ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಧೋಳ: ಕೃಷಿ ಉತ್ಪನ್ನ ಮೌಲ್ಯವರ್ಧನೆಯಲ್ಲಿ ಮೇಲುಗೈ

Published 9 ಫೆಬ್ರುವರಿ 2024, 5:16 IST
Last Updated 9 ಫೆಬ್ರುವರಿ 2024, 5:16 IST
ಅಕ್ಷರ ಗಾತ್ರ

ಮುಧೋಳ: ಅಧ್ಯಯನ, ಸತತ ಪ್ರಯತ್ನ, ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡುವ ಮನೋಭಾವವಿದ್ದರೆ ಯಾವುದು ಕೆಲಸ ಕಠಿಣವಾಗಲಾರದು ಎಂಬುವುದನ್ನ ಮುಧೋಳ ತಾಲ್ಲೂಕು ಮುಗಳಖೋಡ ಗ್ರಾಮದ ಪ್ರಗತಿಪರ ಸಾವಯವ ಕೃಷಿಕ ಶ್ರೀಕಾಂತ ಪರಸಪ್ಪ ಕುಂಬಾರ ಸಾಬೀತು ಮಾಡಿ ರಾಜ್ಯವೇ ತನ್ನತ್ತ ನೋಡುವಂತೆ ಮಾಡಿದ್ದಾರೆ.

13 ಎಕರೆ ಜಮೀನು ಹೊಂದಿರುವ ಶ್ರೀಕಾಂತ ಸಂಪೂರ್ಣ ಸಾವಯವ ಕೃಷಿಯನ್ನು ಮಾಡಿದ್ದಾರೆ. ಓದಿದ್ದು ಹತ್ತನೇ ತರಗತಿ ಮಾತ್ರವಾದರೂ ಸಾವಯವ ಕೃಷಿಯಲ್ಲಿ ಅಪಾರ ಜ್ಞಾನಹೊಂದಿದ್ದಾರೆ. ಏನೇ ಬೆಳೆದರೂ ಸಂಪೂರ್ಣ ಸಾಂಪ್ರದಾಯಕ ಪದ್ಧತಿ ಯಲ್ಲೇ ಮಾಡಿದ್ದಾರೆ. 2010ರಿಂದ ಸಾವಯವ ಕೃಷಿ ಆರಂಭಿಸಿ ತಮ್ಮ ಜಮೀನಿಗೆ ಸಾವಯವ ದೃಢೀಕರಣ ಹೊಂದಿದ್ದಾರೆ.

‘ಆರಂಭದ ಎರಡು ಮೂರು ವರ್ಷ ಕಷ್ಟ ಅನುಭವಿಸಿದೆ. ನಾನು ರಸಗೊಬ್ಬರ ಕೊಡುವುದಿಲ್ಲ ಎಂದು ಪಾಲುದಾರಿಕೆಯಲ್ಲಿ ಕೃಷಿ ಮಾಡಲು ಯಾರೂ ಮುಂದೆ ಬರುತ್ತಿರಲಿಲ್ಲ. ಈಗ ಕಬ್ಬು ಹಚ್ಚಿದ ವರ್ಷ ಪ್ರತಿ ಎಕರೆಗೆ 60 ಟನ್ ಹಾಗೂ ನಂತರದ ವರ್ಷ 50 ಟನ್ ಬೆಳೆ ಬರುತ್ತದೆ. ಎಲ್ಲ ರೈತರು ಸಾವಯವ ಕೃಷಿ ಮಾಡಬೇಕು’ ಎಂದು ಶ್ರೀಕಾಂತ ಹೇಳುತ್ತಾರೆ.

ತಮ್ಮ 13 ಎಕರೆ ಜಮೀನಿಗೆ ಕೊಳವೆ ಬಾವಿ ಮತ್ತು ಎಡದಂಡೆ ಕಾಲುವೆಯ ನೀರನ್ನು ಬಳಿಸಿ ಸಂಪೂರ್ಣ ನೀರಾವರಿ ಮಾಡಿಕೊಂಡಿದ್ದಾರೆ. ತಮ್ಮ ತೋಟದಲ್ಲಿ ಕಬ್ಬು, ಅರಸಿನ, ಕರಿಬೇವು, ನಿಂಬೆಹುಲ್ಲು (ಲೇಮನ್ ಗ್ರಾಸ್), ಬೆಳ್ಳೂಳ್ಳಿ, ಕೆಂಪು ಪುಂಡೆ ಬೆಳೆಗಳನ್ನು ಬೆಳೆಯುತ್ತಾರೆ.

‘ರೈತರು ಕೃಷಿ ಉತ್ಪನ್ನಗಳನ್ನು ಬೆಳೆದರೆ ಮಾತ್ರ ಸಾಲದು ನಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿದರೆ ಮಾತ್ರ ನ್ಯಾಯಯುತ ಬೆಲೆ ಸಿಗುತ್ತದೆ. ಮಾರುಕಟ್ಟೆಯನ್ನು ನರಂತರ ಗುಣಮಟ್ಟ ಕಾಪಾಡುವುದರಿಂದ ಬಾಯಿ ಪ್ರಚಾರ ದೊರೆತು ಸದೃಢ ಮಾರುಕಟ್ಟೆ ಹೊಂದಲು ಸಾಧ್ಯವೆಂಬುದು ನನ್ನ ಜೀವನದಲ್ಲಿ ನಡೆದಿದೆ. ಕಬ್ಬು ಬೆಳೆದು ಕಾರ್ಖಾನೆಗೆ ನೀಡುವುದರಿಂದ ಅಧಿಕ ಲಾಭ ಬರುವುದಿಲ್ಲ. ಬೆಲ್ಲ ತಯಾರಿಸಿ ಮೌಲ್ಯವರ್ಧನೆ ಮಾಡಬೇಕು. ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿದೆ. ಸಾವಯವ ಉತ್ಪನ್ನುಗಳನ್ನು ಬಳಸಲು ಜನರು ಮುಂದೆ ಬರುತ್ತಿದ್ದಾರೆ. ಇದರ ಸದುಪಯೋಗವನ್ನು ನಮ್ಮ ಯುವ ರೈತರು ಪಡೆದುಕೊಳ್ಳಲು ಸಾವಯವ ಕೃಷಿ ಮಾಡುವುದು ಇಂದು ಅಗತ್ಯವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಹಾಯ, ಪ್ರೋತ್ಸಾಹಧನ ನೀಡುತ್ತಿವೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಶ್ರೀಕಾಂತ ಹೇಳುತ್ತಾರೆ.

‘ನಾನು ಬೆಳೆದ ಕಬ್ಬನ್ನು ಮೊದಲು ಸ್ವಲ್ಪ ಪ್ರಮಾಣ ಬೆಲ್ಲ ತಯಾರಿಸಿ ಉಳಿದಿದನ್ನು ಸಕ್ಕರೆ ಕಾರ್ಖಾನೆಗೆ ಕೊಡುತ್ತಿದ್ದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಅಡಿಯಲ್ಲಿ ₹30 ಲಕ್ಷದ ವೆಚ್ಚದಲ್ಲಿ ಅಧುನಿಕ ತಂತ್ರಜ್ಞಾನದ, ಅತ್ಯಂತ ಶುದ್ಧತೆಯ ಬೆಲ್ಲ ತಯಾರಿಸುವ ಘಟಕವನ್ನು ಹಾಕಲಾಗಿದೆ. ಈ ಘಟಕಕ್ಕೆ ₹15 ಲಕ್ಷ ಸಹಾಯಧನ ದೊರಕಿದೆ. ಈ ನಾನು ಸಾವಯವ ಪದ್ಧತಿಯಲ್ಲೆ ಬೆಲ್ಲ ತಯಾರಿಸಿದೆ. ಗುಣಮಟ್ಟ, ಸ್ವಚ್ಛತೆಯಲ್ಲಿ ಯಾವುದೇ ರಾಜಿಮಾಡಿಕೊಳ್ಳುವುದಿಲ್ಲ. ಒಮ್ಮೆ ನಮ್ಮ ಬೆಲ್ಲ ಹಾಗೂ ಅರಿಸಿನ ಕೊಂಡುಕೊಂಡವರು ನಾಲ್ಕು ಜನರಿಗೆ ಹೇಳಿ ಅವರಿಗೂ ಕೊಡಿಸುತ್ತಾರೆ. ನಮ್ಮ ಬೆಲ್ಲ ಹಾಗೂ ಅರಿಸಿನ ಪುಡಿ ರಾಜ್ಯಧಾನಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಹೋಗುತ್ತಿದೆ. ನಾನು ಗ್ರಾಹಕರಿಗೆ ನೇರವಾಗಿ ಮಾರುವುದನ್ನು ಇಚ್ಛಿಸುತ್ತೇನೆ’ ಎಂದು ಮಾರುಕಟ್ಟೆ ಗುಟ್ಟನ್ನು ಹೇಳಿದರು.

ಒಂದು ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳು ₹3ಸಾವಿರ ನೀಡುತ್ತಿದ್ದರೆ ಶ್ರೀಕಾಂತ ಅವರು ಬೆಲ್ಲ ತಯಾರಿಕಾ ಘಟಕವನ್ನು ಉದ್ಯಮವಾಗಿಸಿಕೊಂಡು ₹5ಸಾವಿರ ಗಳಿಸುತ್ತಿದ್ದಾರೆ. ಕೈಗಾರಿಕೆಗೆ ವಿದ್ಯುತ್ ಪಡೆಯುವಂತೆ ₹ 7.50 ಲಕ್ಷ ವೆಚ್ಚ ಮಾಡಿ ವಿದ್ಯುತ್ ಘಟಕ ಪಡೆದುಕೊಂಡಿದ್ದಾರೆ. ಪ್ರತ್ಯೇಕ ವಾದ ಸೋಲಾರ್ ಡ್ರಾಯರ್ಮೂಲಕ ತೇವಾಂಶವನ್ನು ಹೊರತೆಗೆಯಲಾಗುತ್ತಿದೆ. ಗೊಬ್ಬರಕ್ಕಾಗಿ ತಿಪ್ಪೆ ಗೊಬ್ಬರ ಹಾಗೂ ಏಕದಳ, ದ್ವಿದಳ, ಸಿರಿಧಾನ್ಯ, ನವಧಾನ್ಯಗಳನ್ನು ಬಿತ್ತನೆ ಮಾಡಿ 45 ದಿನಗಳ ನಂತರ ಅವುಗಳನ್ನು ಮಣ್ಣೆಲ್ಲಿ ಮುಚ್ಚುವುದರಿಂದ ಎಲ್ಲ ರೀತಿಯ ಪೋಷಕಾಂಶ ಭೂಮಿಗೆ ಲಭ್ಯವಾಗುತ್ತಿದೆ.

ಸಾವಯವ ಕೃಷಿಗೆ ಬರಲು ಮುಧೋಳ ವಾತ್ಸಲ್ಯಧಾಮದ ಸಾಧಕಿ ಮೀರಾತಾಯಿ ಕೋಪ್ಪಿಕರ, ಸುಭಾಷ ಪಾಳೇಕರ  ಪ್ರೇರಣೆ ಎಂದು ಹೇಳುವ ಶ್ರೀಕಾಂತ ಅವರ ಕೆಲ ಕಾರ್ಯಗಳಿಗೆ ತಾಯಿ ಬೌರವ್ವ ಕುಂಬಾರ, ಪತ್ನಿ ವಿದ್ಯಾ ಕುಂಬಾರ ಸಾಥ್ ನೀಡುತ್ತಿದ್ದಾರೆ. ಸಹೋದರ ಮುತ್ತಪ್ಪ ಕುಂಬಾರ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದು ಪ್ರೋತ್ಸಾಹ ನೀಡುತ್ತಿದ್ದಾರೆ.

ಇವರಿಗೆ ಸಂದ ಪ್ರಶಸ್ತಿಗಳು: 2019 ರಲ್ಲಿ ರಾಜ್ಯ ಸರ್ಕಾರದ ಕೃಷಿ ಪಂಡಿತ್ ಪ್ರಶಸ್ತಿ, 2015 ರಲ್ಲಿ ಮಹೇಂದ್ರಾ ಅಗ್ರೀ ಪ್ರಶಸ್ತಿ, 2016 ರಲ್ಲಿ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಯುವ ಕೃಷಿಕ ಪ್ರಶಸ್ತಿ, 2017 ರಲ್ಲಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ, 2018 ರಲ್ಲಿ ಆಗ್ಯ್ರಾನಿಕ್ ಇಂಡಿಯಾ ನಾಶನಲ್ ಅವಾರ್ಡ್, 2023 ರಲ್ಲಿ ಅಸ್ಪಿ ಪಂಪ್ ಅಗ್ರಿ ಅವಾರ್ಡ್.

ಮಾಹಿತಿಗಾಗಿ ಶ್ರೀಕಾಂತ ಕುಂಬಾರ ಮೊಬೈಲ್‌ ಫೋನ್‌ 9740813888

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT