ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಮುಧೋಳ ತಳಿ ಬಿಂಕ ಹೆಚ್ಚಿಸಿದ ‘ಮನದ ಮಾತು’

Last Updated 1 ಅಕ್ಟೋಬರ್ 2020, 6:52 IST
ಅಕ್ಷರ ಗಾತ್ರ

ಬಾಗಲಕೋಟೆ: ಆಕಾಶವಾಣಿಯ ’ಮನದ ಮಾತು‘ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ತನ್ನನ್ನು ಹಾಡಿ ಹೊಗಳುತ್ತಿದ್ದಂತೆಯೇ ಇಲ್ಲಿನ ಮುಧೋಳ ತಳಿಯ ನಾಯಿ ಗಾಂಭೀರ್ಯ ಹಾಗೂ ಬಿಗುಮಾನ ಹೆಚ್ಚಿಸಿಕೊಂಡಿದೆ!

ತನ್ನೂರು ಮುಧೋಳಕ್ಕೆ ವಿಶ್ವಭೂಪಟದಲ್ಲಿ ಸ್ಥಾನಮಾನ ತಂದುಕೊಟ್ಟಿರುವ ನೀಳಕಾಯದ ಈ ಶುನಕಕ್ಕೆ ಈಗ ದೇಶ–ವಿದೇಶದಿಂದ ಭಾರೀ ಬೇಡಿಕೆ ಬಂದಿದೆ. ಇದರ ಹಿಂದೆಯೇ ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮುಧೋಳ ತಾಲ್ಲೂಕು ತಿಮ್ಮಾಪುರದ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರ ಈ ತಳಿ ನಾಯಿಯ ಬೆಲೆ ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ.

ತೋಟದ ಮನೆ, ಹೊಲ, ಗದ್ದೆಗಳ ಕಾವಲು ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದ ಮುಧೋಳ ತಳಿಯನ್ನು ಎರಡು ವರ್ಷಗಳ ಹಿಂದೆ ಭಾರತೀಯ ಸೇನೆ ದೇಶದ ಗಡಿ ಕಾಯುವ ಕೆಲಸಕ್ಕೆ ನೇಮಿಸಿಕೊಂಡಿತ್ತು. ಆಗಲೇ ಮುಧೋಳ ಜಾಗತಿಕ ಮಟ್ಟದಲ್ಲಿ ಶ್ವಾನಪ್ರಿಯರ ಗಮನ ಸೆಳೆದಿತ್ತು. ಈಗ ಪ್ರಧಾನಿ ಅವರಿಂದ ತಾರೀಪು ಬೇರೆ.. ಇದು ಮುಧೋಳ ತಳಿಗೆ ಈಗ ದೇಶದ ಅತ್ಯಂತ ಬೇಡಿಕೆಯ ಶ್ವಾನ ಎಂಬ ಗರಿಮೆ ತಂದುಕೊಟ್ಟಿದೆ.

’ಪ್ರಧಾನಮಂತ್ರಿ ಅವರು ಮನದ ಮಾತು ಮುಗಿಸುತ್ತಿದ್ದಂತೆಯೇ ಗೂಗಲ್ ಸರ್ಚ್ ಜಾಲಾಡಿ ಮುಧೋಳ ತಳಿಯ ಬಗ್ಗೆ ಸಾವಿರಾರು ಮಂದಿಶ್ವಾನ ಪ್ರಿಯರು ಮಾಹಿತಿ ಪಡೆದಿದ್ದಾರೆ. ನಾಯಿ ಮರಿ ಖರೀದಿಗೆ ಮುಗಿಬಿದ್ದಿದ್ದಾರೆ‘ ಎಂದು ತಿಮ್ಮಾಪುರ ಶ್ವಾನ ಸಂಶೋಧನಾ ಕೇಂದ್ರದ ಮುಖ್ಯಸ್ಥಡಾ.ಮಹೇಶ ಆಕಾಶಿ ಹೇಳುತ್ತಾರೆ.

ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಅಕ್ಕಪಕ್ಕದ ರಾಜ್ಯಗಳು ಮಾತ್ರವಲ್ಲದೇ ಉತ್ತರ ಭಾರತದಗುಜರಾತ್, ಪಶ್ಚಿಮ ಬಂಗಾಳ ಹಾಗೂ ದೂರದ ಬಹರೇನ್ ದೇಶದಲ್ಲಿ ನೆಲೆಸಿರುವ ಕೇರಳ ಮೂಲದವರೂ ಕರೆ ಮಾಡಿ ಮುಧೋಳ ತಳಿ ನಾಯಿ ಬಗ್ಗೆ ವಿಚಾರಿಸಿದ್ದಾರೆ. ಗೂಗಲ್ ನಲ್ಲಿ ಶ್ವಾನ ಸಂಶೋಧನಾ ಕೇಂದ್ರದ ಸಂಪರ್ಕ ಸಂಖ್ಯೆ ಹೆಕ್ಕಿ ಕರೆ ಮಾಡಿ, ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಬೇಡಿಕೆಯಷ್ಟು ಸಿಗದ ಕಾರಣ ಪೈಪೋಟಿಗೆ ಬಿದ್ದು ನಾಯಿಗಾಗಿ ಪ್ರಭಾವಿಗಳಿಂದಲೂ ಶಿಫಾರಸು ಮಾಡಿಸುತ್ತಿದ್ದಾರೆ ಎಂದು ಆಕಾಶಿ ಸಂತಸ ವ್ಯಕ್ತಪಡಿಸುತ್ತಾರೆ.

ಬೇಡಿಕೆ ಈಡೇರಿಕೆ ಕಷ್ಟ

ಸದ್ಯ ಕೇಂದ್ರದಲ್ಲಿ 32 ಹೆಣ್ಣು ಹಾಗೂ ಎಂಟು ಗಂಡು ಸೇರಿ 40 ನಾಯಿಗಳನ್ನು ಸಂತಾನ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಸಾಮಾನ್ಯವಾಗಿ ಗರ್ಭ ಧರಿಸಿದ 2 ತಿಂಗಳು 2 ದಿನಕ್ಕೆ ನಾಯಿ ಮರಿ ಹಾಕುತ್ತದೆ. ಆರು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ಎರಡು ಬಾರಿಸಂತಾನ ವೃದ್ಧಿಸುತ್ತವೆ.

’ಪ್ರಧಾನಿ ಅವರ ಮನದ ಮಾತಿಗೆ ಮುನ್ನ ತಿಂಗಳಿಗೆ 20 ನಾಯಿ ಮರಿಗಳಿಗೆ ಬೇಡಿಕೆ ಇತ್ತು. ಅದೀಗ 50ಕ್ಕೆ ಹೆಚ್ಚಳಗೊಂಡಿದೆ. ಹೀಗಾಗಿ ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ‘ ಎಂದು ಡಾ.ಮಹೇಶ ಆಕಾಶಿ ಹೇಳುತ್ತಾರೆ.

ಒಂದೂವರೆ ತಿಂಗಳು ತುಂಬಿದ ಮರಿಗಳನ್ನು ಮಾತ್ರ ಸಾಕುವವರಿಗೆ ಕೊಡಲಾಗುತ್ತದೆ. ಈ ಮಧ್ಯೆ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಾಲ್ಕು ಮರಿಗಳಿಗೆ ಬೇಡಿಕೆ ಸಲ್ಲಿಸಿದೆ. ಅಕ್ಟೋಬರ್ 15ರಂದು ಕೇಂದ್ರಕ್ಕೆ ಬಂದು ತಲಾ ಎರಡು ಗಂಡು ಹಾಗೂ ಹೆಣ್ಣು ಮರಿಗಳನ್ನು ಒಯ್ಯಲಿದ್ದಾರೆ ಎನ್ನುತ್ತಾರೆ.

ಬೆಲೆ ಹೆಚ್ಚಳಕ್ಕೆ ಪ್ರಸ್ತಾವ

ಕೇಂದ್ರದಲ್ಲಿ ಸದ್ಯ ಧೋಳ ತಳಿಯಗಂಡು ನಾಯಿ ಮರಿಯನ್ನು ₹10 ಸಾವಿರಕ್ಕೆ, ಹೆಣ್ಣು ಮರಿಯನ್ನು ₹9.5 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಅದು 2014ರಲ್ಲಿ ನಿಗದಿಯಾಗಿದ್ದ ದರ. ಈಗ ಸಾಕಾಣಿಕೆ ವೆಚ್ಚ ಹಾಗೂ ಬೇಡಿಕೆ ಎರಡೂ ಹೆಚ್ಚಳಗೊಂಡಿದೆ. ಹೀಗಾಗಿ ಗಂಡು ನಾಯಿ ಬೆಲೆಯನ್ನು ₹18 ಸಾವಿರ ಹಾಗೂ ಹೆಣ್ಣು ನಾಯಿ ಮರಿ ದರ ₹17 ಸಾವಿರಕ್ಕೆ ಹೆಚ್ಚಳಗೊಳಿಸುವಂತೆ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿ ವಿಶೇಷ ಸಮಿತಿ ರಚನೆ ಮಾಡಿ ಬೆಲೆ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಹೇಳುತ್ತಾರೆ.

ಮುಧೋಳ ಸಂಸ್ಥಾನದ ರಾಜ ಮಾಲೋಜಿರಾವ್ ಘೋರ್ಪಡೆ ಆಳ್ವಿಕೆ ಅವಧಿಯಲ್ಲಿ ಈ ತಳಿ ಅಭಿವೃದ್ಧಿಗೊಂಡಿದೆ. ಬೇಟೆಯ ಉದ್ದೇಶಕ್ಕೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ದೇಸಿ ತಳಿಯೊಂದಿಗೆ ಮಧ್ಯ ಏಷ್ಯಾದ ಸ್ಲೋಹಿ, ಪೂರ್ವ ಏಷ್ಯಾದ ಸಲೂಕಿ ಹಾಗೂ ಅಮೆರಿಕಾದ ಗ್ರೇಹಾಂಡ್ ತಳಿಗಳೊಂದಿಗೆ ಸಂಕರಣ ಮಾಡಿ ಮುಧೋಳ ತಳಿ ಸೃಷ್ಟಿಸಲಾಗಿದೆ.

ಮುಧೋಳ ತಳಿಯಲ್ಲಿ ಸಂಪೂರ್ಣ ಬೆಳೆದ ಗಂಡು ನಾಯಿ 32 ಇಂಚು ಎತ್ತರ, 30 ಕೆ.ಜಿ ತೂಕ, ಹೆಣ್ಣು ನಾಯಿ 28 ಇಂಚು ಎತ್ತರ, 25 ಕೆ.ಜಿ ತೂಕ ಇರುತ್ತವೆ.

ಮಾಲೋಜಿರಾವ್ ಘೋರ್ಪಡೆ ಅವಧಿಯಲ್ಲಿ ಮುಧೋಳ ತಳಿ ಸಂಸ್ಥಾನದ ಪ್ರತಿಷ್ಠೆಯ ಸಂಕೇತವಾಗಿತ್ತು. ಸಂಸ್ಥಾನದ ರಕ್ಷಣೆಯ ಜೊತೆಗೆ ಅಕ್ಕಪಕ್ಕದ ಸಂಸ್ಥಾನಿಕರಿಗೆ, ವಿದೇಶಿಯರಿಗೆ ಉಡುಗೊರೆ ಕೊಡಲು ಮಹಾರಾಜರು ಈ ತಳಿಯನ್ನು ಅಭಿವೃದ್ಧಿಪಡಿಸಿದ್ದರು. ಸಂಸ್ಥಾನದ ಆಳ್ವಿಕೆಯ ನಂತರ ಈ ನಾಯಿ ತಳಿಯನ್ನು ಕೃಷ್ಣಾ ತೀರದ ರೈತಾಪಿ ವರ್ಗ ಕಾಪಿಟ್ಟುಕೊಂಡು ಬಂದಿತ್ತು.

ಮುಧೋಳ ತಳಿಯ ಸಂರಕ್ಷಣೆಯ ಮಹತ್ವ ಅರಿತ ರಾಜ್ಯ ಸರ್ಕಾರ 2009ರಲ್ಲಿ ₹5.10 ಕೋಟಿ ವೆಚ್ಚದಲ್ಲಿ 40 ಎಕರೆ ವಿಸ್ತೀರ್ಣದಲ್ಲಿ ಶ್ವಾನ ಸಂಶೋಧನೆ ಹಾಗೂ ಮಾಹಿತಿ ಕೇಂದ್ರವನ್ನು ಆರಂಭಿಸಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಇದಕ್ಕೆ ವಿಶೇಷ ಅಸ್ಥೆ ವಹಿಸಿದ್ದರು.

ಸಂಸ್ಥಾನಿಕರ ಆಡಳಿತದ ನಂತರ ಮುಧೋಳ ತಳಿ ನಾಯಿಗೆ ಈಗ ಮತ್ತೆ ಹಿಂದಿನ ವೈಭವದ ದಿನಗಳು ಮರುಕಳಿಸಿವೆ ಎಂದು ಡಾ.ಮಹೇಶ ಆಕಾಶಿ ಬಣ್ಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT