ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅಮಿತ್ ಶಾ ವಿಶ್ವಾಸ

ಅಲ್ಲಮಪ್ರಭು ಸ್ಮರಿಸಿ ಭಾಷಣ ಆರಂಭ, ಕೈಮಗ್ಗದಲ್ಲಿ ನೇಯ್ದು ಕಾರ್ಯಕ್ರಮ ಉದ್ಘಾಟಿಸಿದ ಶಾ
Published 25 ಏಪ್ರಿಲ್ 2023, 16:01 IST
Last Updated 25 ಏಪ್ರಿಲ್ 2023, 16:01 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ರಾಜಕೀಯ ಸ್ಥಿರತೆ, ಅಭಿವೃದ್ಧಿ ವೇಗ ಹೆಚ್ಚಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ರಾಮಪ್ಪ ಚಿಕ್ಕೋಡಿ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದು ಸಾಮಾನ್ಯ ಚುನಾವಣೆಯಲ್ಲ. ಕರ್ನಾಟಕದ ಭವಿಷ್ಯವನ್ನು ಪ್ರಧಾನಿ ಮೋದಿ ಕೈಯಲ್ಲಿ ನೀಡುವ ಚುನಾವಣೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ, ತುಷ್ಟೀಕರಣ, ಪರಿವಾರ ರಾಜಕಾರಣ, ಗಲಭೆ ಹೆಚ್ಚಾಗಲಿದೆ. ಇದೆಲ್ಲ ನಿಮಗೆ ಬೇಕಾ ಎಂದು ಪ್ರಶ್ನಿಸಿದರು. ಜನರು ನಮಗೆ ಬೇಡ ಎಂದು ಕೂಗಿದರು.

ಕಾಂಗ್ರೆಸ್‌ನಿಂದ ಲಿಂಗಾಯತ ಮುಖ್ಯಮಂತ್ರಿಗಳಾಗಿದ್ದ ಎಸ್‌. ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರನ್ನು ಅವಮಾನ ಮಾಡಿ ಕೆಳಗಿಳಿಸಲಾಯಿತು. ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಇದ್ದಾಗಲೂ ಜೆಡಿಎಸ್‌ ಬಳಸಿಕೊಂಡು ಬದಲಾಣೆ ಮಾಡಿದರು. ಇದನ್ನು ಕಿತ್ತೂರ ಕರ್ನಾಟಕ ಸಹಿಸಲ್ಲ ಎಂದು ಹೇಳಿದರು.

ರಾಜ್ಯದು ಇಬ್ಬರು ಲಿಂಗಾಯತ ಮುಖಂಡರು ಕಾಂಗ್ರೆಸ್ ಸೇಪರ್ಡೆಗೊಂಡರು. ಇವರಿಬ್ಬರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಾಗುವುದಿಲ್ಲ. ಜೆಡಿಎಸ್ ಗೆ ಮತ ನೀಡಿದರೆ ಅದು ಕಾಂಗ್ರೆಸ್‌ಗೆ ನೀಡಿದಂತೆ. ಬಿಜೆಪಿಗೆ ಮತ ನೀಡಿದರೆ ಮೋದಿ ನೇತೃತ್ವದಲ್ಲಿ ರಾಜ್ಯದ ಸಮಗ್ರ ಅಭಿವೃದ್ದಿ ಮತ ನೀಡಿದಂತೆ ಎಂದು ತಿಳಿಸಿದರು.

ಕೇಂದ್ರ, ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗಲೂ ಮಹದಾಯಿ ಯೋಜನೆ ಜಾರಿಗೊಳಿಸಲಿಲ್ಲ. ಬಿಜೆಪಿಯು ಮಹದಾಯಿ ಜಾರಿ, ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ, ಲಂಬಾಣಿ ತಾಂಡಾಗಳಿಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿದೆ ಎಂದರು.

ಪ್ರವೀಣ ನೆಟ್ಟಾರು ಹತ್ಯೆ ಮಾಡಿದವರನ್ನು ಜೈಲಿಗೆ ಹಾಕಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಪಿಎಫ್‌ಐ ಅನ್ನು ನಿಷೇಧಿಸಲಾಗಿದೆ. ಇದು ಒಳ್ಳೆಯ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.

ನೇಕಾರರ ಅಭಿವೃದ್ಧಿಗಾಗಿ ನೇಕಾರ ವಿಕಾಸ ನಿಗಮ ಸ್ಥಾಪನೆ, ನೇಕಾರ ಸಮ್ಮಾನ ಯೋಜನೆಯ ಮೊತ್ತವನ್ನು ₹2 ಸಾವಿರದಿಂದ ₹5 ಸಾವಿರಕ್ಕೆ ಹೆಚ್ಚು ಮಾಡಲಾಗಿದೆ. ₹2 ಲಕ್ಷವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ವಿದ್ಯಾನಿಧಿ ಯೋಜನೆಯಡಿ 11 ಲಕ್ಷ ಮಕ್ಕಳಿಗೆ ₹750 ಕೋಟಿ ನೀಡಲಾಗಿದೆ. ಶಿಲ್ಪಕಲೆಯ ಐಹೊಳೆ, ಬಾದಾಮಿ, ವಿಜಯಪುರ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಾಗಿದೆ ಎಂದರು.

ಕಾಶ್ಮೀರನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮೋದಿ ಸರ್ಕಾರ ವಿಶ್ವಕ್ಕೆ ಸಾರಿತು. ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ಭಕ್ತರೇ ಈಗಲೇ ನಿಮ್ಮ ಟಿಕೆಟ್ ಕಾಯ್ದಿರಿಸಿರಿ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ, ಹಂಪಿ ಅಭಿವೃದ್ಧಿ ಮಾಡುವ ಮೂಲಕ ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗಿದೆ.

ಬಿಜೆಪಿ ಅಭ್ಯರ್ಥಿಗಳಾದ ಸಿದ್ದು ಸವದಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಜಗದೀಶ ಗುಡಗುಂಟಿ, ಸಂಸದ ಪಿ.ಸಿ. ಗದ್ದಿಗೌಡರ ಇದ್ದರು.

ಅಲ್ಲಮಪ್ರಭು ಬನಶಂಕರಿ ಸಿದ್ಧರಾಮೇಶ್ವರ ದತ್ತಾತ್ರೆಯ ವೆಂಕಟರಮಣ ದೇವರುಗಳಿಗೆ ನಮಿಸಿ ದೂರದೃಷ್ಠಿವುಳ್ಳ ಚಾಲುಕ್ಯರು ರಾಜ್ಯ ಆಳಿದ್ದಾರೆ. ಬಾದಾಮಿ ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿನ ವಾಸ್ತುಶಿಲ್ಪ ವಿಶ್ವ ವಿಖ್ಯಾತವಾಗಿವೆ ಅಮಿತ್‌ ಶಾ ಕೇಂದ್ರ ಗೃಹ ಸಚಿವ

ಯಾರ ಮೀಸಲಾತಿ ರದ್ದು? ರಾಜ್ಯ ಸರ್ಕಾರ ಮತ ಬ್ಯಾಂಕ್ ರಾಜಕಾರಣದ ಹಿಂದೆ ಬೀಳದೆ ಧರ್ಮದ ಆಧಾರದ ಮೇಲಿನ ಮುಸ್ಲಿಂ ಸಮುದಾಯದ ಶೇ 4ರಷ್ಟು ಮೀಸಲಾತಿ ರದ್ದುಗೊಳಿಸಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಲಿಂಗಾಯತ ಮತ್ತು ಒಕ್ಕಲಿಗರ ಮೀಸಲಾತಿ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮುಸ್ಲಿಂರ ಮೀಸಲಾತಿಯನ್ನು ಮತ್ತೆ ಜಾರಿಗೆ ತುರುವುದಾಗಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ ಹೇಳಿದ್ದಾರೆ. ಯಾವ ಸಮುದಾಯದ ಮೀಸಲಾತಿ ಕಡಿಮೆ ಮಾಡಿ ನೀಡುತ್ತೀರಿ ಎಂಬುದನ್ನು ಹೇಳಬೇಕು ಎಂದು ಆಗ್ರಹಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT