ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಲಿಂಗಪುರ | ಏಕಾಏಕಿ ದರ ಏರಿಕೆ: ಬೆಳೆಗಾರರ ಕೈ ಹಿಡಿದ ‘ಸದಕ’

ಮಹೇಶ ಮನ್ನಯ್ಯನವರಮಠ
Published 28 ಮೇ 2024, 6:16 IST
Last Updated 28 ಮೇ 2024, 6:16 IST
ಅಕ್ಷರ ಗಾತ್ರ

ಮಹಾಲಿಂಗಪುರ: ಕಳೆದ ಹಲವು ವರ್ಷಗಳಿಂದ ದರದಲ್ಲಿ ಏರಿಳಿತ ಕಾಣುತ್ತಿರುವ ‘ಸದಕ’ (ಜವೆ ಗೋಧಿ) ಈ ಬಾರಿ ಬೆಳೆಗಾರರ ಕೈ ಹಿಡಿದಿದ್ದು, ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.

ನಾಲ್ಕು ತಿಂಗಳ ಬೆಳೆಯಾಗಿರುವ ಸದಕವನ್ನು ಮಹಾಲಿಂಗಪುರ ಭಾಗದ ಸುತ್ತಮುತ್ತಲಿನ ರೈತರು ಈ ಬಾರಿ ಹೆಚ್ಚಾಗಿ ಬೆಳೆದಿಲ್ಲ. ರೋಗ ಬಾಧೆ ಇರದಿದ್ದರೂ ಕಳೆದ ವರ್ಷ ಕಡಿಮೆ ದರಕ್ಕೆ ಮಾರಾಟವಾಗಿದ್ದರಿಂದ ರೈತರು ಸದಕ ಬೆಳೆಯಲು ಉತ್ಸುಕತೆ ತೋರಿಲ್ಲ. ಹೀಗಾಗಿ, ಇಳುವರಿ ಕಡಿಮೆಯಾಗಿದ್ದು, ದರ ಸಹಜವಾಗಿ ಏರಿಕೆಯಾಗಿದೆ.

ಕಳೆದ ಮಾರ್ಚ್‌ನಲ್ಲಿ ಕ್ವಿಂಟಾಲ್‌ಗೆ ₹3,800 ಇದ್ದ ಸದಕ ಏಕಾಏಕಿ ₹5,500 ದರಕ್ಕೆ ಏರಿಕೆ ಕಂಡಿದೆ. ಸದ್ಯ ₹5,800 ರಿಂದ ₹6 ಸಾವಿರವರೆಗೆ ಮಾರಾಟವಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲೇ ಇದು ಉತ್ತಮ ದರ ಎಂದೇ ಅಂದಾಜಿಸಲಾಗುತ್ತಿದೆ.

ಕಳೆದ ಹಲವು ತಿಂಗಳಿಂದ ರೈತರಿಂದ ಸದಕ ಖರೀದಿಸಿರುವ ಕಿರುಕುಳ ವ್ಯಾಪಾರಸ್ಥರು ಇನ್ನೂ ದರ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದು, ಹೀಗಾಗಿ ತಮ್ಮ ಶೆಡ್‌ಗಳಲ್ಲಿ ಲೋಡ್‌ಗಟ್ಟಲೆ ದಾಸ್ತಾನು ಮಾಡಿದ್ದಾರೆ.

ಸಾಮಾನ್ಯವಾಗಿ ಮೂರು ಕುಳೆ ಆದ ನಂತರ ಕಬ್ಬು ಬೆಳೆಯ ಭೂಮಿಯನ್ನು ಬದಲಾವಣೆ ಮಾಡಲು ಈ ಸದಕವನ್ನು ಹೆಚ್ಚಾಗಿ ಈ ಭಾಗದಲ್ಲಿ ಬೆಳೆಯುತ್ತಾರೆ. ಮೂರು ತಿಂಗಳು ಈ ಬೆಳೆ ಬೆಳೆದು ಮತ್ತೆ ಕಬ್ಬು ನಾಟಿ ಮಾಡುತ್ತಾರೆ. ಸದಕ ಬೆಳೆದ ನಂತರ ಕಬ್ಬು ನಾಟಿ ಮಾಡಿದರೆ ಕಬ್ಬಿನ ಇಳುವರಿ ಹೆಚ್ಚಾಗುತ್ತದೆ ಎನ್ನುತ್ತಾರೆ ರೈತರು. 

‘ಸ್ಥಳೀಯವಾಗಿಯೇ ಖರೀದಿದಾರರು ಸದಕ  ತೆಗೆದುಕೊಳ್ಳುವುದರಿಂದ ಸಾಗಣೆ ವೆಚ್ಚ ಕಡಿಮೆ ಎನಿಸಿದೆ. ನಿಶ್ಚಿತ ದರ ಇರದೇ ಇರುವುದರಿಂದ ಬೆಳೆ ಬೆಳೆಯಲು ಭಯವಾಗುತ್ತದೆ. ಒಮ್ಮೊಮ್ಮೆ ಅದಕ್ಕೆ ಖರ್ಚು ಮಾಡಿದ ಹಣವೂ ಸಿಗುವುದಿಲ್ಲ’ ಎನ್ನುತ್ತಾರೆ ರನ್ನ ಬೆಳಗಲಿಯ ರೈತ ಬಸಪ್ಪ ಕುಂಟನವರ.

ಸದಕದ ಬೆಳೆ ಇಳುವರಿ ಕಡಿಮೆ ಇರುವುದರಿಂದ ದರ ಹೆಚ್ಚಾಗಿದೆ. ಕಳೆದ ವರ್ಷ ದರ ಇರಲಿಲ್ಲ. ಹೀಗಾಗಿ ರೈತರು ಈ ಬಾರಿ ಹೆಚ್ಚು ಸದಕ ಬೆಳೆದಿಲ್ಲ. ಇನ್ನೂ ದರ ಹೆಚ್ಚಾಗಬಹುದು.
- ಈರಣ್ಣ ಗಾಣಿಗೇರ ಕಿರುಕುಳ ವ್ಯಾಪಾರಸ್ಥರು ರನ್ನಬೆಳಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT