ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಶಿವರಾತ್ರಿ: ಹಾನಗಲ್ ಕುಮಾರ ಶ್ರೀ ರಥೋತ್ಸವ ಮಾ. 9ಕ್ಕೆ

ಕೀರ್ತನ, ಸಂಗೀತ ಸಮ್ಮೇಳನ ಆಯೋಜನೆ
ಎಸ್.ಎಂ. ಹಿರೇಮಠ
Published 5 ಮಾರ್ಚ್ 2024, 5:35 IST
Last Updated 5 ಮಾರ್ಚ್ 2024, 5:35 IST
ಅಕ್ಷರ ಗಾತ್ರ

ಬಾದಾಮಿ: ಸಮೀಪದ ಶ್ರೀಮದ್ವೀರಶೈವ ಶಿವಯೋಗಮಂದಿರದಲ್ಲಿ ಮಹಾಶಿವರಾತ್ರಿ ಆಚರಣೆ ಮತ್ತು ಶಿವಯೋಗಮಂದಿರ ಸಂಸ್ಥಾಪಕ ಹಾನಗಲ್ ಕುಮಾರ ಶ್ರೀ ರಥೋತ್ಸವ ಕಾರ್ಯಕ್ರಮಗಳು ಮಾ.8,9 ರಂದು ನಡೆಯಲಿವೆ.

ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ಉತ್ತರ ವಾಹಿನಿಯಾಗಿ ಹರಿಯುವ ಮಲಪ್ರಭಾ ನದಿ ದಂಡೆಯಲ್ಲಿ ಹಾನಗಲ್ ಕುಮಾರ ಶ್ರೀ 1909 ರಲ್ಲಿ ಶ್ರೀಮದ್ವೀರಶೈವ ಶಿವಯೋಗಮಂದಿರವನ್ನು ಸ್ಥಾಪಿಸಿದರು.

 ಶ್ರೀಗಳು ಧಾರವಾಡ ಜಿಲ್ಲೆಯ ಜೋಯಿಸರಹಳ್ಳಿಯಲ್ಲಿ 1867ರಲ್ಲಿ ಜನಿಸಿದರು. ಹುಬ್ಬಳ್ಳಿಯ ಎರಡೆತ್ತಿನ ಮಠದಲ್ಲಿ ಶಿಕ್ಷಣ ಪಡೆದು ಸಿದ್ಧಾರೂಢ ಮಠದಲ್ಲಿ ಯೋಗಸಾಧನೆ ಮಾಡಿದರು. ಬಿ.ಎನ್. ಜಾಲಿಹಾಳ ಗ್ರಾಮದ ವೈರಾಗ್ಯ ಮಲ್ಲಣಾರ್ಯರೊಂದಿಗೆ ಕುಮಾರ ಶ್ರೀ ಸಂಚರಿಸಿ ಸಮಾಜ ಸೇವೆ ಆರಂಭಿಸಿದರು. 1908ರಲ್ಲಿ ವೀರಶೈವ ಲಿಂಗಾಯತ ಧರ್ಮ ಜಾಗೃತಿಗೆ ಮೊದಲಿಗೆ ಅಖಿಲ ಭಾರತ ವೀರಶೈವ ಮಹಾಸಭೆ ಸಮ್ಮೇಳಸಂಘಟಿಸಿದ ಕೀರ್ತಿಯು ಕುಮಾರ ಶಿವಯೋಗಿಯವರದ್ದಾಗಿದೆ ಎಂದು ಉಲ್ಲೇಖಿಸಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಕುಮಾರ ಶ್ರೀ ರಾಜ್ಯ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಪಾದಯಾತ್ರೆ ಮತ್ತು ಚಕ್ಕಡಿಯಲ್ಲಿ ಸಂಚರಿಸಿ ವೀರಶೈವ ಲಿಂಗಾಯತ ಧರ್ಮ ಜಾಗೃತಿಗೊಳಿಸಿ ಅಖಿಲಭಾರತ ವೀರಶೈವ ಮಹಾಸಭೆಗಳನ್ನು ಕೈಗೊಂಡರು.

ಸಮಾಜ ಸುಧಾರಣೆ ಮತ್ತು ಜನರನ್ನು ಜಾಗೃತಿ ಮಾಡಲು ಮಠಾಧೀಶರಿಂದ ಮಾತ್ರ ಸಾಧ್ಯವೆಂದು ಅರಿತ ಅವರು ಶಿವಯೋಗಮಂದಿರಲ್ಲಿ ವಟು ಸಾಧಕರಿಗೆ ಅಧ್ಯಾತ್ಮ, ಯೋಗ, ಸಂಸ್ಕೃತ, ವಚನ ಸಾಹಿತ್ಯ ಮತ್ತು ಸಂಗೀತ ವಿದ್ಯೆ ಧಾರೆಯೆರೆದರು. 

ಮನೆ ಮನೆ ಸಂಚರಿಸಿ ತಾಡವೋಲೆ ಗ್ರಂಥಗಳನ್ನು ಸಂಗ್ರಹಿಸಿದರು. ತಾಡವೋಲೆಯಲ್ಲಿದ್ದ ಬಸವಣ್ಣ ಮತ್ತು ಮೊದಲಾದ ಶರಣರ ವಚನಗಳನ್ನು ಫ.ಗು. ಹಳಕಟ್ಟಿ ಅವರಿಂದ ವಚನಗಳ ಸಂಗ್ರಹ ಕಾರ್ಯ ಕೈಗೊಂಡರು.

ರಾಜ್ಯ ಮತ್ತು ಹೊರರಾಜ್ಯಗಳಲ್ಲಿ 10 ಕ್ಕೂ ಅಧಿಕ ವೀರಶೈವ ಲಿಂಗಾಯತ ಮಹಾಸಭೆ ಸಂಘಟಿಸಿ ಧರ್ಮದ ಜಾಗೃತಿ ಕೈಗೊಂಡರು. ಶಿವಯೋಗಮಂದಿರಲ್ಲಿ ಅಧ್ಯಯನ ಮಾಡಿದ ಮಠಾಧೀಶರು ಇಂದು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಗುರು-ವಿರಕ್ತ ಪೀಠ ಪರಂಪರೆಯ ಮಠಗಳಿಗೆ ಮಠಾಧೀಶರಾಗಿದ್ದಾರೆ.

ಮಹಾಶಿವರಾತ್ರಿ:

ವಿವಿಧ ಕಾರ್ಯಕ್ರಮ ಮಾ.8 ರಂದು ಶಿವಯೋಗದ ಅಂಗವಾಗಿ ಮಹಾಶಿವರಾತ್ರಿ ಜಾಗರಣೆ  ಹಾಗೂ ನಾಡಿನ ವಿವಿಧ ಸಂಗೀತ ಕಲಾವಿದರಿಂದ ಕೀರ್ತನೆ ಮತ್ತು ಸಂಗೀತ ಸಮ್ಮೇಳನ ನಡೆಯಲಿದೆ. ಮಾ.9ರಂದು ಸಂಜೆ ವಟುಸಾಧಕರ ಶಿವಯೋಗಧಾಮದ ಶಂಕುಸ್ಥಾಪನೆ ಶಿವಯೋಗಮಂದಿರ ಮುಖವಾಣಿ ‘ಸುಕುಮಾರ’ ಪತ್ರಿಕೆ ಲೋಕಾರ್ಪಣೆ. ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ಕುಮಾರ ಶಿವಯೋಗಿ ರಥೋತ್ಸವ ನಡೆಯಲಿದೆ. ನಾಡಿನ ವಿವಿಧ ಮಠಾಧೀಶರು ಮತ್ತು ಸುತ್ತಲಿನ ಭಕ್ತರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT