ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರದಾಳ: ಹಿಡಕಲ್‌ ಜಲಾಶಯದಲ್ಲಿ ನೀರಿನ ಕೊರತೆ

ಸಕಾಲಕ್ಕೆ ಕಾಲುವೆಗಳಿಗೆ ನೀರು ಬಾರದಿದ್ದರಿಂದ ರೈತರಲ್ಲಿ ಚಿಂತೆ
Last Updated 30 ಜೂನ್ 2022, 5:54 IST
ಅಕ್ಷರ ಗಾತ್ರ

ತೇರದಾಳ: ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ರೈತರ ಜೀವನಾಡಿ ಎನಿಸಿರುವ ಹಿಡಕಲ್ ಜಲಾಶಯ ಈ ವರ್ಷ ಮುಂಗಾರು ಮಳೆಯ ವಿಳಂಬದಿಂದ ಭರ್ತಿಯಾಗದೇ ಇರುವುದು ಇಲ್ಲಿನ ರೈತರಲ್ಲಿ ನಿರಾಸೆ ಜೊತೆಗೆ ಆತಂಕಕ್ಕೆ ಕಾರಣವಾಗಿದೆ.

51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಜಲಾಶಯ ಈ ವರ್ಷ ಮಳೆಯ ಕೊರತೆಯಿಂದ ಕೇವಲ 8.30 ಟಿಎಂಸಿ ನೀರು ಮಾತ್ರ ಇದೆ. ಈ ಜಲಾಶಯಕ್ಕೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಆಗುವ ಮಳೆಯ ಮೇಲೆ ಒಳಹರಿವು ಅವಲಂಬನೆಯಾಗಿದೆ. ನಿಗದಿತ ಪ್ರಮಾಣದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಳೆಯಾದರೆ ದಿನವೊಂದಕ್ಕೆ 3 ರಿಂದ 4 ಕ್ಯೂಸೆಕ್‌ ನೀರು ಜಲಾಶಯವನ್ನು ಸೇರುತ್ತದೆ. ಇದರಿಂದ 30 ಟಿಎಂಸಿಯಷ್ಟು ನೀರು ಸಂಗ್ರಹವಾದೊಡನೆ ಮಹಾಮಂಡಳ ಸಭೆಯಲ್ಲಿ ತೀರ್ಮಾನಿಸಿ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ. ಆದರೆ ಈ ಬಾರಿ ಮಳೆ ಬಾರದಿದ್ದರಿಂದ ಯಾವುದೇ ರೀತಿಯ ಬದಲಾವಣೆ ಆಗಿಲ್ಲ.

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಘಟಪ್ರಭಾ ಎಡದಂಡೆ ಕಾಲುವೆ 109 ಕಿ.ಮೀ ಹಾಗೂ ಬಲದಂಡೆ ಕಾಲುವೆ 199 ಕಿ.ಮೀ ಮೂಲಕ 3.08 ಲಕ್ಷ ಹೆಕ್ಟೆರ್ ಜಮೀನುಗಳಿಗೆ ನೀರಾವರಿ ಒದಗಿಸುತ್ತದೆ. ಜಲಾಶಯ ಸುತ್ತಮುತ್ತ ಮಳೆಯ ಕೊರತೆಯಿಂದ ಅದು ಭರ್ತಿಯಾಗದೆ ಇರುವುದರಿಂದ ಮುಂಗಾರು ಬಿತ್ತನೆ ಕೂಡ ತಡವಾಗಬಹುದು ಅಥವಾ ಬಿತ್ತನೆ ನಡೆಯದಿರಬಹುದು ಎಂಬುದು ರೈತರ ಆತಂಕಕ್ಕೆಕಾರಣವಾಗಿದೆ.

ಘಟಪ್ರಭಾ ನೀರಾವರಿ ಅವಲಂಬಿತ ಪ್ರದೇಶಗಳಲ್ಲಿ ಬಿತ್ತನೆ ನಡೆಯದಿದ್ದರೆ ಕೃಷಿ ಕೂಲಿಯವರಿಗೆ ಉದ್ಯೋಗ ಹಾಗೂ ಬೆಲೆಗಳು ಹೆಚ್ಚಳವಾಗುತ್ತವೆ ಎಂಬುದು ತೇರದಾಳದ ರೈತ ಮುತ್ತಪ್ಪ ಶೇಗುಣಸಿಯವರ ಆತಂಕವಾಗಿದೆ.

ಮೇ ತಿಂಗಳ 3ನೇ ವಾರದಲ್ಲಿ ಹವಾಮಾನ ವೈಪರೀತ್ಯದಿಂದ ಸುರಿದ ಮಳೆ ಇಲ್ಲಿಯವರೆಗೆ ಭೂಮಿಯಲ್ಲಿ ತೇವಾಂಶ ಉಳಿಸಿಕೊಂಡಿತ್ತು. ಆದರೆ ಮಳೆ ವಿಳಂಬವಾಗಿ ವಿಪರೀತ ಬಿಸಿಲು ಹೆಚ್ಚಾಗಿದ್ದರಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತ ಬಂದು, ಈಗ ಬೆಳೆಗಳು ಒಣಗಲಾರಂಭಿಸಿವೆ.

*
ಹಿಂದಿನ 3 ವರ್ಷ ಸಕಾಲಕ್ಕೆ ಮಳೆಯಾಗಿದ್ದರಿಂದ ಜುಲೈನಲ್ಲಿ ಕಾಲುವೆಗಳಿಗೆ ನೀರು ಬಿಡಲಾಗಿತ್ತು. ಈಗ ಮಳೆಯ ಕೊರತೆಯಿರುವುದರಿಂದ ಜುಲೈ ಅಥವಾ ಆಗಷ್ಟ್ ನಲ್ಲಿ ನೀರು ಬಿಡುವ ಸಾಧ್ಯತೆಯಿದೆ.
-ಎಸ್.ಆರ್. ಕಾಮತ, ಎ.ಇ., ಹಿಡಕಲ್ ಜಲಾಶಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT