ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನನಷ್ಟ ಮೊಕದ್ದಮೆ ಹೂಡಲಿ, ಎದುರಿಸಲು ಸಿದ್ಧ -ವೀರಣ್ಣ ಚರಂತಿಮಠ ಸವಾಲು

‘ಜಂಪಿಂಗ್‌ ಸ್ಟಾರ್‌’ ಎಂದು ಟೀಕಿಸಿದ ವೀರಣ್ಣ ಚರಂತಿಮಠ
Published 12 ಆಗಸ್ಟ್ 2024, 16:03 IST
Last Updated 12 ಆಗಸ್ಟ್ 2024, 16:03 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಮಾನನಷ್ಟ ಮೊಕದ್ದಮೆ ಹಾಕಲಿ. ಅದನ್ನು ಎದುರಿಸುವ ಶಕ್ತಿ ಇದೆ. ಕಾನೂನಿನ ಮೂಲಕ ಉತ್ತರ ನೀಡುತ್ತೇನೆ’ ಎಂದು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸವಾಲು ಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಕ್ಕೆ ನೀಡಲಾಗಿದ್ದ ಜಾಗೆ ರದ್ದು ವಿಚಾರದಲ್ಲಿ ಹೆಸರು ಪ್ರಸ್ತಾಪಿಸಿರುವುದಕ್ಕೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಹೇಳಿದ್ದಾರೆ. ಇಂತಹ ಹತ್ತು ಮಂದಿ ಬಂದರೂ ಎದರಿಸುತ್ತೇನೆ’ ಎಂದರು.

‘ಎಲ್ಲ ಪಕ್ಷ ಸುತ್ತಾಡಿ ಬಂದಿರುವ ಪೂಜಾರ ಒಬ್ಬ ‘ಜಂಪಿಂಗ್ ಸ್ಟಾರ್’ ಎಂದು ಲೇವಡಿ ಮಾಡಿದ ಅವರು, ಪಾರ್ಟಿಯಿಂದ ಹೊರ ಹೋದವರನ್ನು ಕರೆದುಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಪಕ್ಷದಲ್ಲಿದ್ದವರು ಇವರ ಜೊತೆಗೆ ಎಷ್ಟು ಜನರಿದ್ದಾರೆ. ಪಕ್ಷ ಎಲ್ಲಿ ಕಟ್ಟಿದ್ದಾರೆ. ಕಾರ್ಯಕರ್ತರು ದೇವರು ಎನ್ನುತ್ತಾರೆ. ಕಾರ್ಯಕರ್ತರಿಗೆ ದ್ರೋಹ ಬಗೆದು ಪಾರ್ಟಿ ಬಿಟ್ಟು ಹೋದವರು ಯಾರು’ ಎಂದು ಪ್ರಶ್ನಿಸಿದರು.

‘ಸಚಿವರ ಕಚೇರಿಯಲ್ಲಿ ಕುಳಿತು ಸಂಘದ ಜಾಗೆ ಬಗ್ಗೆ ಸುಳ್ಳು ಹೇಳಿರುವುದನ್ನು ಅಲ್ಲಿದ್ದವರೊಬ್ಬರು ತಿಳಿಸಿದ್ದಾರೆ. ಸಂದರ್ಭ ಬಂದಾಗ ಸಚಿವರ ಹೆಸರು ಹೇಳುತ್ತೇನೆ. ನಾನು ಹಿಟ್‌ ಆ್ಯಂಡ್ ರನ್‌ ಗಿರಾಕಿಯಲ್ಲ. ಎಲ್ಲವನ್ನೂ ಎದುರಿಸಿಕೊಂಡೇ ಬಂದಿದ್ದೇನೆ. ಹೆದರಿಕೆ ಬೆದರುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘34 ವರ್ಷಗಳಿಂದ ಸಂಘದ ಕಾರ್ಯಾಧ್ಯಕ್ಷನಾಗಿದ್ದೇನೆ ಎಂಬುದನ್ನು ತಿಳಿದುಕೊಳ್ಳಬೇಕು. ತಾಕತ್ತಿದ್ದರೆ ಕೈ ಹಾಕಿ ನೋಡು. ಬ್ಲ್ಯಾಕ್‌ಮೇಲ್‌ ಹುದ್ದೆ ಬಂದ್ ಮಾಡು. ತುಳಿಸಿಗೇರಿಯಲ್ಲಿ ಆಣೆ ಮಾಡಲು ಮುಖಂಡರು ಹೋಗಿದ್ದರು. ಆದರೆ, ಅವನೇ ಪತ್ತೆ ಇರಲಿಲ್ಲ’ ಎಂದು ಏಕವಚನದಲ್ಲಿ ಟೀಕಿಸಿದರು.

‘ನ್ಯಾಮಗೌಡರ ವಿಧಾನ ಪರಿಷತ್‌, ಬಿಡಿಸಿಸಿ ಚುನಾವಣೆಯಲ್ಲಿ ಪಕ್ಷದ ಪರ ಮಾಡಿಲ್ಲ ಎಂದು ಸಂಬಂಧಿಸಿದವರು ಹೇಳಿಸಲಿ. ಇವರ ಚುನಾವಣೆಯಲ್ಲಿ ಕೆಲಸ ಮಾಡದಿದ್ದರೆ, ವಿಧಾನ ಪರಿಷತ್‌ನಲ್ಲಿರುತ್ತಿರಲಿಲ್ಲ. ಮನೆಯಲ್ಲಿರುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

‘ಬಾಗಲಕೋಟೆಯಲ್ಲಿ ಅಸ್ಲಂಬಾಬಾ ಹಾವಳಿ ಹೆಚ್ಚಾದಾಗ ಯಾಕೆ ಧ್ವನಿ ಎತ್ತಲಿಲ್ಲ. ಅವನನ್ನು ಹೊರಹಾಕಲು ನಾನೇ ಬರಬೇಕಾಯಿತು. ಆತನಿಗೆ ಆಪ್ತನಾಗಿದ್ದ ವ್ಯಕ್ತಿಯೊಬ್ಬ  ಪ್ರತಿ ತಿಂಗಳು ₹2 ಲಕ್ಷ ನೀಡುತ್ತೇನೆ ಎಂದು ಆಮಿಷವೊಡ್ಡಿದ್ದ. ಆ ವ್ಯಕ್ತಿ ಇವರಿಗೂ ಆಪ್ತನಾಗಿದ್ದ’ ಎಂದು ಗಂಭೀರ ಆರೋಪ ಮಾಡಿದರು.

‘ಸಚಿವ ಸಂಪುಟದ ನಿರ್ದೇಶನದಂತೆ ಮುಧೋಳದ ಪರಿವರ್ತನ ಸಂಘಕ್ಕೆ ಭೂಮಿ ನೀಡಲಾಯಿತು. ‘ಎ’ ನಿವೇಶನ ಬದಲಾಗಿ ‘ಈ’ ನಿವೇಶನಗಳನ್ನು ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ 9 ನಿವೇಶನಗಳ ಸಾಕ್ಷ್ಯ ನನ್ನ ಬಳಿಯೇ ಇದೆ’ ಎಂದು ಹೇಳಿದರು.

ಮುಖಂಡರಾದ ಶಿವಾನಂದ ಟವಳಿ, ರಾಜು ನಾಯ್ಕರ ಮಾತನಾಡಿ, ಶಾಸಕ ಎಚ್‌.ವೈ. ಮೇಟಿ ಬಳಿ ನಾಗರಾಜ ಹದ್ಲಿ ಅವರಿಗೆ ಅಸ್ತಿತ್ವವಿಲ್ಲ. ಸೂಪರ್ ಎಂಎಲ್‌ಎ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಆರೋಪ ಮಾಡಿ ಮೇಟಿ ಅವರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹೋರಾಟದ ಎಚ್ಚರಿಕೆ

ಬಾಗಲಕೋಟೆ: ಲಕ್ಷಾಂತರ ಜನರಿಗೆ ವಿದ್ಯೆ ನೀಡಿರುವ ಬಿ.ವಿ.ವಿ. ಸಂಘದ ಬಗ್ಗೆ ಮಾತನಾಡಿದರೆ ವೀರಶೈವ ಲಿಂಗಾಯತರು ಸುಮ್ಮನೆ ಕೂಡುವುದಿಲ್ಲ. ಹೋರಾಟ ಮಾಡಲೂ ಸಿದ್ಧ ಎಂದು ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ ಎಚ್ಚರಿಸಿದರು. ಸಂತರು ಗಣ್ಯರು ಕಟ್ಟಿದ ಸಂಸ್ಥೆ. ಚರಂತಿಮಠರ ಹೆಸರು ಕೆಡಸಲಿಕ್ಕೆ ಸಂಘ ಬೆಳೆಯಬಾರದು ಎಂಬ ಹಿನ್ನಲೆಯಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಮಾಜದ ಆಸ್ತಿ ಎನ್ನುವ ತಿಳಿವಳಿಕೆಯೂ ಅವರಿಗಿಲ್ಲ ಎಂದು ಟೀಕಿಸಿದರು. ಸಂತ್ರಸ್ತರ ಭೂಮಿ ಹಂಚಿಕೆಗೆ ಸರ್ಕಾರದ ಅನುಮೋದನೆ ಪಡೆಯಬೇಕಿಲ್ಲ ಎಂದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ ಅನಗತ್ಯವಾಗಿ ಸಂಘಕ್ಕೆ ನೀಡಿದ್ದ ಜಾಗ ರದ್ದು ಪಡಿಸಲಾಗುತ್ತಿದೆ. ಕಾನೂನಿನ ಮೂಲಕ ಉತ್ತರ ನೀಡಲಾಗುವುದು ಎಂದರು. ಬಿಟಿಡಿಎ ಮಾಜಿ ಸದಸ್ಯ ಕುಮಾರ ಯಳ್ಳಿಗುತ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT