ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆಗೂ ವಿಸ್ತರಿಸಿದ ಬಂಡಾಯದ ಬಿಸಿ

ಅಸಮಾಧಾನ ಶಮನಕ್ಕೆ ಪಕ್ಷದ ನಾಯಕರ ಕಸರತ್ತು: ಬಗ್ಗದ ಬಂಡಾಯಗಾರರು
ಫಾಲೋ ಮಾಡಿ
Comments

ಬಾಗಲಕೋಟೆ: ಬಾದಾಮಿ, ಜಮಖಂಡಿಯಲ್ಲಿ ಎದ್ದಿದ್ದ ಬಂಡಾಯದ ಗಾಳಿ ಈಗ ಬಾಗಲಕೋಟೆ ಕಡೆಗೂ ಬೀಸಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗಳೆರಡೂ ಬಂಡಾಯ ಎದುರಿಸಬೇಕಾಗಿದೆ.

ಬಿಜೆಪಿ ಅಭ್ಯರ್ಥಿ, ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಬಂಡಾಯ ಸಾರಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಶನಿವಾರ ಘೋಷಿಸಿದ್ದಾರೆ.

ಬಿಜೆಪಿಯಲ್ಲಿದ್ದ ಮಲ್ಲಿಕಾರ್ಜುನ ಚರಂತಿಮಠರನ್ನು ಉಚ್ಚಾಟಿಸಲಾಗಿತ್ತು. ಆನಂತರ ಅವರು, ಬಿಜೆಪಿಯು ಅಭ್ಯರ್ಥಿ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಾಗವುದು ಎಂದು ಹೇಳಿದ್ದರು. ಅದರಂತೆ ಈಗ ಚುನಾವನಾ ಕಣಕ್ಕೆ ಧುಮುಕುತ್ತೇನೆ ಎಂದು ಹೇಳಿದ್ದಾರೆ.

ಎರಡು ದಶಕಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಲ್ಲಿಕಾರ್ಜುನ ಚರಂತಿಮಠ, ಶಾಸಕ ವೀರಣ್ಣ ಚರಂತಿಮಠ ಅವರ ಚುನಾವಣೆಯಲ್ಲಿ ಬಾಗಲಕೋಟೆ ಗ್ರಾಮೀಣ ಭಾಗದಲ್ಲಿ ಓಡಾಟ ಮಾಡಿದ್ದಾರೆ. ಆ ಭಾಗದ ಕೆಲ ಮುಖಂಡರೊಂದಿಗೆ ಒಡನಾಟವನ್ನೂ ಹೊಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ. ಬಂಡಾ ಯದ ಹೆಸರಿನಲ್ಲಿ ಈಗಾಗಲೇ ಉಚ್ಚಾಟನೆಗೊಂಡವರು ಸ್ಪರ್ಧಿಸಿದರೆ, ಯಾವುದೇ ವ್ಯತ್ಯಾಸವಾಗುವುದಿಲ್ಲ’ ಎಂದರು.

ಇನ್ನೊಂದೆಡೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಟಿಕೆಟ್‌ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ದೇವರಾಜ ಪಾಟೀಲ ಕಾಂಗ್ರೆಸ್‌ ತೊರೆದು, ಶನಿವಾರ ಜೆಡಿಎಸ್‌ ಸೇರ್ಪಡೆಯಾಗಿ, ಆ ಪಕ್ಷದಿಂದ ಸ್ಪರ್ಧಿಸುತ್ತೇನೆ’ ಎಂದು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಈ ಹಿಂದೆ ನನಗೆ ಬಾದಾಮಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಘೋಷಿಸಲಾಗಿತ್ತು. ಕೊನೆ ಗಳಿಗೆಯಲ್ಲಿ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದಿದ್ದ ರಿಂದ ಬಿಟ್ಟುಕೊಟ್ಟೆ. 2018ರಲ್ಲಿ ಬಾದಾಮಿಯಿಂದ ಸಿದ್ದರಾಮಯ್ಯ ಅವರೇ ಸ್ಪರ್ಧಿಸಿದ್ದರಿಂದ ಸುಮ್ಮನಿರ ಬೇಕಾಯಿತು. ಹಾಗಾಗಿ, ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಕೇಳಿದ್ದೆ. ಕೊಡದೆ ಅಪಮಾನಿಸಲಾಗಿದೆ. ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಚಿತ’ ಎಂದು ಹೇಳಿದರು.

ಬಾದಾಮಿಯಲ್ಲಿ ಎದ್ದಿದ್ದ ಬಂಡಾಯ ಶಮನಗೊಳಿಸುವ ಕಾರ್ಯವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ. ಮುಧೋಳದಲ್ಲಿ ಬಂಡಾಯ ಎದ್ದಿದ್ದ ಸತೀಶ ಬಂಡಿವಡ್ಡರ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜಮಖಂಡಿಯಲ್ಲಿ ಸುಶೀಲಕುಮಾರ್ ಬೆಳಗಲಿ ಆಗಲೇ ನಾಮಪತ್ರ ಸಲ್ಲಿಸಿದ್ದಾರೆ. ಬೀಳಗಿ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಬಸವಪ್ರಭು ಸರನಾಡಗೌಡ ಅವರ ಮನೆಗೆ ಅಭ್ಯರ್ಥಿ ಜೆ.ಟಿ. ಪಾಟೀಲ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಯಾದರೂ ಫಲ ದೊರಕಿಲ್ಲ. ಅವರು ಬೆಂಬಲಿಗರೊಂದಿಗೆ ಚರ್ಚಿಸುತ್ತಿದ್ದು, ಏ.17ರಂದು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಬಾದಾಮಿಯಲ್ಲಿ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪುರ ಶುಕ್ರವಾರವೂ ಸಭೆ ನಡೆಸಿದ್ದಾರೆ. ಸಚಿವ ಗೋವಿಂದ ಕಾರಜೋಳ ಮಾತುಕತೆಗೆ ಕರೆದಿದ್ದು, ಅವರನ್ನು ಭೇಟಿಯಾದ ನಂತರ ನಿರ್ಧಾರ ಪ್ರಕಟಿಸಲಿದ್ದಾರೆ. ಒಟ್ಟಿನಲ್ಲಿ ಎರಡೂ ಪಕ್ಷಗಳಲ್ಲಿ ಬಂಡಾಯ ಎದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT