ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ ಕಚ್ಚಿದ ಗ್ರಾನೈಟ್‌ ಉದ್ಯಮ

ಸಾಲದ ಶೂಲದಲ್ಲಿ ಉದ್ಯಮಿಗಳು, ಕೆಲಸ ಕಳೆದುಕೊಂಡ 10 ಸಾವಿರ ಕಾರ್ಮಿಕರು
ಬಸವರಾಜ ಅ. ನಾಡಗೌಡ
Published 8 ಜನವರಿ 2024, 5:30 IST
Last Updated 8 ಜನವರಿ 2024, 5:30 IST
ಅಕ್ಷರ ಗಾತ್ರ

ಇಳಕಲ್‍: ಕೋವಿಡ್‌ ಸಂದರ್ಭದಲ್ಲಿ ಇತರ ಉದ್ಯಮಗಳಂತೆ ಕುಸಿತ ಕಂಡಿದ್ದ ಇಲ್ಲಿಯ ಗ್ರಾನೈಟ್‌ ಉದ್ಯಮವೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎನ್ನುವಾಗಲೇ ಮತ್ತೆ ಚೀನಾ ಸಂಬಂಧಿತ ವಿಷಯಗಳ ಕಾರಣಕ್ಕೆ ಮತ್ತೊಮ್ಮೆ ನೆಲಕಚ್ಚಿದ್ದು, ಉದ್ಯಮಿಗಳು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಎಲ್ಲೋ ಮಳೆ ಬಂದರೆ ಇನ್ನೊಲ್ಲೋ ಶೀತ’ ಎನ್ನುವಂತೆ ಚೀನಾ ಸಂಬಂಧಿತ ಬೆಳವಣಿಗೆಗಳಿಂದಾಗಿ ಗ್ರಾನೈಟ್‌ ಗಣಿಗಾರಿಕೆ ನೆಲಕಚ್ಚಿದೆ. ಚೀನಾ ಕರೆನ್ಸಿ ‘ಯಾನ್‌’ ಡಾಲರ್ ವಿರುದ್ಧ ಅಪಮೌಲ್ಯಗೊಂಡಿರುವುದು, ಗಡಿಯಲ್ಲಿ ಚೀನಾದ ಅತಿಕ್ರಮಣದಂತಹ ದುಸ್ಸಾಹಸ ಮಾಡಿದ ನಂತರ ರಾಜತಾಂತ್ರಿಕ ಸಂಬಂಧಗಳು ಹದೆಗೆಟ್ಟಿರುವುದು ಹಾಗೂ ಗ್ರಾನೈಟ್‌ ದಿಮ್ಮೆಗಳ ಗುಣಮಟ್ಟ ಪರೀಕ್ಷೆಯ ಮಾನದಂಡದಲ್ಲಿ ಬದಲಾವಣೆಗಳಾಗಿರುವುದರಿಂದ ಉದ್ಯಮ ತತ್ತರಿಸಿದೆ.

ಇಲ್ಲಿಯ ಗ್ರಾನೈಟ್ ಬ್ಲಾಕ್‌ಗಳನ್ನು ಖರೀದಿಸುತ್ತಿದ್ದ ಚೀನಾ ಕಟಿಂಗ್ ಹಾಗೂ ಪಾಲಿಷಿಂಗ್ ಮಾಡಿ ಸಿದ್ಧ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತದೆ. ಡಾಲರ್‌ ವಿನಿಮಯ ದರ 6 ಯಾನ್‌ ಇದ್ದದ್ದು, 7.1ಕ್ಕೆ ಹೆಚ್ಚಳವಾಗಿದೆ. ಚೀನಾದ ಯಾನ್‌ ಶೇ18ರಷ್ಟು ಅಪಮೌಲ್ಯಗೊಂಡಿದೆ. ಪರಿಣಾಮ ಚೀನಾದ ಗ್ರಾನೈಟ್‌ ಕಟಿಂಗ್‌ ಹಾಗೂ ಪಾಲಿಷಿಂಗ್ ಕಂಪನಿಗಳ ಲಾಭ ತಗ್ಗಿದೆ. ಹಾಗಾಗಿ ಗ್ರಾನೈಟ್ ಬ್ಲಾಕ್‌ಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆ ಮಾಡಿವೆ.

ಜತೆಗೆ ದೇಶದ ಲಡಾಕ್ ಹಾಗೂ ಈಶಾನ್ಯ ಭಾಗ, ಅದರಲ್ಲೂ ಡೋಕ್ಲಾಂನಲ್ಲಿ ಚೀನಾದ ತಗಾದೆ ನಂತರ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ. ಇಲ್ಲಿಗೆ ಗ್ರಾನೈಟ್ ದಿಮ್ಮೆಗಳ ಖರೀದಿಗೆ ಬರುತ್ತಿದ್ದ ಚೀನಾ ಕಂಪನಿಗಳ ಪ್ರತಿನಿಧಿಗಳಿಗೆ (ಮಾರ್ಕರ್‌) ಭಾರತ ಸರ್ಕಾರ ವೀಸಾ ನೀಡುತ್ತಿಲ್ಲ. ಆದ್ದರಿಂದ ಬ್ಲಾಕ್‌ಗಳು ರಫ್ತಾಗುತ್ತಿಲ್ಲ.

ಶ್ರೀಲಂಕಾದಿಂದ ಪ್ರವಾಸಿ ವೀಸಾದಲ್ಲಿ ಬರುವ ಒಬ್ಬಿಬ್ಬರು ಮಾರ್ಕರ್‌ಗಳು ಅಲ್ಪ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಗ್ರಾನೈಟ್‌ ದಿಮ್ಮೆಗಳ ಗುಣಮಟ್ಟ ನಿರ್ಧರಿಸುವ ಮಾನದಂಡಗಳನ್ನು ಸಹ ಈಚೆಗೆ ಚೀನಾ ಕಂಪನಿಗಳು ಪರಿಷ್ಕರಿಸಿವೆ. 2005ಕ್ಕಿಂತ ಮುಂಚೆ ಇದ್ದ ಬ್ಲಾಕ್ ವಾಟರಿಂಗ್ (ಗ್ರಾನೈಟ್ ದಿಮ್ಮೆಗೆ ನೀರು ಸಿಂಪಡಿಸಿ ದೋಷಗಳನ್ನು ಹುಡುಕುವುದು) ಮತ್ತೆ ರೂಢಿಗೆ ಬಂದಿದೆ. ಶೂನ್ಯ ದೋಷವಿರುವ ಬ್ಲಾಕ್‌ಗಳ ಉತ್ಪಾದನೆ ಕಷ್ಟ. ಇದು ಕೂಡಾ ಗ್ರಾನೈಟ್ ಉದ್ಯಮದ ಮೇಲೆ ಪರಿಣಾಮ ಬೀರಿದೆ.

ಪ್ರತಿ ತಿಂಗಳು 6 ರಿಂದ 7 ಸಾವಿರ ಕ್ಯುಬಿಕ್ ಮೀಟರ್ ರಫ್ತು ಆಗುತ್ತಿದ್ದ ದಿಮ್ಮೆಗಳ ಪ್ರಮಾಣ ಈಗ ಕೇವಲ ಒಂದು ಸಾವಿರ ಕ್ಯುಬಿಕ್ ಮೀಟರ್‌ಗೆ ತಗ್ಗಿದೆ. ಇಲ್ಲಿಯ ಗ್ರಾನೈಟ್‌ ಗಣಿಗಳಿಂದ ಪ್ರತಿ ತಿಂಗಳು ₹70 ಕೋಟಿ ಮೌಲ್ಯದ ಗ್ರಾನೈಟ್‌ ಬ್ಲಾಕ್‌ಗಳು ರಫ್ತಾಗುತ್ತಿದ್ದ ಜಾಗದಲ್ಲಿ ಈಗ ₹10 ಕೋಟಿಗೆ ಇಳಿದಿದೆ.

ಜಿಲ್ಲೆಯಲ್ಲಿ 2017-18ರಲ್ಲಿ ₹28.45 ಕೋಟಿ ರಾಜಧನ ಸಂಗ್ರಹವಾಗಿತ್ತು. 2022-23 ಸಾಲಿನಲ್ಲಿ ₹15.71 ಕೋಟಿಗೆ ಇಳಿದಿದೆ. ಈ ವರ್ಷ ಶೇ80ರಷ್ಟು ರಾಜಧನ ಸಂಗ್ರಹ ಕಡಿಮೆಯಾಗಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಮುಚ್ಚುತ್ತಿರುವ ಕಟಿಂಗ್‌ ಮತ್ತು ಪಾಲಿಷಿಂಗ್‌ ಘಟಕಗಳು: ಸರ್ಕಾರ ಯಾವುದೇ ನೆರವು, ಮೂಲಸೌಕರ್ಯ ಒದಗಿಸದೇ ಇದ್ದಾಗ್ಯೂ ಇಲ್ಲಿಯ ಉದ್ಯಮಿಗಳು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಸ್ವಪ್ರಯತ್ನದಿಂದ ಇಳಕಲ್‍ ಸುತ್ತಮುತ್ತ ಗ್ರಾನೈಟ್‍ ಉದ್ಯಮ ಕಟ್ಟಿ ಬೆಳೆಸಿದ್ದಾರೆ. 300 ಗ್ರಾನೈಟ್‍ ಕಟಿಂಗ್‍ ಹಾಗೂ ಪಾಲಿಷಿಂಗ್ ಫ್ಯಾಕ್ಟರಿಗಳು ಆರಂಭವಾದವು. 10 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಉದ್ಯೋಗ ಲಭಿಸಿತ್ತು.

ಫ್ಯಾಕ್ಟರಿ ಮಾಲೀಕರಿಗೆ ಸ್ವಂತ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಸರ್ಕಾರ ಲೀಸ್ ನೀಡುತ್ತಿಲ್ಲ. ಜಿಲ್ಲಾ ಹಂತದಲ್ಲಿ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಲೀಸ್‌ ನೀಡಬೇಕು ಎಂದು ಉದ್ಯಮಿಗಳು ಆಗ್ರಹಿಸುತ್ತಿದ್ದಾರೆ. ನೂರಾರು ಲೀಸ್ ಪ್ರಸ್ತಾವಗಳು ಸರ್ಕಾರ ಹಂತದಲ್ಲಿ ಹಾಗೆಯೇ ಉಳಿದಿವೆ. ಗ್ರಾನೈಟ್‌ ಉದ್ಯಮದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಕಿರುಕುಳ ನೀಡುತ್ತಾ ಬಂದಿದ್ದಾರೆ. ಗ್ರಾನೈಟ್ ಉದ್ಯಮದಲ್ಲಿ ವೃತ್ತಿಪರತೆ ಹಾಗೂ ಉದ್ಯಮಶೀಲತೆ ಪ್ರೋತ್ಸಾಹಿಸುವ ಕೆಲಸ ಸರ್ಕಾರದಿಂದ ಯಾವತ್ತೂ ಆಗಿಲ್ಲ ಎಂಬುದು ಇಲ್ಲಿಯ ಉದ್ಯಮಿಗಳ ಆರೋಪ.

ಸಾಲದ ಶೂಲ, ಹರಾಜಾಗುತ್ತಿರುವ ಆಸ್ತಿ: ಬ್ಯಾಂಕ್‌ಗಳಿಂದ ಸಾಲ ಪಡೆದು ಹೊಸದಾಗಿ ಗ್ರಾನೈಟ್ ಉದ್ಯಮದಲ್ಲಿ ತೊಡಗಿರುವ ಯುವ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲದ ಬಡ್ಡಿಯನ್ನೂ ಕಟ್ಟಲಾಗುತ್ತಿಲ್ಲ. ಅಡವಿಟ್ಟ ಆಸ್ತಿಗಳು ಹರಾಜು ಆಗುತ್ತಿವೆ. 

ದಶಕಗಳ ಹಿಂದೆ ಫ್ಯಾಕ್ಟರಿಗಳಲ್ಲಿ ಕಲ್ಲು ಕಟಿಂಗ್‌ ಮಾಡಲು ಸೀಮೆಎಣ್ಣೆ ಹಾಗೂ ಎರೋಲೈಟ್‌ ಬಳಕೆ ಮಾಡಲಾಗತ್ತಿತ್ತು. ಆಗ ಗ್ರಾನೈಟ್ ಫ್ಯಾಕ್ಟರಿಗಳ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿತ್ತು. ತ್ಯಾಜ್ಯ ವಿಲೇವಾರಿಗೆ ಸರ್ಕಾರ ಜಾಗ ನೀಡಲಿಲ್ಲ. ಈಗ ವಾಟರ್‌ ಕಟಿಂಗ್‌ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಉದ್ಯಮಿಗಳು ಜಮೀನು ಖರೀದಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಗ್ರಾನೈಟ್‌ ಫ್ಯಾಕ್ಟರಿಗಳ ನುಣುಪಾದ ತ್ಯಾಜ್ಯದಿಂದ ವಿಟ್ರಿಫೈಡ್ ಟೈಲ್ಸ್‌, ಬ್ರಿಕ್ಸ್‌ ಮಾಡುವುದರಿಂದ ತ್ಯಾಜ್ಯದ ಸಮಸ್ಯೆ ತಗ್ಗಿದೆ.

ಒಂದು ರಾಜ್ಯ, ಎರಡು ಕಾನೂನು: ಪಟ್ಟಾ ಜಮೀನಿನಲ್ಲಿ ಗ್ರಾನೈಟ್‍ ಗಣಿಗಾರಿಕೆಗೆ ಲೀಸ್‍ ನೀಡುವ ಸಂಬಂಧ ರಾಜ್ಯದ ಉತ್ತರ ಭಾಗ ಹಾಗೂ ದಕ್ಷಿಣ ಭಾಗಡಲು ಜಿಲ್ಲಾಧಿಕಾರಿಯೇ ಲೀಸ್‌ ನೀದಲ್ಲಿ ವಿಭಿನ್ನ ನಿಯಮಗಳು ಜಾರಿಯಲ್ಲಿವೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ಮಾಡುತ್ತಾರೆ.

‘ಉತ್ತರ ಕರ್ನಾಟಕ ಭಾಗದವರ ಲೀಸ್‌ ಪ್ರಸ್ತಾವಗಳು ರಾಜ್ಯ ಮಟ್ಟದ 11 ಇಲಾಖೆಗಳನ್ನು ಸುತ್ತಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರ ಕಚೇರಿಗೆ ಬರಬೇಕು. ನಷ್ಟದ ಕಾರಣಕ್ಕೆ ಕ್ವಾರಿ ಬಂದ್‌ ಮಾಡಿದರೂ ಸರ್ಕಾರಕ್ಕೆ ಪ್ರತಿ ಎಕರೆಗೆ ₹18 ಸಾವಿರ ಸ್ಟ್ಯಾಂಡಿಂಗ್‌ ರೆಂಟ್‌ ಕಟ್ಟಬೇಕು.  ಚಾಮರಾಜನಗರದಲ್ಲಿ ಪಟ್ಟಾ ಜಮೀನಿನಲ್ಲಿ ಗಣಿಗಾರಿಕೆ ಮಾಡುವವರಿಗೆ ರೆಂಟ್ ಇಲ್ಲ. ಗ್ರಾನೈಟ್‍ ಉದ್ಯಮದ ಬೆಳವಣಿಗೆಗೆ ತೊಡಕಾಗಿರುವ ಅನೇಕ ಅವೈಜ್ಞಾನಿಕ ನಿಯಮಗಳನ್ನು ರದ್ದುಪಡಿಸುವಂತೆ ಅನೇಕ ಸಲ ವಿನಂತಿಸಿದರೂ ಪ್ರಯೋಜನವಾಗಿಲ್ಲʼ ಎಂದು ಕಲ್ಯಾಣ ಕರ್ನಾಟಕ ಗ್ರಾನೈಟ್‌ ಗಣಿ ಮಾಲೀಕರ ಸಂಘದ ಅಧ್ಯಕ್ಷ ಬಾಲನಗೌಡ ಪಾಟೀಲ ದೂರಿದರು.

ದುಬಾರಿ ಜಿಎಸ್‌ಟಿ ಹಾಗೂ ರಾಜಧನ: ‘ಕಚ್ಚಾ ದಿಮ್ಮೆಗಳ ಮೇಲೆ ಶೇ18, ಪಾಲಿ‌‌‌‌ಷಿಂಗ್ ಆಗಿರುವ ಸ್ಲ್ಯಾಬ್‌ ಹಾಗೂ ಟೈಲ್ಸ್‌ಗಳಿಗೆ ಶೇ18 ಜಿಎಸ್‌ಟಿ ವಿಧಿಸಲಾಗುತ್ತಿದೆ. ಟಿಡಿಎಸ್ ಸೇರಿದಂತೆ ಶೇ40ರಷ್ಟು ಸರ್ಕಾರಕ್ಕೆ ಕಟ್ಟಬೇಕು. ಇದರ ಜತೆಗೆ ರಫ್ತು ಗುಣಮಟ್ಟದ ಗ್ರಾನೈಟ್‍ ದಿಮ್ಮೆಗಳಿಗೂ, ಸ್ಥಳೀಯ ಮಾರುಕಟ್ಟೆಯಲ್ಲಿ‌ ಮಾರಾಟವಾಗುವ ತಿಳಿ ಬಣ್ಣದ (ಲೈಟ್‌ ಕಲರ್) ಕಡಿಮೆ ಗುಣಮಟ್ಟದ ಗ್ರಾನೈಟ್‍ ದಿಮ್ಮೆಗಳಿಗೂ ಏಕರೂಪದ ರಾಜಧನ ವಿಧಿಸಲಾಗಿದೆ. ಮುದಗಲ್‌ ಗ್ರೇ ಪ್ರತಿ ಟನ್‌ಗೆ ₹250 ಇದ್ದರೆ, ಇಳಕಲ್‌ ಸುತ್ತಮುತ್ತಲಿನ ಕೆಂಪು ಶಿಲೆಗೆ ₹400 ಇದೆ. ರಾಜಧನತಗ್ಗಿಸಬೇಕು ಎಂದು ಮನವಿ ಮಾಡುತ್ತಲೇ ಇದ್ದರೂ ಯಾವ ಸರ್ಕಾರವೂ ಸ್ಪಂದಿಸಿಲ್’ಲ ಎಂದು ಗ್ರಾನೈಟ್ ಫ್ಯಾಕ್ಟರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ಗುಡಗುಂಟಿ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಇಳಕಲ್‌ ಪಿಂಕ್‌ ಗ್ರಾನೈಟ್‌ ಗಣಿಗಾರಿಕೆಯ ಚಿತ್ರ
ಇಳಕಲ್‌ ಪಿಂಕ್‌ ಗ್ರಾನೈಟ್‌ ಗಣಿಗಾರಿಕೆಯ ಚಿತ್ರ
ಇಳಕಲ್‌ ಪಿಂಕ್‌ ಗ್ರಾನೈಟ್‌ ಗಣಿಗಾರಿಕೆಯ ಚಿತ್ರ
ಇಳಕಲ್‌ ಪಿಂಕ್‌ ಗ್ರಾನೈಟ್‌ ಗಣಿಗಾರಿಕೆಯ ಚಿತ್ರ
ಗ್ರಾನೈಟ್‌ ಕಟಿಂಗ್‌ ಹಾಗೂ ಪಾಲಿಷಿಂಗ್‌ ಫ್ಯಾಕ್ಟರಿ
ಗ್ರಾನೈಟ್‌ ಕಟಿಂಗ್‌ ಹಾಗೂ ಪಾಲಿಷಿಂಗ್‌ ಫ್ಯಾಕ್ಟರಿ
ಗ್ರಾನೈಟ್‌ ಹಾಗೂ ಟೈಲ್ಸ್‌ ಮಾರಾಟ ಮಳಿಗೆಯ ಚಿತ್ರ
ಗ್ರಾನೈಟ್‌ ಹಾಗೂ ಟೈಲ್ಸ್‌ ಮಾರಾಟ ಮಳಿಗೆಯ ಚಿತ್ರ
ಇಳಕಲ್‌ ಪಿಂಕ್‌ ಗ್ರಾನೈಟ್
ಇಳಕಲ್‌ ಪಿಂಕ್‌ ಗ್ರಾನೈಟ್
ಗ್ರಾನೈಟ್‌ ಗಣಿಯಲ್ಲಿ ಡ್ರಿಲಿಂಗ್‌ ಮಾಡುತ್ತಿರುವ ಕಾರ್ಮಿಕರು.
ಗ್ರಾನೈಟ್‌ ಗಣಿಯಲ್ಲಿ ಡ್ರಿಲಿಂಗ್‌ ಮಾಡುತ್ತಿರುವ ಕಾರ್ಮಿಕರು.
ಗಣಿಗಾರಿಕೆಗೆ ಲೀಸ್‌ ನೀಡುವುದನ್ನು ಸರಳೀಕರಣ ಮಾಡಬೇಕು ರಾಜಧನ ತಗ್ಗಿಸಬೇಕು ಹಾಗೂ ವಿದ್ಯುತ್‌ ದರ ಕಡಿಮೆ ಮಾಡಬೇಕು
ವೆಂಕಟೇಶ ಗುಡಗುಂಟಿ , ಅಧ್ಯಕ್ಷ ಗ್ರಾನೈಟ್‌ ಫ್ಯಾಕ್ಟರಿ ಮಾಲೀಕರ ಸಂಘ
ರಾಜ್ಯದ ಗ್ರಾನೈಟ್‍ ಉದ್ಯಮದಲ್ಲಿ ಇಳಕಲ್‍ ಗ್ರಾನೈಟ್ ಉದ್ಯಮ ಸಿಂಹಪಾಲು ಹೊಂದಿದೆ. ಸರ್ಕಾರದ ಆದಾಯ ಉದ್ಯೋಗಗಳ ಸೃಜನೆ ಉದ್ಯಮಿಗಳ ಸಂಕಷ್ಟ ನಿವಾರಣೆಗೆ ಸರ್ಕಾರ ಚರ್ಚೆ ನಡೆಸಬೇಕು
ಅರವಿಂದ ಮಂಗಳೂರ ಉದ್ಯಮಿ

ಉದ್ಯೋಗ ನಷ್ಟ ಐದಾರು ವರ್ಷಗಳ ಹಿಂದೆ ಇಳಕಲ್‌ ತಾಲ್ಲೂಕಿನ ಬಲಕುಂದಿಯಲ್ಲಿದ್ದ ಚೆನ್ನೈ ಮೂಲದ ಜೆಮ್‌ ಕಂಪನಿ ಬಂದ್‌ ಆದಾಗ 1500 ಕಾರ್ಮಿಕರು ಬೀದಿ ಪಾಲಾದರು. ಈಗ ಬಲಕುಂದಿ ಉಪನಾಳ ಕೊಡಗಲಿ ಚಿಕ್ಕಕೊಡಗಲಿ ಹಿರೇಕೊಡಗಲಿ ಗುಡೂರ ಎಸ್‌ಬಿ ಹನಮನಾಳ ಹಾಗೂ ಕೊಪ್ಪಳ ಜಿಲ್ಲೆಯ ಹೂಲಗೇರಿ ಪುರತಗೇರಿ ಕಡೂರ ಹಾಗೂ ಅಂಟರಠಾಣ ವ್ಯಾಪ್ತಿಯಲ್ಲಿದ್ದ 120ಕ್ಕೂ ಹೆಚ್ಚು ಗಣಿಗಳಲ್ಲಿ ಬೆರಳೆಣಿಕೆಯಷ್ಟು ಗಣಿಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ ಬಿಹಾರ ಓರಿಸ್ಸಾದಿಂದ ಬಂದು ಕೆಲಸ ಮಾಡುತ್ತಿದ್ದ 5 ಸಾವಿರಕ್ಕೂ ಅಧಿಕ ಕಾರ್ಮಿಕರು ಗಣಿಗಳು ಬಂದ್‌ ಆಗಿದ್ದ ಕಾರಣಕ್ಕೆ ತವರು ರಾಜ್ಯಗಳಿಗೆ ಮರಳಿದ್ದಾರೆ.

ಹೆಚ್ಚಿರುವ ಉತ್ಪಾದನಾ ವೆಚ್ಚ ವಿದ್ಯುತ್‌ ದರ ಏರಿಕೆಯ ಪರಿಣಾಮ ಪ್ರತಿ ತಿಂಗಳ ವಿದ್ಯುತ್‌ ಬಿಲ್‌ ದುಪ್ಪಟ್ಟಾಗಿದೆ. ಪ್ರತಿ ತಿಂಗಳು ₹1.5 ಲಕ್ಷ ಬರುತ್ತಿದ್ದ ವಿದ್ಯುತ್‌ ಬಿಲ್‌ ಈಗ ₹2.7 ಲಕ್ಷಕ್ಕೆರಿದೆ. ಫ್ಯಾಕ್ಟರಿ ಬಂದ್‌ ಮಾಡಿದರೂ ಹೆಸ್ಕಾಂನಿಂದ ಅನುಮತಿ ಪಡೆದ ಕಿಲೋ ವ್ಯಾಟ್‌ ಪ್ರಮಾಣಕ್ಕೆ ತಕ್ಕಂತೆ ಪ್ರತಿ ತಿಂಗಳು ಕನಿಷ್ಠ ₹30 ಸಾವಿರ ವಿದ್ಯುತ್‌ ಬಿಲ್‌ ಕಟ್ಟಬೇಕಾಗಿದೆ. ಅನೇಕ ಉದ್ಯಮಿಗಳು ಫ್ಯಾಕ್ಟರಿ ನಡೆಸಲಾಗದೇ ಬೇರೊಬ್ಬರಿಗೆ ಲೀಸ್‌ ಕೊಟ್ಟಿದ್ದಾರೆ. ಇಲ್ಲಿಯ ಸಿಗುವ ಗ್ರಾನೈಟ್‌ ಶಿಲೆ ವಜ್ರದಂತೆ ಕಠಿಣ ಹಾಗೂ ಉತ್ಕೃಷ್ಟ ಗುಣಮಟ್ಟದ್ದು. ಕಟಿಂಗ್‌ ಹಾಗೂ ಪಾಲಿಷಿಂಗ್‌ಗೆ ತಗುಲುವ ವೆಚ್ಚ ಹೆಚ್ಚು. ಈ ಹಿಂದೆ ಸ್ಲ್ಯಾಬ್‌ನ ಪ್ರತಿ ಚದುರ ಅಡಿಗೆ ₹60 ಇದ್ದ ಉತ್ಪಾದನಾ ವೆಚ್ಚ ₹100ಕ್ಕೆ ಏರಿಕೆಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ನೆರೆರಾಜ್ಯಗಳ ಗ್ರಾನೈಟ್‌ ಸ್ಲ್ಯಾಬ್‌ಗಳ ಬೆಲೆ ಕಡಿಮೆ ಇದ್ದು ಈ ಬೆಲೆಯೊಂದಿಗೆ ಸ್ಪರ್ಧಿಸಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT