ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಹೆಲ್ಮೆಟ್‌ ಓಕೆ, ಫುಟ್‌ಪಾತ್ ಇಲ್ಲ ಯಾಕೆ?

Published : 6 ಜನವರಿ 2024, 4:34 IST
Last Updated : 6 ಜನವರಿ 2024, 4:34 IST
ಫಾಲೋ ಮಾಡಿ
Comments

ಬಾಗಲಕೋಟೆ: ಅಪಘಾತಗಳು ಹೆಚ್ಚಿ ಮೃತರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪೊಲೀಸ್ ಇಲಾಖೆಯು ಬಾಗಲಕೋಟೆಯಲ್ಲಿ ಹೆಲ್ಮೆಟ್‌ ಕಡ್ಡಾಯ ಅಭಿಯಾನ ಆರಂಭಿಸಿದೆ.

ಜನರ ಜೀವದ ಸುರಕ್ಷತೆಯಿಂದ ಇದು ಓಕೆ, ಆದರೆ, ಫುಟ್‌ಪಾತ್ ಅನ್ನು ರಸ್ತೆಗೆ ಸಮಗೊಳಿಸಿ ಪಾದಚಾರಿಗಳ ಜೀವಕ್ಕೆ ಅಪಾಯ ತಂದೊಡ್ಡಿರುವುದು ಯಾಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ರಸ್ತೆ ಅಪಘಾತ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಚಾಲಕರು ಗಂಭೀರವಾಗಿ ಗಾಯಗೊಳ್ಳುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಪೊಲೀಸರು ಅಭಿಯಾನ ಆರಂಭಿಸಿದ್ದಾರೆ. ಜೀವ ರಕ್ಷಣೆಗಾಗಿ ಕಡ್ಡಾಯಗೊಳಿಸುತ್ತಿರುವುದು ಸ್ವಾಗತಾರ್ಹ.

ಹೆಲ್ಮೆಟ್‌ ಕಡ್ಡಾಯಗೊಳಿಸಿದಾಗ ಇಲ್ಲಿಯೂ ಕಡಿಮೆ ಸಂಖ್ಯೆಯಲ್ಲಾದರೂ ಜನರು ಹೆಲ್ಮೆಟ್‌ ಹಾಕಿಕೊಂಡು ಸಂಚರಿಸುತ್ತಿದ್ದರು. ಪೊಲೀಸರು ಕೇಳುವುದಿಲ್ಲ ಎಂಬುದು ಗೊತ್ತಾದ ಮೇಲೆ ಹೆಲ್ಮೆಟ್‌ ಹಾಕುವವರ ಸಂಖ್ಯೆ ತೀವ್ರವಾಗಿ ಕುಸಿತವಾಗಿತ್ತು. ಜೀವ ರಕ್ಷಣೆಗಾಗಿ ಹೆಲ್ಮೆಟ್‌ ಹಾಕಬೇಕು. ಈ ಬಗ್ಗೆ ನ್ಯಾಯಾಲಯಗಳು ಆದೇಶ ನೀಡಿವೆ.

ಸಂವಿಧಾನದ 21ನೇ ಪರಿಚ್ಛೇದ ದಡಿ ಅರ್ಥಗರ್ಭಿತ ಜೀವನ ಹಾಗೂ ಗೌರವಯುತವಾದ ಜೀವನ ಖಾತ್ರಿಯ ಹಕ್ಕಿನಡಿ ನಡಿಗೆ ದಾರಿ ಅಥವಾ ಪಾದಚಾರಿ (ಫುಟ್‌ಪಾತ್) ರಸ್ತೆ ನಿರ್ಮಾಣ ಮಾಡಬೇಕು. ಆದರೆ, ಇಲ್ಲಿ ನಿರ್ಮಿಸಲಾಗಿದ್ದ ಫುಟ್‌ಪಾತ್ ಅನ್ನು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ರಸ್ತೆ ಸಮಗೊಳಿಸಿ, ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. 

ವೈಜ್ಞಾನಿಕ ಅಧ್ಯಯನವಿಲ್ಲದೇ ತೆರವು

‘ಯುನಿಟ್‌ 1ರಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ ರಸ್ತೆ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಮುಖ್ಯ ರಸ್ತೆಗಳಲ್ಲಿರುವ ಎತ್ತರದ ಫುಟ್‌ಪಾತ್‌ಗಳನ್ನು ರಸ್ತೆ ಮಟ್ಟಕ್ಕೆ ಇಳಿಸುವಂತೆ ಸೂಚನೆ ನೀಡಿದ್ದರಿಂದ ನೆಲಸಮಗೊಳಿಸಲಾಯಿತು’ ಎನ್ನುವುದು ಬಿಟಿಡಿಎ ಅಧಿಕಾರಿಗಳ ಉತ್ತರ.

ಇಂದಿಗೂ ನವನಗರದಲ್ಲಿ 10 ಸಾವಿರ ನಿವೇಶನಗಳು ಖಾಲಿ ಬಿದ್ದಿವೆ. ಹೊಸದಾಗಿ ನಿರ್ಮಾಣವಾದ ನಗರವಾದ್ದರಿಂದ ಜನಸಂಖ್ಯೆ, ವಾಹನಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡೇ ಸಾಕಷ್ಟು ವಿಶಾಲವಾದ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ವಾಹನಗಳ ಸಂಚಾರ ಮೊದಲು ಎಷ್ಟಿತ್ತು. ಈಗ ಎಷ್ಟು ಹೆಚ್ಚಾಗಿದೆ. ಯಾವ ರಸ್ತೆಗಳಲ್ಲಿ ಎಷ್ಟು ಹೆಚ್ಚಾಗಿದೆ ಎಂಬುದರ ವರದಿಯನ್ನು ಪಡೆಯದೇ ಫುಟ್‌ಪಾತ್ ತೆರವುಗೊಳಿಸಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.

‘ಅಪಘಾತಕ್ಕೊಳಗಾಗಿ ಮೃತರಾಗುವ ವಾಹನ ಸವಾರರ ಸುರಕ್ಷತೆಗೆ ಮುಂದಾಗಿರುವುದು ಶ್ಲಾಘನೀಯ. ಆದರೆ, ಅದೇ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳ ಬಗ್ಗೆಯೂ ಗಮನ ಹರಿಸಬೇಕು. ಪಾದಚಾರಿ ಮಾರ್ಗವಿಲ್ಲದ್ದರಿಂದ ಜನರು ರಸ್ತೆಗೆ ಇಳಿಯುವುದರಿಂದ ಅಪಘಾತಗಳು ಹೆಚ್ಚಾಗುತ್ತವೆ. ಇದನ್ನು ತಡೆಯಬೇಕಿದೆ’ ಎಂದು ನವನಗರ ನಿವಾಸಿ ಜೆ. ಶಿವಕುಮಾರ ಹೇಳಿದರು.

ಫ್ಲೆಕ್ಸ್‌ ಅತಿಕ್ರಮಣ ನಿಯಂತ್ರಿಸುವವರು ಯಾರು?

ನಗರದ ಹಲವಾರು ವೃತ್ತಗಳ ಮಧ್ಯದಲ್ಲಿರುವ ಕಂಬಗಳಿಗೆ ದೊಡ್ಡ ದೊಡ್ಡದಾದ ಫ್ಲೆಕ್ಸ್‌ಗಳನ್ನು ಕಟ್ಟಲಾಗುತ್ತದೆ. ಇದರಿಂದಾಗಿ ಇನ್ನೊಂದು ಬದಿಯಿಂದ ಬರುವ ವಾಹನಗಳು ಕಾಣುವುದಿಲ್ಲ. ಜಿಲ್ಲಾ ಆಸ್ಪತ್ರೆ ಮುಂದಿರುವ ವೃತ್ತ ಎಲ್‌ಐಸಿ ವೃತ್ತಕ್ಕೆ ನಾಲ್ಕು ದಿಕ್ಕುಗಳಲ್ಲಿ ರಸ್ತೆ ಇದೆ. ವಾಹನಗಳ ಓಡಾಟವೂ ಹೆಚ್ಚಿದೆ. ಈ ವೃತ್ತಗಳಲ್ಲಿಯೇ ನಿತ್ಯ ಬಿಟಿಡಿಎ ನಗರಸಭೆ ಸಂಚಾರಿ ಪೊಲೀಸರು ಸಂಚರಿಸುತ್ತಾರೆ. ಅಂತಹ ಸ್ಥಳಗಳಲ್ಲಿ ಫ್ಲೆಕ್ಸ್‌ಗಳನ್ನು ಕಟ್ಟದಂತೆ ನಿಯಂತ್ರಿಸುವ ಕೆಲಸ ಆಗಿಲ್ಲ. ಎದುರು ಬರುವವರು ಕಾಣದ್ದರಿಂದಲೇ ಹಲವಾರು ಬಾರಿ ಅಪಘಾತಗಳಾಗಿವೆ. ಸಂಚಾರ ದಟ್ಟಣೆ ಹೆಚ್ಚಿರುವ ಜಿಲ್ಲಾಧಿಕಾರಿ ಕಚೇರಿ ಮುಂದೆ ಪಾದಚಾರಿ ರಸ್ತೆಯನ್ನು ಹಾಗೆ ಉಳಿಸಿರುವುದಲ್ಲದೇ ಸುರಕ್ಷತೆಗಾಗಿ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಅಲ್ಲಿ ಫುಟ್‌ಪಾತ್ ಅನ್ನು ಅಂಗಡಿಯವರು ಅತಿಕ್ರಮಣ ಮಾಡಿದ್ದರೂ ಗಮನ ಹರಿಸುತ್ತಿಲ್ಲ. ಕೂಗಳತೆ ದೂರದಲ್ಲಿ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ತಹಶೀಲ್ದಾರ್‌ ಸೇರಿದಂತೆ ಹಲವು ಕಚೇರಿಗಳಿವೆ.

ಉಲ್ಲಂಘನೆಯಾದರೂ ಕ್ರಮವಿಲ್ಲ

ಪಾದಚಾರಿ ಮಾರ್ಗದ ಮೇಲೆ ವಾಹನಗಳನ್ನು ನಿಲ್ಲಿಸುವುದು ರಸ್ತೆ ನಿಯಂತ್ರಣಗಳ ಕಾಯ್ದೆ 1989ರ ರೆಗ್ಯುಲೇಷನ್ 15ನ್ನು ಉಲ್ಲಂಘಿಸಲಾಗುತ್ತದೆ. ಅದಲ್ಲದೇ ಮೋಟಾರು ವಾಹನ ಕಾಯಿದೆ ಕರ್ನಾಟಕ ಸಂಚಾರ ನಿಯಂತ್ರಣ ಕಾಯಿದೆ ಉಲ್ಲಂಘನೆಯೂ ಆಗುತ್ತದೆ. ಭಾರತೀಯ ದಂಡ ಸಂಹಿತೆ 188 268ರ ಪ್ರಕಾರ ಅಪರಾಧವಾಗಿದೆ.  ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನಗರಸಭೆ ಪೊಲೀಸ್ ಇಲಾಖೆಯ ಸಿಬ್ಬಂದಿ ಉಲ್ಲಂಘನೆ ಪ್ರಕರಣ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಪಾದಚಾರಿ ರಸ್ತೆ ತೆರವು ಮಾಡಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಚರ್ಚೆ ಮಾಡುತ್ತೇನೆ. ಸುರಕ್ಷಿತ ಸಂಚಾರಕ್ಕೆ ಪಾದಚಾರಿ ರಸ್ತೆ ಅವಶ್ಯ.
ಅಮರನಾಥ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಬಾಗಲಕೋಟೆಯಲ್ಲಿ ಫುಟ್‌ಪಾತ್ ಮೇಲೆ ಅಂಗಡಿಗಳನ್ನಿಟ್ಟಿರುವುದು
ಬಾಗಲಕೋಟೆಯಲ್ಲಿ ಫುಟ್‌ಪಾತ್ ಮೇಲೆ ಅಂಗಡಿಗಳನ್ನಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT