ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ಹದಗೆಟ್ಟ ರಸ್ತೆಗೆ ಬಂತು ಸಿಸಿ ರಸ್ತೆ ಭಾಗ್ಯ

Published 11 ಜುಲೈ 2024, 4:20 IST
Last Updated 11 ಜುಲೈ 2024, 4:20 IST
ಅಕ್ಷರ ಗಾತ್ರ

ಬಾದಾಮಿ: ತಾಲ್ಲೂಕಿನ ಕೊನೆಯ ಸೀಮೆಯಲ್ಲಿ ಬೆಟ್ಟದ ಮೇಲಿರುವ ಅನಂತಗಿರಿ ತಾಂಡಾದ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿದ್ದು, ತಾಂಡಾ ಜನರಲ್ಲಿ ಸಂತಸ ಮೂಡಿಸಿದೆ.

ನೂರಾರು ವರ್ಷಗಳಿಂದ ಇಲ್ಲಿ ಶೇ 80ರಷ್ಟು ಲಂಬಾಣಿ ಜನಾಂಗ ವಾಸವಾಗಿದೆ. ಉಳಿದ ಜಾತಿಯ ಶೇ 20 ರಷ್ಟು ಜನ ವಾಸವಾಗಿದ್ದಾರೆ. ಕೃಷಿಯೇ ಇವರ ವೃತ್ತಿ.

ಬೆಟ್ಟದ ಕೆಳಗಿನ ನಸಗುನ್ನಿ ಗ್ರಾಮದ ವೃತ್ತದ ರಸ್ತೆಯಿಂದ ಬೆಟ್ಟದ ಮೇಲೆ ಅಂದಾಜು 300 ಮೀಟರ್ ಎತ್ತರದಲ್ಲಿ 3.5 ಕಿ.ಮೀ. ಅಂತರದಲ್ಲಿ ಅನಂತಗಿರಿ ತಾಂಡಾ ಇದೆ.

ಕುಡಿಯುವ ನೀರು, ರಸ್ತೆ, ಸಾರಿಗೆ ಸಂಪರ್ಕ, ಆರೋಗ್ಯ, ವಸತಿ ಮತ್ತು ಸರ್ಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದರ ಬಗ್ಗೆ ‘ಪ್ರಜಾವಾಣಿ’ ಗ್ರಾಮಾಯಣದಲ್ಲಿ ವರದಿ ಪ್ರಕಟವಾಗಿತ್ತು.

ಈ ಗ್ರಾಮಕ್ಕೆ 2013 ರಲ್ಲಿ ಸಿದ್ದರಾಮಯ್ಯ, 2017 ರಲ್ಲಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದಾಗ ರಸ್ತೆ ಮೊದಲಾದ ಸಮಸ್ಯೆಗಳ ಕುರಿತು ಜನ ಆಗ್ರಹಿಸಿದ್ದರು. ಮುಂದೆ ಇವರೇ ಮುಖ್ಯಮಂತ್ರಿಗಳಾದರೂ ಗ್ರಾಮದ ಕಡೆಗೆ ತಿರುಗಿ ನೋಡಲಿಲ್ಲ ಎಂಬ ಕೊರಗು ಜನರಿಗೆ ಇತ್ತು.

ತಾಂಡಾದ ರಸ್ತೆ ಕಾಮಗಾರಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪತ್ರ ಬರೆದು ರಸ್ತೆ ಕಾಮಗಾರಿ ಮಂಜೂರು ಮಾಡಿಸಿ ಭೂಮಿ ಪೂಜೆ ನೆರವೇರಿಸಿದ್ದ ಜನರಲ್ಲಿ ಹರ್ಷ ಮೂಡಿಸಿದೆ.

‘ನಮ್ಮೂರಿಗೆ ಹಿಂದಕ ಮಣ್ಣಿನ ರಸ್ತೆ ಇತ್ತರಿ. 30-40 ವರ್ಷದ ಮ್ಯಾಲೆ ಕಲ್ಲು ಜೋಡಿಸಿ ರಸ್ತಾ ಮಾಡಿದ್ದರು. ಎಲ್ಲಾ ಕಲ್ಲು ಕಿತುಗೊಂಡು ಹೋಗಿದ್ದವು. ಈಗ ರಸ್ತಾ ಮಾಡೂ ಭಾಗ್ಯ ಬಂದೈತ್ರಿ’ ಎಂದು ತಾಂಡಾದ ಭೀಮಪ್ಪ ಕಾರಬಾರಿ ಹೇಳಿದರು.

ಲೋಕೋಪಯೋಗಿ ಇಲಾಖೆಯಿಂದ ₹ 1.75 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯಲಿದೆ.

- ರಸ್ತೆ ಸಾರಿಗೆ ಇಲ್ಲದ್ದರಿಂದ ಮಕ್ಕಳು ಅರ್ಧದಲ್ಲಿಯೇ ಶಾಲೆ ಬಿಟ್ಟು ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಸ್ತೆಯಾದ ಮೇಲೆ ಸಾರಿಗೆ ವ್ಯವಸ್ಥೆ ಆಗಬೇಕು
ನಿಖಿಲ ಪದವಿ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT