾಸ ಅರಹುತ್ತದೆ.

ಲಿಂಗಮುದ್ರೆಗಳು: ನಗರದ ರೇವಡಿಗಿಡದ ಹಿಂದೆ, ಕೆಂಗೇರಿಮಡ್ಡಿಯ ಕಲ್ಕರ್ಣಿಯಲ್ಲಿ, ವಿದ್ಯಾನಗರ, ಅಕ್ಕಿಮರಡಿ ರಸ್ತೆಯ ಬೂತ ಈಶ್ವರಪ್ಪನವರ ತೋಟದಲ್ಲಿ, ಢವಳೇಶ್ವರ-ಮಹಾಲಿಂಗಪುರ ಒಳ ರಸ್ತೆಯಲ್ಲಿ ಆದೆಪ್ಪನವರ ತೋಟದಲ್ಲಿ, ಕಲ್ಪಡ, ಹೊಸಬಾವಿ, ಬುದ್ನಿ-ಕೆಸರಗೊಪ್ಪ ಒಳ ರಸ್ತೆಯಲ್ಲಿ ಅಡಿವೆಪ್ಪಗೌಡ ಅವರ ತೋಟದಲ್ಲಿ ಲಿಂಗಮುದ್ರೆಗಳಿವೆ. ಕಲ್ಕರ್ಣಿಯ ಲಿಂಗಮುದ್ರೆಗೆ, ವಿದ್ಯಾನಗರದ ಲಿಂಗಮುದ್ರೆಗೆ ದೇವಾಲಯ ನಿರ್ಮಿಸಲಾಗಿದೆ. ಬೂತ ಈಶ್ವರಪ್ಪನವರ ತೋಟದಲ್ಲಿರುವ ಲಿಂಗಮುದ್ರೆಗೆ ದೇವಾಲಯ ನಿರ್ಮಿಸಲಾಗಿದ್ದು, ಈ ದೇವಾಲಯದ ಮೇಲೆ ಭಕ್ತೆ ಸಿದ್ದಾಯಿಗೆ ಮಹಾಲಿಂಗೇಶ್ವರರು ತಮ್ಮ ಐದು ಎಳೆ ಜಡೆಯನ್ನು ನೀಡುತ್ತಿರುವ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಮಹಾಲಿಂಗೇಶ್ವರರ ಇತಿಹಾಸದಲ್ಲಿ ಅಷ್ಟ ದಿಕ್ಕುಗಳ ಕುರಿತು ಮಾಹಿತಿ ಲಭ್ಯವಿದ್ದರೆ ಒಟ್ಟಾರೆ ಪಟ್ಟಣದ ಸುತ್ತಮುತ್ತಲು ಹದಿನಾರು ಲಿಂಗಮುದ್ರೆಗಳಿವೆ. ಈ ಪೈಕಿ ಹನ್ನೆರಡು ಲಿಂಗಮುದ್ರೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬುದ್ನಿ ಪಿಡಿಯ ಕೇಸಪ್ಪನ ಬಾವಿ ಬಳಿಯ ವೆಂಕಣ್ಣನವರ ತೋಟ, ಕಲ್ಪಡ, ಟೊಣಪಿನಾಥ ದೇವಸ್ಥಾನ ಹಾಗೂ ಬುದ್ನಿ ಕೆಸರಗೊಪ್ಪ ಒಳ ರಸ್ತೆಯಲ್ಲಿಯೂ ಲಿಂಗಮುದ್ರೆಗಳು ಕಂಡುಬರುತ್ತವೆ.

ಹಿನ್ನೆಲೆ: ಶಿವನ ಅಪ್ಪಣೆಯ ಮೇರೆಗೆ ಶರೀರರಾಗಿ ಭೂಮಿಗೆ ಬಂದ ಮಹಾಲಿಂಗ ಜಂಗಮರು ವಿವಿಧ ಪುಣ್ಯಕ್ಷೇತ್ರಗಳಿಗೆ ಸಂಚರಿಸಿ ಶಿವಸ್ವಪ್ನದ ವಾಣಿಯಂತೆ ಇಂದಿನ ಮಹಾರಾಷ್ಟ್ರದ ಢಪಳಾಪುರದಲ್ಲಿರುವ ಶಿವಯೋಗಿ ಗುರುಲಿಂಗ ಜಗದರ‍್ಯರಲ್ಲಿಗೆ ಬಂದು ಅವರ ಶಿಷ್ಯರಾಗಿ, ಅವರಿಂದ ಆಷ್ಟಾವರಣ ಮಹಿಮೆಯನ್ನು ತಿಳಿಯುತ್ತಾರೆ. ಇದು ಮಹಾಲಿಂಗೇಶ್ವರರು ರಾಜನಿಗೆ ಲಿಂಗಮುದ್ರೆ ಸ್ಥಾಪನೆಗೆ ಅನುಮತಿ ನೀಡಲು ಪ್ರೇರಣೆಯಾಗಿರಬಹುದೆಂದು ಅಂದಾಜಿಸಬಹುದಾಗಿದೆ.

ಮಹಾಲಿಂಗೇಶ್ವರರು ಲಿಂಗೈಕ್ಯ ಸಮಯದಲ್ಲಿ ಶಿವಭಕ್ತೆ ಸಿದ್ದಾಯಿಯ ಬಯಕೆಯಂತೆ ತಮ್ಮ ಇರುವಿಕೆಯ ಗುರುತಿಗಾಗಿ ತಮ್ಮ ತಲೆಯಲ್ಲಿಯ ಎರಡೆಳೆ ಜಟವನ್ನು ಸಿದ್ದಾಯಿಗೆ ವರವಾಗಿ ನೀಡಿದ್ದು, ಈಗ ಅವು ಪ್ರತಿ ವರ್ಷವೂ ಗೋಧಿ ಕಾಳಿನಷ್ಟು ಬೆಳೆಯುತ್ತಿವೆ. ಮಹಾಲಿಂಗೇಶ್ವರರು ನಿರ್ಮಿಸಿದ ಬಸವತೀರ್ಥ ಬಾವಿಯ ನೀರನ್ನು ಕೇವಲ ಪೂಜೆ-ಪುನಸ್ಕಾರಗಳಿಗೆ ಮಾತ್ರ ಬಳಸುವ ಮೂಲಕ ಮಹಾಲಿಂಗೇಶ್ವರರನ್ನು ಇದರಲ್ಲಿ ಕಾಣಲಾಗುತ್ತಿದೆ. ಆದರೆ ಮಹಾಲಿಂಗಪುರ ನಗರ ಮಹಾಲಿಂಗಮಯವಾಗಿ ಶೋಭಿಸಲು ಅಷ್ಟದಿಕ್ಕುಗಳಿಗೂ ಸ್ಥಾಪಿತ ಲಿಂಗಮುದ್ರೆಗಳು ಮಾತ್ರ ಬೆಳಕಿಗೆ ಬಾರದಿರುವುದು ಖೇದಕರ ಸಂಗತಿ.

ಸನದುಗಳು: ಕೆಲವು ಲಿಂಗಮುದ್ರೆಗಳು ತೋಟಗಳಲ್ಲಿವೆ. ವಿಜಯಪುರದ ಇಬ್ರಾಹಿಂ ಬಾದಶಾಹನು ಕ್ರಿ.ಶ.1750 ರಲ್ಲಿ ಮಹಲಿಂಗ ಮುನಿನಾಥನಿಗೆ ಹಾಕಿಕೊಟ್ಟ ಸನದೊಂದಿದೆ. ಕ್ರಿ.ಶ.1793 ರಲ್ಲಿ ಮುಧೋಳ ಘೋರ್ಪಡೆ ಮನೆತನದ ರಾಜನಾದ ನಾರಾಯಣರಾಯನು ಕೊಟ್ಟ ಸನದಿನಲ್ಲಿ ಕೆಲವು ಮಹತ್ವದ ಸಂಗತಿಗಳ ಉಲ್ಲೇಖವಿದೆ. ಮಹಾಲಿಂಗಪುರದ ಸರ್ವಹಕ್ಕು ಮಹಾಲಿಂಗಪುರದ ಮಹಾಲಿಂಗೇಶ್ವರ ಮಠಕ್ಕಿದೆ ಎಂಬುದನ್ನು ಸನದಿನಲ್ಲಿ ಉಲ್ಲೇಖಿಸಲಾಗಿದೆ.

ಜಾತ್ರೆ: ಮಹಾಲಿಂಗೇಶ್ವರ ಜಾತ್ರೆ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಗುರುವಾರ ಆರಂಭವಾಗಿದ್ದು, ಸೆ. 29 ರಂದು ಹರಿವಾಣ ಕಟ್ಟೆ ಸೇವೆ, ನಂತರ ರಥೋತ್ಸವ, ಸೆ. 30 ರಂದು ಜಂಗಿ ನಿಕಾಲಿ ಕುಸ್ತಿಗಳು, ನಂತರ ಮರುರಥೋತ್ಸವ ಕಾರ್ಯಕ್ರಮ ಜರುಗಲಿವೆ. ಅಹೋರಾತ್ರಿ ರಥ ಸಾಗುವುದು ಜಾತ್ರೆಯ ವೈಶಿಷ್ಟ್ಯವಾಗಿದೆ.

ಲಿಂಗಮುದ್ರೆಗಳಿಗೆ ಸ್ಥಾಪಿತ ದೇವಾಲಯಗಳು
ಲಿಂಗಮುದ್ರೆಗಳಿಗೆ ಸ್ಥಾಪಿತ ದೇವಾಲಯಗಳು
ಮಹಾಲಿಂಗೇಶ್ವರರು
ಮಹಾಲಿಂಗೇಶ್ವರರು
ಮಹಾಲಿಂಗೇಶ್ವರ ದೇವಸ್ಥಾನ
ಮಹಾಲಿಂಗೇಶ್ವರ ದೇವಸ್ಥಾನ
ನರಗಟ್ಟಿಯಲ್ಲಿ ನೆಲೆ
ಗುರುಗಳ ಅಣತಿಯಂತೆ ಮಹಾಲಿಂಗೇಶ್ವರರು ನರಗಟ್ಟಿ ಗ್ರಾಮಕ್ಕೆ ಬಂದಾಗ ಶಿವಭಕ್ತೆ ಸಿದ್ದಾಯಿ ತಾಯಿ ಬರಮಾಡಿಕೊಳ್ಳುತ್ತಾಳೆ. ನಂತರ ಅಲ್ಲಿಯೇ ನೆಲೆ ನಿಂತು ಅನೇಕ ಪವಾಡಗಳನ್ನು ಮಹಾಲಿಂಗೇಶ್ವರರು ಮಾಡುತ್ತಾರೆ. ಮುಂದೆ ಅವರ ಹೆಸರಿನಿಂದಲೇ ಊರು ನಾಮಾಂಕಿತವಾಗುತ್ತದೆ. ಚನ್ನಗಿರೇಶ್ವರ ದೇವಾಲಯ ಕೃಷ್ಣಾ ನದಿ ಇಬ್ಭಾಗವಾಗಿ ದಾರಿ ನೀಡಿದ್ದು ರುದ್ರಮ್ಮ ಎಂಬ ಹುಟ್ಟು ಕುರುಡಿಗೆ ಭಕ್ತಿದಾನ ಮಡಿದ ಮಗುವಿಗೆ ಪುನರ್ಜನ್ಮ ಶಿವಭಕ್ತನಿಗೆ ನೇತ್ರದಾನ ಮಡಿದ ರಾಜನಿಗೆ ಪ್ರಾಣದಾನ ಮುಂತಾದ ಪವಾಡಗಳನ್ನು ಮಾಡಿದ ಮಹಾಲಿಂಗೇಶ್ವರರು ಸಮಾಜ ಸುಧಾರಣೆಗಾಗಿ ಮಾಡಿದ ಸಾಧನೆ ಅಭೂತಪೂರ್ವವಾದುದು. ಮಹಾಲಿಂಗೇಶ್ವರರು ತಪಗೈದ ಚನ್ನಗಿರಿಯಲ್ಲಿ ರಾಮಲಿಂಗ ಎಂಬ ಪವಿತ್ರ ಲಿಂಗದ ಗೌರವಾರ್ಥ ಚನ್ನಗಿರೇಶ್ವರ ದೇವಾಲಯ ನಿರ್ಮಾಣವಾಗಿದೆ.

Cut-off box -

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT