ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಸಿಎಂ ಆಪ್ತ ಕಾರ್ಯದರ್ಶಿ ಹೆಸರಲ್ಲಿ ಡಿಎಚ್‌ಒಗೆ ₹7 ಲಕ್ಷ ವಂಚನೆ

Published 11 ಜುಲೈ 2024, 15:37 IST
Last Updated 11 ಜುಲೈ 2024, 15:37 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಹುದ್ದೆಯಲ್ಲಿ ಮುಂದುವರೆಯಲು ಆದೇಶ ಕೊಡಿಸುವುದಾಗಿ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಬಾಗಲಕೋಟೆ ಡಿಎಚ್‌ಒ ಡಾ. ಜಯಶ್ರೀ ಎಮ್ಮಿ ಅವರಿಗೆ ₹7 ಲಕ್ಷ ಪಡೆದು ವಂಚಿಸಿದ ಕುರಿತು ಬೆಂಗಳೂರಿನ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023 ಆಗಸ್ಟ್‌ನಲ್ಲಿ ಘಟನೆ ನಡೆದಿದ್ದರೂ, ಡಾ.ಜಯಶ್ರೀ ಎಮ್ಮಿ ಜುಲೈ 8 ರಂದು ಪ್ರಕರಣ ದಾಖಲಿಸಿದ್ದಾರೆ.

‘ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ನೀವು ಕೆಎಟಿಗೆ ಹೋಗಿದ್ದೀರಿ. ಅದೇ ಹುದ್ದೆಯಲ್ಲಿ ನೀವೇ ಮುಂದುವರೆಯಲು ಆದೇಶ ಆಗಿದೆ. ಆದರೆ, ನಿಮ್ಮ ಎದುರಾಳಿ ಮತ್ತೆ ನ್ಯಾಯಾಲಯ ಮೊರೆ ಹೋದರೆ ನಿಮಗೆ ತೊಂದರೆ ಆಗುತ್ತದೆ. ನೀವೇ ಮುಂದುವರೆಯಲು ₹50 ಸಾವಿರ ಹಣ ನೀಡಿ’ ಎಂದು ಆಪ್ತಕಾರ್ಯದರ್ಶಿ ರಾಮಯ್ಯ ಎಂಬುವರ ಹೆಸರಿನಲ್ಲಿ ಕೇಳಿದ್ದಾರೆ.

ಡಿಎಚ್‌ಒ ಜಯಶ್ರೀ ಎಮ್ಮಿ ಸಂಬಂಧಿಕ ವೆಂಕಟೇಶ ಅವರು, ರಾಮಯ್ಯ ಅವರು ಕಳುಹಿಸಿದ್ದ ರಾಜು ಕೆ ಎಂಬುವವರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದ್ದಾರೆ. ನಂತರದಲ್ಲಿಯೂ ಕರೆ ಮಾಡಿ ಆಗಾಗ ಫೋನ್‌ ಪೇ ಹಾಗೂ ಅಕೌಂಟ್‌ ಮೂಲಕ ₹6 ಲಕ್ಷದಿಂದ 7 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಅನುಮಾನಗೊಂಡು ಮುಖ್ಯಮಂತ್ರಿ ಕಚೇರಿಯಲ್ಲಿರುವ ರಾಮಯ್ಯ ಎಂಬುವರಿಗೆ ಸಂಪರ್ಕಿಸಿದಾಗ, ರಾಮಯ್ಯ ಅವರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ವಂಚಿಸಿದ್ದು ಗೊತ್ತಾಗಿದೆ.

ಹಿನ್ನಲೆ: ಡಾ.ಜಯಶ್ರೀ ಎಮ್ಮಿ ಬಾಗಲಕೋಟೆಯ ಜಿಲ್ಲಾ ಆರೋಗ್ಯಾಧಿಕಾರಿ ಆಗಿದ್ದರು. ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಅವರ ಅಳಿಯ ಡಾ.ರಾಜಕುಮಾರ ಯರಗಲ್‌ 2023 ಆಗಸ್ಟ್ 11ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡಿದ್ದರು.

ಜಯಶ್ರೀ ಅವರು ರಜೆಯಲ್ಲಿದ್ದಾಗ ಏಕಾಏಕಿ ಬಂದು ಆಗಸ್ಟ್ 14ರಂದು ಅಧಿಕಾರ ವಹಿಸಿಕೊಂಡಿದ್ದರು. ಚಾರ್ಜ್‌ ನೀಡದೆ ಅಧಿಕಾರ ವಹಿಸಿಕೊಂಡಿದ್ದನ್ನು ಪ್ರಶ್ನಿಸಿ ಜಯಶ್ರೀ ಕೆಎಟಿ ಮೊರೆ ಹೋಗಿದ್ದರು. ಜಯಶ್ರೀ ಅವರ ಪರವಾಗಿ ಕೆಎಟಿ ಆದೇಶ ಮಾಡಿತ್ತು. ಇದನ್ನೆಲ್ಲ ತಿಳಿದ ವಂಚಕ ದೂರವಾಣಿ ಕರೆ ಮಾಡಿ ವಂಚಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಲು ಡಾ.ಜಯಶ್ರೀ ಎಮ್ಮಿ ನಿರಾಕರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT