ಬುಧವಾರ, ಮೇ 25, 2022
28 °C
ಭಾರತಾಂಬೆ, ಗೋವು, ಗಂಗಾ ನದಿ ಬಗ್ಗೆ ಅವಹೇಳನ ಆರೋಪ

ಇಳಕಲ್: ಅವಹೇಳನ ಆರೋಪ, ಉಸ್ಮಾನ್ ಘನಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಕಲ್ (ಬಾಗಲಕೋಟೆ ಜಿಲ್ಲೆ): ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಎಐಎಂಐಎಂ ರಾಜ್ಯ ಘಟಕದ ಅಧ್ಯಕ್ಷ ಉಸ್ಮಾನ್ ಘನಿ ಹುಮನಾಬಾದ ಅಪಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.

ಭಾರತ ಮಾತೆ, ಗೋವು ಹಾಗೂ ಗಂಗಾ ನದಿಯ ಬಗ್ಗೆ ಉಸ್ಮಾನ್ ಘನಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಇತ್ತೀಚೆಗೆ ಜಿಲ್ಲೆಯಾದ್ಯಂತ ವೈರಲ್ ಆಗಿತ್ತು. ನಂತರ ಉಸ್ಮಾನ ವಿರುದ್ಧ ಇಳಕಲ್ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಗರದ ಅಜಾದ್ ಸರ್ಕಲ್ ಹತ್ತಿರದ ಪೊಲೀಸ್ ಮೈದಾನದಿಂದ ಆರಂಭವಾದ ಮೆರವಣಿಗೆ ತರಕಾರಿ ಮಾರುಕಟ್ಟೆ, ಮುಖ್ಯ ಬಜಾರ್, ಗಾಂಧಿ ಚೌಕ ಮಾರ್ಗವಾಗಿ ಕಂಠಿ ವೃತ್ತದವರೆಗೆ ಸಾಗಿದೆ.

ಅಕ್ಕಪಕ್ಕದ ಜಿಲ್ಲೆಗಳಿಂದಲೂ ಹಿಂದೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಇಳಕಲ್‌ಗೆ ಬಂದಿದ್ದು, ಇಡೀ ನಗರ ಕೇಸರಿಮಯವಾಗಿದೆ. ಕೋವಿಡ್‌ ಸುರಕ್ಷತಾ ನಿಯಮಾವಳಿ ಗಾಳಿಗೆ ತೂರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ 600 ಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಾರ್ಥನಾ ಮಂದಿರಗಳಿಗೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಕಂಠಿ ವೃತ್ತದಲ್ಲಿ ರ್‍ಯಾಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ ಕಾರಂತ  ಮಾತನಾಡಲಿದ್ದಾರೆ. ಇಳಕಲ್ ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ್ ಸೇರಿದಂತೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

ರ್‍ಯಾಲಿ ಆರಂಭವಾಗುತ್ತಿದ್ದಂತೆಯೇ  ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು