ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ಮಲ್ಲಿಕಾರ್ಜುನ ದೇವರ ರಥೋತ್ಸವ ಇಂದು

ಎಚ್.ಎಸ್.ಘಂಟಿ
Published 14 ಜನವರಿ 2024, 8:25 IST
Last Updated 14 ಜನವರಿ 2024, 8:25 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಲಾಯದಗುಂದಿ ಗ್ರಾಮಕ್ಕೆ ಮಲ್ಲಿಕಾರ್ಜುನ ಅಜ್ಜ ಎಂದರೆ ನಡೆದಾಡುವ ದೇವರು. ಬರಗಾಲ, ಕಾಲರಾ, ಪ್ಲೆಗ‌್ನಂತಹ ಕಷ್ಟದ ಸ್ಥಿತಿಯಲ್ಲಿ ಮಲ್ಲಯ್ಯ ಮುತ್ಯಾನವರ ಪವಾಡಗಳು ಜನರನ್ನು ರಕ್ಷಿಸಿವೆ. ಅವರು ಲಿಂಗೈಕ್ಯರಾಗಿ ಹಲವು ವರ್ಷಗಳೇ ಗತಿಸಿದ್ದರೂ, ಅವರು ಹಾಕಿಕೊಟ್ಟ ನಿಯಮ, ಸಂಸ್ಕತಿ, ಪರಂಪರೆಯ ಹಾದಿಯಲ್ಲಿ ಅವರ ಮರಿ ಅಜ್ಜನವರು ನಡೆಸಿಕೊಂಡು ಹೋಗುತ್ತಿದ್ದಾರೆ. 

ಕಮತಗಿ ಹಾಗೂ ಲಾಯದಗುಂದಿಯ ಹುಚ್ಚೇಶ್ವರ ಸ್ವಾಮೀಜಿ ಸನ್ನಿಧಿಯಲ್ಲಿ ಮಲ್ಲಯ್ಯ ಮುತ್ಯಾರ ಸಮಾಜ ಸುಧಾರಣಾ ಕಾರ್ಯ ನಡೆಯುತ್ತಿವೆ. ಹೊಳೆ ಹುಚ್ಚೇಶ್ವರ ಸ್ವಾಮೀಜಿ ಗ್ರಾಮದ ಬದಲಾವಣೆಗೆ ಕಾರಣರಾಗಿದ್ದಾರೆ. ಹಿರಿಯ ಹುಚ್ಚೇಶ್ವರ ಜನವರ ಗದ್ದುಗೆಗೆ ದಿನನಿತ್ಯ ಪೂಜೆ ಕಾರ್ಯಕ್ರಮಗಳು ನಡೆಯುತ್ತಿವೆ.

ಅರ್ಧ ಕೆಂಪು ಅರ್ಧ ಕಪ್ಪು ಮಣ್ಣಿನಿಂದ ಕೂಡಿದ ಲಾಯದಗುಂದಿ ಮಲಪ್ರಭೆಯ ದಂಡೆಯ ಮೇಲಿರುವ ಗ್ರಾಮ. ಮಲಪ್ರಭೆಯು ಪೂರ್ವದಿಂದ ಪಶ್ಚಿಮಕ್ಕೆ ಹರಿಯುವುದರಿಂದ ಪುಣ್ಯ ನದಿ ಎಂಬ ನಂಬಿಕೆಯಿದೆ. ಸುತ್ತಮುತ್ತಲಿನ ಗ್ರಾಮದ ಎಲ್ಲ ಜಾತಿ, ಜನಾಂಗದ ಜನರೂ ಸಂಕ್ರಮಣ ಆಚರಣೆಗೆ ಇಲ್ಲಿಗೆ ಬಂದು ಪುಣ್ಯ ಸ್ನಾನ ಮಾಡುತ್ತಾರೆ.

ಇಂದು ರಥೋತ್ಸವ: ಪ್ರತಿ ವರ್ಷ ಜ.14ರಂದು ಮಲ್ಲಿಕಾರ್ಜುನ ದೇವರ ರಥೋತ್ಸವ ನಡೆಯುತ್ತದೆ. 13ರಂದು ಹುಚ್ಚಪ್ಪಯ್ಯನ ಸಾಂಕೇತಿಕ ತೇರು ಎಳೆಯುವುದರ ಮೂಲಕ ಜಾತ್ರೆಗೆ ಚಾಲನೆ ಸಿಗುತ್ತದೆ. ಮರು ದಿನ ಹುಚ್ಚೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮೆರವಣಿಗೆಯೊಂದಿಗೆ ನದಿಗೆ ತೆರಳಿ, ಪೂಜೆ ಸಲ್ಲಿಸಲಾಗುತ್ತದೆ.

ಕಳಶದ ಮೆರವಣಿಗೆ: ಸಂಜೆ ರಥೋತ್ಸವದ ವೇಳೆ ಸಂಪ್ರದಾಯದಂತೆ ನಿಂಬಲಗುಂದಿ ಗ್ರಾಮದ ಭಕ್ತರಿಂದ ಪೂಜೆ ಸಲ್ಲುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸದ ಮೆರವಣಿಗೆ ನಡೆಯುತ್ತದೆ ಊರಿನ ದಳಪತಿ ಅವರ ಮನೆಯಿಂದ ತೇರಿನ ಹಗ್ಗದ ಮೆರವಣಿಗೆ ನಡೆಯುತ್ತದೆ. ಪಕ್ಕದ ಹಳ್ಳಿ ಕೊಟ್ನಳ್ಳಿಯವರಿಂದ ನಂದಿಕೋಲಿನ ಮೆರವಣಿಗೆ ನಡೆಯುತ್ತದೆ. ಯುವಕರು ನಂದಿಕೋಲನ್ನು ಹೊತ್ತ ಶಕ್ತಿ ಪ್ರದರ್ಶಿದುತ್ತಾರೆ.

ರಥದ ಅಲಂಕಾರಕ್ಕೆ ಸಬ್ಬಲಹುಣಸಿ ಗ್ರಾಮದಿಂದ ಕಬ್ಬು ಹಾಗೂ ಬಾಳೆ ಕಂಬಗಳು ಮೆರವಣಿಗೆ ಮೂಲಕ ಬರುತ್ತವೆ. ಸಂಜೆ ಹೊಳೆ ಹುಚ್ಚೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ಜರುಗುತ್ತದೆ. ರಥಕ್ಕೆ ಭಕ್ತರು ಉತ್ತತ್ತಿಗಳನ್ನು ಅರ್ಪಿಸಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಜಾತ್ರೆಯ ನಿಮಿತ್ತವಾಗಿ ನಾಟಕಗಳು ಕ್ರಿಕೆಟ್ ಹಗ್ಗ ಜಗ್ಗಾಟ, ಟಗರಿನ ಕಾಳಗ ಸೈಕಲ್ ರೇಸ್, ನಾಟಕ ಸೇರಿದಂತೆ ಅನೇಕ ಮನರಂಜನ ಕಾರ್ಯಕ್ರಮಗಳು ಮೂರು ದಿನಗಳ ಕಾಲ ನಡೆಯುತ್ತವೆ. ರಥೋತ್ಸವ ಜರುಗಿದ ಮೂರನೇ ದಿನಕ್ಕೆ ಕಳಸ ಅವರೋಹನ ನಡೆಯುತ್ತದೆ ಎನ್ನುತ್ತಾರೆ ಶಿಕ್ಷಕ ಬಸವಂತಪ್ಪ ಕುಪ್ಪಸ್ತ.

ಮಲ್ಲಿಕಾರ್ಜುನ ದೇವಸ್ಥಾನ
ಮಲ್ಲಿಕಾರ್ಜುನ ದೇವಸ್ಥಾನ
ಮಲ್ಲಯ್ಯಜ್ಜನ ಹೇಳಿಕೆ
ಪ್ರತಿ ವರ್ಷ ಮಕರ ಸಂಕ್ರಮಣದಂದು ಮಲ್ಲಯ್ಯ ಅಜ್ಜನವರ ಹೇಳಿಕೆ ನಡೆಯುತ್ತದೆ ಮಳೆ– ಬೆಳೆ ವ್ಯಾಪಾರ ರಾಜಕೀಯ ಲೋಕದ ಕಲ್ಯಾಣ ಕುರಿತು ಭವಿಷ್ಯವಾಣಿ ನುಡಿಯಲಾಗುತ್ತದೆ. ಪ್ರತಿ ಅಮಾವಾಸ್ಯೆಯಂದು ಮಠದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದ ಭಕ್ತರಿಗೆ ಅನ್ನಪ್ರಸಾದ ನಡೆಯುತ್ತದೆ. ಸ್ಥಳೀಯ ಮಠದ ಪೂಜ್ಯರಾದ ಶಿವಯ್ಯ ಬಸಯ್ಯ ಹಿರೇಮಠ ಇವರ ನೇತೃತ್ವದಲ್ಲಿ ಮಠದ ಕಾರ್ಯಕಲಾಪಗಳು ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT