ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಸತತ ಐದನೇ ಬಾರಿಗೆ ಗೆಲುವು, ಗದ್ದಿಗೌಡರಿಗೆ ಸಿಗುವುದೇ ಸಚಿವ ಸ್ಥಾನ?

Published 7 ಜೂನ್ 2024, 6:42 IST
Last Updated 7 ಜೂನ್ 2024, 6:42 IST
ಅಕ್ಷರ ಗಾತ್ರ

ಬಾಗಲಕೋಟೆ: ಸತತ ಐದನೇ ಬಾರಿಗೆ ಗೆಲುವು ಸಾಧಿಸಿರುವ ಪಿ.ಸಿ. ಗದ್ದಿಗೌಡರ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ.

ಶಾಸಕ ಬಸನೌಡ ಪಾಟೀಲ ಯತ್ನಾಳ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ‘ಈ ಬಾರಿಗೆ ಗದ್ದಿಗೌಡರ ಅವರನ್ನು ಗೆಲ್ಲಿಸಿ. ಕೇಂದ್ರದಲ್ಲಿ ಸಚಿವರಾಗಲಿದ್ದಾರೆ’ ಎಂದಿದ್ದರು. ಜತೆಗೆ ಅವರೊಂದಿಗೆ ಇದ್ದ ಜಗದೀಶ ಶೆಟ್ಟರ್‌ಗೆ ಈ ಬಾರಿ ನೀವು ಸಚಿವರಾಗದೇ, ಗದ್ದಿಗೌಡರಿಗೆ ಅವಕಾಶ ಮಾಡಿಕೊಡಬೇಕು ಎಂದೂ ಹೇಳಿದ್ದರು. ಈ ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ.

ರಾಜ್ಯದಿಂದ ಸತತ ಐದು ಬಾರಿ ಗೆದ್ದಿರುವ ಸಂಸದರ ಸಂಖ್ಯೆ ಬೆರಳೆಣಿಕೆಯಲ್ಲಿದೆ. ಲಿಂಗಾಯತ ಮುಖಂಡರಲ್ಲಿ ಅಂತಹವರಿಲ್ಲ. ಜೊತೆಗೆ ಪಕ್ಷದ ನಿಷ್ಠಾವಂತರಾಗಿದ್ದಾರೆ. ಮೊದಲ ಬಾರಿಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.

ಲಿಂಗಾಯತ ಕೋಟಾದಲ್ಲಿ ಪರಿಗಣಿಸಿದರೆ ಗೆದ್ದವರಲ್ಲಿ ಹಿರಿಯ ಸಂಸದರು ಗದ್ದಿಗೌಡರ. ಬೆಳಗಾವಿ ಕ್ಷೇತ್ರದಿಂದ ಜಗದೀಶ ಶೆಟ್ಟರ್, ಹಾವೇರಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ, ತುಮಕೂರು ಕ್ಷೇತ್ರದಿಂದ ಸೋಮಣ್ಣ ಗೆದ್ದಿದ್ದಾರೆ. ಇವರೆಲ್ಲರೂ ಮೊದಲ ಬಾರಿಗೆ ಸಂಸದರಾಗಿದ್ದಾರೆ. ಜತೆಗೆ ಶೆಟ್ಟರ್‌, ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಸೋಮಣ್ಣ ಸಚಿವರಾಗಿದ್ದರು. ಗದ್ದಿಗೌಡರಿಗೆ ಈವರೆಗೆ ಸಚಿವ ಸ್ಥಾನ ಲಭಿಸಿಲ್ಲ. ಆದ್ದರಿಂದ ಆದ್ಯತೆ ನೀಡಬಹುದು ಎನ್ನುವ ನಿರೀಕ್ಷೆಗಳಿವೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿ.ವೈ. ರಾಘವೇಂದ್ರ ಗೆದ್ದಿದ್ದಾರೆ. ಅವರ ಸಹೋದರ ಬಿ.ವೈ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾಗಿರುವುದರಿಂದ ಒಂದೇ ಕುಟುಂಬದಲ್ಲಿ ಅವಕಾಶ ನೀಡಲಿಕ್ಕಿಲ್ಲ ಎಂಬ ಲೆಕ್ಕಾಚಾರ ನಡೆದಿದೆ.

‘ಕಳೆದ ಲೋಕಸಭಾ ಅವಧಿಯಲ್ಲಿ ಕೃಷಿ ಸಮಿತಿ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹಿಂದೆ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಗದ್ದಿಗೌಡರ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಈಗಲೂ ಗದ್ದಿಗೌಡರ ಸಮಿತಿ ವರದಿ ಎಂದು ಕರೆಯಲಾಗುತ್ತದೆ. ಕೊಟ್ಟ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ’ ಎಂದು ಬಿಜೆಪಿ ನಾಯಕರು ಹೇಳುತ್ತಾರೆ.

ರಾಜ್ಯದಿಂದ ಸಚಿವರಾಗಿದ್ದ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ ಸೋತಿದ್ದಾರೆ. ಚಿತ್ರದುರ್ಗದ ಸಂಸದರಾಗಿದ್ದ ನಾರಾಯಣಸ್ವಾಮಿ ಅವರು ಚುನಾವಣೆಗೇ ಸ್ಪರ್ಧಿಸಿಲ್ಲ. ಪ್ರಲ್ಹಾದ ಜೋಶಿ ಗೆದ್ದಿದ್ದಾರಾದರೂ, ಬ್ರಾಹ್ಮಣ ಸಮುದಾಯದವರಾಗಿದ್ದಾರೆ. ರಾಜ್ಯದಲ್ಲಿ ರಾಜಕೀಯವಾಗಿ ಮುಖ್ಯ ಸಮುದಾಯಗಳಲ್ಲಿ ಲಿಂಗಾಯತವೂ ಒಂದಾಗಿದ್ದು, ಆ ಕೋಟಾದಲ್ಲಿ ಗದ್ದಿಗೌಡರಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT