ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೆಕಲ್‌: ಓದುಗರನ್ನು ಸೆಳೆಯುವ ಗ್ರಂಥಾಲಯ

ಸುತ್ತಮುತ್ತಲಿನ ಗ್ರಾಮಗಳಿಂದಲೂ ಬರುವ ಓದುಗರು
ಎಚ್.ಎಸ್.ಘಂಟಿ
Published 19 ಜೂನ್ 2024, 4:35 IST
Last Updated 19 ಜೂನ್ 2024, 4:35 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಕೋಟೇಕಲ್ ಗ್ರಾಮ ಪಂಚಾಯಿತಿಯಲ್ಲಿ ಮಾದರಿ ಡಿಜಿಟಲ್ ಗ್ರಂಥಾಲಯವಿದ್ದು, ಓದುವರಿಗೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವವರಿಗೆ ಅನುಕೂಲವಾಗಿದೆ.

ಒಂದು ಮುಖ್ಯವಾದ ಓದುವ ಸಾಮಾನ್ಯ ಕೊಠಡಿ ಇದೆ. ಇಲ್ಲಿ 30ಕ್ಕೂ ಹೆಚ್ಚು ಜನರು ಕುಳಿತು ಓದಬಹುದಾಗಿದೆ. ಇನ್ನುಳಿದಂತೆ ಹೆಣ್ಣುಮಕ್ಕಳಿಗೆ, ಬಾಲಕರಿಗೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಓದಲು ಕೊಠಡಿಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಏಕಕಾಲದಲ್ಲಿ ಎಲ್ಲರನ್ನು ಒಳಗೊಂಡ ವಿಶಿಷ್ಟವಾದ ಗ್ರಂಥಾಲಯ ಇದಾಗಿದೆ.

ಆಕರ್ಷಣೀಯ ಗೋಡೆಗಳು: ಇಡೀ ಕಟ್ಟಡಕ್ಕೆ ಉತ್ತಮವಾದ ಬಣ್ಣ ಮಾಡಿದ್ದು ಓದಲು ಪ್ರೇರಣೆ ಒದಗಿಸುವ ಆಕರ್ಷಕವಾದ ಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಹಲವು ನುಡಿಮುತ್ತುಗಳನ್ನು ಬರೆಸಿದ್ದು, ಓದುಗರಿಗೆ ಸ್ಫೂರ್ತಿ ನೀಡುವಂತಿವೆ.

ಪೂರಕವಾದ ಸಾಮಗ್ರಿಗಳು: ಇಲ್ಲಿ ಉತ್ತಮವಾದ ಟೇಬಲ್, ಖುರ್ಚಿಗಳು, ಪೇಪರ್ ಓದಲು ಸ್ಟ್ಯಾಂಡ್‍ಗಳು ಇವೆ.
ಗ್ರಂಥಾಲಯದಲ್ಲಿ ಐದು ಸಾವಿರಕ್ಕೂ ಅಧಿಕ ಪುಸ್ತಕಗಳಿವೆ, ಕಥೆ,ಕಾದಂಬರಿ, ಪಠ್ಯ ಪುಸ್ತಕ, ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾಗುವ ಎಲ್ಲ ಪುಸ್ತಕಗಳಿವೆ. ಜೊತೆಗೆ ಎಂಟಕ್ಕೂ ಹೆಚ್ಚು ದಿನ ಪತ್ರಿಕೆಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯವಿರುವ ಆರಕ್ಕೂ ಹೆಚ್ಚು ನಿಯತಕಾಲಿಕೆಗಳು ಬರುತ್ತಿವೆ.

ಕೋಟೆಕಲ್ ಗ್ರಾಮಕ್ಕೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು, ಯುವಕರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದವರು ಅಧ್ಯಯನ ಉದ್ದೇಶಕ್ಕಾಗಿ ಬರುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಸದಾ ತೆರೆದಿರುವ ಗ್ರಂಥಾಲಯ ಓದುಗರಿಗೆ ಅನುಕೂಲವಾಗಿದೆ.

ಇಲ್ಲಿನ ಪಿಡಿಓ ಆರತಿ ಕ್ಷತ್ರಿಯವರ ಮನವಿಯ ಮೆರೆಗೆ ಸಮೀಪದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಿನಕ್ಕೆ ಒಂದು ತಾಸು ಗ್ರಥಾಲಯ ಅವಧಿ ಹಾಕಲಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಒಂದು ತಾಸು ಗ್ರಂಥಾಲಯದಲ್ಲಿ ಓದಿಕೊಂಡು ಹೋಗುತ್ತಾರೆ.

ಮೂರು ಕಂಪ್ಯೂಟರ್‌ಗಳು: ಆನ್‌ಲೈನ್‌ ಮೂಲಕ ಮಾಹಿತಿ ಪಡೆಯುವುದಕ್ಕೂ ಗ್ರಂಥಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೂರು ಕಂಪ್ಯೂಟರಗಳು ಲಭ್ಯವಿದ್ದು ಅವುಗಳನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಅಧ್ಯಯನ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗಾಗಿ ಎರಡು ಟ್ಯಾಬ್ ಸಹ ಇವೆ.

ಶೌಚಾಲಯ, ಕುಡಿಯಲು ಉತ್ತಮ ನೀರು ಇರಿಸಲಾಗಿದೆ. ಗ್ರಂಥಾಲಯದೊಳಗೆ ಚಲನವಲನದ ಮೇಲೆ ನಿಗಾ ವಹಿಸಲು  ಸಿಸಿಟಿವಿ ಕೂಡಾ ಅಳವಡಿಸಲಾಗಿದೆ. ಪ್ರತಿ ಸೋಮವಾರ ಮತ್ತು ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತು ಪಡಿಸಿದರೆ ಇಲ್ಲಿ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಂಥಾಲಯ ತೆರೆದುಕೊಂಡಿರುತ್ತದೆ.

‘ಓದುಗರಿಗೆ ಸಹಾಯ ಮಾಡುತ್ತ ಓದಲು ಅನುಕೂಲ ಮಾಡಿಕೊಡಲಾಗುತ್ತದೆ’ ಎಂದು ಗ್ರಂಥಪಾಲಕ ವೈ.ಜಿ.ಅರಮನಿ ಹೇಳುತ್ತಾರೆ.

‘ನಾನು ಕೆಎಎಸ್ ಪರೀಕ್ಷೆ ಬರೆಯುವುದಕ್ಕೆ ತಯಾರಿ ಮಾಡುತ್ತಿದ್ದೇನೆ. ಗ್ರಂಥಾಲಯವು ಪರೀಕ್ಷೆ ತಯಾರಿಗೆ ಅನುಕೂಲವಾಗಿದೆ‘ ಎಂದು ಕೀರ್ತಿ ಗಾಡದ ಹೇಳಿದರು.

ಕೋಟೇಕಲ್ ಗ್ರಾಮ ಪಂಚಾಯತಿಯ ಡಿಜಿಟಲ್ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು
ಕೋಟೇಕಲ್ ಗ್ರಾಮ ಪಂಚಾಯತಿಯ ಡಿಜಿಟಲ್ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು

ಕೋಟೇಕಲ್‌ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ತಮ ಸೌಲಭ್ಯವಿರುವ ಗ್ರಂಥಾಲಯ ರೂಪುಗೊಂಡಿದೆ

-ಪಾರ್ವತಿ ಹುಚ್ಚಪ್ಪ ಮೇಟಿ ಗ್ರಾ.ಪಂ. ಅಧ್ಯಕ್ಷೆ

ಈ ಹಿಂದೆ ಉತ್ತಮವಾದ ಕಟ್ಟಡ ಇತ್ತು. ಅದನ್ನು ಬಳಸಿಕೊಂಡು 15ನೇ ಹಣಕಾಸು ಯೋಜನೆ ಹಾಗೂ ಪಂಚಾಯಿತಿಯ ಸ್ವಂತ ಅನುದಾನ(ವರ್ಗ-1) ಅಡಿ ಒಟ್ಟು ₹9 ಲಕ್ಷ ಬಳಸಿಕೊಂಡು ಗ್ರಂಥಾಲಯ ರೂಪಿಸಲಾಗಿದೆ

-ಆರತಿ ಕ್ಷತ್ರಿ ಕೋಟೆಕಲ್ ಗ್ರಾ.ಪಂ. ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT