ಭಾನುವಾರ, ಸೆಪ್ಟೆಂಬರ್ 19, 2021
24 °C

ಕೂಡಲಸಂಗಮ: ಜಮೀನಿಗೆ ನುಗ್ಗಿದ ನದಿ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಡಲಸಂಗಮ: ಆಲಮಟ್ಟಿ, ಕೃಷ್ಣಾ , ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನಾರಾಯಣಪೂರ ಜಲಾಶಯ ಹಿನ್ನೀರು ಹೆಚ್ಚಾಗಿದೆ. ಕೃಷ್ಣ, ಮಲಪ್ರಭೆ ನದಿಗಳ ಸಂಗಮವಾದ ಕೂಡಲಸಂಗಮದ ಬಳಿ ಜಲರಾಶಿ ಸಂಪೂರ್ಣ ತುಂಬಿಕೊಂಡು ನದಿ ದಡದ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಮಾಡಿದೆ. 

ನದಿ ದಡದ ಜಮೀನುಗಳಿಗೆ ನೀರು ನುಗ್ಗಿ ಕಬ್ಬು, ತೊಗರಿ, ಈರುಳ್ಳಿ ಮುಂತಾದ ಬೆಳಗಳಿಗೆ ಹಾನಿ ಉಂಟು ಮಾಡಿದೆ. ಕೆಲ ರೈತರ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿವೆ.

ವರ್ಷದಿಂದ ವರ್ಷಕ್ಕೆ ನದಿಯ ಅಗಲ ಕಡಿಮೆಯಾಗುತ್ತಿರುವುದು, ಅಧಿಕ ಹೂಳು ತುಂಬಿಕೊಂಡಿದ್ದರಿಂದ ನದಿ ದಡದ ರೈತರಿಗೆ ಆಗಸ್ಟ್‌ ಎರಡನೇ ವಾರದಿಂದ ಅಕ್ಟೋಬರ್ ಕೊನೆಯ ವಾರದವರೆಗೆ ತೊಂದರೆ ಉಂಟಾಗುತ್ತಿತ್ತು. ಈ ವರ್ಷ ಜುಲೈ ಕೊನೆಯ ವಾರದಲ್ಲಿಯೇ ಜಮೀನಿಗೆ ನೀರು ನುಗ್ಗಿರುವುದು ಆತಂಕ ಮೂಡಿಸಿದೆ.

ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿಯುತ್ತಿರುವುದಿಂದ ಮಂಡಳಿಯ ಅಧಿಕಾರಿಗಳು ಸಂಗಮೇಶ್ವರ ದೇವಾಲಯ ಬಳಿಯ ನದಿಯ ದಡಕ್ಕೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ನದಿ ದಡದ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ.

ದೇವಾಲಯಕ್ಕೆ ನೀರು ನುಗ್ಗುವ ಮೊರಿಗಳನ್ನು ಶನಿವಾರ ರಾತ್ರಿಯೇ ಬಂದ್ ಮಾಡಲಾಗಿದೆ. ಕೂಡಲಸಂಗಮ, ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ, ಹೂವನೂರ ಗ್ರಾಮದ ಬಳಿ ನೀರು ಇದ್ದು, ಸ್ವಲ್ಪ ಏರಿಕೆಯಾದರೂ ಈ ಗ್ರಾಮಗಳಿಗೆ ಮಲಪ್ರಭಾ ನದಿ ನೀರು ನುಗ್ಗುತ್ತದೆ.

ಸಂಗಮನಾಥನ ದೇವಾಲಯಕ್ಕೆ ನೀರು ನುಗ್ಗಲು 3 ಮೆಟ್ಟಿಲುಗಳಷ್ಟೇ ಬಾಕಿಯಿದ್ದು, ಎರಡು ಮೆಟ್ಟಿಲು ನೀರು ಬಂದರೆ 13 ಗ್ರಾಮಗಳಿಗೆ ನೀರು ನುಗ್ಗುವ ಅಪಾಯವಿದೆ.

ಅಡವಿಹಾಳ ಗ್ರಾಮದ ರೈತ ಸಂಗಪ್ಪ ಮಾದರ ’ನದಿಯ ಅಗಲ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದರಿಂದ ನೀರಿನ ಸಾಮರ್ಥ್ಯವೂ ಕಡಿಮೆ ಆಗುತ್ತಿದೆ. ಪ್ರತಿ ವರ್ಷವೂ ನದಿ  ನೀರು ಜಮೀನಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡುತ್ತಿದೆ. ಜೀವನ ನಡೆಸುವುದೇ ಕಷ್ಟವಾಗಿದೆ. ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ಮಾಡಬೇಕು‘ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು