ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯೇ ’ಸಂತೋಷ’ದ ಹಾದಿ

ಕೃಷಿಯತ್ತ ಮುಖಮಾಡಿದ ಹಿರೇಮಾಗಿಯ ಎಂಜಿನಿಯರ್
Last Updated 27 ಆಗಸ್ಟ್ 2018, 17:24 IST
ಅಕ್ಷರ ಗಾತ್ರ

ಹುನಗುಂದ: ಎಂಜಿನಿಯರಿಂಗ್ ಓದಿದ್ದರೂ, ತಿಂಗಳ ಸಂಬಳ ಎಣಿಸುತ್ತಾ ಹವಾನಿಯಂತ್ರಿತ ಕೊಠಡಿಯಲ್ಲಿ ಕೂರುವ ಹಂಬಲ ತೋರದ ತಾಲ್ಲೂಕಿನ ಹಿರೇಮಾಗಿಯ ಸಂತೋಷ ಕುಲಕರ್ಣಿ, ಮಣ್ಣಿನ ಮಗನಾಗಿ ಕೈ ತುಂಬಾ ಸಂಪಾದಿಸುತ್ತಿದ್ದಾರೆ.

ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿರುವ ಸಂತೋಷ, ತಾಲ್ಲೂಕಿನಲ್ಲಿ ಮಾದರಿ ರೈತ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ2015ರಲ್ಲಿ ಎಂಜಿನಿಯರಿಂಗ್ ಮುಗಿಸಿದ ಸಂತೋಷ ಕುಲಕರ್ಣಿ, ಕಂಪೆನಿಗಳ ಸಂದರ್ಶನ ಕರೆಗಾಗಿ ಕಾದು ಕುಳಿತುಕೊಳ್ಳಲಿಲ್ಲ. ಬದಲಿಗೆ ಕುಟುಂಬದಿಂದ ಬಳುವಳಿಯಾಗಿ ಬಂದಿದ್ದ 22 ಎಕರೆ ಜಮೀನಿನಲ್ಲಿಯೇ ಏನಾದರೂ ಮಾಡಬೇಕು. ಹೆಚ್ಚು ಕಲಿತವರೂ ಯಶಸ್ವಿ ಕೃಷಿಕರಾಗಲು ಸಾಧ್ಯ' ಎಂಬುದನ್ನು ಸಾಧಿಸಿ ತೋರಿಸಲು ಮುಂದಾದರು. ಅದರ ಫಲವಾಗಿ ಕೆ.ವಿ.ಜಿ ಬ್ಯಾಂಕ್‌ನಿಂದ ಸಾಲ ಪಡೆದು 16 ಜೆರ್ಸಿ ತಳಿಯ ಸಾಕಾಣಿಕೆ ಆರಂಭಿಸಿದರು. ಆರಂಭದಲ್ಲಿ ದಿನಕ್ಕೆ 40 ಲೀಟರ್ ಹಾಲು ಸಂಗ್ರಹಣೆ ಆರಂಭಿಸಿ ಅದನ್ನು ಡೇರಿಗೆ ಹಾಕಲು ಆರಂಭಿಸಿದರು. ಮೂರು ವರ್ಷಗಳಲ್ಲಿ ಅವಧಿಯಲ್ಲಿ ಅವರ ಕೊಟ್ಟಿಗೆಯಲ್ಲಿ ಹಸುಗಳ ಸಂಖ್ಯೆಯೂ ಹೆಚ್ಚಳಗೊಂಡಿದ್ದು, ಇಂದು 44 ಹಸುಗಳಿದ್ದು, ನಿತ್ಯ 230 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಿದ್ದಾರೆ.

‘ಹಸುಗಳಿಗೆ ಮೇವಿನ ಕೊರತೆ, ಜಮೀನಿನ ಸಂಪರ್ಕಕ್ಕೆ ಸರಿಯಾದ ರಸ್ತೆ ಇಲ್ಲದಿರುವ ಕಾರಣ ಹೈನುಗಾರಿಕೆಯಿಂದಮೊದಲ ವರ್ಷ ಲಾಭವಾಗಲಿಲ್ಲ. ಆರಂಭದಲ್ಲಿ ಹಾಲು ಡೈರಿ ಹೋಗಬೇಕಾದರೆ ಕ್ಯಾನ್ ಹೊತ್ತುಕೊಂಡು ಹೋಗುತ್ತಿದ್ದೆ. ಹೊಲ ಹೊಲ ಸುತ್ತಿ ಮೇವು ಸಂಗ್ರಹಿಸುತ್ತಿದ್ದೆ. ಆದರೂ ಅದು ಹಸುಗಳಿಗೆ ಸಾಕಾಗುತ್ತಿರಲಿಲ್ಲ. ಶಿವಯೋಗ ಮಂದಿರದಿಂದ ಹುಲ್ಲಿನ ಬೀಜ ತಂದು ನಾಲ್ಕು ಎಕರೆಯಲ್ಲಿ ನಾಟಿ ಮಾಡಿದೆ. ಅದರ ಫಲವಾಗಿ ಮೇವು ಸಾಕಷ್ಟು ಹುಲಸಾಗಿ ಬೆಳೆದಿದ್ದು, ಹಸುಗಳ ಹೊಟ್ಟೆ ತುಂಬಲು ನೆರವಾಗಿದೆ’ ಎಂದು ಸಂತೋಷ ಹೇಳುತ್ತಾರೆ.

ಸುಸಜ್ಜಿತ ದನದ ಕೊಠಡಿ: ಹಸುಗಳ ಸುರಕ್ಷೆ ನಿಟ್ಟಿನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿರುವ ಸಂತೋಷ ಕೊಟ್ಟಿಗೆಯಲ್ಲಿ ಕೆಳಗಡೆ ಮ್ಯಾಟ್ ಅಳವಡಿಕೆ , ಬಿದ್ದ ಸೆಗಣಿ ಮತ್ತು ಗೋವು ಮೂತ್ರ ಶೇಖರಣೆ ವ್ಯವಸ್ಥೆ, ದನಗಳಿಗೆ ನಿಯಮಿತವಾಗಿ ಸ್ನಾನದ ವ್ಯವಸ್ಥೆ ಮಾಡಿದ್ದಾರೆ.

ಕೊಟ್ಟಿಗೆಗೆ ಸಿ.ಸಿ ಕ್ಯಾಮೆರಾ ಅಳವಡಿಸಿದ್ದು, ಹಾಲು ಕರೆಯಲು, ಮೇವು ಕೊರೆಯಲು ಯಂತ್ರ ಬಳಕೆ ಮಾಡುತ್ತಿದ್ದಾರೆ. ಯುಪಿಎಸ್ ಅಳವಡಿಸಿ ಕೊಟ್ಟಿಗೆಯಲ್ಲಿ ನಿರಂತವಾಗಿ ಬೆಳಕು ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಆಕಳ ಕೆಚ್ಚಲಿಗೆ ಯಂತ್ರ ಅಳವಡಿಸಿದ್ದು, ಬಟನ್ ಒತ್ತಿದರೇ ಸಾಕು 6 ರಿಂದ 8 ನಿಮಿಷದಲ್ಲಿ 8ರಿಂದ 9 ಲೀಟರ್ ಹಾಲು ಕ್ಯಾನಿನಲ್ಲಿ ಸಂಗ್ರಹವಾಗುತ್ತದೆ.

ತಿಂಗಳ ಆದಾಯ : ’ಹಾಲು ಮಾರಾಟದಿಂದ ₹1.70 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ಖರ್ಚು ಕಳೆದು ಮಾಸಿಕ ₹30 ರಿಂದ 40 ಸಾವಿರ ಉಳಿತಾಯವಾಗುತ್ತಿದೆ. ಜೊತೆಗೆ ಗೋಬರ್ ಗ್ಯಾಸ್ ತಯಾರಿಸಲಾಗುತ್ತಿದ್ದು, ಸಾವಯವ ಗೊಬ್ಬರಕ್ಕೂ ಬೇಡಿಕೆ ಇದೆ. ಇದರಿಂದ ವರ್ಷಕ್ಕೆ ₹6 ಲಕ್ಷ ಸಂಪಾದಿಸುತ್ತಿದ್ದೇನೆ. ಹಾಲಿಗಿಂತ ಸೆಗಣಿ ಗೊಬ್ಬರ ಮತ್ತು ಗೋಮೂತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ’ ಎಂದು ಸಂತೋಷ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT