ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಳೇದಗುಡ್ಡ | ಸಮಸ್ಯೆಗಳ ಆಗರ ಚಿಮ್ಮಲಗಿ ಗ್ರಾಮ

ಎಚ್.ಎಸ್.ಘಂಟಿ
Published 14 ಮೇ 2024, 4:18 IST
Last Updated 14 ಮೇ 2024, 4:18 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಚಿಮ್ಮಲಗಿ ಗ್ರಾಮ 14 ಕಿಮೀ ಅಂತರದಲ್ಲಿದೆ. ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ 500ಕ್ಕೂ ಅಧಿಕ ಮನೆಗಳಿದ್ದು ಮೂರು ಸಾವಿರದಷ್ಟು ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ.

500 ಮನೆಗಳನ್ನು ಹಳೇ ಗ್ರಾಮದಿಂದ ಪ್ರತ್ಯೇಕಿಸಿ 2009ರಲ್ಲಿ 410 ಮನೆಗಳನ್ನು 2 ಕಿಮೀ ಅಂತರದಲ್ಲಿ ಸ್ಥಳಾಂತರಿಸಿ ಪನರ್ವಸತಿ ಕಲ್ಪಿಸಲಾಗಿದೆ. ಮಂಗಳಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮವಾಗಿದ್ದು, ಒಟ್ಟು ಮೂರು 4 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದಲ್ಲಿ ಇದುವರೆಗೂ ಗಮನ ಸೆಳೆಯುವ ಅಭಿವೃದ್ಧಿ ಕೆಲಸಗಳಾಗಿಲ್ಲ.

ಚರಂಡಿ ವ್ಯವಸ್ಥೆ, ಕುಡಿಯುವ ನೀರು, ರಸ್ತೆ, ಶೌಚಾಲಯ ಸಮಸ್ಯೆಗಳು ಇದುವರೆಗೂ ಪರಿಹಾರವಾಗಿಲ್ಲ. ಮಲಪ್ರಭಾ ನದಿಗೆ ಸಮೀಪವಿರುವ ಮತ್ತು ಹಳ್ಳಕ್ಕೆ ಹೊಂದಿಕೊಂಡಿರುವ ಗ್ರಾಮ ಇದಾಗಿದ್ದು, 2009ರಲ್ಲಿ ಮೂಲ ಗ್ರಾಮದಿಂದ 2 ಕೀಮೀ ಅಂತರದಲ್ಲಿ ಮನೆಗಳನ್ನು ಸ್ಥಳಾಂತರಿಸಲಾಯಿತು. ಆದರೆ ಪುನರ್ ವಸತಿ ಗ್ರಾಮದಲ್ಲಿ ಮೂಲ ಸೌಕರ್ಯ ಮಾತ್ರ ಇಂದಿಗೂ ಮರಿಚಿಕೆಯಾಗಿವೆ.

ಸ್ಥಳಾಂತರವಾದ ಚಿಮ್ಮಲಗಿ ಗ್ರಾಮದಲ್ಲಿ ಯಾವುದೇ ಗುಡಿ ಗುಂಡಾರಗಳನ್ನು ಕಟ್ಟಿಲ್ಲ ಪೂಜೆ,ಹಬ್ಬ ಹರಿದಿನಗಳಲ್ಲಿ ಪೂಜೆಗೆ ಹಳೆ ಗ್ರಾಮಕ್ಕೆ ಬರಲೇ ಬೇಕಾದ ಅನಿವಾರ್ಯತೆ ಇದೆ. ಗ್ರಾಮ ಇದ್ದು ಇಲ್ಲವಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಶಪಿಸುತ್ತಿದ್ದಾರೆ.

ಶುದ್ಧ ನೀರಿನ ಘಟಕವಿಲ್ಲ: 2009ರಲ್ಲಿಯೇ ಗ್ರಾಮ ಸ್ಥಳಾಂತರವಾದರೂ ಇದುವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿಲ್ಲ. ಬೇಸಿಗೆಯಲ್ಲಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ.

ಗ್ರಾಮದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಅನುದಾನ ಕಡಿಮೆ ಇರುತ್ತದೆ. ಗ್ರಾಮದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿಯಿಂದ ಸರಿಯಾದ ಚರಂಡಿ ನಿರ್ಮಾಣ ಕುಡಿಯುವ ನೀರು ಮುಂತಾದ ಕಾರ್ಯಗಳನ್ನು ಮಾಡಿಸಲಾಗುವುದು.
ಹನಮಗೌಡ ಹೊಸಗೌಡರ, ಮಂಗಳಗುಡ್ಡ ಗ್ರಾಪಂ ಅಧ್ಯಕ್ಷ

ಗ್ರಾಮದಲ್ಲಿ ಉತ್ತಮ ರಸ್ತೆಗಳಿಲ್ಲ. ಕಳಪೆ ಕಾಮಗಾರಿ ಮಾಡಿರುವ ರಸ್ತೆ ಕಿತ್ತುಹೋಗಿವೆ. ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ಹೇಳತೀರದು. ಸಿಸಿ ರಸ್ತೆಯ ಪಕ್ಕ ಚರಂಡಿ ನಿರ್ಮಿಸದೇ ಇರುವುದರಿಂದ ಕೊಳಚೆ ರಸ್ತೆಯಲ್ಲಿ ಆವರಿಸಿಕೊಳ್ಳುತ್ತಿದೆ.

ಕಾರ್ಯಗತಗೊಳ್ಳದ ಜಲಜೀವನ್ ಮಿಷನ್: ಸ್ಥಳಾಂತರವಾದ ಗ್ರಾಮದಲ್ಲಿ ಎಲ್ಲ ಕಡೆ ಜಲಜೀವನ್ ಮಿಷನ್ ಅಡಿ ನಲ್ಲಿ ಜೋಡಿಸಿದ್ದಾರೆ. ಆದರೇ ಇದುವರೆಗೂ ನಲ್ಲಿಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ.

ಇದುವರೆಗೂ ಗ್ರಾಮ ಪಂಚಾಯಿತಿಯಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಲ್ಲ. ಗ್ರಾಮದಲ್ಲಿ ಬಯಲು ಬಹಿರ್ದೆಸೆ ಸಮಸ್ಯೆ ಇನ್ನೂ ಇದೆ. ಶೌಚಾಲಯ ನಿರ್ಮಿಸಿಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತ ಮೂಲಕ ಅನುದಾನ ಪಡೆದುಕೊಂಡಿದ್ದರೂ ಅನುಷ್ಠಾನ ಹಂತದಲ್ಲಿ ವಿಫಲವಾಗಿದೆ.

ಸ್ಮಶಾನ ಭೂಮಿಯಿಲ್ಲ: ಗ್ರಾಮವನ್ನು ಸ್ಥಳಾಂತರ ಮಾಡಿದರೂ ಅಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಮಾಡಿಕೊಟ್ಟಿಲ್ಲ. ಸ್ಮಶಾನಕ್ಕೆ ಸರ್ಕಾರಿ ಜಾಗ ಇಲ್ಲ. ಇದರಿಂದ ಗ್ರಾಮಕ್ಕೆ ಹೊಂದಿಕೊಂಡ ಹಳ್ಳ ಇಲ್ಲವೇ ಅಂತ್ಯ ಸಂಸ್ಕಾರವನ್ನು ತಮ್ಮ ಹೊಲಗಳ ಬದುವಿನಲ್ಲಿ ಮಾಡುವ ಸ್ಥಿತಿ ಇದೆ.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ, ಇಡೀ ಗ್ರಾಮದಲ್ಲಿ ಕೊಳಚೆ ದುರ್ವಾಸನೆ ಸಾಮಾನ್ಯವಾಗಿದೆ. ಮಳೆ ಸುರಿದಾಗ ಗುಡ್ಡ ಮತ್ತು ಮೇಲಿನ ಭೂಮಿಯ ನೀರು ಹರಿದು ಪರಿಶಿಷ್ಟರ ಕಾಲೊನಿಯಲ್ಲಿ ಸಂಗ್ರಹವಾಗುತ್ತದೆ.

‘ಚರಂಡಿ ನೀರು ಹರಿದು ಹೋಗಲು ದಾರಿ ಇಲ್ಲವಾಗಿದೆ. ಚರಂಡಿ ಮೂಲಕ ದಾರಿ ಮಾಡಿ ಹಳ್ಳಕ್ಕೆ ಕಳುಹಿಸುವ ಪ್ರಯತ್ನ ಮಾಡಿದರೆ ರೈತರು ವಿರೋಧಿಸುತ್ತಾರೆ. ಅವರು ತಡೆಗೋಡೆ ನಿರ್ಮಿಸಿ ನೀರನ್ನು ಬಿಡಿ ಎನ್ನುತ್ತಾರೆ. ಕೊಳಚೆ ನೀರಿನ ಮಧ್ಯೆ ನಾವು ವಾಸಿಸುವ ಪರಿಸ್ಥಿತಿ ಇದೆ’ ಎಂದು ಮಲ್ಲಪ್ಪ ಮಾದರ ಅಳಲು ವ್ಯಕ್ತಪಡಿಸಿದರು.

ಗ್ರಾಮವನ್ನು ಅಭಿವೃದ್ದಿ ಪಡಿಸಲು ಅನುದಾನದ ಕೊರತೆ ಇದೆ. ನರೇಗಾ ಯೋಜನೆಯಲ್ಲಿ ಕೆಲಸ ಮಾಡಿಸಲು ಹೊರಟರೆ ವೆಂಡರ್ ಕೊರತೆ ಇದೆ. ಅಲ್ಲಿ ನಿರ್ಮಾಣವಾದ ಕೆಲ ಚರಂಡಿಗಳಲ್ಲಿ ನೀರು ಸಂಗ್ರಹವಾಗುವುದರಿಂದ ಕಾಲ ಕಾಲಕ್ಕೆ ಸ್ವಚ್ಚಗೊಳಿಸಲಾಗುವುದು
ಎಂ.ಎಸ್.ವಾರದ, ಮಂಗಳಗುಡ್ಡ ಗ್ರಾಪಂ ಪಿಡಿಒ

ಗ್ರಾಮದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ. ಹೀಗಾಗಿ ಗ್ರಾಮದೆಲ್ಲೆಡೆ ತ್ಯಾಜ್ಯದ ರಾಶಿ ಬಿದ್ದುಕೊಂಡಿದೆ.

‘ಗ್ರಾಮದಲ್ಲಿ ಜನರಿಗೆ ಉತ್ತಮ ಕುಡಿಯುವ ನೀರಿಲ್ಲ. ಕೊಳವೆ ಬಾವಿಯಿಂದ ಒದಗಿಸುತ್ತಿರುವ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎಸ್.ಸರಗಣಾಚಾರಿ ತಿಳಿಸಿದರು.

ಚಿಮ್ಮಲಗಿಯಲ್ಲಿ ಸಮರ್ಪಕ ಚರಂಡಿಗಳಿಲ್ಲದ ಕಾರಣ ಜನವಸತಿಗಳೆದುರು ಕೊಳಚೆ ನಿರ್ಮಾಣವಾಗಿದೆ
ಚಿಮ್ಮಲಗಿಯಲ್ಲಿ ಸಮರ್ಪಕ ಚರಂಡಿಗಳಿಲ್ಲದ ಕಾರಣ ಜನವಸತಿಗಳೆದುರು ಕೊಳಚೆ ನಿರ್ಮಾಣವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT