ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಪ್ರವಾಹ ಅಧ್ಯಯನ ತಂಡಕ್ಕೆ ರೈತರ ಘೆರಾವ್: ಜಿಲ್ಲಾಧಿಕಾರಿಯೊಂದಿಗೆ ವಾಗ್ವಾದ

Last Updated 6 ಸೆಪ್ಟೆಂಬರ್ 2021, 7:51 IST
ಅಕ್ಷರ ಗಾತ್ರ

ಬಾಗಲಕೋಟೆ: 'ನಮ್ಮ ಅಹವಾಲು ಕೇಳಿ ಮುಂದಕ್ಕೆ ತೆರಳಿ' ಎಂದು ಆಗ್ರಹಿಸಿ ಮುಧೋಳ ಸಮೀಪದ ಚಿಂಚಖಂಡಿ ಗ್ರಾಮಸ್ಥರು ಕೇಂದ್ರದ ಪ್ರವಾಹ ಅಧ್ಯಯನ ತಂಡದ ವಾಹನಕ್ಕೆ ಅಡ್ಡ ಹಾಕಿ ಪ್ರತಿಭಟಿಸಿದರು. ಈ ವೇಳೆ ಮನವೊಲಿಸಲು ಮಧ್ಯಪ್ರವೇಶಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರೊಂದಿಗೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

'ನೀವು (ಕೇಂದ್ರ ತಂಡ) ಬರುತ್ತೀರಿ. ಹಾನಿ ಪ್ರಮಾಣ ನೋಡಿಕೊಂಡು ಹೋಗುತ್ತೀರಿ. ನೀವು ಬಂದು ಹೋಗುವ ಖರ್ಚಿನಷ್ಟು ನಮಗೆ ಪರಿಹಾರ ಮೊತ್ತ ಸಿಗುವುದಿಲ್ಲ. 2019ರಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ಆಗಿದ್ದ ಹಾನಿಗೆ ಇನ್ನೂ ಬಿಡಿಗಾಸು ಕೂಡ ಪರಿಹಾರ ಸಿಕ್ಕಿಲ್ಲ. ನೀವು ಬಂದು ಹೋದರೂ ನಮಗೆ ಏನು ಉಪಯೋಗವಿಲ್ಲ' ಎಂದು ಸಂತ್ರಸ್ತ ರೈತರು ಅಳಲು ತೋಡಿಕೊಂಡರು.

ಚಿಂಚಖಂಡಿ ಸೇತುವೆ ಬಳಿ ಪ್ರವಾಹದಿಂದ ಕಬ್ಬಿನ ಗದ್ದೆಗಳಿಗೆ ಆಗಿರುವ ಹಾನಿ ವೀಕ್ಷಿಸಿ ಕೇಂದ್ರ ತಂಡ ಮುಂದಕ್ಕೆ ಹೊರಟಿತ್ತು. ಈ ವೇಳೆ ಕೇಂದ್ರ ತಂಡದ ಸದಸ್ಯರೊಂದಿಗೆ ಚರ್ಚಿಸಲಿದ್ದೇವೆ. ಅವಕಾಶ ಮಾಡಿಕೊಡಿ ಎಂದು ರೈತರು ಒತ್ತಾಯಿಸಿದರು.

ಕೇಂದ್ರ ತಂಡದವರಿಗೆ ಕನ್ನಡ ಬರುವುದಿಲ್ಲ. ಹೀಗಾಗಿ ನೀವು ಹೇಳುವುದು ಅವರಿಗೆ ಅರ್ಥವಾಗುವುದಿಲ್ಲ. ಅವರು ಬರೀ ಹಾನಿ ಪ್ರಮಾಣ ವೀಕ್ಷಣೆ ಮಾಡಿಕೊಂಡು ಹೋಗಲು ಬಂದಿದ್ದಾರೆ. ನೀವು ನಮಗೆ ನಿಮ್ಮ ಅಹವಾಲು ಸಲ್ಲಿಸಿ. ಅದನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತೇವೆ ಎಂದುಅಧಿಕಾರಿಗಳು ಹೇಳಿದರು. ಇದರಿಂದ ಆಕ್ರೋಶಗೊಂಡ ರೈತರು, ಕೇಂದ್ರ ತಂಡದವರು ಹೊರಟಿದ್ದ ಕಾರಿಗೆ ಅಡ್ಡ ಹಾಕಿದರು. ಚಿಂಚಖಂಡಿಯ ರೈತ ದಿವಾಕರ ಹೊಸಮಠ ಕಾರಿಗೆ ಅಡ್ಡ ಕುಳಿತು ಪ್ರತಿಭಟಿಸಿದರು. ಈ ವೇಳೆ ಅವರನ್ನು ಏಳಿಸಲು ಜಿಲ್ಲಾಧಿಕಾರಿ ಮುಂದಾಗಿದ್ದು ವಾಗ್ವಾದಕ್ಕೆ ದಾರಿಯಾಯಿತು.

ಅದಕ್ಕೂ ಮುನ್ನ ತನ್ನ ಜಮೀನಿನಲ್ಲಿ ಕೊಳೆತ ಕಬ್ಬನ್ನು ಕತ್ತರಿಸಿ ಕೇಂದ್ರ ತಂಡಕ್ಕೆ ತೋರಿಸಿದ್ದ ದಿವಾಕರ ಹೊಸಮಠ, ತನ್ನ 10 ಎಕರೆ ಹೊಲದಲ್ಲಿನ ಕಬ್ಬು ಕಳೆದ ಮೂರು ವರ್ಷಗಳಿಂದಲೂ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗಿದೆ. ₹10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿರುವೆ ಎಂದು ಅಲವತ್ತುಕೊಂಡಿದ್ದರು. ಕಾರಿನ ಎದುರು ಬಂದು ಕುಳಿತಾಗ ಅವರ ಕೈಯಲ್ಲಿದ್ದ ಕುಡುಗೋಲನ್ನು ಮುಧೋಳ ಠಾಣೆ ಪೊಲೀಸರು ಕಿತ್ತುಕೊಂಡರು. ಅಲ್ಲಿದ್ದವರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಈ ವೇಳೆ ಕಾರಿನಿಂದ ಇಳಿದ ಕೇಂದ್ರ ತಂಡದ ಸದಸ್ಯರು ರೈತರ ಅಹವಾಲು ಆಲಿಸಿದರು.

'ನೀವು ಪರಿಹಾರದ ಹೆಸರಲ್ಲಿ ಕೊಡುವ ಮೊತ್ತದಲ್ಲಿ ಕೂಲಿ ಹಣವೂ ಗಿಟ್ಟುವುದಿಲ್ಲ. ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಘಟಪ್ರಭಾ ಪ್ರವಾಹಕ್ಕೆ ಸಿಲುಕಿ ಬೆಳೆ ಕೈಗೆ ಸಿಕ್ಕಿಲ್ಲ. ರೈತರು ಲಕ್ಷಾಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದೇವೆ. ಹೀಗಾಗಿ ನಮಗೆ ಶಾಶ್ವತ ಪರಿಹಾರ ಕಲ್ಪಿಸಿ' ಎಂದು ಆಗ್ರಹಿಸಿದರು.

ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿ ಅಧ್ಯಯನ ತಂಡ ಸ್ಥಳದಿಂದ ನಿರ್ಗಮಿಸಿತು.

ಪ್ರವಾಹ ಹಾನಿ ಅಧ್ಯಯನ ತಂಡದಲ್ಲಿ ಕೇಂದ್ರದ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರಸಾದ್, ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶ್ ಕುಮಾರ, ಕಂದಾಯ ಇಲಾಖೆ ಹಿರಿಯ ಅಧಿಕಾರಿ ಶ್ರೀನಿವಾಸ ರೆಡ್ಡಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT