ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೇರದಾಳ: ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿಯ ನಿತ್ಯ ದಾಸೋಹ

ಯುವಕರ ತಂಡದ 25 ವರ್ಷಗಳ ನಿಸ್ವಾರ್ಥ ಸೇವೆಯಿಂದ ನಡೆದು ಬಂದ ಪ್ರಸಾದ ಸೇವೆ
Published : 1 ಸೆಪ್ಟೆಂಬರ್ 2024, 6:19 IST
Last Updated : 1 ಸೆಪ್ಟೆಂಬರ್ 2024, 6:19 IST
ಫಾಲೋ ಮಾಡಿ
Comments

ತೇರದಾಳ: ಶ್ರೀಶೈಲ ಕ್ಷೇತ್ರಕ್ಕೆ ಹೊರಟ ತೇರದಾಳದ ಕೆಲವು ಯುವಕರ ತಲೆಯಲ್ಲಿ ಹೊಳೆದ ಒಂದು ಸಣ್ಣ ವಿಚಾರ ನಿರಂತರವಾಗಿ ನಡೆದುಕೊಂಡು ಬಂದು ಇಂದು 25ನೇ ವರ್ಷಕ್ಕೆ ಬಂದು ನಿಂತಿದೆ.  ಈ ಕ್ಷೇತ್ರಕ್ಕೆ ಭೇಟಿ ನೀಡುವವರ ಹಸಿವು ನೀಗಿಸಿದ ಕಾಮಧೇನುವಾಗಿ ಬೆಳೆದು ನಿಂತಿದೆ.

ಶ್ರೀಶೈಲ ಕ್ಷೇತ್ರಕ್ಕೆ ಪ್ರತಿ ವರ್ಷ ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಭಕ್ತರು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸುತ್ತಾರೆ. ಹೀಗೆ ಬರೋಬ್ಬರಿ 25 ವರ್ಷಗಳ ಹಿಂದೆ ಅಂದರೆ 1999ರಲ್ಲಿ ಇಲ್ಲಿಯ 15 ಯುವಕರ ತಂಡವೊಂದು ಪಾದಯಾತ್ರೆ ಸಮಯದಲ್ಲಿ ಆ ದಿನಗಳಲ್ಲಿ ಯಾತ್ರಿಕರಿಗೆ ಭಕ್ತರು ಪ್ರಸಾದ ಸೇವೆ ಮಾಡುತ್ತಿದ್ದುದನ್ನು ಕಂಡು ಇವರ ತಲೆಯಲ್ಲಿ ಅಲ್ಲಮಪ್ರಭು ದೇವರ ಜಾತ್ರೆ ಸಂದರ್ಭದಲ್ಲಿ ನಾವು ಏಕೆ ಪ್ರಸಾದ ಸೇವೆ ಆರಂಭಿಸಬಾರದು ಎಂದು ಯೋಚನೆ ಬಂದಿತು. ಪಾದಯಾತ್ರೆ ಮುಗಿಸಿ ಸೀದಾ ತೇರದಾಳದ ವಿರಕ್ತಮಠದ ಅಂದಿನ ಶ್ರೀಗಳಾಗಿದ್ದ ಶಿವಲಿಂಗೇಶ್ವರರಲ್ಲಿ ತಮ್ಮ ವಿಚಾರವನ್ನು ಹಂಚಿಕೊಂಡರು. ಶ್ರೀಗಳು ಇದು ಸಾಧ್ಯ ಆದರೆ ಕಷ್ಟವಾದೀತು ನೋಡಿ ಎಂಬ ಸಲಹೆ ನೀಡಿದರು. ಯುವಕರು ನೀವು ಆಶೀರ್ವದಿಸಿ, ಮಾರ್ಗದರ್ಶನ ಮಾಡುತ್ತಿರಿ ಎಂದು ತಿಳಿಸಿ ಕಾರ್ಯಪ್ರವತ್ತರಾದರು. ಈ ವಿಷಯವನ್ನು ಅಲ್ಲಮಪ್ರಭು ದೇವರ ಅರ್ಚಕರೊಂದಿಗೆ ಚರ್ಚಿಸಿದಾಗ ಅವರು ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಎಂಬ ಕರಾರಿನೊಂದಿಗೆ ಒಪ್ಪಿಗೆ ಸೂಚಿಸಿದರು.

ಸುತ್ತಲಿನ ಹಳ್ಳಿಗಳ ಭಕ್ತರ ಮನೆಗಳಿಗೆ ತೆರಳಿ ದವಸ ಧಾನ್ಯ ಸಂಗ್ರಹಿಸಿ 2000ದಲ್ಲಿ ಶಿವಲಿಂಗೇಶ್ವರ ಶ್ರೀಗಳನ್ನು ಅಧ್ಯಕ್ಷರನ್ನಾಗಿಸಿಕೊಂಡು ‘ಪ್ರಭುಲಿಂಗೇಶ್ವರ ಅನ್ನಪ್ರಸಾದ ಸಮಿತಿ’ಯನ್ನು ರಚಿಸಿ ಅದೇ ವರ್ಷ ಮೊದಲ ಬಾರಿಗೆ ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುವ ಅಲ್ಲಮಪ್ರಭು ದೇವರ ಜಾತ್ರೆಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು.. ಮೊದಲ ವರ್ಷ ಜಾತ್ರೆಗೆ ಬಂದ ಭಕ್ತರಿಗೆ 50 ಕ್ವಿಂಟಲ್ ಸಜ್ಜಕ, 100 ಕ್ವಿಂಟಲ್ ಅನ್ನ ಮಾಡಿಸಿ ಪ್ರಸಾದ ವ್ಯವಸ್ಥೆ ಮಾಡಿದರು. ಮೊದಲ ಬಾರಿಗೆ ಪ್ರಸಾದ ವ್ಯವಸ್ಥೆ ಮಾಡಿದಾಗ ಕಟ್ಟಡ ಇಲ್ಲದ್ದರಿಂದ ನೆರಳಿಗೆಂದು ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಆರಂಭವಾದ ಪ್ರಸಾದ ಸೇವೆಯ ಪಯಣದಲ್ಲಿ ಹುಗ್ಗಿ, ಬುಂದಿಕಾಳು, ಜಿಲೇಬಿ, ಪಾಯಸ, ಮಾದಲಿ, ಬದನೆಕಾಯಿ ಪಲ್ಯ, ಉಪ್ಪಿನಕಾಯಿ ಸೇರಿದಂತೆ ತರಹೇವಾರಿ ಭೋಜನ ವ್ಯವಸ್ಥೆ ಮಾಡುತ್ತ ಬಂದಿದ್ದಾರೆ. ನೀರಿನ ಕೊರತೆಯಾದಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಭಕ್ತರಿಂದ ಭೇಷ್‌ ಎನಿಸಿಕೊಂಡಿದ್ದಾರೆ.

ಆರಂಭದಲ್ಲಿ ಶ್ರಾವಣ ಮಾಸದಲ್ಲಿ ಮಾತ್ರ ದೊರೆಯುತ್ತಿದ್ದ ಪ್ರಸಾದ ಈಗ ಪ್ರತಿ ತಿಂಗಳು ಅಮಾವಸ್ಯೆ, ವಿಶೇಷ ಸೋಮವಾರ ಕೂಡ ಲಭ್ಯವಿರುತ್ತದೆ. ಹೊರಗಿನ ಭಕ್ತರಿಗಂತೂ ನಿತ್ಯವೂ ದಾಸೋಹ ವ್ಯವಸ್ಥೆ ಇರುತ್ತದೆ ಎನ್ನುತ್ತಾರೆ ಅನ್ನಪ್ರಸಾದ ಸಮಿತಿಯಲ್ಲಿ ಒಬ್ಬರಾದ ರೇವಪ್ಪ ತುಕ್ಕನ್ನವರ.

ಭಕ್ತರಿಂದ ಸಂಗ್ರಹಿಸಿ ಆರಂಭಿಸಿದ ದಾಸೋಹ ಸಂಸದರು ₹ 3 ಲಕ್ಷ, ತೇರದಾಳ ಶಾಸಕ ಸಿದ್ದು ಸವದಿ ₹ 10 ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ₹ 1 ಲಕ್ಷ ಸೇರಿ ಭಕ್ತರು ನೀಡಿದ ಹಣದಿಂದ ಇಂದು ಹೆಮ್ಮರವಾಗಿ ಬೆಳೆದಿದೆ. ಅನ್ನಪ್ರಸಾದ ಸಮಿತಿ ಇಂದು ಸಮುದಾಯ ಭವನ ನಿರ್ಮಾಣ, ಕೊಠಡಿಗಳು, ಅಡುಗೆ ಪಾತ್ರೆ, ಕಡಿಮೆ ಸಮಯದಲ್ಲಿ ಹೆಚ್ಚು ಅಡುಗೆ ತಯಾರಿಸಲು ಅನುಕೂಲವಾಗಲು ಸ್ಟೀಮ್ ಓಲೆ ಸೇರಿದಂತೆ ವಿವಿಧ ಪರಿಕರಗಳನ್ನು ತರಿಸಲಾಗಿದೆ. ಅಂದಾಜು ₹ 5 ಕೋಟಿ ಮೌಲ್ಯದ ಆಸ್ತಿಯನ್ನು ಸಮಿತಿ ಸಂಗ್ರಹಿಸಿದೆ.

ದೊಡ್ಡವಾಡ, ಅಮ್ಮಣಗಿ, ಸವದತ್ತಿ, ಸಸಾಲಟ್ಟಿ, ಕಾಲತಿಪ್ಪಿ, ಹನಗಂಡಿ ಸೇರಿದಂತೆ ಹಲವು ಕಡೆಯ ಭಕ್ತರು ಸಮಿತಿಯ ಏಳಿಗೆಗೆ ಸಹಕರಿಸಿದ್ದಾರೆ. ಶೀಘ್ರದಲ್ಲಿ ಸಮಿತಿಯಿಂದ ಶೈಕ್ಷಣಿಕ ಕ್ಷೇತ್ರಕ್ಕೆ ಕಾಲಿಡುವುದಕ್ಕಾಗಿ ಜಾಗ ಖರೀದಿಸಲಾಗಿದೆ. ಇವರು ದೇವಸ್ಥಾನದಲ್ಲಿ ನಿರ್ಮಿಸಿದ ಕೊಠಡಿಗಳಲ್ಲಿ ವಾಸವಿದ್ದು ಹಲವು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಯಶಸ್ಸು ಕಂಡಿದ್ದಾರೆ.

ಸಮಿತಿಯ 15 ಜನರ ತಂಡ

ರೇವಪ್ಪ ತುಕ್ಕನ್ನವರ ಮಲ್ಲಪ್ಪ ಬಾಳಿಕಾಯಿ ಪರಪ್ಪ ಬಾಳಿಕಾಯಿ ರಾಜು ಯಡವನ್ನವರ ಸಿದ್ದಪ್ಪ ಮಾಕಾಳಿ ಸಿದ್ದು ಗುಡ್ಡಿ ಯಮನಪ್ಪ ಬಾಳಿಕಾಯಿ ಶ್ರೀಶೈಲ ಮೇಗಾಡಿ ಗಂಗಪ್ಪ ಚಮಕೇರಿ ಮಹಾದೇವ ಬಿಜ್ಜರಗಿ ಸತ್ಯಪ್ಪ ಎಲಿತೋಟ ಬಸವರಾಜ ಕರಲಟ್ಟಿ ಚಂದ್ರಶೇಖರ ಮುಕುಂದ ಮುತ್ತಪ್ಪ ಅಥಣಿ ಇವರ 15 ಜನರ ತಂಡ ಈಗಲೂ ಅದೇ ಉತ್ಸಾಹದಲ್ಲಿ ಕೆಲಸ ನಿರ್ವಹಿಸುತ್ತಿದೆ. ಅನೇಕರಿಗೆ ಈಗ ವಯಸ್ಸಾಗಿದ್ದರೂ ಉತ್ಸಾಹ ಕುಂದಿಲ್ಲ. (ದೇಣಿಗೆ ಹಾಗೂ ಮಾಹಿತಿಗೆ 9972510871 ಸಂಪರ್ಕಿಸಬಹುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT