ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಮಾರುಕಟ್ಟೆಗೆ ಲಗ್ಗೆ ಇಟ್ಟ ಕಲ್ಲಂಗಡಿ

ತರಕಾರಿ ದರಗಳಲ್ಲಿ ಇಳಿಕೆ, ಬಹುತೇಕ ಹಣ್ಣುಗಳ ದರದಲ್ಲಿ ಯಥಾಸ್ಥಿತಿ
Last Updated 13 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಬೇಸಿಗೆಯ ಹಾದಿಗೆ ಈಗಾಗಲೇ ಕಲ್ಲಂಗಡಿ ಮುನ್ನುಡಿ ಬರೆದಿದೆ. ದಾಹ ತಣಿಸುವ ಈ ದೈತ್ಯದೇಹಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನಗರದಲ್ಲಿ ಸಣ್ಣ ಗಾತ್ರದ ಕಲ್ಲಂಗಡಿ ಹಣ್ಣು ₹ 30ರಿಂದ 50ಕ್ಕೆ ಮಾರಾಟವಾಗುತ್ತಿವೆ.

ಬಿರು ಬಿಸಿಲಿನಿಂದ ರಕ್ಷಣೆ ಪಡೆಯಲು ಜನರು ಕಲ್ಲಂಗಡಿ ಮೋರೆ ಹೋಗುತ್ತಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಆವಕಗೊಳ್ಳದ ಕಾರಣ ಸದ್ಯ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಮುಧೋಳ ಹಾಗೂ ವಿಜಯಪುರದಿಂದ ಕಲ್ಲಂಗಡಿ ಲೋಡ್ ಬರುತ್ತಿದೆ.

‘ಮಾರ್ಚ್ ಮಧ್ಯ ಭಾಗದಲ್ಲಿ ಕಲ್ಲಂಗಡಿ ಫಸಲು ಬರುವಂತೆ ರೈತರು ಬೀಜ ನಾಟಿ ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಆವಕವಾಗುತ್ತದೆ. ಆಗ ದರದಲ್ಲಿ ಇಳಿಕೆ ಕಾಣಲಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮೊಹಮ್ಮದ್ ಕಲಾದಗಿ.

ಉಳಿದ ಹಣ್ಣಿನ ದರ ಸ್ಥಿರ: ಬೇರೆ ಹಲವು ಹಣ್ಣುಗಳು ಕಳೆದ ವಾರದ ದರದಲ್ಲಿಯೇ ಈ ವಾರವೂ ಮಾರಾಟವಾಗುತ್ತಿವೆ. ಡಜನ್ ಬಾಳೆಹಣ್ಣು
₹ 40ರಿಂದ ₹ 50, ಅನಾನಸ್ ಗಾತ್ರಕ್ಕೆ ತಕ್ಕಂತೆ ₹ 70ರಿಂದ ₹120, ಉಳಿದಂತೆ ದಾಳಿಂಬೆ ₹ 50ಕ್ಕೆ 2ರಿಂದ 3, ಪೇರಲ ಹಣ್ಣು (ಸೀಬೆ) ₹ 50ಕ್ಕೆ 5ರಿಂದ 8,ಮೂಸಂಬಿ ಕೆ.ಜಿಗೆ ₹ 80ರಿಂದ ₹100 ಹಾಗೂ ಸೇಬು ಕೆ.ಜಿಗೆ ₹ 50ರಿಂದ ₹ 250 ಇದೆ.

ಚೌಳಿಕಾಯಿ ದರ ಏರಿಕೆ: ಬೇಸಿಗೆ ಸಂದರ್ಭದಲ್ಲಿ ಚೌಳಿಕಾಯಿ ಒಣಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಾಟಿ ಕಡಿಮೆ. ಸದ್ಯ ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಇದರಿಂದ ದರದಲ್ಲಿ ಏರಿಕೆ ಕಂಡಿದ್ದು, ಕೆ.ಜಿಗೆ ₹ 40ರಿಂದ 60ಕ್ಕೆ ಮಾರಾಟವಾಗುತ್ತಿದೆ.

ತರಕಾರಿ ದರದಲ್ಲಿ ಇಳಿಕೆ: ಇಲ್ಲಿನ ತರಕಾರಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆಯಲ್ಲಿಯೂ ಕುಸಿತ ಕಂಡಿದೆ. ದಪ್ಪ ಮೆಣಸಿನಕಾಯಿ, ಸೌತೆಕಾಯಿ, ಬೀನ್ಸ್, ಹಸಿ ಮೆಣಸಿನಕಾಯಿ, ಗಜ್ಜರಿ ಕೆ.ಜಿಗೆ ₹ 30ರಂತೆ ಮಾರಾಟವಾಗುತ್ತಿವೆ. ಈರುಳ್ಳಿ ಕೆ.ಜಿಗೆ ₹40, ಬದನೆಕಾಯಿ ₹ 30ರಿಂದ 40, ಬೆಂಡೆಕಾಯಿ ಕೆ.ಜಿಗೆ ₹ 40ರಂತೆ ಮಾರಾಟವಾದರೆ, ಎಲೆಕೋಸು ಗಾತ್ರಕ್ಕೆ ತಕ್ಕಂತೆ ₹10ರಿಂದ 15ಕ್ಕೆ ಮಾರಾಟವಾಗುತ್ತಿದೆ.

ಕೊತ್ತಂಬರಿ ಕಂತೆಗೆ ₹ 10
ಮಾರುಕಟ್ಟೆಗೆ ಕೊತ್ತಂಬರಿ ಆವಕ ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಮಧ್ಯಮ ಗಾತ್ರದ ಒಂದು ಕಂತೆಗೆ ₹10ರಂತೆ ಮಾರಾಟವಾಗುತ್ತಿದೆ. ಇನ್ನು ಮೆಂತೆ ಪಲ್ಲೆ ಕಂತೆಗೆ ₹10ರಂತೆ ಮಾರಾಟವಾದರೆ, ಪಾಲಕ್ ಹಾಗೂ ಕೆಂಪು ಪಲ್ಲೆ ಕಂತೆಗೆ ₹5 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT