ಕಮತಗಿ(ಅಮೀನಗಡ): ಸ್ಥಳೀಯ ಪಟ್ಟಣ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾಗಿ ಎರಡೂವರೆ ವರ್ಷ ಗತಿಸಿದರೂ ಅಧಿಕಾರದಿಂದ ವಂಚಿತರಾಗಿದ್ದ ಜನಪ್ರತಿನಿಧಿಗಳಿಗೆ ಅಂತೂ ಅಧಿಕಾರ ಹಿಡಿಯುವ ಭಾಗ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಮೀಸಲಾತಿ ಕಾರಣದಿಂದ ಅಧಿಕಾರವಿಲ್ಲದಂತಾಗಿದ್ದ ಚುನಾಯಿತ ಜನಪ್ರತಿನಿಧಿಗಳಿಗೆ ಆ. 21 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮುಹೂರ್ತ ಕೂಡಿ ಬಂದಿದ್ದು ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 16 ಸದಸ್ಯರಲ್ಲಿ ಕಾಂಗ್ರೆಸ್ 12 ಸದಸ್ಯ ಬಲ ಹೊಂದಿದ್ದು, ಬಿಜೆಪಿ ಕೇವಲ 4 ಸ್ಥಾನ ಹೊಂದಿದೆ. 12 ಸದಸ್ಯ ಬಲದ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುವುದು ಖಚಿತವಾಗಿದೆ.
12 ಸದಸ್ಯ ಬಲದ ಕಾಂಗ್ರೆಸ್ ಪಾಳಯದಲ್ಲಿ ರಮೇಶ ಜಮಖಂಡಿ ಅವರ ಹೆಸರು ಮುಂಚೂಣಿಯಲ್ಲಿದ್ದು ಬಹುತೇಕ ಸದಸ್ಯರು ಅವರತ್ತ ಒಲವು ತೋರಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಬಸವರಾಜ ಕುಂಬಳಾವತಿ ಅವರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ಎನ್ನುವುದಕ್ಕೆ ಆ. 21ರವರೆಗೆ ಕಾಯಲೇಬೇಕು.
ಅಧಿಕಾರಕ್ಕೇರುವ ಆಕಾಂಕ್ಷಿಗಳನ್ನು ಹೊರತುಪಡಿಸಿ ಉಳಿದ ಕಾಂಗ್ರೆಸ್‌ನ ಕೆಲ ಸದಸ್ಯರು ಈಗಾಗಲೇ ಪ್ರವಾಸದಲ್ಲಿದ್ದಾರೆ ಎನ್ನುವ ಮಾಹಿತಿ ಇದ್ದು ಆ. 21ರಂದೇ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.
ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ ಜೋರಾಗಿದೆ. ಕಾಂಗ್ರೆಸ್‌ನ ನಂದಾ ಲಕ್ಷ್ಮಣ ದ್ಯಾಮಣ್ಣವರ, ಮಂಜುಳಾ ನಾಗೇಶ ಮುರಾಳ ಅವರ ಹೆಸರು ಮುಂಚೂಣಿಯಲ್ಲಿದ್ದು ಕೊನೆ ಘಳಿಗೆಯಲ್ಲಿ ಇಬ್ಬರನ್ನು ಹೊರತುಪಡಿಸಿ ಬೇರೊಬ್ಬರು ಉಪಾಧ್ಯಕ್ಷರಾದರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಕಾಂಗ್ರೆಸ್ ವಲಯದಲ್ಲಿ ಬೆಳವಣಿಗೆಗಳು ಜೋರಾಗಿದ್ದು ಶಾಸಕ ಎಚ್. ವೈ. ಮೇಟಿ ಹಾಗೂ ಪಕ್ಷದ ಸ್ಥಳೀಯ ನಾಯಕರು ಸೇರಿದಂತೆ ಸದಸ್ಯರು ಯಾರತ್ತ ಒಲವು ತೋರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಆದರೇ ಒಮ್ಮತದೊಂದಿಗೆ 12 ಸದಸ್ಯ ಬಲದ ಕಾಂಗ್ರೆಸ್ ಅಧಿಕಾರ ಹಿಡಿಯುವದು ಪಕ್ಕಾ ಎನ್ನಲಾಗುತ್ತಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.