ಬುಧವಾರ, ಫೆಬ್ರವರಿ 26, 2020
19 °C
ಯುಕೆಪಿ: 20 ಗ್ರಾಮಗಳ ಸಂತ್ರಸ್ತರಿಗೆ ಉಪ ಮುಖ್ಯಮಂತ್ರಿ ಅಭಯ

ತಡೆಗೋಡೆ ನಿರ್ಮಾಣ ಪ್ರಶ್ನೆಯೇ ಇಲ್ಲ: ಗೋವಿಂದ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ವಿಸ್ತರಣೆ ವೇಳೆ ಮುಳುಗಡೆಯಾಗಲಿರುವ 20 ಗ್ರಾಮಗಳ ರಕ್ಷಣೆಗೆ ತಡೆಗೋಡೆ ನಿರ್ಮಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪುನರ್ ನಿರ್ಮಾಣ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಮೊದಲು 11 ಗ್ರಾಮಗಳ ರಕ್ಷಣೆಗೆ ತಡೆಗೋಡೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಆದರೆ ಅದು ತಾಂತ್ರಿಕವಾಗಿಯೂ ಕಾರ್ಯಸಾಧುವೂ ಅಲ್ಲ. ಜೊತೆಗೆ ಹೊಸ ಸಮಸ್ಯೆಗಳಿಗೆ ಕಾರಣವಾಗಲಿದೆ. ಹೀಗಾಗಿ ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಚಾರವನ್ನು ಗ್ರಾಮಸ್ಥರ ಗಮನಕ್ಕೂ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಸಮೀಕ್ಷೆಗೆ ಸೂಚನೆ:ಸಂತ್ರಸ್ತರ ಆಸ್ತಿಗಳಿಗೆ ಬೆಲೆ ನಿಗದಿಗೆ ಈ ಹಿಂದೆ ಆಗಿರುವ ಸಮೀಕ್ಷೆ ವೇಳೆ ತಪ್ಪುಗಳಾಗಿವೆ. ಕೆಲವು ಕಡೆ ನಿಗದಿತ ಮೌಲ್ಯಕ್ಕಿಂತ ಹೆಚ್ಚು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಹಿಂದಿನ ತಪ್ಪುಗಳನ್ನು ಸರಿಪಡಿಸಲು ಮಾರ್ಚ್ ಅಂತ್ಯದ ವೇಳೆಗೆ ಆ ಗ್ರಾಮಗಳಲ್ಲಿ ಮತ್ತೊಮ್ಮೆ ಜಂಟಿ ಸಮೀಕ್ಷೆ (ಜೆಎಂಸಿ) ನಡೆಸಲು ತಿಳಿಸಿದರು.

ಬಿಟಿಡಿಎ; ಗಂಭೀರ ಚರ್ಚೆಗೆ ಗ್ರಾಸ..

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ₹577 ಕೋಟಿ ಅನುದಾನ ಹಂಚಿಕೆಯಾಗಿದೆ. ಅದರಲ್ಲಿ ₹236 ಕೋಟಿ ಖರ್ಚು ಆಗಿದೆ. ಜೊತೆಗೆ ಪ್ರಗತಿಯೂ ಆಮೆ ಗತಿಯಲ್ಲಿ ಸಾಗಿದೆ. ಇದನ್ನು ಕಂಡು ಡಿಸಿಎಂ ಕಾರಜೋಳ ಗರಂ ಆದರು. 

ಇದಕ್ಕೆ ಪ್ರತಿಕ್ರಿಯಿಸಿದ ಬಿಟಿಡಿಎ ಮುಖ್ಯ ಎಂಜಿನಿಯರ್ ಅಶೋಕ ವಾಸನದ, ಹಿಂದಿನ ಸರ್ಕಾರದ ಅವಧಿಯಲ್ಲಿ ನನ್ನ ಹುದ್ದೆಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ₹10 ಲಕ್ಷದವರೆಗೆ ಮಾತ್ರ ಖರ್ಚು ಮಾಡಲು ಅವಕಾಶವಿದೆ. ಜೊತೆಗೆ ಸಿಬ್ಬಂದಿ ಕೊರತೆಯೂ ಇದೆ ಎಂದು ಅಳಲು ತೋಡಿಕೊಂಡರು. ಅದಕ್ಕೆ ’ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೂ ನಿಮಗಿಂತ ಹೆಚ್ಚು ಅಧಿಕಾರವಿದೆ‘ ಎಂದು ಡಿಸಿಎಂ ಅಚ್ಚರಿ ವ್ಯಕ್ತಪಡಿಸಿದರು. ತಕ್ಷಣ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಕರೆ ಮಾಡಿದ ಕಾರಜೋಳ, ಮುಖ್ಯ ಎಂಜಿನಿಯರ್‌ಗೆ ಹೆಚ್ಚಿನ ಅಧಿಕಾರ ನೀಡುವಂತೆ ಹಾಗೂ ಬಿಟಿಡಿಎ ಜಲಸಂಪನ್ಮೂಲ ವ್ಯಾಪ್ತಿಗೆ ವಹಿಸಲು ಕ್ರಮ ಕೈಗೊಳ್ಳವಂತೆ ಸೂಚಿಸಿದರು. 

ಬಿಟಿಡಿಎ ವ್ಯಾಪ್ತಿಯ ನವನಗರದ ಮೂರನೇ ಯುನಿಟ್‌ನ ಅಭಿವೃದ್ಧಿಗೆ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಆ ಪ್ರಕ್ರಿಯೆ ತಡವಾಗಿದೆ ಎಂಬುದನ್ನು ಅಧಿಕಾರಿಗಳು ಡಿಸಿಎಂ ಗಮನಕ್ಕೆ ತಂದರು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಬೇಗನೇ ಇತ್ಯರ್ಥಪಡಿಸಲು ಅಗತ್ಯ ಕಾರ್ಯತಂತ್ರ ರೂಪಿಸಲು ಉಪವಿಭಾಗಾಧಿಕಾರಿಗೆ ಹೊಣೆ ನಿಗದಿಪಡಿಸಲಾಯಿತು.

ಪುನರ್ವಸತಿ ಕೇಂದ್ರಗಳ ಸ್ಥಳಾಂತರ: ಮುಧೋಳ ನಗರಸಭೆ ವ್ಯಾಪ್ತಿಗೆ ಗಿರಿಗಾಂವ, ಯಡಹಳ್ಳಿ ಹಾಗೂ ಬಳ್ಳೂರು ಪುನರ್ವಸತಿ ಕೇಂದ್ರಗಳನ್ನು ಸೇರಿಸುವ ಮುನ್ನ ಅಲ್ಲಿ ಒಳಚರಂಡಿ, ಸಮರ್ಪಕವಾಗಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡುವಂತೆ ಹಾಗೂ ನಗರ ಪ್ರದೇಶಗಳ ಸಮೀಪದ ಪುನರ್ವಸತಿ ಕೇಂದ್ರಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವಾಗ ಕಡ್ಡಾಯವಾಗಿ ಮೂಲ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)