ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಪಿ ಕಚೇರಿ ಹೆಲ್ಪ್‌ಡೆಸ್ಕ್‌ಗೆ ಬನ್ನಿ!

ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲು ಸತಾಯಿಸುತ್ತಿರುವರೇ.. ಚಿಂತೆ ಬೇಡ..
Last Updated 11 ಡಿಸೆಂಬರ್ 2019, 10:20 IST
ಅಕ್ಷರ ಗಾತ್ರ

ಬಾಗಲಕೋಟೆ: ನೀವು ಠಾಣೆಗೆ ದೂರು ಕೊಡಲು ಹೋದರೆ ಅಲ್ಲಿ ಸ್ವೀಕರಿಸುತ್ತಿಲ್ಲವೇ, ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲವೇ.. ದೂರು ದಾಖಲಿಸಿಕೊಳ್ಳಲು ಬೇರೆ ಏನಾದರೂ ನಿರೀಕ್ಷಿಸುತ್ತಿದ್ದಾರೆಯೇ.. ಸಾಹೇಬರು ಇಲ್ಲ. ರಜೆಯಲ್ಲಿದ್ದಾರೆ. ಈಗ ಬನ್ನಿ, ಆಗ ಬನ್ನಿ ಎಂದು ಸಬೂಬು ಹೇಳಿ ಅಲೆದಾಡಿಸುತ್ತಿದ್ದಾರೆಯೇ..

ಹಾಗಿದ್ದರೆ ಚಿಂತೆ ಬೇಡ..ಇನ್ನು ಮುಂದೆ ನೇರವಾಗಿ ಬಾಗಲಕೋಟೆಯ ಎಸ್ಪಿ ಕಚೇರಿಗೆ ಬನ್ನಿ. ಅಲ್ಲಿ ಹೊಸದಾಗಿ ಆರಂಭಿಸಿರುವ ’ಎಫ್‌ಐಆರ್ ಹೆಲ್ಪ್ ಡೆಸ್ಕ್‌’ನಲ್ಲಿ ನಿಮ್ಮ ದೂರು–ದುಮ್ಮಾನ ದಾಖಲಿಸಿ..

‘ಪ್ರಭಾವಳಿ’ಗಳ ಬೆಂಬಲ ಇಲ್ಲದ ಸಾಮಾನ್ಯ ಜನರಿಗೂ ಪೊಲೀಸರ ನೆರವು ಸಿಗಬೇಕು. ಅವರ ಅಳಲಿಗೆ ಸ್ಪಂದನೆ ದೊರೆಯಬೇಕು ಎಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಮ್ಮ ಕಚೇರಿಯಲ್ಲಿ ಹೊಸದಾಗಿ ಎಫ್‌ಐಆರ್ ಹೆಲ್ಪ್ ಡೆಸ್ಕ್ ಆರಂಭಿಸಿದ್ದಾರೆ. ಅಲ್ಲಿ ಇಬ್ಬರು ಪಿಎಸ್‌ಐ ದರ್ಜೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿದ್ದಾರೆ.

ನಿಮ್ಮ ದೂರು ಎಫ್‌ಐಆರ್ ದಾಖಲಿಸಿಕೊಳ್ಳಲು ಅರ್ಹವಾಗಿದ್ದರೂ ಸ್ಥಳೀಯ ಪೊಲೀಸರು ಅದಕ್ಕೆ ನ್ಯಾಯ ಕೊಡದಿದ್ದಲ್ಲಿ ನೇರವಾಗಿ ನೀವು ಸಹಾಯವಾಣಿಯ ಮೊರೆ ಹೋಗಬಹುದು. ಈ ಹೆಲ್ಪ್‌ಡೆಸ್ಕ್ ವಾರದ ಎಲ್ಲಾ ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ. ಇಲ್ಲಿ ಬಂದು ಲಿಖಿತವಾಗಿ ದೂರು ನೀಡಬಹುದು ಇಲ್ಲವೇ ಮೌಖಿಕವಾಗಿ ಹೇಳಿದರೂ ಅದನ್ನು ಲಿಖಿತ ದೂರು ಆಗಿ ಬದಲಾಯಿಸಿಕೊಳ್ಳಲಾಗುತ್ತದೆ.

ಅಧಿಕಾರಿಗಳೂ ವಿವರಣೆ ಕೊಡಬೇಕಿದೆ:

ಹೆಲ್ಪ್‌ ಡೆಸ್ಕ್‌ಗೆ ಬಂದವರ ದೂರು ಎಫ್‌ಐಆರ್ ದಾಖಲಿಸಿಕೊಳ್ಳಲು ಅರ್ಹವಾಗಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆ ಕೆಲಸ ಏಕೆ ಆಗಲಿಲ್ಲ ಎಂಬುದರ ಬಗ್ಗೆ ಸಂಬಂಧಿಸಿದ ಅಧಿಕಾರಿ ಎಸ್ಪಿ ಅವರಿಗೆ ವಿವರಣೆ ಕೊಡಬೇಕಾಗುತ್ತದೆ. ಅದರಲ್ಲಿ ಏನಾದರೂ ಅಕ್ರಮದ ವಾಸನೆ ಕಂಡುಬಂದಲ್ಲಿ ದಂಡನೆಗೂ ಅರ್ಹರಾಗಲಿದ್ದಾರೆ.

’ಪೊಲೀಸ್ ಠಾಣೆಗಳು ಜನಸ್ನೇಹಿಯಾಗುತ್ತಿಲ್ಲ. ಬದಲಿಗೆ ಪಂಚಾಯ್ತಿ ಕಟ್ಟೆಗಳಾಗಿ ಬದಲಾಗುತ್ತಿವೆ. ದೂರು ನೀಡಲು ಬಂದವರು ಹಾಗೂ ತೊಂದರೆ ಮಾಡಿದವರ ನಡುವೆ ರಾಜಿ ಪಂಚಾಯ್ತಿ ನಡೆಸಲು ನೆಲೆ ಕಲ್ಪಿಸುತ್ತಿವೆ‘ ಎಂದು ಸಾರ್ವಜನಿಕ ವಲಯದಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT