ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರ್ಪಡೆ: ಜ.26ರವರೆಗೆ ಕಾದು ನೋಡಿ-ಲಕ್ಷ್ಮಣ ಸವದಿ

Published 19 ನವೆಂಬರ್ 2023, 14:48 IST
Last Updated 19 ನವೆಂಬರ್ 2023, 14:48 IST
ಅಕ್ಷರ ಗಾತ್ರ

ಬಾಗಲಕೋಟೆ: ಕಾಂಗ್ರೆಸ್ ಸೇರ್ಪಡೆಗೆ ಹಲವು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಂಪರ್ಕದಲ್ಲಿದ್ದಾರೆ. ಯಾರು ಬರಲಿದ್ದಾರೆ ಎಂಬುದಕ್ಕೆ ಜ.26ರವರೆಗೆ ಕಾದು ನೋಡಿ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತ ಮಾಡುವುದಿಲ್ಲ. ಅವರೇ ನಮ್ಮ ಪಕ್ಷದ ತತ್ವ, ಸಿದ್ದಾಂತ ಮೆಚ್ಚಿ ಬರಲಿದ್ದಾರೆ. ಕರೆದುಕೊಂಡು ಬಂದ ಮೇಲೆ ಸೂಕ್ತ ಸ್ಥಾನಮಾನ ಕೊಡಬೇಕಾಗುತ್ತದೆ. ಸೇರ್ಪಡೆ ಮಾಡಿಕೊಳ್ಳಲು ಯಾವುದೇ ಅವಸರ ಮಾಡುವುದಿಲ್ಲ ಎಂದರು.

ಬಿಜೆಪಿ, ಜೆಡಿಎಸ್ ನಾಯಕರು ತಮ್ಮ ಶಾಸಕರು ಹಾಗೂ ಮುಖಂಡರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಐದು ವರ್ಷ ಸರ್ಕಾರ ಸುಭದ್ರವಾಗಿರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರಿದ್ದಾರೆ. ಈಗ ಬಿಜೆಪಿ ಅಧ್ಯಕ್ಷರಾಗಿರುವವರು ಶಿವಮೊಗ್ಗ, ಮೈಸೂರಿಗೆ ಸೀಮಿತವಾದವರು. ಅವರ ಪ್ರಭಾವ ಇಲ್ಲಿಲ್ಲ. ಬಿಜೆಪಿಗೆ ಲಿಂಗಾಯತರನ್ನು ಅದ್ಯಕ್ಷರನ್ನಾಗಿ ಮಾಡಿದ್ದೇವೆ ಎಂಬುದರ ಲಾಭ ದೊರೆಯುವುದಿಲ್ಲ ಎಂದು ಹೇಳಿದರು.

ಅಧ್ಯಕ್ಷರ ನೇಮಕಾತಿಯ ಬಗ್ಗೆ ಬಿಜೆಪಿಯಲ್ಲಿ ದೊಡ್ಡ ಪ್ರಮಾಣದ ಅಸಮಾಧಾನವಿದೆ. ಅದು ಸ್ಫೋಟಗೊಳ್ಳುವುದಷ್ಟೇ ಬಾಕಿ ಇದೆ ಎಂದರು.

ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿರುವವರು ಸತ್ಯ ಹರಿಶ್ಚಂದ್ರನ ಮನೆಯಲ್ಲಿ ಬಾಡಿಗೆ ಇದ್ದವರಂತೆ ಆಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸ್ಪೀಕರ್ ಬಗ್ಗೆ ಸಚಿವ ಜಮೀರ್ ಅಹ್ಮದ್ ಹೇಳಿರುವುದನ್ನು ನಾನೂ ಒಪ್ಪುವುದಿಲ್ಲ. ಅದೊಂದು ಸಂವಿಧಾನಾತ್ಮಕ ಹುದ್ದೆ. ಅದಕ್ಕೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಗೌರವ ನೀಡುತ್ತಾರೆ ಎಂದು ಹೇಳಿದರು.

ಕುಮಾರ ಯಳ್ಳಿಗುತ್ತಿ ಸಂಬಂಧಿಕರು. ಸಂಬಂಧ, ಸ್ನೇಹಕ್ಕೆ ಪಕ್ಷ ಅಡ್ಡ ಬರುವುದಿಲ್ಲ. ಅವರ ಮನೆಗೆ ಬಂದಿರುವುದಕ್ಕೆ ರಾಜಕೀಯ ಉದ್ದೇಶವಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT