ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಂತ ಶ್ರೀಗಳ ಕಾರ್ಯ ಮಾದರಿ: ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ

ವ್ಯಸನಮುಕ್ತ ದಿನಾಚರಣೆ: ಬಸವರಾಜ ಹೊರಟ್ಟಿ ಅಭಿಪ್ರಾಯ
Last Updated 2 ಆಗಸ್ಟ್ 2021, 2:54 IST
ಅಕ್ಷರ ಗಾತ್ರ

ಇಳಕಲ್ : ಬಸವಾದಿ ಶರಣರ ಮಾರ್ಗದಲ್ಲಿ ನಡೆದ ಲಿಂ.ಮಹಾಂತ ಶ್ರೀಗಳು ಕೇವಲ ಪ್ರವಚನಕ್ಕೆ ಸೀಮಿತರಾಗದೇ ಮಹಾಂತ ಜೋಳಿಗೆ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದರು. ಮಹಾಂತ ಶ್ರೀಗಳ ಸಮಾಜಮುಖಿ ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ನಗರದ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆಡಳಿತ, ಬಾಗಲಕೋಟ ಜಿಲ್ಲಾ ಪಂಚಾಯ್ತಿ ಹಾಗೂ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಡಾ.ಮಹಾಂತ ಶ್ರೀಗಳ 91ನೇ ಜನ್ಮದಿನದ ನಿಮಿತ್ತ ನಡೆದ ವ್ಯಸನಮುಕ್ತ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಸನಮುಕ್ತ ಸಮಾಜ ಕಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಆದರೆ ಸರ್ಕಾರ ಅದನ್ನು ಮರೆತಿದೆ. ಡಾ.ಮಹಾಂತ ಶ್ರೀಗಳು ನಾಡಿನ ಎಲ್ಲ ಧಾರ್ಮಿಕ ಮುಖಂಡರಿಗೆ ಒಂದು ಮಾದರಿಯನ್ನು ನೀಡಿದ್ದು, ಈ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಂಡರೇ ಆರೋಗ್ಯಯುತ ರಾಜ್ಯ ನಿರ್ಮಾಣ ಸಾಧ್ಯವಾಗುವುದು ಎಂದು ಹೇಳಿದರು.

ಬಾಗಲಕೋಟೆಯ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿ, ಲಿಂ.ಡಾ.ಮಹಾಂತಶ್ರೀಗಳು ಬಸವತತ್ವದ ಪ್ರಸಾರಕ್ಕಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾಚೇತನ. ಮಹಾಂತ ಜೋಳಿಗೆಯ ಮೂಲಕ ನಾಡಿನುದ್ದಕ್ಕೂ ಸಂಚರಿಸಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಸಾವಿರಾರು ಜನರ ಜೀವನವನ್ನು ಉದ್ಧರಿಸಿದರು. ಮಹಾಂತಶ್ರೀಗಳ ಕಾಯಕನಿಷ್ಠೆ ಹಾಗೂ ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ದಾರಿದೀಪ. ವ್ಯಸನಗಳು ವ್ಯಕ್ತಿಯ ವ್ಯಕ್ತಿತ್ವದ ಅಧ:ಪತನಕ್ಕೆ ಕಾರಣವಾಗುತ್ತವೆ ಎಂದರು.

ಹುನ್ನೂರ-ಮಧುರಖಂಡಿ ಬಸವಜ್ಞಾನ ಗುರುಕುಲದ ಈಶ್ವರ ಮಂಟೂರ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕಾದರೇ ಪಿಯುಸಿಯಿಂದ ಪದವಿವರೆಗೆ ವ್ಯಸನಮುಕ್ತಿಗಾಗಿ ಮಹಾಂತಪ್ಪಗಳ ಮಹಾಂತ ಜೋಳಿಗೆ ನಡೆಸಿದ ಅಭಿಯಾನವನ್ನು ಪಠ್ಯದಲ್ಲಿ ಅಳವಡಿಸಬೇಕು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಗುರುಮಹಾಂತ ಶ್ರೀಗಳು ಮಾತನಾಡಿದರು. ಶರಣ ಸಾಹಿತಿ ಪ್ರೊ.ಸಿದ್ದಣ್ಣ ಲಂಗೋಟಿ ರಚಿಸಿದ ‘ಬಸವ ಜ್ಯೋತಿ ಮಹಾಂತ ಶಿವಯೋಗಿಗಳು’ ಪುಸ್ತಕ ಬಿಡುಗಡೆಯಾಯಿತು. ಶಿರೂರಿನ ಡಾ. ಬಸವಲಿಂಗ ಶ್ರೀಗಳು, ಲಿಂಗಸ್ಗೂರಿನ ಸಿದ್ದಲಿಂಗ ಶ್ರೀಗಳು, ಸಿದ್ದಯ್ಯನಕೋಟೆಯ ಬಸವಲಿಂಗ ಶ್ರೀಗಳು, ಬಸವ ಬೆಳವಿಯ ಶರಣಬಸವ ಶ್ರೀಗಳು, ಮರೆಗುದ್ದಿಯ ಗುರು ಮಹಾಂತಶ್ರೀಗಳು ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ, ಉಪಾಧ್ಯಕ್ಷೆ ಸವಿತಾ ಆರಿ, ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಎಂ.ವಿ. ಪಾಟೀಲ, ಶರಣಪ್ಪ ಅಕ್ಕಿ, ಜಿ.ಎಸ್. ಗೌಡರ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎ. ಹನುಮ ನರಸಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT