ಬುಧವಾರ, ಏಪ್ರಿಲ್ 1, 2020
19 °C

ತೋಟಗಾರಿಕೆ ವಿಜ್ಞಾನಗಳ ವಿ.ವಿ ಘಟಿಕೋತ್ಸವ: ರೈತನ ಮಗಳ ಚಿನ್ನದ ಫಸಲು!

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ಬಿಎಸ್ಸಿ ತೋಟಗಾರಿಕೆ ಓದಿಸಲು ಅಪ್ಪ ಬ್ಯಾಂಕಿನಿಂದ ಶಿಕ್ಷಣ ಸಾಲ ತೆಗೆದಿದ್ದರು. ಎಂಎಸ್ಸಿ ಓದಿಸಲು ಮತ್ತೆ ಸಾಲ ಮಾಡಬಾರದು. ಸ್ಕಾಲರ್‌ಶಿಪ್ ಪಡೆದು ಓದಬೇಕು ಎಂದು ಕಷ್ಟಪಟ್ಟು ಓದಿದೆ. ಅದರ ಫಲವಾಗಿ ಈ ಚಿನ್ನದ ಫಸಲು‘ ಎಂದು ಚಾಮರಾಜನಗರ ಜಿಲ್ಲೆ ಸಂತೆಮರಹಳ್ಳಿಯ ಎಂ.ಕೆ.ಸುಷ್ಮಾ ಮುಗುಳ್ನಕ್ಕರು. 

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 9ನೇ ಘಟಿಕೋತ್ಸವದಲ್ಲಿ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸುಷ್ಮಾ, 15 ಚಿನ್ನದ ಪದಕಗಳನ್ನು ಕೊರಳಿಗೆ ಇಳಿಸಿಕೊಂಡರು.

ತಂದೆ ಕುಮಾರ್, ತಾಯಿ ಚಂದ್ರಮತಿ ಮಗಳ ಸಾಧನೆ ಕಣ್ತುಂಬಿಕೊಂಡು ಬೀಗಿದರು. ಸುಷ್ಮಾ ಈಗ ನವದೆಹಲಿಯ ಪುಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ (ಐಎಆರ್‌ಐ) ಬೀಜ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ ಓದುತ್ತಿದ್ದಾರೆ. ಅವರ ಶಿಕ್ಷಣಕ್ಕೆ ಕೇಂದ್ರ ಸರ್ಕಾರದ ಮಾಸಿಕ ₹15 ಸಾವಿರ ಸ್ಕಾಲರ್‌ಶಿಪ್ ನೆರವಾಗಿದೆ.

ಕುಮಾರ್‌ಗೆ 3 ಎಕರೆ ಹೊಲ ಇದೆ. ಮಳೆಯಾಶ್ರಿತ ಬೆಳೆ, ಹುರುಳಿ, ರಾಗಿ ಬೆಳೆದು ಬದುಕುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಪೈಕಿ ಸುಷ್ಮಾ ಚಿಕ್ಕವರು. ಸಂತೆಮರಹಳ್ಳಿಯ ಜೆಎಸ್‌ಎಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿರುವ ಸುಷ್ಮಾ, ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಮುಗಿಸಿದ್ದು
ಶೇ 91.83 ಅಂಕ ಪಡೆದ್ದಾರೆ.

ಎಂಎಸ್ಸಿ ಓದಲು ಸೈಕಲ್ ಕೊಡಿಸಿರುವೆ!

’ನಮ್ಮ ಮನೆ ಸಂತೆಮರಹಳ್ಳಿಯಿಂದ 3 ಕಿ.ಮೀ ದೂರದಲ್ಲಿ ಹೊಲದಲ್ಲಿದೆ. ಮಗಳು ಶಾಲೆಗೆ ನಿತ್ಯ ನಡೆದುಕೊಂಡೇ ಹೋಗಿ ಬರುತ್ತಿದ್ದಳು. ಜೊತೆಯವರು ಸೈಕಲ್‌ನಲ್ಲಿ ಹೋದರೂ, ನನಗೂ ಸೈಕಲ್ ಕೊಡಿಸಿ ಎಂದು ಕೇಳಲಿಲ್ಲ. ನಮಗೆ ಹೊರೆಯಾಗಬಹುದು ಎಂಬುದು ಆಕೆಯ ಭಾವನೆ. ಈಗ ಆಕೆ ಎಂಎಸ್ಸಿ ಓದುತ್ತಿರುವ ಪುಸಾದ ಐಎಆರ್‌ಐ ಕ್ಯಾಂಪಸ್‌ನಲ್ಲಿ ಓಡಾಟಕ್ಕೆ ಸೈಕಲ್ ಕೊಡಿಸಿದ್ದೇನೆ‘ ಎಂದು ಕುಮಾರ್ ಹೇಳಿದರು. ಅವರ ಕಣ್ಣಂಚು ತೇವಗೊಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು